UK Suddi
The news is by your side.

ಶಿಕ್ಷಣ ಸಾಲ ಎಲ್ಲೆಲ್ಲಿ ಹೇಗೆ ?

feb20image2

ಪಿಯುಸಿಯಲ್ಲಿ ಒಳ್ಳೆ ಮಾರ್ಕ್ಸ್ ತಗೊಂಡಿರುವ ಮಗನನ್ನು ಮೆಡಿಕಲ್ಗೆ ಕಳುಹಿಸುವ ಯೋಚನೆ ತಂದೆಯದ್ದು. ಆದರೆ ಸಣ್ಣ ಜಮೀನು ಇರುವ ಅಪ್ಪನಿಗೆ ಅಷ್ಟೊಂದು ಶುಲ್ಕ ಭರಿಸುವ ತಾಕತ್ತು ಖಂಡಿತ ಇಲ್ಲ. ಆದರೆ ಮೆಡಿಕಲ್ನ ಸೆಳೆತವೂ ಬಿಡುತ್ತಿಲ್ಲ. ಆ ಸಮಯದಲ್ಲಿ ಅವರ ನೆರವಿಗೆ ಬಂದದ್ದು ಶಿಕ್ಷಣ ಸಾಲ. ಮಗ ಈಗ ಮೆಡಿಕಲ್ ಮುಗಿಸಿ ವೈದ್ಯನಾಗಿದ್ದಾನೆ. ಸಾಲವನ್ನೂ ತೀರಿಸಿದ್ದಾನೆ. ನಿಜ, ಮೊದಲೆಲ್ಲ ಉನ್ನತ ಶಿಕ್ಷಣ ಪಡೆಯುವುದೆಂದರೆ ದುಡ್ಡಿರುವವರಿಗೆ ಮಾತ್ರ ಎಂಬಂತಾಗಿತ್ತು. ಆದರೆ ಈಗ ಶಿಕ್ಷಣ ಸಾಲ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರೆಯುವ ಸ್ಕಾಲರ್ಶಿಪ್ಗಳಿಂದಾಗಿ ಇಂದು ಉನ್ನತ ಶಿಕ್ಷಣ ಪಡೆಯುವುದು ದೊಡ್ಡ ವಿಷಯವಲ್ಲ. ಆದರೆ ಈ ಶಿಕ್ಷಣ ಸಾಲ ಎಲ್ಲಿ ಸಿಗುತ್ತದೆ, ಹೇಗೆ ಅದನ್ನು ಪಡೆಯುವುದು ಎಂಬುದು ಇಂದಿಗೂ ಅನೇಕರಿಗೆ ಗೊತ್ತಿಲ್ಲ. ಈ ಗೊಂದಲಗಳಿಂದಾಗಿಯೇ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೋಗುತ್ತಿಲ್ಲ. ನಿಜ. ಶಿಕ್ಷಣವೂ ಉದ್ಯಮವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ಬಿಡುವುದೂ ಉಂಟು. ಇದು ಪ್ರತಿಭಾವಂತ ಮಕ್ಕಳಿಗೂ ಅನ್ವಯಿಸುತ್ತಿದೆ. ರಾಜ್ಯದಲ್ಲಿ 24 ಸರ್ಕಾರದ ವಿಶ್ವವಿದ್ಯಾಲಯಗಳು, 16 ಡೀಮ್್ಡ ವಿಶ್ವವಿದ್ಯಾಲಯಗಳು, 10 ಖಾಸಗಿ ಮತ್ತು 1 ಕೇಂದ್ರ ವಿ.ವಿಗಳಿವೆ. ಅಲ್ಲದೆ, 3360 ಪದವಿ ಕಾಲೇಜುಗಳಿವೆ. ಇಷ್ಟೆಲ್ಲ ವಿವಿಗಳು ಹಾಗೂ ಕಾಲೇಜುಗಳಿದ್ದರೂ ಪ್ರತಿ ವರ್ಷ ಕಾಲೇಜಿನಿಂದ ಹೊರಗುಳಿಯುವ ಮಕ್ಕಳೇ ಹೆಚ್ಚು. ರಾಜ್ಯದಲ್ಲಿ ಇಂದಿಗೂ ಎಸ್ಸ್ಸೆಸ್ಸೆಲ್ಸಿಯಿಂದ ಉತ್ತೀರ್ಣರಾಗಿ ಪಿಯು ಅಥವಾ ಡಿಪ್ಲೊಮಾಗೆ ಪ್ರವೇಶ ಪಡೆಯಬೇಕಾದ ವಿದ್ಯಾರ್ಥಿಗಳ ಪೈಕಿ 10 ಸಾವಿರ ವಿದ್ಯಾರ್ಥಿಗಳು ಪ್ರತಿ ವರ್ಷ ಡ್ರಾಪ್ಔಟ್ ಆಗುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇಂದು ಆರ್ಥಿಕ ಪರಿಸ್ಥಿತಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ‘ಶೈಕ್ಷಣಿಕ ಸಾಲ’ ಪಡೆದು ಉನ್ನತ ಶಿಕ್ಷಣ ಪಡೆಯಬಹುದು. ನಂತರ ಉದ್ಯೋಗ ಪಡೆದು ಸಾಲವನ್ನು ಮರುಪಾವತಿ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಬ್ಯಾಂಕ್ಗಳು ನೀಡುವ ಶೈಕ್ಷಣಿಕ ಸಾಲದ ಉಪಯೋಗ ಪಡೆದುಕೊಳ್ಳಬಹುದು.

ಈ ಹಿಂದೆ ಶೈಕ್ಷಣಿಕ ಸಾಲ ಎಂದರೆ ವೃತ್ತಿಪರ ಕೋರ್ಸ್ಗಳಿಗೆ ಮಾತ್ರ ಸೀಮಿತವಾಗಿತ್ತು. ಕಾರಣ ಇಷ್ಟೇ, ವೃತ್ತಿಪರ ಕೋರ್ಸ್ ಮುಗಿಸಿದ ಬಳಿಕ ಸುಲಭವಾಗಿ ಉದ್ಯೋಗ ದೊರೆಯುತ್ತದೆ. ಕೋರ್ಸ್ ಮುಗಿಸಿದ ಒಂದೆರೆಡು ವರ್ಷಗಳಲ್ಲಿ ಸಾಲ ಮರುಪಾವತಿಯಾಗುತ್ತದೆ ಎಂಬ ಉದ್ದೇಶದಿಂದ ಬ್ಯಾಂಕ್ಗಳು ಸಾಲ ನೀಡುತ್ತಿದ್ದವು.

ಇದೀಗ ಬ್ಯಾಂಕ್ಗಳು ತಮ್ಮ ನಿಯಮವನ್ನು ಸಡಿಲಗೊಳಿಸಿವೆ. ವೃತ್ತಿಪರ ಕೋರ್ಸ್ಗಳ ಹೊರತಾಗಿಯೂ ಇರುವ ಪದವಿ ಕೋರ್ಸ್ಗಳಿಗೆ ಸಾಲ ನೀಡಲು ಮುಂದಾಗಿವೆ. ಪಿಯು ನಂತರ ಬಿಎಸ್ಸಿ, ಬಿ.ಕಾಂ, ಬಿ.ಎ, ಸ್ನಾತಕೋತ್ತರ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳು ಕೂಡ ಶೈಕ್ಷಣಿಕ ಸಾಲವನ್ನು ಪಡೆಯಬಹುದು. ಸಾಮಾನ್ಯ ಸಹಕಾರಿ ಬ್ಯಾಂಕ್ನಿಂದ ಹಿಡಿದು, ರಾಷ್ಟ್ರೀಕೃತ ಬ್ಯಾಂಕ್ಗಳು ಕೂಡ ಶೈಕ್ಷಣಿಕ ಸಾಲವನ್ನು ನೀಡುತ್ತವೆ.

ಶೈಕ್ಷಣಿಕ ಸಾಲ ಪಡೆಯುವುದು ಹೇಗೆ?

ಸಾಕಷ್ಟು ಬ್ಯಾಂಕ್ಗಳು ವಿದ್ಯಾನಿಧಿ, ವಿದ್ಯಾಜ್ಯೋತಿ ಸೇರಿದಂತೆ ವಿವಿಧ ಹೆಸರಿನಲ್ಲಿ ಸಾಲ ನೀಡುತ್ತಿವೆ. ಇದನ್ನು ಪಡೆದುಕೊಳ್ಳಲು ಅಗತ್ಯ ದಾಖಲೆಗಳನ್ನು ನೀಡಬೇಕು. ಕನಿಷ್ಠ 30 ಸಾವಿರದಿಂದ ಗರಿಷ್ಠ 30 ಲಕ್ಷದವರೆಗೂ ವಿದ್ಯಾರ್ಥಿ ಸಾಲ ದೊರೆಯುತ್ತದೆ. ಹೆಚ್ಚಿನ ಸಾಲ ಪಡೆಯುವುದಾದರೆ ಹೆಚ್ಚಿನ ಭದ್ರತಾ ದಾಖಲೆಗಳನ್ನು ನೀಡಬೇಕಾಗುತ್ತದೆ. ಕೋರ್ಸ್ನ ಮಹತ್ವ ಹಾಗೂ ಅವಧಿಯ ಮೇಲೆ ಇದು ಬಿಂಬಿತವಾಗಿರುತ್ತದೆ. ಕೆಲವು ಬ್ಯಾಂಕ್ಗಳು ಕೇವಲ ಬೋಧನಾ ಶುಲ್ಕವನ್ನು ನೀಡಿದರೆ ಮತ್ತೆ ಕೆಲವು ಬೋಧಕೇತರ ಶುಲ್ಕದ ವೆಚ್ಚವನ್ನು ಭರಿಸುತ್ತವೆ. ಸಾರ್ವಜನಿಕ ವಲಯದ ಬ್ಯಾಂಕ್ಗಳು ಶೇ.9.70 ರಿಂದ ವಾರ್ಷಿಕ ಶೇ.13ರಷ್ಟು ಬಡ್ಡಿ ವಿಧಿಸುತ್ತವೆ. ಖಾಸಗಿ ವಲಯದ ಬ್ಯಾಂಕ್ಗಳು ಶೇ.11ರಿಂದ ಶೇ.15ರವರೆಗೆ ಬಡ್ಡಿ ವಿಧಿಸುತ್ತವೆ. ಈ ಬಡ್ಡಿದರವನ್ನು ಬ್ಯಾಂಕ್ಗಳು ವ್ಯಾಸಂಗ ಮುಗಿದ ದಿನದಿಂದ ಪಾವತಿಸುವವರೆಗಿನ ದಿನದವರೆಗೆ ಲೆಕ್ಕ ಹಾಕಲಾಗುತ್ತದೆ.

ಯಾವ ಕೋರ್ಸ್ಗಳಿಗೆ ಲಭ್ಯ?: ಈ ಕೋರ್ಸ್ಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ), ಸರ್ಕಾರಿ, ಎಐಸಿಟಿಇ ಅನುಮೋದನೆ ಪಡೆದಿರಬೇಕು. ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತವೈದ್ಯಕೀಯ, ಬಿಎ, ಎಂ.ಎ, ಬಿ.ಕಾಂ, ಏವಿಯೇಷನ್ ಸೇರಿದಂತೆ ಸಾಕಷ್ಟು ಕೋರ್ಸ್ಗಳಿಗೆ ಸಾಲ ದೊರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಿ ಸಾಲದ ಯೋಜನೆ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ.

ಭಾರತದಲ್ಲಿ UGC/ Govt./ AICTE/ AIBMS/ ICMR ಮುಂತಾದವುಗಳಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಅಭ್ಯಾಸಮಾಡುವ ಪದವಿ/ಸ್ನಾತಕೋತ್ತರ ಪದವಿಗಳಿಗೆ, ICWA, CA, CFA ಮುಂತಾದ ಕೋರ್ಸಗಳಿಗೆ,  IIMs, IITs, IISc, XLRI. NIFT,NID ಈ ಮುಂತಾದವುಗಳಿಂದ ನಡೆಸಲ್ಪಡುವ ಕೋರ್ಸಗಳಿಗೆ, ಡೈರೆಕ್ಟರ್ ಜನೆರಲ್ ಆಫ್ ಸಿವಿಲ್ ಏವಿಯೇಷನ್/ಸಿಪ್ಪಿಂಗ್/ಇಂಡಿಯನ್ ನರ್ಸಿಂಗ್ ಕೌನ್ಸಿಲ್/ಹಾಗೂ ಇತರೆ ರೆಗ್ಯುಲೇಟರಿಗಳಿಂದ ಮಾನ್ಯತೆ ಹೊಂದಿರುವ ಏರೋನಾಟಿಕಲ್, ಪೈಲಟ್ ಟ್ರೆ್ತ್ರನಿಂಗ್, ಸಿಪ್ಪಿಂಗ್, ನರ್ಸಿಂಗ್ ಪದವಿ ಅಥವಾ ನರ್ಸಿಂಗ್ ಡಿಪ್ಲೊಮೊ ಮುಂತಾದ ಕೋರ್ಸಗಳಿಗೆ, ವಿದೇಶಿ ಯುನಿವರ್ಸಿಟಿಗಳು ಭಾರತದಲ್ಲಿ ನಡೆಸುತ್ತಿರುವ ಇನ್ನಿತರ ಕೋರ್ಸಗಳಿಗೆ ಕೂಡ ವಿದ್ಯಾಭ್ಯಾಸ ಸಾಲ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ನೋಡಿ:www.ugc.ac.in <http://www.ugc.ac.in/,  www.education.nic.in <http://www.education.nic.in/, www.aicte.org.in <http://www.aicte.org.in/

ವಿದೇಶದಲ್ಲಿ ಸಾಲ: ನೌಕರಿಗೆ ಸಂಬಂಧಿಸಿದ ಪದವಿ ಕೋರ್ಸಗಳಿಗೆ,MCA, MBA, MS ಮುಂತಾದ ಸ್ನಾತಕೋತ್ತರ ಕೋರ್ಸಗಳಿಗೆ, CIMA- London, CPA in USA   ಮುಂತಾದವರಿಂದ ನಡೆಸಲ್ಪಡುತ್ತಿರುವ ಕೋರ್ಸಗಳಿಗೆ ಸಾಲಸೌಲಭ್ಯ ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ ನೋಡಿ: www.webometrics.info

ಕಾಲೇಜಿನ ಶುಲ್ಕ (ಮ್ಯಾನೇಜ್ವೆುಂಟ್ ಕೋಟಾದಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಅನುಮೋದಿಸಿರುವ ಶುಲ್ಕದ ವೆಚ್ಚವನ್ನು ಮಾತ್ರ ಪರಿಗಣಿಸಲಾಗುತ್ತದೆ), ಹಾಸ್ಟೆಲ್ ವೆಚ್ಚ (ಕಾಲೇಜಿನ ಹಾಸ್ಟೆಲ್ ಬದಲಿಗೆ ಹೊರಗೆ ಬೇರೆ ವ್ಯವಸ್ಥೆಯಲ್ಲಿ ವಾಸಿಸುವ ವಿದ್ಯಾರ್ಥಿಗಳ ಸಾಮಾನ್ಯ ವೆಚ್ಚವನ್ನು ಪರಿಗಣಿಸಬಹುದು), ಪರೀಕ್ಷಾ ಶುಲ್ಕ/ಲೈಬ್ರರಿ ಶುಲ್ಕ/ಲ್ಯಾಬೋರೇಟರಿ ಶುಲ್ಕ. ವಿದೇಶದಲ್ಲಿ ಓದುವುದಾದರೆ ಆಗಬಹುದಾದ ಪ್ರಯಾಣ ವೆಚ್ಚ, ವಿಮೆಯ ಪ್ರೀಮಿಯಂ ವೆಚ್ಚ, ಕಾಷನ್ ಡೆಪಾಜಿಟ್/ಬಿಲ್ಡಿಂಗ್ ಫಂಡ್ (ಇದು ಕೋರ್ಸಿನಲ್ಲಿ ನೀಡುವ ಟ್ಯೂಷನ್ ಶುಲ್ಕದ ಶೇ. 10 ಮೀರುವಂತಿಲ್ಲ), ಪುಸ್ತಕ ಖರೀದಿ, ಇತರ ಸಲಕರಣೆಗಳು, ಕಂಪ್ಯೂಟರ್ ಖರೀದಿ, ಯೂನಿಫಾರಂ, ಅಧ್ಯಯನ ಪ್ರವಾಸಗಳು, ಪ್ರಾಜೆಕ್ಟ್ ವರ್ಕಗಳ ವೆಚ್ಚಗಳು (ಈ ವೆಚ್ಚಗಳು ಕೋರ್ಸಿನಲ್ಲಿ ನೀಡುವ ಟ್ಯೂಷನ್ ಶುಲ್ಕದ ಶೇ. 20 ಮೀರುವಂತಿಲ್ಲ).

ರಾಷ್ಟ್ರೀಯ ಅಂಗವಿಕಲ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಅಂಗವಿಕಲ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮತ್ತು ಶಿಕ್ಷಣ ಸಾಲದಂತಹ ಹಲವು ಯೋಜನೆಗಳನ್ನು ರೂಪಿಸಿದೆ. ದೇಶದೊಳಗೆ ಅಥವಾ ವಿದೇಶದಲ್ಲಿ ಶಿಕ್ಷಣ ಪಡೆಯುವ ಅಂಗವಿಕಲ ವಿದ್ಯಾರ್ಥಿಗಳಿಗೆ ಶೇ. 4ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೂ. 20 ಲಕ್ಷದವರೆಗೆ ಹಾಗೂ ದೇಶದೊಳಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೂ. 10 ಲಕ್ಷದವರೆಗೆ ಸಾಲ ನೀಡಲಾಗುವುದು.

ಸಬ್ಸಿಡಿ ಕೂಡ ಉಂಟು

ಶೈಕ್ಷಣಿಕ ಸಾಲ ಪಡೆಯುವವರು ಪಡೆದ ಹಣ ಹಾಗೂ ಅದಕ್ಕೆ ಬ್ಯಾಂಕ್ ವಿಧಿಸುವ ಬಡ್ಡಿ ಎಲ್ಲವನ್ನು ಪಾವತಿಸಬೇಕು ಎಂದು ಭಯ ಪಡಬೇಕಾಗಿಲ್ಲ. ಕಾರಣ ಆರ್ಥಿಕವಾಗಿ ಹಿಂದುಳಿದವರೇ ಶೈಕ್ಷಣಿಕ ಸಾಲ ಪಡೆಯುವುದರಿಂದ ಅಂತಹ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಬಡ್ಡಿಯ ಮೇಲೆ ಸಂಪೂರ್ಣ ಸಬ್ಸಿಡಿ ಕೂಡ ನೀಡುತ್ತದೆ.

ವಾರ್ಷಿಕ ಆದಾಯ 4.5 ಲಕ್ಷ ರೂ. ಮಿತಿಯೊಳಗೆ ಇರುವ ವಿದ್ಯಾರ್ಥಿಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆದಾಯ ಪ್ರಮಾಣ ಪತ್ರವನ್ನು ಬ್ಯಾಂಕ್ಗೆ ಸಲ್ಲಿಕೆ ಮಾಡಿದಲ್ಲಿ ಅದನ್ನು ಪರಿಶೀಲಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ(ಎಂಎಚ್ಆರ್ಡಿ) ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡುತ್ತದೆ. ಈ ಸಮಿತಿ ಅಗತ್ಯ ದಾಖಲೆ ಪರಿಶೀಲಿಸಿದ ನಂತರ ಅರ್ಹತೆ ಹೊಂದಿದ್ದರೆ ಸಬ್ಸಿಡಿ ದೊರೆಯಲಿದೆ. 2009-10ನೇ ಸಾಲಿನಿಂದೀಚೆಗಿರುವವರಿಗೆ ಮಾತ್ರವೇ ಇದರ ಅನುಕೂಲ ಪಡೆದುಕೊಳ್ಳಲು ಸಾಧ್ಯ.

ಶೈಕ್ಷಣಿಕ ಸಾಲಕ್ಕೆ ಅರ್ಹತೆ: ವಿದ್ಯಾರ್ಥಿ ಭಾರತೀಯ ಪ್ರಜೆಯಾಗಿರಬೇಕು. ಹೈಯರ್ ಸೆಕೆಂಡರಿ(10+2) ವಿದ್ಯಾಭ್ಯಾಸದ ನಂತರ ಎಂಟ್ರೆನ್ಸ್ ಟೆಸ್ಟ್ ಅಥವಾ ಮೆರಿಟ್ ಮೂಲಕ ಆಯ್ಕೆಯಾದ ವಿದ್ಯಾರ್ಥಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಸಾಲ ಪಡೆಯಲು ಅರ್ಹನಾಗಿರುತ್ತಾನೆ. ಮೆರಿಟ್ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿ ಒಂದೊಮ್ಮೆ ಅದರ ಬದಲಾಗಿ ಮ್ಯಾನೇಜ್ವೆುಂಟ್ ಕೋಟಾದಲ್ಲಿ ಸೇರಲು ಇಚ್ಛಿಸಿದಲ್ಲಿ ಸಹ ಈ ಸಾಲಕ್ಕೆ ಅರ್ಹರಾಗುತ್ತಾನೆ.

ಒಂದೇ ಅರ್ಜಿ ಸಾಕು

ಬ್ಯಾಂಕ್ಗಳಲ್ಲಿ ಶೈಕ್ಷಣಿಕ ಸಾಲ ಪಡೆಯಲು ವಿದ್ಯಾರ್ಥಿಗಳು ಹಲವಾರು ಬ್ಯಾಂಕ್ಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸುವ ರಗಳೆಯಿಂದ ಮುಕ್ತ ನೀಡಲು ಕೇಂದ್ರ ಸರ್ಕಾರ ‘ವಿದ್ಯಾ ಲಕ್ಷ್ಮೀ’ ಯೋಜನೆ ಜಾರಿಗೆ ತಂದಿದೆ. ಸಾಲ ಪಡೆಯಲಿಚ್ಛಿಸುವ ವಿದ್ಯಾರ್ಥಿ ಈ ಲಿಂಕ್ಗೆ https://www.vidyalakshmi.co.in/Students/ ಭೇಟಿ ನೀಡಿ ಮೊದಲಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಆನಂತರ ಸಾಲದ ಅರ್ಜಿ ಭರ್ತಿ ಮಾಡಿದರೆ ಆ ಅರ್ಜಿಯು ವಿದ್ಯಾಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಂಡಿರುವ ಬ್ಯಾಂಕ್ಗಳಿಗೆ ತಲುಪಲಿದೆ. ಆನಂತರ ಬ್ಯಾಂಕ್ ನೀಡುವ ಬಡ್ಡಿಯ ವಿವರದೊಂದಿಗೆ ಯಾವ ಬ್ಯಾಂಕ್ನಲ್ಲಿ ಸಾಲ ತೆಗೆದುಕೊಳ್ಳಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ 39 ಬ್ಯಾಂಕ್ಗಳು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 62 ವಿವಿಧ ಯೋಜನೆಗಳಲ್ಲಿ ಸಾಲ ದೊರೆಯಲಿದೆ. ವಿದ್ಯಾರ್ಥಿಗಳು ವಿದ್ಯಾಲಕ್ಷ್ಮೀ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯ ಸ್ಥಿತಿ ಪರಿಶೀಲನೆ ಕೂಡ ಮಾಡಬಹುದು.

ಸಾಲ ಪಡೆಯಲು ಇವೆಲ್ಲ ಮುಖ್ಯ

  • ಅಂಕಪಟ್ಟಿ
  • ಕಾಲೇಜಿನ ಪ್ರವೇಶ ಪಡೆದಿರುವುದಕ್ಕೆ ರಸೀದಿ
  • ಕಾಲೇಜಿನ ವ್ಯಾಸಂಗಕ್ಕೆ ವೆಚ್ಚವಾಗುವ ಶುಲ್ಕದ ಪಟ್ಟಿ
  • ಇತ್ತೀಚಿನ ಎರಡು ಭಾವಚಿತ್ರ
  • ಮತದಾರ ಗುರುತಿನ ಅಥವಾ
  • ಆಧಾರ್ ಕಾರ್ಡ್ ಪ್ರತಿ

Comments