ಭಾರತವನ್ನು ಕಡೆಗಣಿಸಿದರೆ ಪಾಕ್ಗೆ ಆಪತ್ತು
ವಾಷಿಂಗ್ಟನ್: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ನಡುವಿನ ಬಾಂಧವ್ಯ ಹಾಳಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಭಾರತದ ಸಂಯಮವನ್ನು ಲಘುವಾಗಿ ಪರಿಗಣಿಸಿದರೆ ಮುಂದೊಂದು ದಿನ ಪಾಕಿಸ್ತಾನ ಬಹಿಷ್ಕೃತ ರಾಷ್ಟ್ರವಾಗುವ ಅಪಾಯವಿದೆ ಎಂದು ಅಮೇರಿಕಾ ಪತ್ರಿಕೆ ಎಚ್ಚರಿಸಿದೆ.
ದಿ ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನ ಪದೇ ಪದೇ ಭಾರತದ ಸಹಕಾರವನ್ನು ನಿರಾಕರಿಸುತ್ತಿದ್ದರೆ ಖಂಡಿತಾ ಮುಂದಿನ ದಿನಗಳಲ್ಲಿ ಬಹಿಷ್ಕೃತ ರಾಷ್ಟ್ರವಾಗುವ ಅಪಾಯವಿದೆ. ಉಗ್ರ ಕೃತ್ಯ ಹಾಗೂ ಪಾಕಿಸ್ತಾನದ ರಾಜಕೀಯ ಅಸ್ಥಿರತೆಯಿಂದಾಗಿ ಈಗಾಗಲೇ ಪಾಕಿಸ್ತಾನವನ್ನು ಅಸ್ಪೃಶ್ಯ ರಾಷ್ಟ್ರವವೆಂಬಂತೆ ಕಾಣಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಸ್ತುತ ನಡೆಗಳು ಆ ದೇಶವನ್ನು ವಿಶ್ವ ಸಮುದಾಯದಲ್ಲಿ ಪ್ರತ್ಯೇಕವಾಗಿಸುವ ಭಾರತದ ಪ್ರಯತ್ನಕ್ಕೆ ಪುಷ್ಠಿ ನೀಡುವಂತಿದೆ ಎಂದಿದೆ.
ಉರಿ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಯಾವುದೇ ರೀತಿಯ ಸೈನಿಕ ಕಾರ್ಯಾಚರಣೆ ನಡೆಸದೇ, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ವಿಶ್ವಸಮುದಾಯದಿಂದ ಪ್ರತ್ಯೇಕವಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳನ್ನು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಶ್ಲಾಘಿಸಿದೆ. ಇದೇ ಕಾರಣಕ್ಕೆ 1960ರ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪುರ್ನ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಆ ಮೂಲಕ ಸಿಂಧೂ ನದಿ ಮೇಲಿನ ಪಾಕಿಸ್ತಾನದ ಹಕ್ಕನ್ನು ಪ್ರಶ್ನಿಸುವ ಕೆಲಸವನ್ನು ಭಾರತ ಮಾಡುತ್ತಿದೆ ಎಂದು ಪತ್ರಿಕೆ ಹೇಳಿದೆ.