UK Suddi
The news is by your side.

ಏನೇ ಆಗಲಿ ನೀರು ಹರಿಸುವುದಿಲ್ಲ ಎಂದೋರು ಮಾಡಿದ್ದೆನು?

ಸೆಪ್ಟೆಂಬರ್ ೫ಕ್ಕೆ ರಾಜ್ಯದಲ್ಲಿ ಹೊತ್ತಿಕೊಂಡ ಕಾವೇರಿ ಕಿಚ್ಚು ನಿನ್ನೆ ಮೊನ್ನೆಗೆ ಸ್ವಲ್ಪ ಮಟ್ಟಿಗೆ ತಣ್ಣಗಾದಂತಿದೆ. ಕಾವೇರಿ ನಿರ್ವಹಣ ಮಂಡಳಿ ರಚಿಸಲು ಹೇಳಿದ್ದ ಸುಪ್ರೀಂ ಕೋರ್ಟ್ ರಾಜ್ಯದ ಮಟ್ಟಿಗೆ ತುಂಬಾ ಹಿನ್ನಡೆಯನ್ನುಂಟು ಮಾಡಿತ್ತು. ಕೇಂದ್ರ ಸರ್ಕಾರದ ಮದ್ಯ ಪ್ರವೇಶದಿಂದ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಇದು ರಾಜ್ಯದ ಮಟ್ಟಿಗೆ ಸ್ವಲ್ಪ ಸಮಾದಾನದ ಸಂಗತಿ. ಒಂದು ವೇಳೆ ನಿರ್ವಹಣಾ ಮಂಡಳಿ ರಚನೆಯಾಗಿದ್ದರೆ ಕಾವೇರಿಯನ್ನು ಉಳಿಸಿಕೊಳ್ಳುವ ಯಾವ ಅಧಿಕಾರವು ರಾಜ್ಯ ಸರ್ಕಾರದ ಮೇಲೆ ಇರುವುದಿಲ್ಲ. ಇರ್ಲಿ.

ಸೆಪ್ಟೆಂಬರ್ ೫ರಂದು ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ಸುಪ್ರೀಂ ತೀರ್ಪು ರಾಜ್ಯದ ಜನರಲ್ಲಿ ಕಿಚ್ಚೆಬ್ಬಿಸಿಬಿಟ್ಟಿತ್ತು. ನಮಗೆ ಕುಡಿಯಲೂ ಕೂಡ ನೀರಿಲ್ಲ, ಹೇಗೆ ಮುಂದಿನ ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ಕರ್ನಾಟಕ ಜನರ ವಾದ ಸರಿಯಾಗಿಯೇ ಇತ್ತು.  ಕಾವೇರಿ ಕರ್ನಾಟಕದ ತಲಕಾವೆರಿಯಲ್ಲಿ ಹುಟ್ಟಿ ಮುಂದೆ ತಮಿಳುನಾಡಿನಲ್ಲಿ ಹರಿದು ಬಂಗಾಳಕೊಲ್ಲಿ ಸೇರುತ್ತಾಳೆ. ಕಾವೇರಿಯ ಮೇಲೆ ಕರ್ನಾಟಕದ ಹಕ್ಕು ಎಷ್ಟೋ ಅಷ್ಟೇ ಹಕ್ಕು ತಮಿಳುನಾಡಿನದ್ದೂ ಇದೆ. ಆದರೆ ಅದು ಯಾವಾಗ ಅಂದ್ರೆ ನಮಗೆ ಸಾಕಾಗುವಷ್ಟು ನೀರು ಇಟ್ಟುಕೊಂಡು ಉಳಿದ ನೀರನ್ನು ತಮಿಳುನಾಡಿಗೆ ಹರಿಸುವಷ್ಟು ಹಕ್ಕು ಕರ್ನಾಟಕಕ್ಕಿದೆ.

ಅಷ್ಟಕ್ಕೂ ತಮಿಳುನಾಡು ಕಾವೇರಿ ನೀರು  ಕೇಳುತ್ತಿರುವುದು ಕುಡಿಯುವುದಕ್ಕಾಗಿ ಅಲ್ಲ ಬದಲಿಗೆ ಬೆಳೆ ಬೆಳೆಯುವುದಕ್ಕೆ. ತಮಿಳುನಾಡಿಗೆ ಈಗಿನ ಮಟ್ಟಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ, ಅವರ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿದೆ, ಅವರ ಮುಖ್ಯ ಬೆಳೆ ಸಾಂಬ (ಅಕ್ಕಿ). ತಮಿಳುನಾಡು ಮುಖ್ಯಮಂತ್ರೀ ಹೇಳ್ತಾರೆ ನಮ್ಮ ರಾಜ್ಯದಲ್ಲಿ ಸಾಂಬಾ ಬೆಳೆಗೆ ನೀರಿಲ್ಲ ನೀರು ಬಿಡಿ ಅಂತ, ಒಂದು ವಿಚಿತ್ರ ನೋಡಿ ತಮಿಳುನಾಡಿನ ಜಲಾನಯನ ಪ್ರದೇಶದಲ್ಲಿ ತಮಿಳು ರೈತರು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ, ಆದ್ರೆ ದುರಂತ ನಮ್ಮ ರಾಜ್ಯದ ರೈತರು ಬೆಳೆ ಬೆಳೆಯುವುದು ದೂರದ ಮಾತು ಕುಡಿಯುವ ನೀರನ್ನೂ ಉಳಿಸಿಕೊಳ್ಳಲು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಈಗಿನ ಸಮಯದಲ್ಲಿ ಬೆಳೆಗೆ ನೀರು ಮುಖ್ಯವೋ ಅಥವಾ ಕುಡಿಯಲು ನೀರು ಮುಖ್ಯವೋ? ಇದೆಲ್ಲ ನಮ್ಮು ಸುಪ್ರೀಂ ಕೋರ್ಟ್ಗೆ ಯಾಕೆ ಅರ್ಥವಾಗುತ್ತಿಲ್ಲ? ಅಥವಾ ಸುಪ್ರೀಂ ಕೋರ್ಟ್ಗೆ ಅರ್ಥ ಮಾಡಿಸಲು ನಮ್ಮ ಕೈಯಿಂದ ಆಗುತ್ತಿಲ್ಲವೋ?

ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ತೀರ್ಪು ಮೊದಲು ಬಂದಾಗ ರಾಜ್ಯದಲ್ಲಾದ ಹೋರಾಟದ  ಎಷ್ಟಿತ್ತೆಂದು ನಿಮಗೆ ಚೆನ್ನಾಗಿ ಗೊತ್ತು. ರೈತರ ಹೋರಾಟಕ್ಕೆ ಹಲವು ಸಂಘಟನೆಗಳು  ಬೆಂಬಲವಾಗಿ ನಿಂತವು, ಚಿತ್ರ ರಂಗದ ಸ್ಟಾರ್ ನಟರು ಹೀಗೆ ಎಲ್ಲರೂ ಬೀದಿಗಿಳಿದು ಹೋರಾಟ ಮಾಡಿದರು. ಸಾಲು ಸಾಲು ಬಂದ್’ಗಳು ಮುಷ್ಕರಗಳು ಇಡಿಯ ಕರ್ನಾಟಕವನ್ನು ಹೊತ್ತಿಸಿದ್ದವು. ಪ್ರಾಣಹಾನಿ, ಹೋರಾಟಗಾರರ ಬಂಧನ ಮತ್ತು ರಾಜ್ಯಕ್ಕಾದ ನಷ್ಟ ಸಾವಿರ ಕೋಟಿಗೂ ಹೆಚ್ಚಿನದ್ದು.

ದಿಕ್ಕು ತೋಚದಂತಾದ ಕರ್ನಾಟಕ ಸರ್ಕಾರ ಗೊಂದಲದಿಂದ ಕೂಡಿತ್ತು, ಆ ಕಡೆ ಸುಪ್ರೀಂ ಕೋರ್ಟ್ ಆದೇಶ ಮೀರುವಂತಿಲ್ಲ ಈ ಕಡೆ ರೈತರ ಸರಣಿ ಧರಣಿಗಳು. ರೈತರ ಹಿತ ಕಾಯುವ ದೃಷ್ಟಿಯಿಂದ ನೀರು ಹರಿಸದಿದ್ದರೆ ನ್ಯಾಯಾಂಗ ನಿಂದನೆಯ ಮತ್ತು ಅಧಿಕಾರ ಕೈ ತಪ್ಪುವ ಭಯ ನಮ್ಮ ಮುಖ್ಯಮಂತ್ರಿಯವರಿಗೆ.  ಕೊನೆಗೆ ಸರ್ವಪಕ್ಷಗಳ ಸಭೆ ಕರೆದು ಮುಂದೆ ತೆಗೆದುಕೊಳ್ಳಬಹುದಾದ ತಿರ್ಮಾನದ ಬಗ್ಗೆ ಸಾಲು ಸಾಲು ಚರ್ಚೆಗಳಾದವು, ಕೊನೆಗೂ ಅಳೆದು ತೂಗಿ ನಮ್ಮ ಮುಖ್ಯಮಂತ್ರಿ ಯವರು ಒಂದು ನಿರ್ದಾರಕ್ಕೆ ಬಂದು ಹೇಳಿದರು “ಏನೇ ಆದರೂ ತಮಿಳುನಾಡಿಗೆ ನೀರು ಹರಿಸಲ್ಲ, ಮುಂದೆ ಬರುವ ತೊಂದರೆಗಳನ್ನು ಎದುರಿಸಲು ನಾವು ಸಿದ್ದರಿದ್ದೇವೆ.” ಎಂದು. ಆ ಸಮಯದಲ್ಲಿ ನಮ್ಮ ಜನ ನಮ್ಮ ಮುಖ್ಯಮಂತ್ರಿಯವರ ನಿರ್ದಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಸಾಮಾಜಿಕ ತಾಣಗಳಲ್ಲಿ ಮುಖ್ಯಮಂತ್ರಿಯವರ ನಿಲುವಿನ ಬಗ್ಗೆ ಅಭಿನಂದನೆಗಳು ಹರಿದಾಡಿದವು. ಕೊನೆಗೂ ನಮ್ಮ ರೈತರು ನಮ್ಮ ಜೊತೆ ನಮ್ಮ ಮುಖ್ಯಮಂತ್ರಿ ಇದ್ದಾರೆ ಅಂತ ನಿಟ್ಟುಸಿರು ಬಿಟ್ಟರು.

ಆದರೂ ನಮ್ಮ ಮುಖ್ಯ ಮಂತ್ರೀಯವರಿಗೆ, ಮುಂದೆ ಸುಪ್ರೀಂ ಕೋರ್ಟ್ ನಮಗೆ ಛೀಮಾರಿ ಹಾಕಬಹುದೇನೋ ಮತ್ತು ಅಧಿಕಾರಕ್ಕೆ ಸಂಚಕಾರ ಬರುವುದೇನೋ ಎಂಬ ಭಯ ಒಂದು ಮೂಲೆಯಲ್ಲಿ ಇದ್ದೇ ಇತ್ತು ಅನ್ನಿಸುತ್ತೆ.  ರೈತರ ಸಮಾಧಾನ ತುಂಬಾ ದಿನ ಅವರಲ್ಲಿ ಉಳಿಯಲಿಲ್ಲ, ಯಾವಾಗ ಸುಪ್ರೀಂ ಕೋರ್ಟ್’ನಲ್ಲಿ ಕಾವೇರಿಯ ತೀರ್ಪಿನ ಪರಿಶೀಲನೆ ಸಮಯ ಬಂತೋ ನಮ್ಮ ಮುಖ್ಯಮಂತ್ರಿಗಳು ಉಲ್ಟಾ ಹೊಡೆದು ಬಿಟ್ರು. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲೇಬೇಕಾಗುತ್ತದೆ ಅದಕ್ಕೆ ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ ಎಂದು ಬಿಟ್ಟರು. ಅವರ ಹೇಳಿಕೆ ಹೇಗಿತ್ತೆಂದರೆ ನಾವು ಬಿಡುತ್ತಿರುವ ನೀರು ಕುಡಿಯುವುದಕ್ಕಾಗಿ ಎಂದು. ಅಲ್ಲ ಸ್ವಾಮಿ ನೀವೇ ಸುಪ್ರೀಂ ಕೋರ್ಟ್’ಗೆ ಹೇಳಿರೋ ಪ್ರಕಾರ ಈಗಾಗಲೇ ತಮಿಳುನಾಡಿನ ಅಣೆಕಟ್ಟುಗಳಲ್ಲಿ ಕುಡಿಯುವುದಕ್ಕೋಸ್ಕರ ಸಾಕಷ್ಟು ನೀರು ಇದೆ, ಆದರೆ ಅವರು ಕೇಳುತ್ತಿರೋದು ಬೆಳೆಗೆ ಅಂತ ಅನ್ನೋದು ನಿಮಗೆ ಚೆನ್ನಾಗಿ ಗೊತ್ತು ಇಷ್ಟೆಲ್ಲ ಗೊತ್ತಿದ್ದೂ ಮತ್ತೆ ನೀರು ಹರಿಸ್ತೀರಿ ಅಂದ್ರೆ ಇದರ ಹಿಂದಿನ ಮರ್ಮವೇನು?

ನಮಗೆ ಕುಡಿಯಲು ನೀರಿಲ್ಲ ಎಂದವರು ಅದೇಗೆ ತಮಿಳುನಾಡಿಗೆ ನೀರು ಹರಿಸಿದ್ರಿ? ನಿಮಗೆ ರಾಜ್ಯದ ಜನರ ಹಿತ ಮುಖ್ಯನಾ ಅಥವಾ ಅಧಿಕಾರ ಕಳೆದುಕೊಳ್ಳುವ ಭಯಾನಾ? ಜನರಿಗೆ ಏನು ಉತ್ತರ ನೀಡುತ್ತೀರಿ? ಒಂದು ತಿಂಗಳಿನಿಂದ ರಾಜ್ಯದಲ್ಲಾದ ಪ್ರಾಣಹಾನಿಗಳು ಹೋರಾಟಗಳು ಸುಮ್ಮನೆ ನಾ? ರಾಜ್ಯದ ಬೊಕ್ಕಸಕ್ಕೆ ಆದ ನಷ್ಟ ಅಷ್ಟಿಷ್ಟಾ? ಇದೆಲ್ಲದರಿಂದ ನಾವು ಪಡೆದ ಲಾಭವೇನು?

ನೀವು ಇಷ್ಟು ದಿನ ಕೋರ್ಟ್’ಗೆ ನೀಡಿದ ಮಾಹಿತಿ ಪ್ರಕಾರ ನಮ್ಮಲ್ಲಿ ನೀರಿಲ್ಲ ಬಿಡಲು ಆಗುವುದಿಲ್ಲ ಎಂದು. ಇಷ್ಟೆಲ್ಲ ಮಾಹಿತಿ ನೀಡಿದ ಬಳಿಕವೂ ಈಗ ನೀರು ಹರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಮುಂದೆ ಒಪ್ಪಿಕೊಂಡರೆ ಕರ್ನಾಟಕದಿಂದ ಕೋರ್ಟ್’ಗೆ ತಪ್ಪು ಸಂದೇಶ ಹೋದಂತಾಗುವುದಿಲ್ಲವೇ? ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ಕೋರ್ಟ್ಗೆ ಅನ್ನಿಸದೆ ಇರುತ್ತಾ ಮುಖ್ಯಮಂತ್ರಿಗಳೇ? ಅಷ್ಟಕ್ಕೂ ಕುಡಿಯುವುದಕ್ಕೆ ಅಂತ ಉಳಿಸಿಕೊಂಡಿರೋ ನೀರನ್ನೆಲ್ಲ ನೀವು ತಮಿಳುನಾಡಿಗೆ ಹರಿಸುತ್ತೀವಿ ಅಂದ್ರೆ ಮುಂದೆ ನಮಗೆ ಕುಡಿಯಲು ನೀರೆಲ್ಲಿದೆ? ಒಂದಂತೂ ನಿಜ. ಇಷ್ಟು ದಿನ ಕುಡಿಯಲು ನೀರಿಲ್ಲ ಎಂದು ಕೋರ್ಟ್’ನಲ್ಲಿ  ವಾದ ಮಾಡುತ್ತಿದ್ದ ನಮ್ಮ ಸರ್ಕಾರ ಈಗ ನೀರು ಹರಿಸುವ ನಿರ್ದಾರಕ್ಕೆ ಬಂದಿದೆ ಎಂದರೆ ಕರ್ನಾಟಕ ನಮಗೆ ನೀರಿನ ಮಟ್ಟದ ಬಗ್ಗೆ ಇಷ್ಟು ದಿನ ತಪ್ಪು ಮಾಹಿತಿ ನೀಡಿದೆ ಅಂತ ಸುಪ್ರೀಂ ಕೋರ್ಟ್ಗೆ ಅನ್ನಿಸದೆ ಇರದು ಮುಖ್ಯ ಮಂತ್ರಿಗಳೇ.

ಇನ್ನೂ ಮುಂದೆ ಕಾವೇರಿ ವಿಷಯದಲ್ಲಿ ಬರಬಹುದಾದ ತೀರ್ಪುಗಳು ಕರ್ನಾಟಕದ ಪರವಾಗಿ ಬರುತ್ತವೆ ಅನ್ನೋ ಕನಸನ್ನು ಬಿಟ್ಟು ಬಿಡಬೇಕು. ಯಾಕಂದ್ರೆ ಈಗಾಗಲೇ ರಾಜ್ಯದ ಕಡೆಯಿಂದ ಸುಪ್ರೀಂ ಕೋರ್ಟ್‌ಗೆ ತಪ್ಪು ಸಂದೇಶ ರವಾನೆಯಾಗಿದೆ ಮುಖ್ಯಮಂತ್ರಿಗಳೇ. ನೀವು ನೀರು ಬಿಡುವುದಿಲ್ಲ ಅದೇನಾಗುತ್ತೋ ನೋಡಿಯೇ ಬಿಡೋಣ ಎಂಬ ಮಾತಿಗೆ ರಾಜ್ಯದ ಜನ ನಿಮ್ಮ ಬೆನ್ನು ಚಪ್ಪರಿಸಿದ್ದರು. ಆದ್ರೆ ನಿಮ್ಮ ಯೂ-ಟರ್ನ್ ಜನರ ಮನಸ್ಸಿನಲ್ಲಿ ಪರಿಣಾಮ ಬೀರದೇ ಇರದು.  ಕರ್ನಾಟಕದ ಪಾಲಿಗೆ ಇನ್ನೂ ದುರಂತದ ತೀರ್ಪುಗಳು ಬರಲು ಇವೆ. ನೆನಪಿಡಿ.

– ಗಂಗಾಧರ್ ಅಮ್ಮಲಜೇರಿ

Comments