ಟಿ ಪಿ ಕೈಲಾಸಂ ಅವರ ಜನ್ಮದಿನ ಇಂದು.
ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ಅವರದು.
ಕನ್ನಡಕ್ಕೊಬ್ನೆ ಕೈಲಾಸಂ
ಕೈಲಾಸಂ ಅವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು, ಜೊಕ್ಕವಾಗಿತ್ತೆಂದೂ ಪ್ರಸಿದ್ಧವಾಗಿದೆ. ಏಕೆಂದರೆ ಅದರಲ್ಲಿ ಪದೇ ಪದೇ ಹೇಳಿದ್ದನ್ನೇ ಹೇಳುವ ಪರಿಪಾಠವಿರಲಿಲ್ಲ.
ಪ್ರತಿಪದ, ಪ್ರತಿವಾಕ್ಯಗಳೂ ಮೊದಲೇ ನಿರ್ಧಾರಿತವಾಗಿದ್ದು, ಸಭಿಕರಿಗೆ ಮತ್ತು ಆ ದಿನದ ಸನ್ನಿವೇಶಕ್ಕೆ ಬೇಕಾದ್ದನ್ನು ಮಾತ್ರ ಹೇಳಿದ್ದರಿಂದ ಇದು ಎಲ್ಲರಿಗೂ ಅತ್ಯಂತ ಪ್ರಿಯವಾಯಿತು. ಅತಿ ಕ್ಲುಪ್ತ, ಮತ್ತು ಪ್ರಭಾವಿ ಭಾಷಣಕ್ಕೆ , ಮಾತುಕತೆಗೆ ಅವರು ಪ್ರಸಿದ್ಧರಾಗಿದ್ದರು. ಮೊದಲ ತಯಾರಿಯಿಲ್ಲದೆ ಯಾವ ಸಮಾರಂಭಕ್ಕೂ ಅವರು ಹೋಗುತ್ತಿರಲಿಲ್ಲ.
ಕನ್ನಡಕ್ಕೊಬ್ನೆ ಕೈಲಾಸಂ’, ಎಂದು ಎಲ್ಲರ ಕೈಲೂ, ಭೇಷ್ ಎನ್ನಿಸಿಕೊಂಡ ಕೈಲಾಸಂ, ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯ! ಯಾರೋ ಅವರನ್ನು ಸಂಬೋಧಿಸಿ, ಟಿ.ಪಿ.ಕೈಲಾಸ್,ಎಂದಾಗ ತಮ್ಮನ್ನು ತಾವೆ, ಟಿಪಿಕಲ್ ಆಸ್, ಎಂದು ಕರೆದುಕೊಂಡು, ನಗೆ ಯಾಡಿದ್ದರಂತೆ. ಪಾಶ್ಚಾತ್ಯ ಸಂಗೀತಾಸಕ್ತರಾಗಿ ಅವರು ಇಂಗ್ಲಿಷ್ ರಾಗಕ್ಕೆ ಕನ್ನಡದಲ್ಲಿ ಹಾಡು ಬರೆದು ಕೇಳುಗರಿಗೆ ಅಚ್ಚರಿ ಹುಟ್ಟಿಸುತ್ತಿದ್ದರಂತೆ.
ಕೈಲಾಸಂರ ಪದ್ಯದ ತುಣುಕೊಂದು ಹೀಗಿದೆ. “ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಿಲೆಂದೆನಿಸಿ ಕಲ್ಲನ್ನು ಕೊರೆಯಲು–ಎಲ್ಲೆಲ್ಲಿ ಕೊರೆದರೂ ಕಲ್ಲಲ್ಲದೊಂದಿಲ್ಲ ! ಬಲ್ಲೆ– ಕಲ್ಲೇ ಇದ್ದಿಲೆಂದನಲ್ಪಜ್ಞ “.
ಕೈಲಾಸಂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಹೇಳಿದ ಇಂಗ್ಲಿಷ್ ಕವನದ ಕನ್ನಡಾನುವಾದ ಹೀಗಿದೆ, “ಹೊನ್ನೆ ? ಬಲ್ ಬಿರುದುಗಳೆ ? ಹಾಲುಗಲ್ ವಿಗ್ರಹವೆ ? ಕವಿ ಬಯಸನಿಂಥದೇ ಪ್ರತಿಫಲವೆ ಬೇಕು ! ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು” !.