ಕುಸ್ತಿ: ಭಾರತಕ್ಕೆ ಕಂಚಿನ ಪದಕ
ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಸಾಕ್ಷಿ ಮಲಿಕ್ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು.
ಆರಂಭದಲ್ಲಿ ಐಸುಲು 5 ಪಾಯಿಂಟ್ ಗಳಿಂದ ಮುಂದಿದ್ದರು. 2 ನಿಮಿಷ 20 ಸೆಕೆಂಡುಗಳಾಗಿದ್ದಾಗ 3 ಪಾಯಿಂಟ್ ಗಳಿಂದ ಮುಂದಿದ್ದ ಐಸುಲು ನಂತರ 27 ಸೆಕೆಂಡುಗಳಲ್ಲಿ ಮತ್ತೆ 2 ಪಾಯಿಂಟ್ಸ್ ಗಳಿಸಿದರು. ಸಾಕ್ಷಿ ಸೋತರು ಎಂದು ಕೊಳ್ಳುತ್ತಿರುವಾಗಲೇ, ಸಾಕ್ಷಿ ಎರಡು ಸಲ ಸತತ 2 ಪಾಯಿಂಟ್ಸ್ ಗಳಿಸಿದರು. 5 ನಿಮಿಷ 51 ಸೆಕೆಂಡುಗಳಾಗಿದ್ದಾಗ ಇಬ್ಬರೂ ತಲಾ 5 ಪಾಯಿಂಟ್ಸ್ ಗಳಿಸಿದ್ದರು.
ಹಣಾಹಣಿ ಮುಗಿಯಲು ಇನ್ನು 9 ಸೆಕೆಂಡ್ಗಳಿವೆ ಎನ್ನುವಾಗ ಸಾಕ್ಷಿ 3 ಪಾಯಿಂಟ್ಸ್ ಗಳಿಸಿ ಗೆಲುವಿನ ನಗೆ ಚೆಲ್ಲಿದರು. ಭಾರತದ ಪಾಳಯದಲ್ಲಿ ಸಂಭ್ರಮದ ಅಲೆ ಎದ್ದಿತು. ಸಾಕ್ಷಿಯ ಕೋಚ್ ತಮ್ಮ ಶಿಷ್ಯೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಖಾಡ ದಲ್ಲಿ ಕುಣಿದಾಡಿದರು.