ಮಹದಾಯಿ ಹೋರಾಟಕ್ಕೆ ಮಹಾರಾಷ್ಟ್ರ ಸಾಥ
ಬೆಳಗಾವಿ: ಶತ್ರುವಿನ ಶತ್ರು ಈಗ ಮಿತ್ರ. ಗಡಿ ವಿವಾದದ ಹೆಸರಿನಲ್ಲಿ ಕರ್ನಾಟಕದ ಜತೆ ಕಾಲು ಕೆದರಿ ಜಗಳ ತೆಗೆಯುತ್ತಲೇ ಬಂದಿರುವ ಮಹಾರಾಷ್ಟ್ರ, ಮಹದಾಯಿ ವಿಷಯದಲ್ಲಿ ಕರ್ನಾಟಕದ ಪರ ನಿಂತು ನ್ಯಾಯಾಧಿಕರಣಕ್ಕೆ ಪ್ರತಿಜ್ಞಾ ಪತ್ರ ಸಲ್ಲಿಸಿದೆ. ಇದು ಇಲ್ಲಿನ ಹೋರಾಟಗಾರರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕರ್ನಾಟಕ -ಮಹಾರಾಷ್ಟ್ರ ಒಂದಾದರೆ ಗೋವಾ ತಾನಾಗಿಯೇ ಮಣಿಯುತ್ತದೆ ಎಂಬ ಭಾವನೆ ಇಲ್ಲಿ ಮೂಡಿದೆ. ಕರ್ನಾಟಕ ಮತ್ತು ಗೋವಾ ಗಡಿ ಪ್ರದೇಶದಲ್ಲಿ ಬೀಳುವ ಮಳೆಯ ಮೇಲೆ ಕರ್ನಾಟಕಕ್ಕೆ ಸಂಪೂರ್ಣ ಹಕ್ಕಿದೆ. ಹೀಗಾಗಿ, 7.56 ಟಿಎಂಸಿ ನೀರು ಬೇಕು ಎಂದು ಕೇಳಿರುವುದು ಸಮರ್ಥನೀಯ ಎಂದು ಮಹಾರಾಷ್ಟ್ರ ಸರ್ಕಾರ ನ್ಯಾಯಾಧಿಕರಣಕ್ಕೆ ಸಲ್ಲಿಸಿದ ಪ್ರತಿಜ್ಞಾ ಪತ್ರದಲ್ಲಿ ತಿಳಿಸಿದೆ. ಇದು ಕರ್ನಾಟಕದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತಂದುಕೊಡುವ ಬೆಳವಣಿಗೆಯಾಗಿದೆ.
ಬೆಂಬಲಕ್ಕೆ ಕಾರಣವೇನು?: ಮಹಾರಾಷ್ಟ್ರ ಮಹದಾಯಿ ವಿಷಯದಲ್ಲಿ ಗೋವಾದೊಂದಿಗೆ ಅಂತರ ಕಾಯ್ದುಕೊಂಡು ಕರ್ನಾಟಕದ ಜತೆ ನಿಲ್ಲಲು ಕಾರಣವೇನು ಎಂಬ ಪ್ರಶ್ನೆ ಕಾಡುವುದು ಸಹಜ. ಸಹ್ಯಾದ್ರಿ ಕಣಿವೆಯಲ್ಲಿ ಹಾದು ಹೋಗುವ ಮಹದಾಯಿ ನದಿಗೆ ವಿರಡಿ ಎಂಬ ಪ್ರದೇಶದ ಬಳಿ ಅಣೆಕಟ್ಟು ನಿರ್ಮಾಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿರುವುದೇ ಇದಕ್ಕೆಕಾರಣ ಎನ್ನಲಾಗುತ್ತಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ 2006ರಲ್ಲಿ ಗೋವಾ ರಾಜ್ಯದ ಜತೆಗೆ ಮಹಾರಾಷ್ಟ್ರದ ಒಪ್ಪಂದವಾಗಿತ್ತು. ಆಮೇಲೆ ಗೋವಾ ಇದರಿಂದ ಹಿಂದೆ ಸರಿದು ಆಕ್ಷೇಪ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರದ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ, ಕರ್ನಾಟಕದ ಸಹಾಯ ಪಡೆದುಕೊಳ್ಳುವ ಉದ್ದೇಶದಿಂದ ನ್ಯಾಯಾಧಿಕರಣದ ಮುಂದೆ ರಾಜ್ಯದ ಪರ ಪ್ರತಿಜ್ಞಾ ಪತ್ರ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ಏನಿದು ಒಪ್ಪಂದ?: ಹತ್ತು ವರ್ಷಗಳ ಹಿಂದೆ ವಿರಡಿ ಬಳಿ ಮಹದಾಯಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ನಿರ್ಧರಿಸಿದ್ದ ಮಹಾರಾಷ್ಟ್ರ ಸರ್ಕಾರ ಗೋವಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮುಂಬೈನಲ್ಲಿ 2006ರ ಮೇ ತಿಂಗಳಲ್ಲಿ ಸಭೆ ನಡೆದಿತ್ತು. ಒಪ್ಪಂದದ ಪ್ರಕಾರ ಅಣೆಕಟ್ಟು ನಿರ್ಮಿಸಿ, ಮಹದಾಯಿ ನದಿಯಿಂದ 1.53 ಕೋಟಿ ಕ್ಯೂಬಿಕ್ ಲೀಟರ್ ನೀರು ಪಡೆಯುವುದು ಮಹಾರಾಷ್ಟ್ರದ ಉದ್ದೇಶವಾಗಿತ್ತು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಹಾಗೂ ಗೋವಾ ಸಿಎಂ ಪ್ರತಾಪಸಿಂಗ್ ರಾಣೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಜೆ.ಪಿ.ಸಿಂಗ್ ಗೋವಾ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದರು.
ಉದ್ದೇಶಿತ ಅಣೆಕಟ್ಟು ಪ್ರದೇಶದಲ್ಲಿ 220 ಕೆವಿ ಜಲ ವಿದ್ಯುತ್ ಘಟಕ ಸ್ಥಾಪಿಸುವುದು ಹಾಗೂ ಅದರ ನೀರನ್ನು ಸಿಂಧುದುರ್ಗ ಜಿಲ್ಲೆಯ ಪ್ರದೇಶಗಳ ನೀರಾವರಿಗೆ ಬಳಸಲು ಮಹಾರಾಷ್ಟ್ರ ಸರಕಾರ ಯೋಜನೆ ರೂಪಿಸಿತ್ತು. ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬೇಕು ಹಾಗೂ ಮುಂಗಾರು ನಂತರ 3.7ಕೋಟಿ ಕ್ಯೂಬಿಕ್ ಲೀಟರ್ ನೀರನ್ನು ಗೋವಾದ ಅಂಜುನಮ್ ಅಣೆಕಟ್ಟಿಗೆ ಹರಿಸಬೇಕು ಎಂದು ಗೋವಾ ಸರ್ಕಾರ ಹಾಕಿದ್ದ ಎರಡು ಕರಾರುಗಳಿಗೆ ಮಹಾರಾಷ್ಟ್ರ ಸರ್ಕಾರ ಸಮ್ಮತಿಸಿತ್ತು.
ಗೋವಾ ವಿರೋಧವೇಕೆ?: ಆದರೆ, ಅಣೆಕಟ್ಟಿನ ಕೆಳಭಾಗದ ಸಾಕಳಿ ಪ್ರದೇಶ ವ್ಯಾಪ್ತಿಯ ಜಮೀನುಗಳಿಗೆ ನೀರು ಸಿಗುವುದಿಲ್ಲ ಎಂಬ ಕಾರಣಕ್ಕೆ ಗೋವಾ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಒಪ್ಪಂದದಿಂದ ಹಿಂದೆ ಸರಿಯಿತು. ಈ ಅಣೆಕಟ್ಟು ನಿರ್ಮಾಣ ವಿಷಯವೂ ಮಹದಾಯಿ ನ್ಯಾಯಾಧಿಕರಣದಲ್ಲಿದೆ ಎನ್ನಲಾಗಿದೆ.
ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಕರ್ನಾಟಕಕ್ಕೆ ನೋವಿನ ಸಂಗತಿ. ಆದರೆ ನ್ಯಾಯಾಧಿಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಪರ ಪತ್ರ ಸಲ್ಲಿಸಿರುವುದು ವಿವಾದ ಬಗೆಹರಿಯಲು ಹೊಸ ದಾರಿ ಹುಡುಕಿ ಕೊಟ್ಟಿದೆ. ಗಡಿ ವಿವಾದ ಬದಿಗಿಟ್ಟು 2 ರಾಜ್ಯಗಳ ಸಂಸದರು ಒಂದಾಗಿ ಪ್ರಧಾನಿ ಮೇಲೆ ಒತ್ತಡ ತರಬೇಕು. ಆಗ ಗೋವಾ ತಾನಾಗೇ ದಾರಿಗೆ ಬರುತ್ತದೆ.