2 ವರ್ಷಗಳ ಅವಧಿಯಲ್ಲಿ 18 ಸಾವಿರ ಶಾಲಾ ಶಿಕ್ಷಕರ ನೇಮಕ
ಬೆಂಗಳೂರು: ಮುಂದಿನ 2 ವರ್ಷಗಳ ಅವಧಿಯಲ್ಲಿ 18 ಸಾವಿರ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿರುವ ಸರ್ಕಾರ ತಕ್ಷಣಕ್ಕೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲಿದೆ. ರಾಜ್ಯದಲ್ಲಿ 14,559 ಶಿಕ್ಷಕರ ಕೊರತೆ ಇದ್ದು, ತಕ್ಷಣಕ್ಕೆ 10 ಸಾವಿರ ಹಾಗೂ ಉಳಿದ 8 ಸಾವಿರ ಶಿಕ್ಷಕರನ್ನು ಎರಡು ವರ್ಷದ ಅವಧಿಯಲ್ಲಿ ಭರ್ತಿ ಮಾಡಲು ತೀರ್ವನಿಸಿರುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಡಿಸೆಂಬರ್ ಅಂತ್ಯದ ವೇಳೆಗೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲಾಗುತ್ತದೆ. 2017-18 ಹಾಗೂ 2018- 19ನೇ ಸಾಲಿನಲ್ಲಿ ತಲಾ 4 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆಯಲಾಗಿದೆ ಎಂದರು.