UK Suddi
The news is by your side.

ಪಾಕಿಸ್ತಾನಕ್ಕೆ ಅದರ ಸೈನವೇ ದೊಡ್ಡ ವೈರಿ!

latest-pakistan-e1475644239345
ಪಾಕಿಸ್ತಾನ ನಮ್ಮ ಪಾಲಿಗೆ ನೆರೆಯಲ್ಲಿರುವ ಅನಿವಾರ್ಯ ಹೊರೆ. ಸದಾ ನಮ್ಮೊಂದಿಗೆ ಕಾಲು ಕೆರೆದುಕೊಂಡು ಜಗಳ ಮಾಡುತ್ತಿರುತ್ತದೆ. ಶಾಂತಿ ಮಾತುಕತೆಗಳು ಇನ್ನೇನು ಫಲ ನೀಡುತ್ತಿವೆ ಅನ್ನುವಷ್ಟರಲ್ಲಿ ಗಡಿಯಲ್ಲಿ ಗುಂಡಿನ ದಾಳಿ ನಡೆದಿ–ರುತ್ತದೆ. ತುಂಬ ದಿನದಿಂದ ಶಾಂತಿ ನೆಲೆಸಿದೆ ಅಂದುಕೊಳ್ಳುವಷ್ಟರಲ್ಲಿ ಉಗ್ರರು ನುಸುಳಿ ಬಂದು ದಾಳಿ ನಡೆಸಿರುತ್ತಾರೆ. ಪಕ್ಕದ ಮನೆಯಲ್ಲಿ ಪಕ್ಕಾ ಹುಳುಕು ಮನಸ್ಥಿಿತಿಯ ಜನರಿದ್ದರೆ ಹೇಗೆ ನೆಮ್ಮದಿ ಹಾಳಾಗಿ ಹೋಗುತ್ತದೋ ಹಾಗಾಗಿದೆ ನಮ್ಮ ದೇಶದ ಸ್ಥಿತಿ. ಗದರಿಸಿದರೆ ಬಾಯಿ ಮುಚ್ಚುವ ಗಿರಾಕಿಯಲ್ಲ. ಜಗಳ ಮಾಡಿದರೆ ನಮಗೂ ಹಾನಿ. ಅವರೂ ಉದ್ಧಾರವಾಗುವುದಿಲ್ಲ, ನಮಗೂ ಉದ್ಧಾರವಾಗುವುದಕ್ಕೆ ಬಿಡುವುದಿಲ್ಲ ಎಂಬ ಮನಸ್ಥಿತಿ. ಇದರಿಂದ ಎರಡೂ ದೇಶಗಳಿಗೂ ಯಾವ ಪ್ರಯೋಜನವೂ ಇಲ್ಲ. ಯಾಕಪ್ಪಾ ಹೀಗೆ ಎಂದು ವಿಚಾರ ಮಾಡಿದರೆ ಕಾಣ ಸಿಗುವುದು ಪಾಕಿಸ್ತಾನ ಸೈನ್ಯ. ಪಾಕಿಸ್ತಾನದ ಜನಕ್ಕೆ, ಸರಕಾರಕ್ಕೆ ಭಾರತದೊಂದಿಗೆ ಉತ್ತಮ ಸಂಬಂಧ ಬೇಕಿರಬಹುದು. ನಾನು ಪಾಕಿಸ್ತಾನದಲ್ಲಿ ಮೂರು ದಿನ ಇದ್ದ ಸಂದರ್ಭದಲ್ಲಿ ಅಲ್ಲಿನ ಜನರೊಟ್ಟಿಗೆ ಮಾತನಾಡಿದಾಗ ಜನರದ್ದು ಕೂಡ ಅದೇ ರೀತಿಯ ಅಭಿಪ್ರಾಯವಾಗಿತ್ತು. ಭಾರತೀಯರು ಎಂದರೆ ವಿಶೇಷ ಆಸಕ್ತಿಯಿಂದ ನೋಡಿಕೊಳ್ಳುತ್ತಾರೆ ಅಲ್ಲಿನ ಜನ. ಒಂದು ಸಿಡಿ ಅಂಗಡಿಗೆ ಹೋದಾಗ ಅವನು ಜ್ಯೂಸ್ ಕುಡಿಯದೇ ಹೋಗಲೇಬಾರದು ಎಂದು ಗಂಟು ಬಿದ್ದು ಜ್ಯೂಸ್ ಕುಡಿಸಿ, ಒಂದಷ್ಟು ಹರಟೆ ಹೊಡೆದೇ ಕಳುಹಿಸಿದ್ದ. ನಾನು ತಗೊಂಡಿದ್ದ ಹಾಡಿನ ಸಿಡಿಗೆ ದುಡ್ಡನ್ನೂ ಪಡೆಯಲಿಲ್ಲ. ದುಡ್ಡು ಪಡೆಯಲಿಲ್ಲ ಎಂಬ ಕಾರಣಕ್ಕೆ ಆತ ಒಳ್ಳೆಯವನು ಎಂದಲ್ಲ. ಆತನ ಮಾತು, ವರ್ತನೆ ಹಾಗಿತ್ತು. ನಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಕೂಡ ಎಲ್ಲರೂ ನಮ್ಮನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದರು. ಹಾಗಾಗಿ ಪಾಕಿಸ್ತಾನಕ್ಕೆ ಹೋಗಿ ಬಂದವರು ಪಾಕಿಸ್ತಾನವನ್ನು ಹೊಗಳುತ್ತಾರೆ.

ಉದಾಹರಣೆಗೆ ರಮ್ಯಾ. ನಾವು ಅವರ ಮಾತನ್ನು ತಪ್ಪಾಗಿ ಭಾವಿಸಬೇಕಿಲ್ಲ. ಯಾಕೆಂದರೆ ಪಾಕಿಸ್ತಾನ ಕೆಟ್ಟ ದೇಶ ಅಂದಾಕ್ಷಣ ಅಲ್ಲಿರುವವರೆಲ್ಲ ಕೆಟ್ಟವರೇ ಆಗಿರಬೇಕು ಎಂಬ ನಿಯಮವಿಲ್ಲವಲ್ಲ. ಆದರೆ ಪಾಕಿಸ್ತಾನದ ಕಿರಿಕಿರಿ ನಮ್ಮಲ್ಲಿ ಪಾಕಿಸ್ತಾನದವರನ್ನೆಲ್ಲ ಕೆಟ್ಟವರೇ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದೆ. ಅದು ಕೂಡ ಸಹಜವೇ. ಆದರೆ ನಾನು ಅಂಗಡಿಯವನ ಜತೆ ಮಾತನಾಡುವ ಸಂದರ್ಭದಲ್ಲಿ ಆತ ಕೂಡ ದೂರಿದ್ದು ಅವರ ಸೈನ್ಯವನ್ನೇ!

ಆತ ಕೂಡ ಭಾರತ- ಪಾಕಿಸ್ತಾನ ಸಮಸ್ಯೆಗೆ ಪಾಕಿಸ್ತಾನ ಸೈನ್ಯವೇ ಕಾರಣ. ಅವರ ಲಾಭಕ್ಕಾಾಗಿ ಎರಡೂ ದೇಶದ ಸಂಬಂಧ ಹಾಳು ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದ. ಎಷ್ಟು ಸೈನಿಕರಿದ್ದಾರೆ, ಎಷ್ಟು ಹಣ ಖರ್ಚಾಗುತ್ತದೆ ಮುಂತಾದವೆಲ್ಲ ಅವನಿಗೆ ಗೊತ್ತಿರಲಿಲ್ಲ. ಆದರೆ ಸಮಸ್ಯೆಗೆ ಮೂಲ ಅವರೇ ಎಂಬುದು ಆತನಿಗೂ ತಿಳಿದಿತ್ತು. ಅದು ಸತ್ಯ ಕೂಡ. ಆರಂಭದಿಂದಲೂ ಪಾಕಿಸ್ತಾನದ ಪಾಲಿಗೆ ಸೈನ್ಯ ಎಂಬುದು ಮೂಗಿಗಿಂತ ಭಾರದ ಮೂಗುತಿಯಂತಾಗಿದೆ. ಪಾಕಿಸ್ತಾನ ಸ್ವತಂತ್ರವಾದಾಗಿನಿಂದ ಅಥವಾ ಭಾರತದಿಂದ ಬೇರೆ ಆದಾಗಿನಿಂದ ಇದೇ ಸಮಸ್ಯೆ ಅದನ್ನು ಕಾಡುತ್ತಿದೆ. ಪಾಕಿಸ್ತಾನಕ್ಕೆ ಪಾಲಿನಲ್ಲಿ ಸಿಕ್ಕಿದ್ದು ನಮ್ಮ ದೇಶದ ಶೇ.21ರಷ್ಟು ಜನಸಂಖ್ಯೆ ದೊರೆತರೆ, ಶೇ.17ರಷ್ಟು ಆದಾಯವೂ ಪಾಕಿಸ್ತಾನಕ್ಕೆ ದೊರಕಿತು. ಆದರೆ ನಮ್ಮ ಭೂ ಸೇನೆಯಲ್ಲಿ ಶೇ.30ರಷ್ಟು, ವಾಯುಸೇನೆಯ ಶೇ.20ರಷ್ಟು ಹಾಗೂ ನೌಕಾಪಡೆಯ ಶೇ.40ರಷ್ಟು ಪಾಲು ಪಾಕಿಸ್ತಾನಕ್ಕೆ ದೊರಕಿತು. ಜನಸಂಖ್ಯೆಗೆ ಹೋಲಿಸಿದರೆ ಸೈನ್ಯದ ಗಾತ್ರ ಮಿತಿಮೀರಿ ಹೆಚ್ಚಿತ್ತು. ಜತೆಗೆ ಭಾರತದೊಂದಿಗಿನ ವೈರತ್ವ. ಇದರಿಂದಾಗಿ ಪಾಕಿಸ್ತಾನದ ಮೊದಲ ಬಜೆಟ್‌ನ ಶೇ.75ರಷ್ಟನ್ನು ಸೈನ್ಯಕ್ಕಾಗಿ ನೀಡಿತು. ಪಾಕಿಸ್ತಾನಕ್ಕೆ ಅಷ್ಟು ದೊಡ್ಡ ಸೈನ್ಯ ಅಗತ್ಯವಿರಲಿಲ್ಲ. ಆದರೆ ಪಡೆದಾಗಿತ್ತು. ಸಾಕಲೇಬೇಕಿತ್ತು. ಪರಿಣಾಮವಾಗಿ ಪಾಕಿಸ್ತಾನದ ಪಾಲಿಗೆ ಅದರ ಸೈನ್ಯವೇ ಹೊರೆಯಾಗಿ ಪರಿಣಮಿಸಿತು. ಅದಕ್ಕಿಂತ ಮುಖ್ಯ ವಿಷಯವೆಂದರೆ ನಾವು ಲೆಕ್ಕಕ್ಕಿಂತ ಹೆಚ್ಚಿದ್ದೇವೆ ಎಂಬುದು ಪಾಕಿಸ್ತಾನ ಸೈನ್ಯಕ್ಕೆ ಅರಿವಾಗಿತ್ತು.

ಸರಕಾರ ಹೆಚ್ಚು ದಿನ ಇಷ್ಟು ದೊಡ್ಡ ಸೈನ್ಯವನ್ನು ಸಾಕದು ಎಂಬುದೂ ಸೈನ್ಯದ ದೊಡ್ಡ ಹುದ್ದೆಯಲ್ಲಿರುವವರಿಗೆ ಗೊತ್ತಾಗಿತ್ತು. ಇಷ್ಟು ದೊಡ್ಡ ಸೈನ್ಯವನ್ನು ಸರಕಾರ ಸಾಕುವಂತೆ ಮಾಡುವ ಅನಿವಾರ್ಯ ಸೃಷ್ಟಿಸಬೇಕಿತ್ತು. ಅದಕ್ಕಿದ್ದಿದ್ದು ಒಂದೇ ದಾರಿ ಭಾರತದೊಂದಿಗಿನ ಜಗಳ. ಭಾರತದೊಂದಿಗಿನ ಜಗಳ, ಭಾರತ ದಾಳಿ ಮಾಡಬಹುದು ಎಂಬ ಆತಂಕ ಎಷ್ಟು ದಿನ ಪಾಕಿಸ್ತಾನದ ಮೇಲಿರುತ್ತದೋ ಅಷ್ಟು ದಿನ ಸರಕಾರ ಸೈನ್ಯಕ್ಕೆ ಹೆಚ್ಚು ಹಣ ನೀಡುತ್ತದೆ ಎಂಬುದು ಸೈನ್ಯದ ಸರಳ ಲೆಕ್ಕಾಚಾರ. ಅದು ಸುಳ್ಳಾಗಲಿಲ್ಲ. 1988ವರೆಗೂ ಪಾಕಿಸ್ತಾನದ ಜಿಡಿಪಿಯ ಶೇ.7.3ರಿಂದ 10ರ ಆಸುಪಾಸಿನ ಹಣವನ್ನು ಸೈನ್ಯಕ್ಕಾಗಿ ವೆಚ್ಚ ಮಾಡುತ್ತಿತ್ತು. 2005ರಲ್ಲಿ ಜಿಡಿಪಿಯ ಶೇ.4ರಷ್ಟಿತ್ತು. ಪಾಕಿಸ್ತಾನದ ಜಿಡಿಪಿ ಚಿಕ್ಕದೇ ಇರಬಹುದು. ಆದರೂ ಇದು ದೊಡ್ಡ ಮೊತ್ತ. ಪಾಕಿಸ್ತಾನದ ಸಾಮಾನ್ಯ ಅಭಿವೃದ್ಧಿ ಬಜೆಟ್‌ಗಿಂತ ಸೈನ್ಯದ ಬಜೆಟ್ ಹೆಚ್ಚಿರುತ್ತಿತ್ತು. ಅಭಿವೃದ್ಧಿ ಬಜೆಟ್‌ಗಿಂತ ಸೈನ್ಯದ ಬಜೆಟ್ ಹೆಚ್ಚಿದ್ದರೆ ಯಾವ ದೇಶ ತಾನೇ ಉದ್ಧಾರವಾಗಲು ಸಾಧ್ಯ?

ಪಾಕಿಸ್ತಾನದ ಇಂದಿನ ಸ್ಥಿತಿಗೆ ಇದೂ ಒಂದು ಪ್ರಮುಖ ಕಾರಣ. ಸರಕಾರ ಭದ್ರತೆ ವಿಷಯಕ್ಕೆ, ಸೈನ್ಯಕ್ಕೆ ಹೆಚ್ಚು ಹಣ ನೀಡುವ ಅನಿವಾರ್ಯವನ್ನು ಸದಾ ಜಾರಿಯಲ್ಲಿಡುವ ಕೆಲಸ ಸೈನ್ಯದ್ದು. ಇಲ್ಲವಾದರೆ ಅನುದಾನ ಕಡಿತವಾಗುತ್ತದೆ. 2016ರಲ್ಲಿ ನಾವು ಜಿಡಿಪಿಯ ಶೇ.2.25ರಷ್ಟನ್ನು ಸೈನ್ಯಕ್ಕಾಗಿ ವೆಚ್ಚ ಮಾಡಿದರೆ, ಪಾಕಿಸ್ತಾನ ಜಿಡಿಪಿಯ ಶೇ.2.30ರಷ್ಟನ್ನು ಖರ್ಚು ಮಾಡಿದೆ. ಆದರೆ ಭಾರತದ ಆರ್ಥಿಕ ಗಾತ್ರ ಪಾಕಿಸ್ತಾನದ ಆರ್ಥಿಕ ಗಾತ್ರಕ್ಕಿಂತ ಎಂಟು ಪಟ್ಟು ಹೆಚ್ಚಿದೆ. ಜತೆಗೆ ನಮ್ಮ ಗಡಿ ಭಾಗವೂ ಹೆಚ್ಚಿದೆ. ಆದ್ದರಿಂದ ನಾವು ಜಿಡಿಪಿಯ ಶೇ.2.25ರಷ್ಟನ್ನು ಖರ್ಚು ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಪಾಕಿಸ್ತಾನ ಪ್ರತಿ ವರ್ಷ ಸೈನ್ಯಕ್ಕಾಗಿ ಮಾಡುವ ವೆಚ್ಚವನ್ನು ಶೇ.10.9ರಷ್ಟು ಹೆಚ್ಚು ಮಾಡುತ್ತ ಬಂದಿದೆ. 2013-14ರಲ್ಲಿ ಹೆಚ್ಚಳ ಶೇ.15ರಷ್ಟಿತ್ತು. ಇದರ ಜತೆಗೆ ಪರಿಸ್ಥಿಿತಿಗೆ ತಕ್ಕಂತೆ ಹೆಚ್ಚುವರಿ ಹಣವನ್ನೂ ನೀಡಲಾಗುತ್ತದೆ. 2008ರಿಂದೀಚೆಗೆ (ಅದಕ್ಕೂ ಮೊದಲು ಸರಿಯಾದ ದಾಖಲೆಗಳನ್ನೇ ಪಾಕಿಸ್ತಾನ ನೀಡುತ್ತಿರಲಿಲ್ಲ) ಗಮನಿಸಿದಾಗ ಪ್ರತಿ ವರ್ಷವೂ ಬಜೆಟ್ ನೀಡಿದ್ದಕ್ಕಿಂತ ಹೆಚ್ಚು ಅನುದಾನ ಸೈನ್ಯಕ್ಕೆ ಳಕೆಯಾಗಿರುವುದು ಕಾಣುತ್ತದೆ. 2014ರಲ್ಲಿ ಪಾಕಿಸ್ತಾನದ ಸಾರ್ವಜನಿಕ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ 22.1 ಮಿಲಯನ್ ಡಾಲರ್ ಹಣ ಬಳಕೆಯಾಗಿದ್ದರೆ, ಸೈನ್ಯಕ್ಕಾಗಿ 41.9 ಮಿಲಿಯನ್ ಡಾಲರ್ ಹಣ ವೆಚ್ಚ ಮಾಡಿದೆ. ಇದು ಯಾವ ದೇಶಕ್ಕಾದರೂ ಸಮಸ್ಯೆ ತಂದಿಡುವಂತಹ ಬಜೆಟ್. ಇದು ಬಿಟ್ಟು ಅಣ್ವಸ್ತ್ರ ಸಂಬಂಧಿ ಸಂಶೋಧನೆ, ಅದರ ರಕ್ಷಣೆಗೆ ಬೇರೆಯೇ ಹಣ ವೆಚ್ಚ ಮಾಡಲಾಗುತ್ತದೆ. ಭಾರತದ ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಯಿತು ಎಂಬುದು ಪಾಕಿಸ್ತಾನಕ್ಕೆ ಆತಂಕ ಸೃಷ್ಟಿಸಿತ್ತು. ಅದರ ನಂತರ ತಾನೂ ಅಣ್ವಸ್ತ್ರ ಹೊಂದುವ ತನಕ ಪಾಕಿಸ್ತಾನಕ್ಕೆ ನೆಮ್ಮದಿ ಇರಲಿಲ್ಲ. ಹೀಗಾಗಿ ಅಧಿಕೃತ ದಾಖಲೆಗಳು ಹೇಳುವುದಕ್ಕಿಂತ ಹೆಚ್ಚಿನ ಹಣ ಸೈನ್ಯಕ್ಕೆ ಬಳಕೆಯಾಗತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಪಾಕಿಸ್ತಾನದಲ್ಲಿ ದೇಶಸೇವೆಗಾಗಿ ಸೈನ್ಯ ಸೇರುವವರಿಗಿಂತ ದೇಶ ಆಳಲು ಸೈನ್ಯ ಸೇರುವವರೇ ಹೆಚ್ಚು ಎಂಬಂತಾಗಿದೆ.

ದೊಡ್ಡ ಸೈನ್ಯ ಸಾಕುವ ಅನಿವಾರ್ಯ ಅಂದಿನಿಂದ ಇಂದಿನವರೆಗೂ ಮುಂದುವರಿದಿದೆ. ಹಾಗಂತ ಪಾಕಿಸ್ತಾನ ಸೈನ್ಯಕ್ಕೆ ಯುದ್ಧ ಬೇಕಾಗಿದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಅವರು ಅಂತಹ ಧೀರರೇರನಲ್ಲ. ಆದರೆ ಭಾರತದೊಂದಿಗೆ ಶಾಂತಿ ನೆಲೆಸುವುದು ಪಾಕಿಸ್ತಾನಕ್ಕೆ ಬೇಕಿಲ್ಲ. ಅದಕ್ಕೆ ಯಾವಾಗಲೂ ಪಾಕ್- ಭಾರತ ಶಾಂತಿ ಮಾತುಕತೆ ಯಶಸ್ವಿಯಾಗುವ ಹಂತದಲ್ಲಿ ಪಾಕಿಸ್ತಾನ ಸೈನ್ಯ ಭಾರತದ ಮೇಲೆ ಗುಂಡು ಹಾರಿಸಿಬಿಡು–ತ್ತದೆ. ಇಲ್ಲವಾದಲ್ಲಿ ಉಗ್ರರನ್ನು ನುಗ್ಗಿಸಿ, ನಡೆದಿ–ದ್ದೆಲ್ಲ ತೊಳೆದುಹೋಗುವಂತೆ ಮಾಡುತ್ತದೆ. ದುರಂತವೆಂದರೆ ಮೊದಲಿನಿಂದಲೂ ಪಾಕಿಸ್ತಾನ ಸೈನ್ಯದ ಮೇಲೆ ಅಲ್ಲಿನ ಸರಕಾರಕ್ಕೆ ನಿಯಂತ್ರಣವಿಲ್ಲ. ಪಾಕ್ ಸೈನಿಕರು ಭಾರತದತ್ತ ಗುಂಡು ಹಾರಿಸಿದಾಗ ‘ನನಗೆ ಗೊತ್ತೇ ಇಲ್ಲ’ ಎಂದು ಯಾವ ಪ್ರಧಾನಿ ತಾನೇ ಹೇಳಲು ಸಾಧ್ಯ? ಏನಾದರೊಂದು ಕಾರಣಕೊಟ್ಟು ಅದನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯ. ಇಲ್ಲವಾದಲ್ಲಿ ಸೈನ್ಯದ ಮೇಲೆ ನಿಯಂತ್ರಣವಿಲ್ಲ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗುತ್ತದೆ. ಹೀಗೆ ಸರಕಾರ ತನ್ನ ತಾಳಕ್ಕೆ ಕುಣಿಯುವಂತೆ ಸೈನ್ಯ ಮಾಡುತ್ತಿದೆ.

ಪಾಕಿಸ್ತಾನದಲ್ಲಿ ಸೈನ್ಯ ಮೂರು ಬಾರಿ (1958-1971, 1977-1988, 1999-2008) ಸರಕಾರವನ್ನು ಕಿತ್ತುಹಾಕಿ ಆಡಳಿತ ನಡೆಸಿದೆ. ಸ್ವಾತಂತ್ರ್ಯಾ ನಂತರ ಜನರಿಂದ ಆಯ್ಕೆಯಾದ ಸರಕಾರ ಆಳಿದ್ದಕ್ಕಿಂತ ಹೆಚ್ಚಿನ ವರ್ಷ ಸೈನ್ಯವೇ ಆಡಳಿತ ನಡೆಸಿದೆ. ಹೀಗಾಗಿಯೇ ಪಾಕಿಸ್ತಾನದಲ್ಲಿ ದೇಶಸೇವೆಗೆಂದು ಸೈನ್ಯ ಸೇರುವವರಿಗಿಂತ ಪಾಕಿಸ್ತಾನ ಆಳಲೆಂದು ಸೈನ್ಯ ಸೇರುವವರೇ ಹೆಚ್ಚಿರುತ್ತಾರೆ. ಪಾಕಿಸ್ತಾನದಲ್ಲಿ ದೇಶ ಆಳಿದ ಒಬ್ಬರಾದರೂ ನೆಮ್ಮದಿಯಿಂದಿದ್ದಾರಾ? ಒಂದೋ ಕೊಲೆಯಾಗಿದ್ದಾರೆ ಅಥವಾ ದೇಶ ಬಿಟ್ಟು ಓಡಿ ಹೋಗಿ ಇಂಗ್ಲೆಂಡ್‌ನಲ್ಲಿದ್ದಾರೆ. ಇದು ಪಾಕಿಸ್ತಾನದ ನಿಜವಾದ ಸ್ಥಿತಿ. ಹೀಗಾಗಿ ತನ್ನ ಸೈನ್ಯವನ್ನು ಸದಾ ಖುಷಿಯಾಗಿಟ್ಟಿರಬೇಕಾದ ಅನಿವಾರ್ಯ ಅಲ್ಲಿನ ಸರಕಾರಕ್ಕಿದೆ. ಸೈನ್ಯವನ್ನು ಎದುರು ಹಾಕಿಕೊಂಡು ಅಥವಾ ಎದುರಿಸಿ ಆಡಳಿತ ನಡೆಸುವುದು ಸದ್ಯಕ್ಕಂತೂ ಆಗದ ಮಾತು. ಇಷ್ಟು ವರ್ಷ ಹೆಚ್ಚು ಅನುದಾನ ತಿಂದು ಕೊಬ್ಬಿರುವ ಸೈನ್ಯಕ್ಕೆ ಸರಕಾರವನ್ನು ಹೇಗೆ ನಿಯಂತ್ರಿಸಬೇಕು, ಸೈನ್ಯಕ್ಕೆ ಹೆಚ್ಚು ಅನುದಾನ ನೀಡುವಂತೆ ಹೇಗೆ ಮಾಡಬೇಕು ಎಂಬುದೆಲ್ಲ ಕರಗತವಾಗಿದೆ. ಇದನ್ನೆಲ್ಲ ಮೀರಿಯೂ ಸರಕಾರ ಏನಾದರೂ ಮಾಡಹೊರಟರೆ ಅವರನ್ನೇ ನಿವಾರಿಸಲೂ ಸೈನ್ಯ ಹಿಂಜರಿಯುವುದಿಲ್ಲ. ಇದರ ಪರಿಣಾಮವಾಗಿಯೇ ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವುದು ಐಎಸ್‌ಐ ಹಾಗೂ ಸೈನ್ಯ ಎಂಬ ಮಾತಿದೆಯೇ ಹೊರತು ಅಲ್ಲಿನ ಜನ ಕೂಡ ಅಲ್ಲಿನ ಸರಕಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಇಂಥ ಅನಿವಾರ್ಯದಲ್ಲಿ ಪಾಕಿಸ್ತಾನ ಸರಕಾರ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿದಂತೆ, ಜನರಿಗೆ ಅನುಕೂಲವಾಗುವ ಅಭಿವೃದ್ಧಿಗಿಂತ ಸೈನ್ಯಕ್ಕೆ ಹೆಚ್ಚು ಹಣ ನೀಡಬೇಕಿದೆ. ಅದಕ್ಕೆ ತಕ್ಕ ಸ್ಥಿತಿ ನಿರ್ಮಾಣ ಮಾಡುವುದು ಸೈನ್ಯಕ್ಕೆ ಗೊತ್ತಿದೆ. ಈ ಆಟದಲ್ಲಿ ತೊಂದರೆಯಾಗುತ್ತಿರುವುದು ಮಾತ್ರ ನಮಗೆ.

* ವಿನಾಯಕ್ ಭಟ್ ಮುರೂರು

Comments