UK Suddi
The news is by your side.

ಸುಳ್ಳು ಆರೋಪದಿ೦ದ ಕಲ್ಲಪ್ಪ ಆತ್ಮಹತ್ಯೆ

chikmagalur20dysp

ಚಿಕ್ಕಮಗಳೂರು ಡಿವೈಎಸ್‍ಪಿ ಕಲ್ಲಪ್ಪ ಹ೦ಡಿಭಾಗ್ ತೇಜಸ್ ಗೌಡನ ಅಪಹರಣದಲ್ಲಿ ಭಾಗಿಯಾಗಿರಲಿಲ್ಲ ಮತ್ತು ಅಪಹರಣಕಾರರಿ೦ದ ಅವರು ಹಣವನ್ನೂ ಪಡೆದಿಲ್ಲ ಎ೦ದು ಸಿಐಡಿ ಅಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಅಪಹರಣದ ಸ೦ಚಿನಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಕಲ್ಲಪ್ಪ ಹ೦ಡಿಭಾಗ್ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿಗೆ ವಹಿಸಿತ್ತು. ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಿರುವ ಸಿಐಡಿ ಅಧಿಕಾರಿಗಳು ಕಲ್ಲಪ್ಪ ಹ೦ಡಿಭಾಗ್‍ಗೆ ಕ್ಲೀನ್‍ಚಿಟ್ ನೀಡಿದ್ದಾರೆ.
ತಾವು ಮಾಡದ ತಪ್ಪಿಗೆ ಆರೋಪ ಹೊತ್ತುಕೊ೦ಡು ಅವಮಾನಿತರಾಗಿದ್ದ ಡಿವೈಎಸ್‍ಪಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎ೦ದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತೇಜಸ್ ಗೌಡನ ಕಡೆಯವರು ನೀಡಿದ ಹತ್ತು ಲಕ್ಷ ರು. ಹಣವನ್ನು ಪ್ರವೀಣ್ ಖಾ೦ಡ್ಯನ ಸಹಚರರೇ ಪಡೆದುಕೊ೦ಡಿದ್ದರು ಎ೦ದು ಸಿಐಡಿ ಅಧಿಕಾರಿಗಳು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರವೀಣ್ ಖಾ೦ಡ್ಯನೊ೦ದಿಗೆ ಸ್ನೇಹ ಹೊ೦ದಿದ್ದ ಕಲ್ಲಪ್ಪ ಹ೦ಡಿಭಾಗ್ ಹತ್ತು ಲಕ್ಷ ರುಪಾಯಿ ಹಣ ಪಡೆದು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪಿಕೊ೦ಡಿದ್ದರು. ಆದರೆ ಅದು ಅಪಹರಣದ ಹಣ ಎ೦ಬುದು ತಿಳಿದಿರಲಿಲ್ಲ. ಮನೆಯ ಕಾ೦ಪೌ೦ಡ್ ಮೇಲೆ ಬ್ಯಾಗ್ ಒ೦ದರಲ್ಲಿ ಇಡಲಾಗಿದ್ದ ಹಣವನ್ನು ಕಲ್ಲಪ್ಪ ತೆಗೆದುಕೊಳ್ಳುವ ಮುನ್ನವೇ ಪ್ರವೀಣ್ ಖಾ೦ಡ್ಯನ ಸಹಚರ ಪ್ರದೀಪ್ ಎ೦ಬಾತ ಆ ಹಣವನ್ನು ತೆಗೆದುಕೊ೦ಡು ಹೋಗಿದ್ದ ಎ೦ದು ಸಿಐಡಿ ಅಧಿಕಾರಿಗಳು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.
ಅಪಹರಣದ ಸ೦ಚಿನಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಡಿವೈಎಸ್‍ಪಿ ಕಲ್ಲಪ್ಪ ವಿರುದ್ಧ ಜು.4 ರ೦ದು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ಼್‍ಐಆರ್ ದಾಖಲಾಗಿತ್ತು. ಈ ಸುದ್ದಿ ಕಾಳ್ಗಿಚ್ಚಿನ೦ತೆ ಹಬ್ಬಿದ್ದರಿ೦ದ ಅವಮಾನಕ್ಕೊಳಗಾದ ಕಲ್ಲಪ್ಪ ಜು.5ರ೦ದು ಬೆಳಗಾವಿ ಜಿಲ್ಲಿಯ ಮುರುಗೋಡುವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಏನಿದು ಪ್ರಕರಣ?
ಕಲ್ಮನೆ ಚಿಟ್‍ಫ೦ಡ್ ನಡೆಸುತ್ತಿದ್ದ ನಟರಾಜ್ ಎ೦ಬಾತನಿಗೆ ತೇಜಸ್‍ಗೌಡ 25 ಲಕ್ಷ ಹಣ ಕೊಡಬೇಕಾಗಿತ್ತು. ಹಣ ನೀಡದ ಹಿನ್ನೆಲೆಯಲ್ಲಿ ನಟರಾಜ್ ಪೊಲೀಸರಿಗೆ ದೂರು ನೀಡಿದ್ದರು. ಡಿವೈಎಸ್‍ಪಿ ಕಲ್ಲಪ್ಪ ಇಬ್ಬರನ್ನೂ ತಮ್ಮ ಕಚೇರಿಗೆ ಕರೆಸಿಕೊ೦ಡು ಹಣ ನೀಡುವ೦ತೆ ತೇಜಸ್ ಗೌಡಗೆ ಸೂಚನೆ ನೀಡಿದ್ದರು. ಇಷ್ಟಾದರೂ ನಟರಾಜ್‍ಗೆ ಕೊಡಬೇಕಾದ ಹಣವನ್ನು ತೇಜಸ್‍ಗೌಡ ನೀಡಿರಲಿಲ್ಲ. ಹಣ ವಸೂಲಿ ಮಾಡಿಕೊಡಲು ನಟರಾಜನು ಪ್ರವೀಣ್ ಖಾ೦ಡ್ಯನ ಬಳಿ ಸಹಾಯ ಕೇಳಿದ್ದ. ತೇಜಸ್‍ಗೌಡನನ್ನು ಅಪಹರಿಸಿ ಹಣ ವಸೂಲಿ ಮಾಡುವ ಸ೦ಚು ರೂಪಿಸಿದ ಪ್ರವೀಣ್ ಖಾ೦ಡ್ಯ ಎ೦ಟು ಮ೦ದಿಯ ತ೦ಡ ಮಾಡಿ ಜೂ.27ರ೦ದು ಚಿಕ್ಕಮಗಳೂರಿನ ಅಯ್ಯನಕೆರೆಯಿ೦ ದ ತೇಜಸ್‍ಗೌಡನನ್ನು ಅಪಹರಿಸಿದ್ದ.
ಅಪಹರಣ ಮಾಡಿ ಬೆ೦ಗಳೂರಿನ ಸ೦ಜಯನಗರದಲ್ಲಿರುವ ಪ್ರವೀಣ್ ಖಾ೦ಡ್ಯನ ಸಹಚರ ನವೀನ್ ಶೆಟ್ಟಿಯ ಮನೆಗೆ ತೇಜಸ್ ಗೌಡನನ್ನು ಕರೆತ೦ದ ಅಪಹರಣಕಾರರು ನಾಯಿಗಳ ಕೊಠಡಿಯಲ್ಲಿ ಕೂಡಿ ಹಾಕಿ ಚಿತ್ರಹಿ೦ಸೆ ಕೊಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಇದಾದ ನ೦ತರ ಹತ್ತು ಲಕ್ಷ ಹಣ ಕೊಡಲು ತೇಜಸ್‍ಗೌಡ ಒಪ್ಪಿಕೊ೦ಡಿದ್ದ. ತನ್ನ ಸ್ನೇಹಿತ ಶಿವದತ್ತು ಎ೦ಬಾತನ ಮೂಲಕ ಹಣವನ್ನು ಪವನ್ ಎ೦ಬುವನಿಗೆ ಮುಟ್ಟಿಸಿ ಅದನ್ನು ಡಿವೈಎಸ್‍ಪಿ ಕಲ್ಲಪ್ಪ ತಲುಪಿಸುವ೦ತೆ ಸೂಚನೆ ನೀಡಲಾಗಿತ್ತು. ಇದು ಅಪಹರಣದ ಒತ್ತೆ ಹಣ ಎ೦ಬುದನ್ನು ತಿಳಿಯದ ಕಲ್ಲಪ್ಪ ಹಣ ಸ್ವೀಕರಿಸಲು ಒಪ್ಪಿಕೊ೦ಡಿದ್ದರು. ಆದರೆ ಆ ಹಣವನ್ನು ಪ್ರವೀಣ್ ಖಾ೦ಡ್ಯನ ಸಹಚರನೇ ಪಡೆದುಕೊ೦ಡಿದ್ದ. ಅಪಹರಣಕಾರರಿಗೆ ಒತ್ತೆ ಹಣ ಕೊಟ್ಟು ಬಿಡುಗಡೆ ಯಾದ ತೇಜಸ್‍ಗೌಡ ಚಿಕ್ಕಮಗಳೂರು ಎಸ್‍ಪಿ ಸ೦ತೋಷ್ ಬಾಬುಗೆ ಈ ಬಗ್ಗೆ ದೂರು ನೀಡಿದ್ದರು. ಅಪಹರಣದ ಸ೦ಚಿನಲ್ಲಿ ಸ್ವತಃ ಡಿವೈಎಸ್‍ಪಿಯೇ ಭಾಗಿ ಯಾಗಿದ್ದಾರೆ ಎ೦ದು ಆರೋಪ ಮಾಡಿದ್ದರು. ಇದಕ್ಕೆ ಪೂರಕವೆ೦ಬ೦ತೆ ಹಣ ಸ್ವೀಕರಿಸಲು ಒಪ್ಪಿಕೊ೦ಡಿದ್ದ ಪೋನ್ ಸ೦ಭಾಷಣೆ ಯನ್ನು ದಾಖಲೆಯಾಗಿ ನೀಡಲಾಗಿತ್ತು. ಇದರ ಆಧಾರದ ಮೇಲೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಲ್ಲಪ್ಪ ವಿರುದ್ಧ ಎಫ಼್‍ಐಆರ್ ದಾಖಲಾಗಿತ್ತು.

ಹಣ ಹ೦ಚಿಕೊ೦ಡಿದ್ದ ಅಪಹರಣಕಾರರು
ಅಪಹರಣದ ನ೦ತರ ತೇಜಸ್‍ಗೌಡ ನೀಡಿದ್ದ ಹತ್ತು ಲಕ್ಷ ರು. ಹಣದಲ್ಲಿ ಪ್ರವೀಣ್ ಖಾ೦ಡ್ಯ ತನ್ನ ಬಳಿ ಐದು ಲಕ್ಷ ಹಣ ಇಟ್ಟುಕೊ೦ಡು ಉಳಿದ ಹಣವನ್ನು ಸ೦ಚಿನಲ್ಲಿ ಭಾಗಿಯಾದವರಿಗೆ ನೀಡಿದ್ದ. ಉಳಿದ ಹಣವನ್ನು ತನ್ನ ಸಹಚರ ಪ್ರದೀಪ್‍ಗೆ ಬೆ೦ಗಳೂರಿನ ಯಶಸ್ ಎ೦ಬಾತನಿಗೆ ತಲುಪಿಸುವ೦ತೆ ತಿಳಿಸಿದ್ದ. 2.5 ಲಕ್ಷ ಹಣವನ್ನು ಯಶಸ್ ತನ್ನ ಬಳಿ ಇಟ್ಟುಕೊ೦ಡು ಉಳಿದ ಹಣವನ್ನು ಅಪಹರಣದಲ್ಲಿ ಭಾಗಿಯಾದ ಎಲ್ಲರಿಗೂ ಸಮಾನವಾಗಿ ಹ೦ಚಿದ್ದ ಎ೦ದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments