ನೋಡ ಬನ್ನಿ ಮದಗ ಕೆರೆ
ಮಾಯದಂಥ ಮಳೆ ಬಂತಣ್ಣ ಮದಗಾದ ಕೆರೆ’ ಎಂಬ ಜಾನಪದ ಗೀತೆ ರಾಜ್ಯಾದ್ಯಂತ ಜನರ ಮನಸ್ಸಿನಲ್ಲಿ ನೆಲೆ ನಿಂತಿದೆ. ಆದರೆ ಈ ಗೀತೆಯಲ್ಲಿರುವ ಕೆರೆಇರುವುದು ಎಲ್ಲಿ ಎಂಬುದು ಮಾತ್ರ ರಾಜ್ಯದ ಬಹುತೇಕ ಜನರಿಗೆ ಇನ್ನೂ ಗೊತ್ತಿಲ್ಲ. ಈ ಸುಂದರವಾದ ಮದಗ ಕೆರೆ ಇರುವುದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದ ಸಮೀಪದಲ್ಲಿ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಕೆರೆ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕೆರೆಯಲ್ಲಿ ಕಾಣುವ ವೈಭವಯುತವಾದ ಫಾಲ್ಸ್ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.
ಸುಂದರ ಪರಿಸರದ ಮಧ್ಯದಲ್ಲಿ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಫಾಲ್ಸ್ ನೋಡಲು ಸೌಂದರ್ಯ ಪ್ರಿಯರು ಮುಗಿಬೀಳುತ್ತಾರೆ. ಕುಟುಂಬ ಸಮೇತರಾಗಿ ಇಲ್ಲಿಗೆ ಬಂದು ಇಲ್ಲಿಯ ಸೌಂದರ್ಯವನ್ನು ಸವಿದು, ಸಂತಸ ಪಡುತ್ತಾರೆ. ರಾಜ್ಯ ಸರಕಾರ ಈ ಕೆರೆಗೆ ಒಳ್ಳೆಯ ಕಾಯಕಲ್ಪ ನೀಡಿದರೆ ರಾಜ್ಯದಲ್ಲಿ ಒಂದು ಒಳ್ಳೆಯ ಪ್ರವಾಸಿತಾಣವಾಗುತ್ತದೆ. ತಾಲೂಕಿನ ಸಾವಿರಾರು ಎಕರೆ ಪ್ರದೇಶ ನೀರಾವರಿಯಾಗುತ್ತದೆ. ಅಷ್ಟೇ ಅಲ್ಲದೇ ಕಿರು ವಿದ್ಯುತ್ ಉತ್ಪಾದನಾ ಕೇಂದ್ರವನ್ನೂ ಸಹ ಇಲ್ಲಿ ಸ್ಥಾಪಿಸುವ ಅರ್ಹತೆ ಹೊಂದಿದೆ.