ಕೂದಲಿನ ಆರೈಕೆಗೆ ಮದರಂಗಿ
ಕೂದಲಿಗೆ ರಂಗು ನೀಡಲು ಹೇರ್ಕಲರ್ ಬಳಸುವುದಕ್ಕಿಂತ ಮದರಂಗಿ/ ಮೆಹೆಂದಿ ಬಳಸುವುದು ಉತ್ತಮ. ಕೆಮಿಕಲ್ಯುಕ್ತ ಹೇರ್ಕಲರ್ ಕೂದಲನ್ನು ಒಣ ಮತ್ತು ನಿರ್ಜೀವವಾಗುವುಂತೆ ಮಾಡಿಬಿಡುತ್ತದೆ. ಅಲ್ಲದೆ ಅದರಿಂದ ಚರ್ಮಕ್ಕೂ ಹಾನಿ. ನೈಸರ್ಗಿಕವಾಗಿ ಸಿಗುವ ಮೆಹೆಂದಿ ಹಚ್ಚಿದರೆ ಕೂದಲಿಗೆ ಬಣ್ಣ ಕೊಡುವುದಲ್ಲದೆ, ತಲೆಹೊಟ್ಟು ನಿವಾರಣೆಯಾಗುತ್ತದೆ. ಅಲ್ಲದೆ ತಿಂಗಳಿಗೆ ಎರಡು ಬಾರಿ ಮೆಹೆಂದಿ ಹಚ್ಚುವುದರಿಂದ ಕೂದಲ ಉದುರುವಿಕೆ ಕಡಿಮೆಯಾಗಿ ಚೆನ್ನಾಗಿ ಬೆಳೆಯುತ್ತದೆ. ಇದಲ್ಲದೆ ಮೆಹೆಂದಿ ನಿಮ್ಮ ಕೂದಲಿಗೆ ನ್ಯಾಚುರಲ್ ಕಂಡೀಷನರ್ ಕೂಡ ಹೌದು.
ಮೆಹೆಂದಿ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು:
1. ಮೆಹೆಂದಿ ಪುಡಿ- 1 ಕಪ್ (ನಿಮ್ಮ ಕೂದಲು ತುಂಬಾ ಉದ್ದವಿದ್ದರೆ 2 ಕಪ್ ತೆಗೆದುಕೊಳ್ಳಿ)
2. ಟೀ ಪುಡಿ/ಕಾಫಿ ಪುಡಿ – 2 ಚಮಚ
3. ಲವಂಗ- 5
4. ನಿಂಬೇಹಣ್ಣು- 1/2 ಹೋಳು
5. ನೀರು- 1ಕಪ್
* ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕಾಯಲು ಇಟ್ಟು, ಅದು ಕಾದ ನಂತರ ಟೀ ಪುಡಿ ಮತ್ತು ಲವಂಗ ಹಾಕಿ ಚೆನ್ನಾಗಿ ಕುದಿಸಿ. 5 ನಿಮಿಷದ ಬಳಿಕ ಒಲೆಯಿಂದ ಇಳಿಸಿ, ಸೋಸಿಕೊಂಡು ಆರಲು ಬಿಡಿ.
* ನಂತರ ಒಂದು ಪಾತ್ರೆಯಲ್ಲಿ ಟೀಪುಡಿಯ ಡಿಕಾಕ್ಷನ್, ಮೆಹೆಂದಿ ಪುಡಿ, ಅರ್ಧ ಚಮಚ ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಕಲಸಿ.
* ಕಲಸಿದ ಮಿಶ್ರಣವನ್ನು 3 ಗಂಟೆಗಳ ಕಾಲ ನೆನೆಯಲು ಇಟ್ಟು ನಂತರ ಬಳಸಿ.
* ಕೂದಲನ್ನು ಚೆನ್ನಾಗಿ ಬಾಚಿ, ಬೈತಲೆ ತೆಗೆದು ಸ್ವಲ್ಪ ಸ್ವಲ್ಪವೇ ಕೂದಲನ್ನು ಭಾಗ ಮಾಡಿಕೊಂಡು ಮೆಹೆಂದಿ ಹಚ್ಚಬೇಕು.
ಗಾಢ ಬಣ್ಣಕ್ಕಾಗಿ: ಹಿಂದಿನ ರಾತ್ರಿಯೇ ಮೆಹೆಂದಿಯನ್ನು ಕಲಸಿಟ್ಟು ಬೆಳಿಗ್ಗೆ ಅದನ್ನು ತಲೆಗೆ ಹಚ್ಚಿ ಒಂದೂವರೆ ಗಂಟೆಯ ನಂತರ ಸ್ನಾನ ಮಾಡಿ.
ಕಂಡೀಷನಿಂಗ್ಗಾಗಿ: ಕೂದಲ ಕೋಮಲವಾಗಬೇಕಾದರೆ ಮೆಹೆಂದಿ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಇದು ನಿಮ್ಮ ಕೂದಲಿಗೆ ಡೀಪ್ ಕಂಡೀಷನಿಂಗ್ ನೀಡುತ್ತದೆ. ಮೆಹೆಂದಿ ಕಲಸುವಾಗ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿದರೆ ಇನ್ನೂ ಉತ್ತಮ.
ತಲೆಹೊಟ್ಟು: ತಲೆಹೊಟ್ಟು ನಿವಾರಣೆಗೆ ಮೆಹೆಂದಿ ಜೊತೆಗೆ ಮೆಂತ್ಯೆ ಬಳಸಿ. ಮೆಂತ್ಯೆ ಕಾಳನ್ನು ರಾತ್ರಿಯಿಡೀ ನೀರಲ್ಲಿ ನೆನೆಸಿಡಿ. ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿಕೊಂಡು, ಅದಕ್ಕೆ ಮೆಹೆಂದಿ ಪುಡಿ ಮತ್ತು ನಿಂಬೆರಸ ಹಾಕಿ ಕಲಸಿ ಕೂದಲಿನ ಬುಡಕ್ಕೆ ಹಚ್ಚಿ 1 ಗಂಟೆಯ ನಂತರ ಸ್ನಾನ ಮಾಡಿ.
ಈ ವಿಷಯ ನೆನಪಿಡಿ:
1. ಮೆಹೆಂದಿ ಹಚ್ಚುವಾಗ ಕೂದಲಿಗೆ ಎಣ್ಣೆ ಹಚ್ಚಿರಬಾರದು.
2. ಹೇರ್ಕಲರ್ ಮಾಡಿಸಿದ 15 ದಿನಗಳ ಒಳಗೆ ಮೆಹೆಂದಿ ಹಚ್ಚಬಾರದು.
3. ಮೆಹೆಂದಿಯನ್ನು ಹಚ್ಚಿ ರಾತ್ರಿಯಿಡೀ ಬಿಟ್ಟು ಬೆಳಿಗ್ಗೆ ಸ್ನಾನ ಮಾಡುವುದು ಬೇಡ.
4. ಕೋನ್ಗಳಲ್ಲಿ ಸಿಗುವ ಮೆಹೆಂದಿ, ಅಲ್ತಾ/ಕಲರ್ ಮಿಶ್ರಿತ ಮೆಹೆಂದಿಯನ್ನು ಕೂದಲಿಗೆ ಬಳಸಬೇಡಿ.