ಜಮಖಂಡಿಯಲ್ಲಿ ಪ್ರವಾಹ

ಬಾಗಲಕೋಟೆ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದ್ದು, ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕನವಾಡಿ ನಡುಗಡ್ಡೆ, ಮುತ್ತೂರ ನಡುಗಡ್ಡೆ, ಮುತ್ತೂರ, ಮೈಗೂರ, ಶಿರಗುಪ್ಪಿ, ಕಡಕೋಳ, ಕಂಕನವಾಡಿ, ಶೂರ್ಪಾಲಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗಿದೆ.
ಕೃಷ್ಣಾ ನದಿಗೆ 2.68 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಈ ಭಾಗದಲ್ಲಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ.
ಹಿಪ್ಪರಗಿ ಜಲಾಶಯದ ಹಿನ್ನೀರಿನಿಂದ ಸಾವಿರಾರು ಎಕರೆ ಜಮೀನು ನೀರು ಪಾಲಾಗಿವೆ. ನದಿ ತೀರದ ಮದಮನಟ್ಟಿ, ಹಳಿಂಗಳಿ, ತಮದಡ್ಡಿ, ಅಸ್ಕಿ, ಆಸಂಗಿಯಲ್ಲಿ ಹೊಲಗದ್ದೆಗಳಲ್ಲಿ ನದಿ ನೀರು ನುಗ್ಗಿದ್ದರಿಂದ ಸಂಪೂರ್ಣ ಜಲಾವೃತಗೊಂಡಿವೆ. ಮುಂಗಾರು ಬೆಳೆಗಳಾದ ಮೆಕ್ಕೆ ಜೋಳ, ಸಜ್ಜೆ ಹಾಗೂ ಕಬ್ಬು ಸಂಪೂರ್ಣ ನೀರಲ್ಲಿ ಮುಳುಗಿ ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ತಾಲೂಕು ಆಡಳಿತಾಧಿಕಾರಿಗಳು ನದಿ ಪಾತ್ರದಲ್ಲಿ ಹಾಳಾದ ರೈತರ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.
ನಡುಗಡ್ಡೆಯಲ್ಲಿ ಕುಟುಂಬಗಳು: ಮುತ್ತೂರು ಗ್ರಾಮದ ಸುತ್ತಲೂ ನೀರು ಸುತ್ತುವರಿದಿದೆ. ಇದರಿಂದ 30 ಕುಟುಂಬಗಳಿಗೆ ನೆರೆ ಭೀತಿ ಉಂಟಾಗಿದೆ. ನೂರಾರು ಜನರಿರುವ ಮುತ್ತೂರ ನಡುಗಡ್ಡೆಯಲ್ಲಿ ಜಾನುವಾರುಗಳಿಗೆ ಬೆಳೆದಿದ್ದ ಮೇವು ನದಿ ನೀರಿನಲ್ಲಿ ಮುಳುಗಿರುವುದರಿಂದ ಮೇವಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮಕ್ಕೆ ಪೌರಾಯುಕ್ತ ಗೋಪಾಲ ಕಾಸೆ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ತಾಲೂಕಾಡಳಿತ ನೇಮಿಸಿದೆ. ಆದರೆ, ಅವರು ಒಂದು ಬಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಮುತ್ತೂರು ಗ್ರಾಮದ ಲಕ್ಷ್ಮೀ ದೇವಸ್ಥಾನದವರೆಗೆ ಅಧಿಕಾರಿಗಳ ತಂಡದೊಂದಿಗೆ ಗುರುವಾರ ಭೇಟಿ ನೀಡಿದರೂ, ನಡುಗಡ್ಡೆಗೆ ಭೇಟಿ ನೀಡುವ ಧೈರ್ಯ ಮಾಡಲಿಲ್ಲ. ಸಮೀಪದ ತುಬಚಿ ಗ್ರಾಮದ ಶಾಲೆಗಳಿಗೆ ತೇರಳುವ ರಸ್ತೆ ಜಲಾವೃತಗೊಂಡಿರುವುದರಿಂದ ವಿದ್ಯಾರ್ಥಿಗಳು ಐದು ದಿನಗಳಿಂದ ಶಾಲೆಗೆ ಹೋಗಿಲ್ಲ. ಅಲ್ಲದೆ ರಾತ್ರಿ 10ಗಂಟೆ ನಂತರ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ನಿವಾಸಿಗಳಿಗೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ, ಒಬ್ಬರು ನೀರು ಬರುವ ಮಟ್ಟವನ್ನು ನೋಡುತ್ತ, ಇನ್ನೊಬ್ಬರು ಹುಳು- ಹುಪ್ಪಡಿ ಓಡಿಸುತ್ತ ರಾತ್ರಿ ಕಳೆಯಬೇಕಾದ ಸ್ಥಿತಿ ನಿರ್ವಣವಾಗಿದೆ.