UK Suddi
The news is by your side.

ಧಾರವಾಡದಲ್ಲಿ ಖಾಕಿ ದೌರ್ಜನ್ಯ..! ಮನೆ ಮನೆಗೆ ನುಗ್ಗಿ ರೈತರ ಮೇಲೆ ಪೊಲೀಸರಿಂದ ಥಳಿತ; 

ಧಾರವಾಡ: ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟವನ್ನು ಹತ್ತಿಕ್ಕಲು ಸರಕಾರ ಖಾಕಿ ದರ್ಪವನ್ನು ಉಪಯೋಗಿಸುತ್ತಿರುವಂತಿದೆ. ಕಳಸಾ ಬಂಡೂರಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ನವಲಗುಂದ ತಾಲೂಕಿನ ಗ್ರಾಮಗಳ ಮೇಲೆ ಖಾಕಿ ಆಕ್ರಮಣ ನಡೆಯುತ್ತಿದೆ. ಯಮನೂರು, ಹಳಗವಾಡಿ, ಹೆಬಸೂರು ಮೊದಲಾದ ಗ್ರಾಮಗಳಲ್ಲಿ ಪೊಲೀಸರು ಮನೆಮನೆಗೆ ನುಗ್ಗಿ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವ ಅಮಾನವೀಯ ಸಂಗತಿ ವರದಿಯಾಗಿದೆ. ಮಹಿಳೆಯರು, ವೃದ್ಧರು ಎಂಬುದನ್ನೂ ಲೆಕ್ಕಿಸದೆ ಮನಸೋಯಿಚ್ಛೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಪೊಲೀಸರಿಗೆ ರೈತರು ಹೆದರಿ ಮನೆ ಬಿಟ್ಟು ಹೊಲಗಳಲ್ಲಿ ಅಡಗಿಕೊಂಡಿರುವ ಹಾಗೂ ವೃದ್ಧರು, ಮಹಿಳೆಯರು ಅಳುತ್ತಿರುವ ಘೋರ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿದೆ. ಬ್ರಿಟಿಷರ ಕಾಲದಲ್ಲೂ ಇಷ್ಟು ಪ್ರಮಾಣದಲ್ಲಿ ಅಮಾನವೀಯತೆ ವ್ಯಕ್ತವಾಗಿದ್ದಿಲ್ಲ ಎಂದು ಇಲ್ಲಿನವರು ಹೇಳುತ್ತಾರೆ. 

ಸವಾಲು ಹಾಕಿ ದರ್ಪ ತೋರುತ್ತಿದೆ ಖಾಕಿ ಪಡೆ:
ಕಳದಾ ಬಂಡೂರಿ ನಾಲೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವು ಈ ಭಾಗದಲ್ಲಿ ತೀವ್ರವಾಗಿದೆ. ಮೊನ್ನೆ ನಡೆದ ಕರ್ನಾಟಕ ಬಂದ್ ವೇಳೆ ಈ ಭಾಗದಲ್ಲೇ ಹೆಚ್ಚು ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಹೋರಾಟಗಾರರ ಕೆಚ್ಚನ್ನು ಹೇಗಾದರೂ ಅಡಗಿಸಬೇಕೆಂಬ ಸೂಚನೆಯನ್ನು ಪೊಲೀಸರಿಗೆ ಸರಕಾರವೇ ನೀಡಿರುವಂತಿದೆ. ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು ರೈತರಿಗೆ ಸವಾಲು ಹಾಕಿಯೇ ಖಾಕಿ ಪಡೆಗಳು ಗ್ರಾಮಗಳಲ್ಲಿ ಮೊಕ್ಕಾಂ ಹೂಡಿವೆ. ಮನೆ ಮನೆಗೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಪೊಲೀಸರ ತಾಕತ್ತು ಏನೆಂಬುದನ್ನು ರೈತರಿಗೆ ತೋರಿಸಿ ಎಂದು ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಅವರೇ ಖುದ್ದಾಗಿ ಸೂಚನೆ ನೀಡಿದ್ದಾರೆನ್ನಲಾಗಿದೆ.

ಖಾಕಿ ದೌರ್ಜನ್ಯದ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಯಮನೂರು ಗ್ರಾಮದ ರೈತರು ತಾವು ಇಂಥದ್ದಕ್ಕೆ ಬೆದರುವುದಿಲ್ಲ. ತಮ್ಮ ಹೋರಾಟ ಮುಂದುವರಿಯುವುದು ಎಂದು ಹೇಳಿದ್ದಾರೆ.

Comments