UK Suddi
The news is by your side.

ವೆಮಲನ ಸಾವಿಗೆ ಕಣ್ಣೀರಿಟ್ಟವರು ಈಗೆಲ್ಲಿ ಭೂಗತರಾಗಿದ್ದಾರೆ?

ಕಾಣೆಯಾಗಿದ್ದಾರೆ… ಕಾಣೆಯಾಗಿದ್ದಾರೆ… ಕಾಣೆಯಾಗಿದ್ದಾರೆ… ದಾದ್ರಿ ವಿಚಾರದಲ್ಲಿ ತಲೆಬುಡ ಗೊತ್ತಿಲ್ಲದೆ ಅಬ್ಬರಿಸಿ ಬೊಬ್ಬರಿದವರು ಕಾಣೆಯಾಗಿದ್ದಾರೆ. ಅಸಹಿಷ್ಣುತೆ ತಡ್ಕೊಳೋಕೆ ಆಗ್ತಾನೇ ಇಲ್ಲ ಅಂತ ನೊಂದುಕೊಂಡು ಅಷ್ಟಷ್ಟುದ್ದ ಗೀಚಿಕೊಂಡು ಅರಚಾಡಿದವರು ಕಾಣೆಯಾಗಿದ್ದಾರೆ. ರೋಹಿತ್ ವೆಮುಲ ಆತ್ಮಹತ್ಯೆ ಮಾಡಿಕೊಂಡಾಗ ಬೀದಿಗಿಳಿದು ಹೋರಾಟ ಮಾಡಿದವರು ಕಾಣೆಯಾಗಿದ್ದಾರೆ..!

ಹೌದು ಅವರೆಲ್ಲಾ ಎಲ್ಲಿದ್ದಾರೆ.? ಜಾತ್ಯಾತೀತರು, ಬುದ್ದಿಜೀವಿಗಳು, ದೊಡ್ಡ ಮನುಷ್ಯರು, ಟೌನ್ ಹಾಲ್ ಪ್ರತಿಭಟನಾಕಾರರು..ಇವರೆಲ್ಲಾ ಎಲ್ಲಿದ್ದಾರೆ.? ಅಲ್ಲೆಲ್ಲೋ ಏನೇನೋ ಆದಾಗ ಮನೆಯಲ್ಲೇ ಹೆಣ ಬಿತ್ತು ಅಂತ ಆಕ್ರೋಶ ವ್ಯಕ್ತಪಿಡಿಸಿದ್ರು. ಇಂಥಾ ಅನ್ಯಾಯ ಯಾರಿಗೂ ಆಗಬಾರದು ಅಂತ ನೊಂದುಕೊಂಡ್ರು. ವಿಮಾನ ಹತ್ತಿಕೊಂಡು ಎಂಟತ್ತು ರಾಜ್ಯ ಹಾರಿ ಬಂದ್ರು. ಮೈಕ್ ಮುನಿಸಿಕೊಳ್ಳೋ ರೇಂಜಿಗೆ ಭಾಷಣ ಬಿಗಿದ್ರು. ಒಂದೊತ್ತು ತಿಂಡಿ ಬಿಟ್ಟು ಉಪವಾಸ ಮಾಡಿದ್ರು. ಈಗ ಎಲ್ಲಿದ್ದಾರೆ..? ರಾಜ್ಯದ ಡಿವೈಎಸ್ಪಿ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯೂನಿಫಾರ್ಮ್ ಧರಿಸಿಕೊಂಡೇ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಅದಕ್ಕೆ ಮುಂಚೆ ತಮ್ಮ ನೋವು ಹೇಳಿಕೊಂಡಿದ್ದಾರೆ. ಮಾನಸಿಕವಾಗಿ ಕುಗ್ಗಿ ದೇನೆ ಅಂತ ಗೋಳಾಡಿದ್ದಾರೆ. ನಂಗೇನಾದ್ರೂ ಆದ್ರೆ ಇಂಥಂತವ್ರೆ ಕಾರಣ ಅಂತ ಹೇಳಿ ಹೋಗಿದ್ದಾರೆ. ಅವರು ಹೇಳಿರೋದೆಲ್ಲಾ ನಿಜಾನೋ, ಸುಳ್ಳೋ ನಮಗೂ ಗೊತ್ತಿಲ್ಲ. ಆದ್ರೆ ಒಬ್ಬರು ತ್ರಿಬಲ್ ಸ್ಟಾರ್ ಅಧಿಕಾರಿಯಾಗಿದ್ದ ಗಣಪತಿಯವರಂತಹವರು ಹೆದರಿ, ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ತಾರೆ ಅಂದ್ರೆ ಏನರ್ಥ.? ಇನ್ನು ಈ ನಾಡಲ್ಲಿ ಜನಸಾಮಾನ್ಯರ ಬದುಕೋದು ಹೇಗೆ.? ರಕ್ಷಣೆ ಕೊಡೋರಿಗೆ ರಕ್ಷಣೆ ಇಲ್ಲ ಅಂದ್ರೆ, ರಕ್ಷಣೆ ಕೇಳೋ ನಮ್ಮ ನಿಮ್ಮಂತವರ ಕಥೆ ಏನು.? 
ಈಗ ವಿಷಯ ಏನಂದ್ರೆ, ಅವತ್ತು ರೋಹಿತ್ ವೆಮುಲ ನನ್ನ ಸಾವಿಗೆ ಯಾರೂ ಕಾರಣರಲ್ಲ, ಇದು ನನ್ನದೇ ನಿರ್ಧಾರ ಅಂತ ಬರೆದಿಟ್ಟು ಹೋದರೂ ಸಹ ‘ ಅದೆಂಗ್ ಸಾಧ್ಯ, ಇದೆಲ್ಲಾ ನಾವ್ ಒಪ್ಪಲ್ಲ. ಅವನು ಬರೆದಿರಲಿ ಬಿಡ್ಲಿ, ಕಾರಣ ಕೇಂದ್ರ ಸರ್ಕಾರ’ ಅಂತ ಘರ್ಜಿಸಿದ ಹುಲಿಗಳಿಗೆ ಈ ಸಾವು ಯಾಕೆ ಕಾಣ್ತಿಲ್ಲ.?  ಆ ಹುಲಿಗಳೆಲ್ಲಾ ಈಗ ಎಲ್ಲಿರಬಹುದು.? ಬನ್ನಿ, ಈಗಲೂ ಸರ್ಕಾರದ ಮೇಲೆ ಒತ್ತಡ ಹೇರಿ, ಕೇಂದ್ರ ಸರ್ಕಾರಕ್ಕೂ ಬಿಡಬೇಡಿ, ಈ ವಿಚಾರದಲ್ಲಿ ತಲೆ ಹಾಕೋಕೆ ಹೇಳಿ. ಬಿಡೋದು ಬೇಡ ಎಲ್ಲಾ ಸೇರಿ ಹೋರಾಡೋಣ ಬರ್ತೀರಾ.? ಇಲ್ಲ ಯಾರೂ ಬರಲ್ಲ..! ಕಾರಣ ನಿಮಗೂ ಗೊತ್ತು, ನಮಗೂ ಗೊತ್ತು..! 

ಕಳೆದ ಒಂದೆರೆಡು ವರ್ಷದಲ್ಲಿ ಈ ದೇಶ ಏನೇನೆಲ್ಲಾ ನೋಡಿಬಿಡ್ತು. ದೇಶದ ಹೆಸರು ಒಂದು ಕಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಲೇರ್ತಾ ಇದ್ದರೂ, ಮತ್ತೊಂದು ಕಡೆ ಅದೇ ದೇಶದ ಅನ್ನ ತಿಂದ ಕೆಲವರು, ರಾಜಕೀಯ ಕಾರಣಗಳಿಂದಾಗಿ, ಪ್ರಧಾನಿ ಮೋದಿಯವರನ್ನು ವಿರೋಧಿಸಬೇಕು ಎಂಬ ಏಕೈಕ ಕಾರಣಕ್ಕೆ ದೇಶದಲ್ಲಿ ಸತ್ತವರನ್ನೆಲ್ಲಾ ರಾಜಕೀಯಕ್ಕೆ ನಂಟು ಮಾಡಿದ್ರು. ಪರಿಣಾಮವಾಗಿ ಹಿಂದೆಂದೂ ಭಾರತೀಯರು ಕೇಳದ ‘ಅಸಹಿಷ್ಣುತೆ’ ಅನ್ನೋ ಪದ ತಿರುಗಾ ಮುರುಗಾ ಕಿವಿಗೆ ಬಿತ್ತು. ಅದೊಂದು ಪದ ಹಿಡ್ಕೊಂಡು ಗ್ರಾಮ ಪಂಚಾಯತ್ ಸದಸ್ಯನಿಂದ  ಸೂಪರ್ ಸ್ಟಾರ್ ತನಕ ಎಲ್ಲರೂ ಜೋತಾಡಿದ್ರು. ಕೆಲವರಂತೂ ಇಷ್ಟು ದಿನ ಸ್ಟಾರ್ ಗಿರಿ ಕೊಟ್ಟ ದೇಶವನ್ನೇ ಬಿಟ್ಟು ಹೋಗೋಣ ಅಂತ ಹೆಂಡ್ತಿ ಹೇಳ್ತಿದ್ಲು ಅಂದ್ರು. ಇವರೆಲ್ಲಾ ಇದೇ ದೇಶದಲ್ಲಿ ಇಷ್ಟು ವರ್ಷ ಏನ್ ಮಾಡ್ತಿದ್ರು ಅಂತ ತಲೆಕೆಡಿಸ್ಕೊಳೋ ರೇಂಜಿಗೆ ಹುಳಬಿಟ್ರು. ಟೋಟಲಿ ದೇಶ ಸರಿ ಇಲ್ಲ ನಿರೂಪಿಸೋಕೆ ಈ ದೇಶದವರೇ ಒದ್ದಾಡಿದ್ರು. ಅದೇನೇ ಆಗ್ಲಿ, ಆ ಅಕಾಡೆಮಿ ಅವಾರ್ಡ್ ವಾಪಾಸ್ ಕೊಟ್ಟವರಿಗೆ ಈಗ ಈ ಗಣಪತಿ ಅವರ ಸಾವು ಅಸಹಿಷ್ಣುತೆ ಅನ್ನಿಸ್ತಿಲ್ವಾ.? ಸಾಲುಸಾಲು ಅಧಿಕಾರಿಗಳು ಒಂದಿಲ್ಲೊಂದು ರೀತಿಯಲ್ಲಿ ವರ್ಗ ಆಗೋದು, ರಾಜೀನಾಮೆ ಕೊಡೋದು ಆತ್ಮಹತ್ಯೆ ಮಾಡಿಕೊಳ್ತಿರೋದು ನೋಡಿದ್ರೆ ಇದೆಲ್ಲಾ ಯಾಕೋ ರಾಜ್ಯದಲ್ಲಿ ಅತಿಯಾಗ್ತಿದೆ ಅನ್ನಿಸ್ತಿಲ್ವಾ.? ಇರೋ ಬರೊ ಅವಾರ್ಡ್ ಎಲ್ಲಾ ಕಪಾಟಿಂದ ತಂದು ವಾಪಾಸ್ ಕೊಡಬೇಕು ಅನ್ನಿಸ್ತಿಲ್ವಾ.? ಅನಿಸಿಲ್ಲಾ ಅಂತಾದ್ರೆ ಯಾಕೆ.? ಇವರ ಸಾವಿಗೆ ಬೆಲೆ ಇಲ್ವಾ.? ಅಥವಾ ಇವರ ಸಾವಿಗೂ ಕೆಂದ್ರ ಸರ್ಕಾರಕ್ಕೆ ಸಂಬಂಧ ಇಲ್ವಾ.? ರಾಜಕೀಯವನ್ನು ರಾಜಕಾರಣಿಗಳು ಮಾಡ್ತಾರೆ ಬಿಡಿ, ತಾವೆಲ್ಲಾ ತಿಳಿದವರು, ಬುದ್ದಿಜೀವಿಗಳು, ಸಾಹಿತಿಗಳು, ಹೋರಾಟಗಾರರು. ನಿಮಗ್ಯಾಕೆ ಈ ರಾಜಕೀಯ ಪ್ರೇರಿತ ಹೋರಾಟಗಳು. ಹೋರಾಟ ಮಾಡೋದಾದ್ರೆ ಎಲ್ಲರೂ ಒಂದೇ ಅಂತ ಮಾಡಿ, ಬೀದಿಗಿಳಿದು ಹೋರಾಟ ಮಾಡಿ, ಟೌನ್ ಹಾಲಲ್ಲಿ ಗಣಪತಿವಾವರ ಫೋಟೋ ಇಟ್ಕೊಂಡು ಘೋಷಣೆ ಕೂಗಿ. ಆಗ ಒಪ್ಪಿಕೊಳ್ಳೋಣ, ನಿಮಗೆ ರೋಹಿತ್ ವೆಮುಲಾ ಸಾವಿಗೆ ಎಷ್ಟು ನೋವಾಗುತ್ತೋ, ಅಷ್ಟೇ ನೋವು ಗಣಪತಿಯವರು ಸತ್ತಾಗಲೂ ಆಗುತ್ತೆ ಅಂತ ನಂಬೋಣ.‌.‌ ಏನಂತೀರಿ.? 

ಗಣಪತಿಯವರು ಯಾಕೆ ಆತ್ಮಹತ್ಯೆ ಮಾಡಿಕೊಂಡ್ರು‌.? ಅವರಿಗೆ ನಿಜಕ್ಕೂ ಅವರು ಹೆಸರು ಹೇಳಿದವರೆಲ್ಲಾ ಅಷ್ಟು ಕಿರುಕುಳ ಕೊಟ್ರಾ.? ಯಾಕೆ ಕೊಟ್ರು.? ಇವೆಲ್ಲಾ ತನಿಖೆಯಾಗಿ ಅವರ ಸಾವಿಗೊಂದು ನ್ಯಾಯ ಸಿಗಬೇಕು ಅನ್ನೋ ಕಾರಣಕ್ಕೆ ಅವರ ಪರವಾಗಿ ಧ್ವನಿ ಎತ್ತೋಕೆ ಅವರೆಲ್ಲಾ ಬರೋದಿಲ್ಲ. ಸಾವಿನ ಜೊತೆ ರಾಜಕೀಯ ಮಾಡಿದ್ರಿ, ಯಾರ ಹೆಣ ಬೀಳುತ್ತೆ ಅಂತ ರಣಹದ್ದುಗಳಂತೆ ಕಾಯ್ತಾ ಇದ್ರಿ. ಈಗ ಕರ್ನಾಟಕದ, ಹೌದು ನಾವು ನೀವು ವಾಸವಿರೋ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಮ್ಮನ್ನು ನೀವೇ ಒಮ್ಮೆ ಪ್ರಶ್ನಿಸಿಕೊಳ್ಳಿ. ಹೌದಲ್ವಾ ನಾವು ರಾಜಕೀಯ ಪ್ರೇರಿತ ಧ್ವನಿಯಾಗ್ತಿದ್ದೀವಿ ಅಂತ ನಿಮಗನಿಸಿದ್ರೆ ಅಷ್ಟು ಸಾಕು.! ಇನ್ನಾದ್ರೂ ಹೆಣದ ಮೇಲೆ ರಾಜಕೀಯ ಮಾಡೋದು ಬಿಡಿ. ಮುಂದೊಂದು ದಿನ ಮತ್ತೆಲ್ಲೋ ಮತ್ಯಾರೋ ಸತ್ತಾಗ ‘ಅಯ್ಯಯ್ಯೋ ಅಸಹಿಷ್ಣುತೆ’ ಅಂದ್ರೆ ಜನ ನಿಮಗೆ ಏನ್ ತಗೊಂಡು ಹಾಕ್ತಾರೆ ಅಂತ ನಿಮಗೇ ಗೊತ್ತಿರಬೇಕು..! ಗಣಪತಿಯವರ ಸಾವಿಗೆ ನ್ಯಾಯ ಸಿಗಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ… ಆ  ‘ಉಟ್ಟು ಓರಾಟಗಾರರಿಗೂ’ (ಮುಖವಾಡ ತೊಟ್ಟು ಹೋರಾಟ ಮಾಡುವವರು)…! 

– ಕೀರ್ತಿ ಶಂಕರಘಟ್ಟ

Comments