ದೇಶಾದ್ಯಂತ ಬ್ಯಾoಕ ಸಿಬ್ಬಂದಿ ಮುಷ್ಕರ
ಹೈದರಾಬಾದ್: ಸರ್ಕಾರಿ, ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್ಗಳ ಖಾಸಗೀಕರಣ ಮತ್ತು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಇಂದು ದೇಶಾದ್ಯಂತ ಬ್ಯಾಂಕ್ ನೌಕರರು ಬಂದ್ಗೆ ಕರೆ ನೀಡಿದ್ದಾರೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕರೆ ನೀಡಿರುವ ಮುಷ್ಕರಕ್ಕೆ ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಕರ್ನಾಟಕ ರಾಜ್ಯ ಘಟಕ ಬೆಂಬಲ ಸೂಚಿಸಿದೆ. ರಾಜ್ಯದ ಎಲ್ಲ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಇಂದು ರಾಜ್ಯಾದ್ಯಂತ ಬ್ಯಾಂಕ್ ವಹಿವಾಟು ಸ್ಥಗಿತವಾಗಲಿದೆ. ಚೆಕ್ ಕ್ಲಿಯರೆನ್ಸ್, ಹಣ ಠೇವಣಿ ಮಾಡಲು ಅವಕಾಶವಿಲ್ಲ. ಆದರೆ ಎಟಿಎಂಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಮುಷ್ಕರದಲ್ಲಿ ಯುಎಫ್ಬಿಯು ಸದಸ್ಯತ್ವ ಹೊಂದಿರುವ 10 ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಳೆ ಖಾಸಗಿ ಬ್ಯಾಂಕ್ಗಳು, ವಿದೇಶಿ ಬ್ಯಾಂಕ್ಗಳು ಸೇರಿ 80 ಸಾವಿರ ಶಾಖೆಗಳು ಭಾಗಿಯಾಗಲಿವೆ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಮ್ ಹೇಳಿದ್ದಾರೆ.