ತೋಟಗಾರಿಕೆ ಬೆಳೆಗಳಿಗೂ ವಿಮೆ ಸೌಲಭ್ಯ ವಿಸ್ತರಣೆ
ಬಾಗಲಕೋಟೆ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಇದೇ ಮೊದಲ ಬಾರಿಗೆ ತೋಟಗಾರಿಕೆ ಬೆಳೆಗಳಿಗೂ ವಿಸ್ತರಿಸಿರುವ ಕೇಂದ್ರ ಸರ್ಕಾರ, ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿಗೆ ಮಳೆಯಾಶ್ರಯಿಸಿದ ಹಸಿರುಮೆಣಸಿನಕಾಯಿ, ದಾಳಿಂಬೆ ಮತ್ತು ಅಂಗಾಂಶ ಕೃಷಿ ಬಾಳೆಗೂ ಕಲ್ಪಿಸಿದೆ.
ಇಲ್ಲಿಯವರೆಗೂ ಕೃಷಿ ಇಲಾಖೆ ವ್ಯಾಪ್ತಿಯ ಬೆಳೆಗಳಿಗೆ ಮಾತ್ರ ಹವಾಮಾನ ಆಧಾರಿತ ವಿಮೆ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಈ ಹಂಗಾಮಿನಿಂದ ವಾಣಿಜ್ಯ ಬೆಳೆಗಳಿಗೂ ಈ ಅವಕಾಶ ದೊರೆತಿದೆ. ವಿಮಾ ಮೊತ್ತದ ಶೇ 5ರಷ್ಟು ಬೆಳೆಗಾರರು ಪಾವತಿಸಬೇಕಿದೆ. ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದಲ್ಲಿ ಬೆಳೆಗಾರರು ವಿಮೆ ಸೌಲಭ್ಯ ಪಡೆಯಬಹುದು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಎಸ್. ಪ್ರಭುರಾಜ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ವಿಮೆ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಯುನಿವರ್ಸಲ್ ಸೋಂಪು ಇನ್ಶುರೆನ್ಸ್ ಕಂಪೆನಿಗೆ ವಹಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬೆಳೆದಿರುವ ಮಳೆಯಾಶ್ರಿತ ಹಸಿರುಮೆಣಸಿನಕಾಯಿ ಬೆಳೆ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.
ಹಿಂಗಾರು ಹಂಗಾಮಿನಲ್ಲಿ ದ್ರಾಕ್ಷಿ ಬೆಳೆಗೂ ವಿಮಾ ಸೌಲಭ್ಯ ವಿಸ್ತರಣೆಯಾಗಲಿದೆ ಎಂದು ಪ್ರಭು ಮಾಹಿತಿ ನೀಡಿದರು. ಇದೇ 30 ಬೆಳೆ ವಿಮೆ ಪಾವತಿಗೆ ಕೊನೆ ದಿನ. ಹತ್ತಿರದ ಬ್ಯಾಂಕ್ ಆನ್ಲೈನ್ ಪೋರ್ಟಲ್ samarakshane.nic.in ನಲ್ಲಿ ನೊಂದಾಯಿಸಬಹುದು ಎಂದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯಲ್ಲಿ ವಿಮೆ ವ್ಯಾಪ್ತಿಗೆ ಒಳಪಡುವ ಬೆಳೆಗಳ ವಿವರ ಕೆಳಗಿನಂತಿದೆ.
ಬಾದಾಮಿ: ಮುಸುಕಿನ ಜೋಳ, ಜೋಳ, ಸಜ್ಜೆ, ತೊಗರಿ, ಹೆಸರು, ಹುರುಳಿ, ಸೂರ್ಯಕಾಂತಿ, ಶೇಂಗಾ,ಎಳ್ಳು (ಮಳೆ ಆಶ್ರಿತ), ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ (ನೀರಾವರಿ),
ಬಾಗಲಕೋಟೆ: ಜೋಳ, ಸಜ್ಜೆ, ತೊಗರಿ, ಹೆಸರು, ಹುರುಳಿ, ಸೂರ್ಯಕಾಂತಿ, ಶೇಂಗಾ (ಮಳೆ ಆಶ್ರಿತ), ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ (ನೀರಾವರಿ),
ಬೀಳಗಿ: ಜೋಳ, ಸಜ್ಜೆ, ಹೆಸರು, ಸೂರ್ಯಕಾಂತಿ, ಶೇಂಗಾ (ಮಳೆ ಆಶ್ರಿತ), ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ (ನೀರಾವರಿ).
ಹುನಗುಂದ: ಮುಸುಕಿನ ಜೋಳ, ಜೋಳ, ಸಜ್ಜೆ, ತೊಗರಿ, ಹೆಸರು, ಹುರುಳಿ, ಸೂರ್ಯಕಾಂತಿ, ಶೇಂಗಾ,ಎಳ್ಳು (ಮಳೆ ಆಶ್ರಿತ), ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ (ನೀರಾವರಿ)
ಜಮಖಂಡಿ: ಮುಸುಕಿನ ಜೋಳ, ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ, ಶೇಂಗಾ,ಎಳ್ಳು (ಮಳೆ ಆಶ್ರಿತ), ಸೋಯಾ ಅವರೆ, ಸಜ್ಜೆ, ಸೂರ್ಯಕಾಂತಿ, ಶೇಂಗಾ (ನೀರಾವರಿ)
ಮುಧೋಳ: ಮುಸುಕಿನ ಜೋಳ, ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ, ಶೇಂಗಾ,ಎಳ್ಳು (ಮಳೆ ಆಶ್ರಿತ), ಸೋಯಾ ಅವರೆ, ಸಜ್ಜೆ, ಸೂರ್ಯಕಾಂತಿ, ಶೇಂಗಾ (ನೀರಾವರಿ).