UK Suddi
The news is by your side.

ಟ್ರೈನ್‌ ರಾಬರಿ :ತಮಿಳುನಾಡಿನಲ್ಲಿ ಸಿನಿಮಾ ರೀತಿಯಲ್ಲಿ ದರೋಡೆ

ದಿ ಗ್ರೇಟ್‌ ಟ್ರೈನ್‌ ರಾಬರಿ :ತಮಿಳುನಾಡಿನಲ್ಲಿ ಸಿನಿಮಾ ರೀತಿಯಲ್ಲಿ ಕೋಟ್ಯಾಂತರ ರೂ. ದರೋಡೆ
ದಿ ಗ್ರೇಟ್‌ ಟ್ರೈನ್‌ ರಾಬರಿ! ಅಂದಕಾಲದ ಹಾಲಿವುಡ್‌ ಚಿತ್ರವೊಂದರ ಈ ಹೆಸರಿದು. ಭಾರಿ ಭದ್ರತೆಯನ್ನೊಳಗೊಂಡ ರೈಲಿನಲ್ಲಿ ರಾಬರಿ ಮಾಡುವ ಕಥಾನಕ ಹೊಂದಿರುವ ಈ ಚಿತ್ರದ ಕಥೆಯನ್ನೇ ಹೋಲುವ ಸ್ಟೋರಿಯೊಂದು ನೆರೆಯ ತಮಿಳುನಾಡಿನಲ್ಲಿ ನಡೆದಿದೆ. ರೈಲಿನಲ್ಲಿದ್ದ . 342 ಕೋಟಿ ಪೈಕಿ ಸುಮಾರು .5 ರಿಂದ 8 ಕೋಟಿಯಷ್ಟುಹಣವನ್ನು ಕಳವು ಮಾಡಿರಬಹುದು ಎಂದು ಪೊಲೀಸ್‌ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ವೆಬ್‌ಸೈಟ್‌ಗಳು ವರದಿ ಮಾಡಿವೆ. ಆದರೆ ಇದುವರೆಗೂ ಒಟ್ಟಾರೆಯಾಗಿ ಎಷ್ಟುಹಣ ದರೋಡೆಯಾಗಿದೆ ಎಂಬುದನ್ನು ಆರ್‌ಬಿಐ ಸ್ಪಷ್ಟವಾಗಿ ಹೇಳಿಲ್ಲ.

ಅದು ಸೇಲಂನಿಂದ ಚೆನ್ನೈಗೆ ಹೊರಟಿದ್ದ ಸೇಲ್‌ ಎಕ್ಸ್‌ಪ್ರೆಸ್‌. ಇದರಲ್ಲಿ ವಿವಿಧ ಬ್ಯಾಂಕುಗಳಿಂದ ಚೆನ್ನೈನಲ್ಲಿರುವ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾಗೆ ತರಲಾಗುತ್ತಿದ್ದ ಸುಮಾರು .342 ಕೋಟಿ ಹಣವಿತ್ತು. ಹೀಗಾಗಿಯೇ ಈ ಟ್ರೈನ್‌ ತುಂಬಾ ಭದ್ರತಾ ಸಿಬ್ಬಂದಿಗಳೇ ಇದ್ದರು. ಸೇಲಂನಿಂದ ಹೊರಟು ಚೆನ್ನೈ ತಲುಪುವವರೆಗೂ ಈ ರೈಲಿನಲ್ಲಿ ಇದ್ದವರಿಗ್ಯಾರಿಗೂ, ಇದರಲ್ಲಿ ದರೋಡೆ ನಡೆದಿದೆ ಎಂಬ ಕಿಂಚಿತ್‌ ಮಾಹಿತಿ ಕೂಡ ಇರಲಿಲ್ಲ. ಚೆನ್ನೈ ತಲುಪಿದ ಮೇಲೆ ಹಣ ಇಳಿಸುವ ಸಲುವಾಗಿ ಬಾಗಿಲು ತೆಗೆದ ಮೇಲೆಯೇ ದಿ ಗ್ರೇಟ್‌ ರಾಬರಿ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಅದೂ ಮಂಗಳವಾರ ಬೆಳಗಿನ ಜಾವ 3.55ಕ್ಕೆ.

ಆಗಿದ್ದೇಗೆ?

ಇದುವರೆಗೂ ಈ ಬಗ್ಗೆ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಕಳ್ಳರು ಹೇಗೆ ರೈಲಿನೊಳಗೆ ಬಂದರು, ಎಲ್ಲಿ ದರೋಡೆ ಮಾಡಿದರು ಎಂಬ ಬಗ್ಗೆಯೂ ಕೊಂಚ ಕ್ಲೂ ಕೂಡ ಇಲ್ಲ. ಆದರೂ ರಾಬರಿಯಾಗಿದೆ. ಅದೂ ರೈಲಿನ ಛಾವಣಿಯನ್ನು ಕತ್ತರಿಸಿ ಬೋಗಿಯ ಒಳಗೆ ಹೋಗಲಾಗಿದೆ. ಅದೂ ಸರಿಯಾಗಿ ಒಬ್ಬರು ಒಳಗೆ ನುಗ್ಗುವಂತೆ ಕೊರೆಯಲಾಗಿದೆ.

ರೈಲಿನಲ್ಲಿ ಒಟ್ಟಾರೆಯಾಗಿ 226 ಬಾಕ್ಸ್‌ಗಳಿದ್ದವು. ಇವುಗಳಲ್ಲಿ ಮೂರನ್ನು ಮಾತ್ರ ತೆರೆಯಲಾಗಿದೆ. ಒಂದರೊಳಗಿದ್ದ ಸಂಪೂರ್ಣ ಹಣ, ಮತ್ತೊಂದರಲ್ಲಿ ಅರ್ಧ ಹಾಗೂ ಇನ್ನೊಂದು ಬಾಕ್ಸ್‌ ಅನ್ನು ತೆರೆದು ಕೊಂಚ ಚೆಲ್ಲಾಪಿಲ್ಲಿ ಮಾಡಲಾಗಿದೆಯಂತೆ. ಆದರೆ ಇದರಲ್ಲಿ ಹಣವನ್ನೇ ಮುಟ್ಟಿಲ್ಲ ಎಂದು ಹೇಳುತ್ತಿದ್ದಾರೆ ಪೊಲೀಸರು.

ಬದಲಾಗಿತ್ತು ಎಂಜಿನ್‌

ಸೇಲಂ ಹಾಗೂ ಚೆನ್ನೈ ನಡುವಿನ 350 ಕಿ.ಮೀ. ದೂರದ ರೈಲು ಮಾರ್ಗದಲ್ಲಿ ಕೆಲವು ಕಡೆಗಳಲ್ಲಿ ಹೊರತು ಪಡಿಸಿದರೆ ಉಳಿದೆಲ್ಲಾ ಮಾರ್ಗದಲ್ಲಿ ವಿದ್ಯುದೀಕರಣ ಮಾಡಲಾಗಿದೆ. ಆದರೆ ವಿಲ್ಲುಪುರಂ ಜಿಲ್ಲೆಯ ವಿರುದಾಚಲಂ ಜಂಕ್ಷನ್‌ನಲ್ಲಿ ರೈಲು ಕೆಲ ಕಾಲ ನಿಂತು, ಇಲ್ಲಿ ಎಂಜಿನ್‌ ಅನ್ನು ಬದಲಾವಣೆ ಮಾಡಲಾಗಿತ್ತು. ಇಲ್ಲಿಂದ ಅಟ್ಟೂರ್‌ವರೆಗೆ ರೈಲ್ವೆ ಮಾರ್ಗ ವಿದ್ಯುದೀಕರಣವಾಗದ ಹಿನ್ನೆಲೆಯಲ್ಲಿ ಡೀಸೆಲ್‌ ಎಂಜಿನ್‌ ಅನ್ನು ಅಳವಡಿಸಿಕೊಳ್ಳಲಾಗಿತ್ತು. ಈ ಮಾರ್ಗದಲ್ಲಿಯೇ ದರೋಡೆಯಾಗಿರಬಹುದು ಎಂಬುದು ಪೊಲೀಸರ ಶಂಕೆ. ಹೀಗಾಗಿ ಈ ಎರಡು ಸ್ಟೇಷನ್‌ ಸೇರಿದಂತೆ ಉಳಿದೆಲ್ಲಾ ಸ್ಟೇಷನ್‌ಗಳಲ್ಲೂ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ವಿದ್ಯುದೀಕರಣ ಇರುವ ಮಾರ್ಗಗಳಲ್ಲಿ ರೈಲಿನ ಮೇಲೆ ಹತ್ತಲು ಸಾಧ್ಯವೇ ಇಲ್ಲ. ಒಂದು ವೇಳೆ ಹತ್ತಿದರೆ, ಕರೆಂಟ್‌ ಶಾಕ್‌ಗೆ ಸಿಕ್ಕಿ ಸಾಯುವುದು ಖಂಡಿತ ಹೀಗಾಗಿ ವಿದ್ಯುದೀಕರಣವಿಲ್ಲದ ಮಾರ್ಗದಲ್ಲಿಯೇ ಕಳ್ಳತನವಾಗಿರಬೇಕು ಎಂಬ ಶಂಕೆ ಬಲವಾಗಿದೆ. ಆದರೂ ಕಳ್ಳರು ರೈಲಿನಲ್ಲಿಯೇ ಪ್ರಯಾಣಿಸಿದ್ದರೇ ಎಂಬ ಅನುಮಾನವೂ ಇದೆ.

ಕಳವಾದ ಹಣ

ಪೊಲೀಸರು ಹೇಳುವಂತೆ ಸುಮಾರು .5 ಕೋಟಿಯಿಂದ 8 ಕೋಟಿ ವರೆಗೆ ಕಳವಾಗಿರಬಹುದು. ಆದರೆ ಕೆಲ ವೆಬ್‌ಸೈಟ್‌ಗಳು ಹೇಳುವಂತೆ ಈ ಮೊತ್ತ ಇನ್ನೂ ಹೆಚ್ಚಿರಬಹುದು. ಪ್ರತಿ ಬಾಕ್ಸ್‌ನಲ್ಲಿ ಇದ್ದ ಹಣವೆಷ್ಟುಎಂಬ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಹೀಗಾಗಿ ಆರ್‌ಬಿಐ ಹೇಳಿದ ಮೇಲೆ ಸರಿಯಾದ ಪ್ರಮಾಣ ಸಿಗಬಹುದು.

ತನಿಖಾ ತಂಡ ರಚನೆ: ಹಣ ಕಳವಿನ ಬಗ್ಗೆ ತನಿಖೆ ನಡೆಸಲು ರೈಲ್ವೆ ಪೊಲೀಸ್‌ ಎಸ್ಪಿ ವಿಜಯ ಕುಮಾರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇದರ ಜತೆಗೆ ಸೇಲಂನಿಂದ ಚೆನ್ನೈ ನಡುವಿನ ಎಲ್ಲ ಠಾಣೆಗಳಿಗೆ ವಿಶೇಷ ಸೂಚನೆಯನ್ನೂ ರವಾನಿಸಲಾಗಿದೆ ಎಂದು ತಮಿಳುನಾಡು ಪೊಲೀಸ್‌ ಮಹಾನಿರ್ದೇಶಕ ರಾಮ ಸುಬ್ರಹ್ಮಣ್ಯನ್‌ ತಿಳಿಸಿದ್ದಾರೆ.

—–

ಸೇಲಂ ಚೆನ್ನೈ ನಡುವಿನ ದೂರ 350 ಕಿಮೀ

ಹಣ ಇದ್ದ ಬಾಕ್ಸ್‌ಗಳು 226

ಒಟ್ಟು ಮೊತ್ತ .342 ಕೋಟಿ

—-

ಕಳವು ಮಾಡಿದ್ದು ಹೇಗೆ?

– ಹಣ ಇರಿಸಲಾಗಿದ್ದ ಬೋಗಿಯ ಚಾವಣಿಯಲ್ಲಿ ವ್ಯಕ್ತಿ ಪ್ರವೇಶಿಸುವ ಪ್ರಮಾಣದಲ್ಲಿ ರಂದ್ರ

– ನಾಲ್ಕು ಬಾಕ್ಸ್‌ಗಳ ಪೈಕಿ ಒಂದರಲ್ಲಿದ್ದ ನಗದು ಪೂರ್ತಿ ಬರಿದು

– ಮತ್ತೊಂದರಲ್ಲಿದ್ದ ಅರ್ಧ ಪ್ರಮಾಣವೂ ಖಾಲಿ

– ಮೂರನೇ ಪೆಟ್ಟಿಗೆಯ ಬೀಗ ತೆರೆದು, ಹಣ ಎಲ್ಲೆಡೆ ಎಸೆತ

—-

– ರೈಲು ನಿಂತದ್ದು ಎಲ್ಲಿ? ವಿರುದಾಚಲಂ ನಿಲ್ದಾಣದಲ್ಲಿ ಎಂಜಿನ್‌ ಬದಲಾವಣೆಗೆ

– ಯಾಕೆ? ವಿರುದಾಚಲಂನಿಂದ ಅಟ್ಟೂರು ವರೆಗೆ ವಿದ್ಯುದೀಕರಣಗೊಳಿಸಲಾಗಿಲ್ಲ

ಪೊಲೀಸರ ಶಂಕೆ ಏನು?

ಕೆಲ ಭಾಗಗಳು ವಿದ್ಯುದೀಕರಣಗೊಳ್ಳದೇ ಇರುವುದನ್ನು ಸದುಪಯೋಗಪಡಿಸಿಕೊಂಡ ಕಳ್ಳರು.

Comments