UK Suddi
The news is by your side.

ಆರ್ಭಟಿಸಿದ ವಿರಾಟ್ ಕೊಹ್ಲಿ, ರಹಾನೆ; ಕಿವೀಸ್​ಗೆ ಬೃಹತ್ ಸವಾಲು


557ಕ್ಕೆ ಡಿಕ್ಲೇರ್ / ನಾಯಕನಾಗಿ 2 ದ್ವಿಶತಕ ಸಿಡಿಸಿದ ವಿರಾಟ್ ಕೊಹ್ಲಿ ಹೊಸ ದಾಖಲೆ

ಇಂದೋರ್: ನಾಯಕ ವಿರಾಟ್ ಕೊಹ್ಲಿ (211ರನ್, 366ಎಸೆತ, 20 ಬೌಂಡರಿ) ಮತ್ತು ಅಜಿಂಕ್ಯಾ ರಹಾನೆ (188ರನ್, 381ಎಸೆತ, 18ಬೌಂಡರಿ, 4ಸಿಕ್ಸರ್) ಅವರ ಅತ್ಯಾಕರ್ಷಕ ಜೊತೆಯಾಟದ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 5ವಿಕೆಟ್​ಗೆ 557 ರನ್ ಗಳಿಸಿ ಬೃಹತ್ ಸವಾಲು ನೀಡಿದೆ.

ಪಂದ್ಯದ ಎರಡನೇ ದಿನದಲ್ಲಿ 4ನೇ ವಿಕೆಟ್ ಜತೆಯಾಟ ಮುಂದುವರಿಸಿದ ಕೊಹ್ಲಿ – ರಹಾನೆ ಜೋಡಿ 112 ಓವರ್​ಗಳನ್ನಾಡಿ ಬರೋಬ್ಬರಿ 365ರನ್ ಗಳಿಸಿದರು. ವಿರಾಟ್ ಕೊಹ್ಲಿ ವೃತ್ತಿ ಜೀವನದ ಎರಡನೇ ದ್ವಿಶತಕ ಸಂಪಾದನೆಯಿಂದ ಸಂಭ್ರಮಿಸಿದರೆ, ಅಜಿಂಕ್ಯಾ ರಹಾನೆ ವೃತ್ತಿಜೀವನದ 8ನೇ ಟೆಸ್ಟ್ ಶತಕ ಗಳಿಸಿ ಕೇಕೆ ಹಾಕಿದರು. ವಿರಾಟ್ ಕೊಹ್ಲಿ ಕಳೆದ ಜುಲೈನಲ್ಲಿ ಆಂಟಿಗುವಾದಲ್ಲಿ ವೆಸ್ಟ್​ಇಂಡೀಸ್ ವಿರುದ್ಧ ಚೊಚ್ಚಲ ದ್ವಿಶತಕ ಗಳಿಸಿ ಸಂಭ್ರಮಿಸಿದ್ದರು. ಇದೀಗ ಉನ್ನೊಂದು ದ್ವಿಶತಕದೊಂದಿಗೆ ಹೊಸದೊಂದು ಮೈಲಿಗಲ್ಲು ತಲುಪಿದ್ದಾರೆ. ಅಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕನಾಗಿರುವಾಗಲೇ ಎರಡು ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್​ಮನ್ ಎನ್ನುವ ಕೀರ್ತಿಗೂ ಪಾತ್ರರಾದರು.

ಶತಕ ಸಿಡಿಸಿ ಸಂಭ್ರಮಿಸಿದ್ದ ರಹಾನೆ ದ್ವಿಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರೆ, ಕೊಹ್ಲಿ ದ್ವಿಶತಕ ಗಳಿಸಿ ಕೆಲವೇ ಎಸೆತಗಳ ಬಳಿಕ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ರೋಹಿತ್ ಶರ್ಮ (51*) ಮತ್ತು ರವೀಂದ್ರ ಜಡೇಜಾ (17*) ಜೋಡಿ 9.5 ಓವರ್​ಗಳಲ್ಲಿ 53 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ರೋಹಿತ್ ವೃತ್ತಿ ಜೀವನದ 7ನೇ ಅರ್ಧಶತಕ ಗಳಿಸುತ್ತಿದ್ದಂತೆ ನಾಯಕ ಕೊಹ್ಲಿ ಡಿಕ್ಲೇರ್ ಪ್ರಕಟಿಸಿದರು.

Comments