UK Suddi
The news is by your side.

ಜಮಖಂಡಿ ತಾಲ್ಲೂಕಿನ ಇತಿಹಾಸ, ದೇವಾಲಯಗಳು ಮತ್ತು ಆಚರಣೆಗಳು 

ಜಮಖಂಡಿ ತಾಲ್ಲೂಕಿನ ಶಾಸನೋಕ್ತ ದೇವಾಲಯಗಳು ಮತ್ತು ಆಚರಣೆಗಳು

ಪೌರಾಣಿಕ ಹಿನ್ನೆಲೆ
ಜಮಖಂಡಿ ಬಾಗಲಕೋಟೆ ಜಿಲ್ಲೆಯ ಪ್ರಮುಖ ತಾಲೂಕು ಹಾಗೂ ಉಪವಿಭಾಗ ಕೇಂದ್ರ. ಇದು ರಾಜಕೀಯ ವಾಗಿ, ಸಾಂಸ್ಕøತಿಕವಾಗಿ, ಧಾರ್ಮಿಕವಾಗಿ ಮಹತ್ವದ ನೆಲೆಯಾಗಿ ಬೆಳೆದು ಬಂದಿರುವ ಐತಿಹಾಸಿಕ ಪಟ್ಟಣ. ಜಮಖಂಡಿ ಹಾಗೂ ತಾಲೂಕಿನ ಅನೇಕ ಹಳ್ಳಿಗಳು ರಾಮಾಯಣ ಮಹಾಭಾರತ ಸಂಬಂಧ ಕಲ್ಪಿಸುವ ಐತಿಹ್ಯ ಹೊಂದಿವೆ. ಉತ್ತರಾಭಿಮುಖವಾಗಿ ಹರಿಯುವ ಕೃಷ್ಣಾ ನದಿ ಸ್ಕಂದ, ವಾಯು, ಪದ್ಮ ಹಾಗೂ ಬ್ರಹ್ಮ ಪುರಾಣಗಳಲ್ಲಿ ಮಹಾಭಾರತದ ಸಭಾಪರ್ವ ಹಾಗೂ ಭೀಷ್ಮಪರ್ವಗಳಲ್ಲಿ, ಮಂಗಲಾಷ್ಠಕ ಹಾಗೂ ಜಾತಕಕಥೆಗಳಲ್ಲಿಯೂ ಉಲ್ಲೇಖಗೊಂಡಿರುವ ಕೃಷ್ಣಾನದಿ ಸ್ವರ್ಗದಿಂದ ಇಳಿದು ಬಂದ ದಕ್ಷ್ಷಿಣಗಂಗೆ ಎಂದೇ ಪ್ರಸಿದ್ಧಿ ಹೊಂದಿದೆ. ಅಂತೆಯೇ ನದಿ ತೀರದಲ್ಲಿನ ತಾಲೂಕಿನ ಗ್ರಾಮಗಳಾದ ಹಿಪ್ಪರಗಿ, ಮುತ್ತೂರ, ಕಂಕಣವಾಡಿ, ಶೂರ್ಪಾಲಿ, ಮುಂತಾದ ಕಡೆ ಪುಣ್ಯಕ್ಷೇತ್ರಗಳಿವೆ.
ಜಮಖಂಡಿಯನ್ನು ರನ್ನನ ಅಜಿತನಾಥ ಪುರಾಣ ಕೃತಿಯಲ್ಲಿ “ಬೆಳುಗಲಿಯಯ್ನೂರರೊಳಗ್ಗಳ ಮೆನಿಸುವ ಜಂಬುಖಂಡಿ’’ ಎಂದು ವರ್ಣಿಸಲಾಗಿದೆ. ಇಂತಹ ಖ್ಯಾತಿವೆತ್ತ ಜಂಬೂಖಂಡಿ ಪ್ರಸಿದ್ಧ ಅಗ್ರಹಾರಗಳಲ್ಲಿ ಒಂದಾಗಿ ರಾಜರ ಔದಾರ್ಯದಿಂದ ಅಭಿವೃದ್ದಿ ಹೊಂದುತ್ತಾ ಬಂದಿರುವುದನ್ನು ಕಾಣಬಹುದು.
ಜಮಖಂಡಿಯನ್ನು ಹೆಸರಿನ ನಿಷ್ಪತ್ತಿ ರೂಪಗಳಿಂದಲೂ ಗುರುತಿಸಬಹುದು.
1) ಜಂಬೂವೃಕ್ಷಗಳ ವನ ಈ ಊರಿನ ಸುತ್ತಲೂ ಇದ್ದುದರಿಂದ ಈ ಹೆಸರು ಬಂದಿದೆ.
2) ಈ ಭಾಗದಲ್ಲಿ ಜಂಬೂಕ(ನರಿ)ಗಳು ವಾಸ ಮಾಡುತ್ತಿದ್ದವು. ಆದ್ದರಿಂದ ಜಂಬೂಖಿಂಡಿ, ಜಂಬೂಖಂಡಿ ಎಂದು ಹೆಸರು ಬಂದಿದೆ.
3) ಇಲ್ಲಿ ಜಂಬುಕೇಶ್ವರ ಎಂಬ ಪ್ರಾಚೀನ ದೇವಾಲಯವಿದೆ. ಇದರಿಂದಾಗಿ ಜಂಬೂಖಂಡಿ ಎಂಬ ಹೆಸರು ಬಂದಿದೆ.
4) ಜಂಬೂ ಎಂಬ ಋಷಿ ಮುನಿ ಇಲ್ಲಿ ವಾಸ ಮಾಡುತ್ತಿದ್ದನು. ಆದ್ದರಿಂದ ಜಂಬೂಖಂಡಿ ಎಂಬ ಹೆಸರು ಬಂದಿದೆ ಎಂಬ ಅಭಿಪ್ರಾಯಗಳಿವೆ.
ಇಲ್ಲಿ ಬಾದಾಮಿ ಚಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಯಾದವರು, ಕಲ್ಯಾಣದ ಕಲಚೂರಿಗಳು, ಹೊಯ್ಸಳರು, ಬಿಜಾಪುರದ ಸುಲ್ತಾನರು, ವಿಜಯನಗರದ ಅರಸರು, ದೇಸಗತಿ ಮನೆತನದವರು ಆಳ್ವಿಕೆ ನಡೆಸಿದ ಉಲ್ಲೇಖಗಳಿವೆ.
ಈ ತಾಲೂಕಿನಲ್ಲಿರುವ 71 ಗ್ರಾಮಗಳಲ್ಲಿ 38 ಶಾಸನಗಳು ಪ್ರಕಟಗೊಂಡಿವೆ. 2006ರಲ್ಲಿ ಈ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಪೂರ್ವಚಾಲುಕ್ಯರ ಕಾಲದ ಒಂದು ತಾಮ್ರಪಟ, ಕಳೆದ ವರ್ಷ 2011ರಲ್ಲಿ ಯಲ್ಲಟ್ಟಿ ಗ್ರಾಮದ ಬಳಿ 17ನೇ ಶತಮಾನದ್ದೆಂದು ಗುರುತಿಸಲಾದ ಬಿಜಾಪೂರ ಸುಲ್ತಾನರ ಬೆಳ್ಳಿ ನಾಣ್ಯಗಳು ದೊರೆತಿವೆ. 5-09-2012ರಂದು ಹಳಿಂಗಳಿ ಗ್ರಾಮದಲ್ಲಿ 10 ಇಂಚು ಜೈನ ತೀರ್ಥಂಕರರ ವಿಗ್ರಹ ದೊರೆತಿದೆ. ಮತ್ತು ಬೃಹತ್ ಶಿಲಾಯುಗದ ಅವಶೇಷಗಳು ದೊರೆಕಿವೆ.
ಇಂತಹ ಮಹತ್ತರ ಐತಿಹಾಸಿಕ ಸಂಗತಿಗಳನ್ನೊಳಗೊಂಡ ಈ ತಾಲೂಕಿನಲ್ಲಿ ದೊರೆತ ಶಾಸನಗಳಲ್ಲಿ ಐತಿಹಾಸಿಕ ದೇವಾಲಯಗಳ ಉಲ್ಲೇಖವಿದ್ದು ಅವುಗಳಲ್ಲಿ ಕೆಲವೊಂದು ದೇವಾಲಯಗಳು ಹಿಂದಿನ ಅಗ್ಗಳಿಕೆಯನ್ನೇ ಉತ್ಸವಗಳ ಮೂಲಕ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಕೆಲವೊಂದು ದೇವಾಲಯಗಳು ಪ್ರಾಚ್ಯವಸ್ತು ಇಲಾಖೆಯಿಂದ ಜೀರ್ಣೊದ್ದಾರಗೊಂಡು ಹಿಂದಿನ ಹಿರಿಮೆಯನ್ನು, ಪರಂಪರೆಯನ್ನು ಉಳಿಸಿಕೊಂಡು ಬಂದಿವೆ. ಇನ್ನು ಕೆಲವು ದೇವಾಲಯಗಳು ಹಿಂದಿನಿಂದಲೂ ಕೊಡಮಾಡಿದ ಇನಾಮು(ದತ್ತ ಬಿಟ್ಟು) ಭೂಮಿಯ ಆಸ್ತಿಯ ಆದಾಯದಿಂದ ಉತ್ಸವಗಳನ್ನು ನೆಡೆಸಿಕೊಂಡು ಬಂದಿವೆ.
ಜಮಖಂಡಿ ಹಾಗೂ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಪ್ರಾಚೀನ ದೇವಾಲಯಗಳಿದ್ದು ಅವು ಅಂದಿನ ಕಾಲದ ಜನರ ಧಾರ್ಮಿಕ ಮನೋಭಾವನೆಯನ್ನು ಮತ್ತು ಶಿಲ್ಪ ಕಲಾಕೃತಿಯ ವೈಶಿಷ್ಟ್ಯತೆಯನ್ನು ತಿಳಿಸಿಕೊಡುತ್ತವೆÉ. ಅವುಗಳೆಂದರೆ, ಜಂಬುಕೇಶ್ವರ, ಕಲ್ಮೇಶ್ವರ, ನಂದಿಕೇಶ್ವರ, ರಾಮೇಶ್ವರ, ಮಘೇಪ್ರಭು, ಯೋಗನಾರಾಯಣ ದೇವಾಲಯಗಳು ಅದರಂತೆ ತಾಲೂಕಿನ ಗ್ರಾಮಗಳಾದ ಕಲ್ಹಳ್ಳಿಯ ವೆಂಕಟೇಶ್ವರ ದೇವಾಲಯ ಕಡಪಟ್ಟಿ ಬಸವೇಶ್ವರ(ಸುವರ್ಣಖಂಡಿ) ದೇವಾಲಯ ತೇರದಾಳದ ಗೊಂಕ ಜಿನಾಲಯ ಸಾವಳಗಿಯ ಶಿವಲಿಂಗೇಶ್ವರ ದೇವಾಲಯ ಕೊಣ್ಣೂರಿನ ಕರಿಸಿದ್ದೇಶ್ವರ ದೇವಾಲಯ ಮುಂತಾದವುಗಳು.
ಜಂಬುಕೇಶ್ವರ ದೇವಾಲಯ: ಜಮಖಂಡಿ ದೇವಾಲಯದ ನಿಷ್ಪತ್ತಿ ರೂಪವೇ ಜಮಖಂಡಿ ಎಂದಾಗಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯದ ಸುತ್ತಲೂ ವಿಶಾಲ ಪ್ರಾಂಗಣವಿದೆ. ದೇವಸ್ಥಾನ ಎತ್ತರವಾದ ಜಗಲಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಪ್ರವೇಶದ್ವಾರದ ಎರಡೂ ಬದಿಗೆ ಗಜಾಕೃತಿಯ ಶಿಲ್ಪಿಗಳಿದ್ದು ದೇವಾಲಯವನ್ನು ಹೊತ್ತು ನಿಂತಿರುವಂತೆ ಭಾಸವಾಗುತ್ತದೆ. ಪ್ರವೇಶದ್ವಾರದಲ್ಲಿ ದೇಗುಲ ಮಾದರಿ ಛತ್ತು ಇದೆ. ಲತಾ ಪದ್ಮಲಹರಿಯ ಶಾಖೆಗಳಿವೆ. ದ್ವಾರಪಾಲಕರನ್ನು ಕೆತ್ತಲಾಗಿದೆ. ಕಂಬಗಳಲ್ಲಿ ಪೀಠ ಫಲಕ, ಕಲಶ, ಕುಂಭ ಕಾಂಡ ಎಂಬ ಭಾಗಗಳನ್ನು ಗುರುತಿಸಬಹುದು. ಇದರ ತಲವಿನ್ಯಾಸ ಮುಖಮಂಟÀಪ, ಸಭಾಮಂಟಪ, ಅಂತರಾಳವನ್ನು ಹೊಂದಿದೆ. ಮೂರು ಗರ್ಭಗೃಹಗಳಿರುವು ದರಿಂದ ಇದನ್ನು ತ್ರಿಕೂmೀಶ್ವರ ಎಂದು ಗುರುತಿಸಬಹುದು. ಒಂದು ಗರ್ಭಗೃಹ ವೃತ್ತಾಕಾರವಾಗಿದೆ. ಇದರಲ್ಲಿ ಶಿವಲಿಂಗವಿದೆ. ಗರ್ಭಗೃಹದ ಮೇಲ್ಛಾವಣೆಯಲ್ಲಿ ಸಮತಲವಾದ ಭುವನೇಶ್ವರಿ ಅಲಂಕಾರವನ್ನು ಹೊಂದಿದೆ. ಉತ್ತರಾಭಿಮುಖವಾಗಿರುವ ಒಂದು ಗರ್ಭಗೃಹದ ಎಡಬಲಗಳಲ್ಲಿ ಚಿಕ್ಕ ಗರ್ಭಗೃಹಗಳಿವೆ. ಗರ್ಭಗೃಹದ ಲಲಾಟ ಬಿಂಬಗಳಲ್ಲಿ ಶಿವಶಿಲ್ಪಗಳಿವೆ.
ದೇವಾಲಯದ ಸಭಾಮಂಟಪದಲ್ಲಿಯ ಮೇಲ್ಛ್ಚಾವಣೆಯಲ್ಲಿ ಕೂಡಾ ವಿವಿಧ ಬಳೆಯಾಕಾರದ ಆಕೃತಿಗಳನ್ನು ಕೆತ್ತಲಾಗಿದೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳು ನೇರವಾಗಿದ್ದು ಎರಡು ಕಡೆ ಸಾಲಾಗಿ ನಿಂತಿವೆ. ಇನ್ನುಳಿದ ನಾಲ್ಕು ಕಂಬಗಳು ಗರ್ಭಗೃಹಕ್ಕೆ ಆಧೀನವಾಗಿದ್ದು ಎರಡು ದೇವಕೋಷ್ಟಕಗಳಿವೆ. ದೇವಾಲಯಕ್ಕೆ ಶಿಖರವಿಲ್ಲ. ಬೃಹದಾಕಾರದ ಸಮತಟ್ಟಾದ ಕಲ್ಲುಗಳಿಂದ ಕೂಡಿದ ಮೇಲ್ಚಾವಣಿ ಇದೆ. ದೇವಾಲಯದ ಆವರಣದಲ್ಲಿ ತೃಟಿತ ಶಿಲ್ಪಗಳು, ಕಂಬಗಳ  ಭಾಗಗಳು  ಕಂಡು ಬರುತ್ತವೆ. ಈ  ದೇವಾಲಯಕ್ಕೆ  ದತ್ತಿಕೊಟ್ಟ ವಿಚಾರವನ್ನು ಜಮಖಂಡಿಯಲ್ಲಿ ದೊರೆತ ಶಾಸನ (ಸೌತ ಇಂಡಿಯನ್ ಇನ್ಸ್ಸ್‍ಕ್ರ್ರಿಪÀ್ಸನ್ಸ್ ಸಂ.20, ನಂ.287) ತ್ರುಟಿತವಾಗಿದೆ. ಮೊದಲ ಭಾಗ ಸಿಕ್ಕಿಲ್ಲ. 18 ಸಾಲುಗಳ ಈ ಶಾಸನ ದುಂದುಬಿನಾಮ ಸಂವತ್ಸರ ಚೈತ್ರ, ಭಾನುಶ್ರೀ, ಸೋಮವಾರ ವಿಭವ ಸಂಕ್ರಾಂತಿ ಅಂದರೆ ಕ್ರಿ.ಶ. 1082 ಸೋಮವಾರ ಮಾರ್ಚ 31ನೇ ದಿನಕ್ಕೆ ಸರಿಹೊಂದುವ ಕಾಲಮಾನ. 1082ರಲ್ಲಿ ಕಲ್ಯಾಣಿ ಚಾಲುಕ್ಯ ಚರ್ಕವರ್ತಿ 6ನೇ ವಿಕ್ರಮಾದಿತ್ಯ ಆಳುತ್ತಿದ್ದ ಕಾಲ ಈ ದೇವಾಲಯಕ್ಕೆ ಭೂದಾನ ದತ್ತಿ ಬಿಟ್ಟ ವಿಚಾರಗಳನ್ನು ತಿಳಿಸುತ್ತದೆ.
ಗೊಂಕ ದೇವಾಲಯ: ತೇರದಾಳ
ಜಮಖಂಡಿ ತಾಲ್ಲೂಕಿನ ಪ್ರಮುಖ ಪಟ್ಟಣ ಇಲ್ಲಿ ನೇಮಿನಾಥ (ಕರ್ನಾಟಕ ಇನ್ಸ್ಸ್‍ಕ್ರ್ರಿಪÀ್ಸನ್ಸ್ ಸಂ.5, ನಂ. 21) ಬಸದಿಯ ಮಂಟಪದ ಹೊರಗೋಡೆಯಲ್ಲಿ ಶಾಸನವಿದೆ.
ಇದು ಕುಂತಳನಾಡಿನ ಭಾಗವಾದ ಕೊಂಡಿ-3000 ಉಪವಿಭಾಗವಾದ ತೇರದಾಳ-12 ಗ್ರಾಮದ ಗುಣಗಾನ ಮಾಡುತ್ತದೆ. 6ನೇ ವಿಕ್ರಮಾದಿತ್ಯನ ಮಹಾಮಾಂಡಲಿಕ ರಟ್ಟ ವಂಶದ ಕಾರ್ತವೀರ್ಯನ ಮಾಂಡಲಿಕನಾದ ಗೊಂಕರಸ ತೇರದಾಳದಲ್ಲಿ ಗೂಂಕಜಿನಾಲಯವನ್ನು ನಿರ್ಮಿಸಿ ವಿಗ್ರಹ ಪ್ರತಿಷ್ಠಾಪನೆಯನ್ನು ತೇರದಾಳದ ಮುಖಂಡರ ಸಮ್ಮುಖದಲ್ಲಿ ಮಾಡಿ ಆ ಕಾಲದಲ್ಲಿಯೇ ಈ ದೇವಾಲಯಕ್ಕೆ ಅಷ್ಟ ವಿಧಾರ್ಚನೆ, ಪೂಜೆ ನಿರಂತರವಾಗಿ ನಡೆಯುವುದಕ್ಕಾಗಿ ತೆರಿಗೆಗಳಿಂದ ಎಣ್ಣೆ ಗಾಣಗಳಿಂದ ಮತ್ತಿತರ ಮೂಲಗಳಿಂದ ಬಂದ ಆದಾಯವನ್ನು ದಾನವಾಗಿ ಕೊಟ್ಟಿದ್ದನ್ನು ಇಲ್ಲಿರುವ 56 ದೀರ್ಘ ಸಾಲುಗಳುಳ್ಳ ಶಾಸನ ತಿಳಿಸುತ್ತದೆ.
ಈ ಶಾಸನ ಶಕವರ್ಷ 1045 ಶುಭಕೃತ ಗುರುವಾರ ವೈಶಾಖ ಪೂರ್ಣಿಮೆ ಅಂದರೆ ಕ್ರಿ.ಶ. 1125 ಏಪ್ರಿಲ್ 12ಕ್ಕೆ ಸರಿಹೊಂದುವ ಕಾಲ. ಇಂದಿಗೂ ಚಾತುರ್ಮಾಸ ಮತ್ತು ನೋಂಪಿ ಆಚರಣೆಗಳೊಂದಿಗೆ ಇದು ಇಂದಿಗೂ ಪ್ರಸಿದ್ಧಿಯಾಗಿದೆ.
ಕದಂಬನಾಗರ ಶೈಲಿಯಲ್ಲಿರುವ ಈ ಬಸದಿ ಪ್ರದಕ್ಷಣಾ ಪಥವನ್ನು ಹೊಂದಿದೆ. ಗರ್ಭಗೃಹ ಸುಖನಾಸಿ ರಂಗಮಂಟಪ ಹಾಗೂ ಮುಖಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ನೇಮಿನಾಥನ ವಿಗ್ರಹವಿದೆ. ಗರ್ಭಗುಡಿಯ ಮೇಲೆ ಶಿಖರವಿದೆ. ದೇವಾಲಯದ ಎದುರಿಗೆ ಎತ್ತರದ ದೀಪಸ್ತಂಬವಿದೆ. ಹೊರ ಮಂಟಪದ ದ್ವಾರವು ಸುಂದರ ಕುಸುರಿ ಕೆತ್ತನೆಯಿಂದ ಕೂಡಿದೆ. ದ್ವಾರದ ಮೇಲ್ಭಾಗದಲ್ಲಿ ಪದ್ಮಾಸನ ಜಿನ ಮೂರ್ತಿ ಇದೆ.
ಕರಿಸಿದ್ಧ ದೇವಾಲಯ: ಕೊಣ್ಣೂರ
ಇತ್ತೀಚಿನ ದಿನಗಳಲ್ಲಿಯೂ ಬಹಳ ಪ್ರಸಿದ್ದಿ ಹೊಂದಿದ ದೇವಾಲಯ. ಶಾಸನಗಳಲ್ಲಿ (ಎಸ್.ಐ.ಐ. ಸಂ.20, ನಂ.542, ಕ್ರಿ.ಶ. 1149-50) ಇದನ್ನು ಬೀರಣ ದೇವರು ಎಂದು ಉಲ್ಲೇಖಿಸಲಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ ಒಂದು ಕಾಲದಲ್ಲಿ ದೇವಾನು ದೇವತೆಗಳೆಲ್ಲ ಸೇರಿಕೊಂಡು ಶಿವನಿಗೆ ಪಟ್ಟಕಟ್ಟುವ ಕಾಲಕ್ಕೆ ಗುಗ್ಗಳ ಹೋಮ ಮಾಡುತ್ತಿರಲು, ಹೋಮದಲ್ಲಿ ಉದ್ಭವವಾದ ಕೂಸೊಂದು ನದಿ ದಂಡೆಯ ಮೇಲೆ ಕುಳಿತುಕೊಂಡು ಸೃಷ್ಟಿಯಲ್ಲಿರುವ ಪ್ರಾಣಿಗಳಿಗೆಲ್ಲ್ಲ ಆಹಾರವನ್ನು ಬೀರುತ್ತಿದ್ದನು. ಆದ್ದರಿಂದ ಅವನಿಗೆ ಬೀರಪ್ಪ, ಬೀರೇಶ್ವರ ಎಂಬ ಹೆಸರು ಬಂದಿತು. ಮುಂದೆ ಇದೇ ಬೀರೇಶ್ವರ ಕೋಣಾಸುರ ಎಂಬ ದೈತ್ಯನನ್ನು ನಾಶ ಮಾಡಿ ದೈತ್ಯನ ಹೆಸರಿನ ಮೇಲೆ ಕೋಣಾನೂರು ಎಂಬ ಗ್ರಾಮವನ್ನು ಸ್ಥಾಪಿಸಿ, ಕೋಣಾನೂರಿನ ನಿಜಸಿದ್ದ, ಕರೆಸಿದ್ದ ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದ ಈ ದೇವರು ಈಗ ಕರಿಸಿದ್ದ ಎಂದಾಗಿದೆ. ಈ ದೇವಾಲಯ ಊರಿನ ಪಶ್ಚಿಮದಲ್ಲಿ ಪೂರ್ವಾಭಿಮುಖವಾಗಿ ಕಟ್ಟಲ್ಪಟ್ಟಿದೆ. ಮುಖ್ಯದ್ವಾರದ ಮೇಲೆ ಮಹಡಿಗಳನ್ನು ನಿರ್ಮಿಸಿರುವುದರಿಂದ ಬಹುದೂರದಿಂದಲೇ ಕಾಣುತ್ತದೆ. ಮುಖ್ಯದ್ವಾರದ ಪ್ರ್ರಾಕಾರದಲ್ಲಿರುವ ಕೋಣೆಗಳು ನಂತರದ ದಿನಗಳಲ್ಲಿ ನಿರ್ಮಿಸಿದವುಗಳಾಗಿವೆ. ಗರ್ಭಗುಡಿಯಲ್ಲಿ ಕುಳಿತ ಭಂಗಿಯಲ್ಲಿರುವ ಕರಿಸಿದ್ದದೇವರ ಕಲ್ಲಿನ ಮೂರ್ತಿ ಇದೆ. ಕಾಲಕ್ರಮೇಣ ಪಕ್ಕದಲ್ಲ್ಲಿಯೇ ಮತ್ತೊಂದು ನಿಂತಿರುವ ಮೂರ್ತಿಯನ್ನು ಪ್ರತಿಷ್ಠ್ಠಾಪಿಸಲಾಗಿದೆ.
ಇವುಗಳಿಗೆ ಕುಂತಿರಪ್ಪ, ನಿಂತಿರಪ್ಪ ಎಂದು ಕರೆಯುತ್ತಾರೆ. ಗುಡಿಯ ಪ್ರಾಂಗಣದಲ್ಲಿ ಕೋಣಾಸುರನ ವಧೆಯ ಸಂಕೇತವಾಗಿ ಎರಡು ಮಾಲಗಂಬಗಳಿವೆ. ಗರ್ಭಗುಡಿಯ ಸಭಾಮಂಟಪದ ಎದುರು ಎಡಬಲಗಳಲ್ಲಿ ಶಾಸನಗಳಿವೆ. ಈ ಭಾಗದಲ್ಲಿ ಜಾಗೃತ ದೇವಾಲಯವೆಂದೇ ಪ್ರಸಿದ್ದಿ ಹೊಂದಿದ ಈ ದೇವಾಲಯಕ್ಕೆ ಯುಗಾದಿ, ಶ್ರಾವಣ ಮಾಸದಲ್ಲಿ ಸಾಕಷ್ಟು ಜನ ಬಂದು ಸೇರುತ್ತಾರೆ. ಪ್ರತಿ ವರ್ಷ ದೀಪಾವಳಿಯಲ್ಲಿ ನರಕಾಸುರನ ಬಲಿಪಾಡ್ಯಮಿ ಎನ್ನುವಂತೆ ಕೋಣಾಸುರನ ಸಂಹಾರದ ದಿನ ಎಂಬ ಸಂಪ್ರದಾಯದಂತೆ ಅನೇಕ ದೈವೀಕ ಆಚರಣೆÉಗಳನ್ನೊಳಗೊಂಡಂತೆ ಬೃಹತ್ ಪ್ರಮಾಣದಲ್ಲಿ ಜಾತ್ರೆ ನಡೆಯುತ್ತದೆ.
ಮಘೆಪ್ರಭು ದೇವಾಲಯ: ಜಮಖಂಡಿ
ಈ ದೇವಾಲಯವನ್ನು ಪ್ರವೇಶಿಸಬೇಕಾದರೆ 8-10 ಮೆಟ್ಟಿಲುಗಳನ್ನು ಇಳಿದು ಹೋಗಬೇಕಾಗುತ್ತದೆ. ಇದು ರಾಷ್ಟ್ರಕೂಟರ ಮತ್ತು ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ಮಾದರಿಗಳೆರಡನ್ನೂ ಹೋಲುತ್ತದೆ. ತ್ರಿಕೂಟಾಚಲವಾಗಿದ್ದು ಮಧ್ಯದ ಗರ್ಭಗುಡಿಯಲ್ಲಿ ಪ್ರಭುದೇವರ ಜಲಾರಿ ಲಿಂಗವಿದೆ. ಅಂತರಾಳದ ಮಧ್ಯದಲ್ಲಿ ನಂದಿ ವಿಗ್ರಹವಿದೆ. ಎಡಬಲಗಳ ಗರ್ಭಗುಡಿಗಳಲ್ಲಿನ ಶಿವಲಿಂಗಗಳು ಕಾಣೆಯಾಗಿವೆ. ದೇವಾಲಯದ ಸುತ್ತಲೂ ಸ್ವಲ್ಪವೂ ಸ್ಥಳಾವಕಾಶ ಇಲ್ಲದಂತೆ ದೇವಸ್ಥಾನದ ಜಾಗವನ್ನು ಆಕ್ರಮಿಸಿ ಸ್ಥಳೀಕರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದ್ದರಿಂದ ದೇವಾಲಯದ ಮೂಲಸ್ವರೂಪವನ್ನು ಕಾಣುವುದಿಲ್ಲ. ಮೂರ್ನಾಲ್ಕು ತಲೆಮಾರುಗಳಿಂದ ಮನಗೂಳಿ ಮನೆತನದ ಆಚಾರ್ಯರು ಈ ದೇವಾಲಯದ ಅರ್ಚಕರಾಗಿ ವಿಧಿವಿಧಾನಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ದೇವಸ್ಥಾನಕ್ಕೆ 10 ಎಕರೆ ಭೂಮಿ ಉಂಬಳಿ ಹಾಕಿಕೊಡಲಾಗಿದೆ. ಇದನ್ನು ಹಾರುವರ ಹೊಲ ಎಂದು ಕರೆಯುತ್ತಾರೆ. ಎಲ್ಲ ಧರ್ಮೀಯರು ಇದಕ್ಕೆ ನಡೆದುಕೊಳ್ಳುತ್ತಾರೆ. ಜಾಗೃತ ದೇವಸ್ಥಾನ ಎಂದೇ ಭಕ್ತರು ನಂಬಿದ್ದಾರೆ. ಜಮಖಂಡಿ ನಗರವಾಸಿಗಳಲ್ಲದೇ ಸುತ್ತಮುತ್ತಲಿನ ಗ್ರಾಮದ ಜನರು ನಡೆದುಕೊಳ್ಳುತ್ತಾರೆ. ಈ ದೇವಾಲಯದ ಪೂಜಾ ವಿಧಿವಿಧಾನಗಳನ್ನು ಜಂಗಮರು ಮತ್ತು ಬ್ರಾಹ್ಮಣರು ಇಬ್ಬರೂ ನೆರವೇರಿಸುತ್ತಾ ಬಂದಿರುವುದು ವಿಶೇಷ.
ಜಂಗಮ ಪೂಜಾರಿಗಳು ಪತ್ರಿ, ಪುಷ್ಪ, ಫಲಾರ್ಚನೆಗಳನ್ನು ಮಾಡಿದರೆ ಬ್ರಾಹ್ಮಣ ಜೋಯಿಸರು ಅಲಂಕಾರ ಪೂಜೆ, ಅಭಿಷೇಕ, ಹೋಮ, ಹವನ, ಸೇವೆಗಳನ್ನು ಮಾಡುತ್ತಾರೆ. ಪ್ರತಿ ಶ್ರಾವಣ ಮಾಸದಲ್ಲಿ ಅತ್ಯಂತ ವೈಭವದಿಂದ ನೃತ್ಯ, ಸಂಗೀತ ಸೇವೆ, ಬಾಜಾಭಜಂತ್ರಿ, ಕರಡಿವಾದನ, ಸಂಬಾಳವಾದನ, ಜಾಗಟೆ, ನಗಾರಿ ವಾದನ, ಮೊದಲಾದ ಕಾರ್ಯಕ್ರಮಗಳು ಅತೀ ವಿಜೃಂಭಣೆÉಯಿಂದ ನಡೆಯುತ್ತಿದ್ದವು. ಈ ದೇವರಿಗೆ ಭಕ್ತಿಸೇವೆಗಾಗಿ ಭೂಮಿಯನ್ನು ದತ್ತಿ ಬಿಟ್ಟ ವಿವರಗಳು ಸಿಗುತ್ತವೆ.
ರಾಮೇಶ್ವರ ದೇವಾಲಯ: ರಾಮತೀರ್ಥ
ಜಮಖಂಡಿಯ ನೈರುತ್ಯಕ್ಕೆ ಗುಡ್ಡದ ಸಾಲಿನಲ್ಲಿ 2 ಕಿ.ಮೀ. ದೂರದಲ್ಲಿರುವ ವೇಸರ ಮಾದರಿಯ ಹೊಯ್ಸಳರ ಕಾಲದ ದೇವಾಲಯ. ತೆರೆದ ಸಭಾಮಂಟಪ, ಅಂತರಾಳ ಮತ್ತು ಗರ್ಭಗೃಹವನ್ನು ಹೊಂದಿದೆ. ಸಭಾಮಂಟಪದಲ್ಲಿ 4 ಕಂಬಗಳಿದ್ದು ಎತ್ತರಕ್ಕೆ ಕಟ್ಟೆಯನ್ನು ಕಟ್ಟಲಾಗಿದೆ. ಕಟ್ಟೆಯ ಮೇಲೆ ಅರ್ಧ 5 ಕಂಬಗಳಿವೆ. ಈ ಕಂಬಗಳು ಛತ್ತಿಗೆ ಅಂಟಿಕೊಂಡು ಹೊರಗೆ ಹೋಗಲು ದಾರಿಗಳಾಗಿವೆ. ದೇವಸ್ಥಾನದ ಎಡಬಲಕ್ಕೆ ಹೋಗಲು ದಾರಿ ಇದೆ. ಅಲಂಕೃತವಾದ ಕೆತ್ತನೆಯ ಒಟ್ಟು 10 ಕಂಬಗಳಿವೆ. ಗರ್ಭಗೃಹದಲ್ಲಿ ಬೃಹದಾಕಾರವಾಗಿರುವ ಶಿವಲಿಂಗವಿದೆ. ಗರ್ಭಗೃಹದ ಮುಂದೆ ಬೃಹತ್ ನಂದಿ ವಿಗ್ರಹವಿದೆ. ಮೇಲ್ಛಾವಣಿ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ದೇವಾಲಯದ ದ್ವಾರಬಾಗಿಲಿನ ಲಲಾಟಬಿಂಬದಲ್ಲಿ ಓಂ ಅಕ್ಷರ ಹಾಗೂ ಹೂವಿನ ಚಿತ್ರವಿದೆ. ಇತ್ತೀಚಿಗೆ ದ್ವಾರಬಾಗಿಲಿನ ಮೇಲ್ಭಾಗದಲ್ಲಿ ಶಿವಪಾರ್ವತಿಯರ ಶಿಲ್ಪವನ್ನು ನಿರ್ಮಿಸಿದ್ದಾರೆ. ದೇವಾಲಯದ ಎಡಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ಸಳ ಹುಲಿಯೊಡನೆ ಸೆಣೆಸಾಡುತ್ತಿರುವ ಶಿಲ್ಪ ಚಿತ್ರವಿದೆ. ದೇವಾಲಯದ ಹೊರನೋಟ ನಕ್ಷತ್ರಾಕಾರದಂತೆ ಕಾಣಿಸುತ್ತದೆ.
1857ರ ಬಂಡಾಯದಲ್ಲಿ ಭಾಗವಹಿಸಿದ್ದನು ಎಂಬ ಆರೋಪದ ಮೇರೆಗೆ ಈ ಪ್ರಾಂತದ ಮುಖಂಡ ರಾಮಚಂದ್ರರಾವ್ ಪಟವರ್ಧನರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದ ಬಳಿಕ ರಾಮಚಂದ್ರರಾವ್ ತಮ್ಮ ವಸತಿಯನ್ನು ಬದಲಿಸಿ ಊರ ಹೊರಗಿರುವ ರಾಮತೀರ್ಥದ ಈ ದೇವಾಲಯದ ಪಕ್ಕದಲ್ಲಿ (ವಸತಿ) ಅರಮನೆ ನಿರ್ಮಿಸಿಕೊಂಡು ಸುತ್ತಲೂ ಸಣ್ಣ್ಣ ಸಣ್ಣ್ಣ ದೇವಾಲಯಗಳನ್ನು ನಿರ್ಮಿಸಿಕೊಂಡು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಇನ್ನೊಂದು ವಿಶೇಷವೆಂದರೆ ಪ್ರತಿ ವರ್ಷ ಶ್ರಾವಣ ಮಾಸದ ಪೂರ್ತಿ ತಿಂಗಳಲ್ಲಿ ಜಮಖಂಡಿ ಹಾಗೂ ಹತ್ತಿರಕ್ಕೆ ಹೊಂದಿಕೊಂಡಿರುವ ಪ್ರದೇಶಗಳ ಜನರು ಪ್ರತಿ ದಿನ ಬೆಳಗಿನ ಜಾವ 4 ಗಂಟೆಯಿಂದ 9 ಗಂಟೆಯವರೆಗೆ ದರ್ಶನ ಪಡೆದು ಹೋಗುತ್ತಾರೆ. ಪ್ರತಿ ಸೋಮವಾರ ವಿಶೇಷವಾಗಿ ಅನ್ನದಿಂದ ತಯಾರಿಸಿದ “ಬುತ್ತಿ”ಯಿಂದ ಶಿವಲಿಂಗವನ್ನು ವಿವಿಧ ಭಂಗಿಗಳಲ್ಲಿ ನಿರ್ಮಿಸಿ ಪೂಜಿಸುತ್ತಾರೆ. ಕೊನೆಯ ಶ್ರಾವಣ ಸೋಮವಾರ ವಿಶೇಷ ಪೂಜೆಯೊಂದಿಗೆ ರಾಮೇಶ್ವರ ರಥೋತ್ಸವ ಬಹು ವಿಜೃಂಭಣೆÉಯಿಂದ ದೇವಾಲಯದ ಆವರಣದಲ್ಲಿಯೇ ನಡೆಯುತ್ತದೆ. ಏಕೆಂದರೆ ಜಮಖಂಡಿ ಸಂಸ್ಥಾನದ ಪ್ರಥಮ ಅರಸ ರಾಮಚಂದ್ರ ಪÀಂತ್ ಅವರಿಗೆ ಮರಾಠಾ ಪೇಶ್ವೆಗಳು ಜಮಖಂಡಿಯನ್ನು ಜಹಗೀರಾಗಿ ಕೊಟ್ಟ ಸಂದರ್ಭದಲ್ಲಿ ಪಾಂಡು. ಬಾ. ತಾತ್ಯಾ ಸುಖದೇವ ಆಡಳಿತಾಧಿಕಾರಿಯಾಗಿದ್ದನು. ಇವನು ಜಮಖಂಡಿಯನ್ನು ಬಿಟ್ಟು ಕೊಡಲು ನಿರಾಕರಿಸಿದನು. ಇದರಿಂದ ಕೋಪಗೊಂಡ ರಾಮಚಂದ್ರ ಪÀಂತ್ ತಮ್ಮ ಸೇನಾಬಲದೊಂದಿಗೆ ಸುಖದೇವನನ್ನು ಸೋಲಿಸಿ ಜಮಖಂಡಿಯನ್ನು ವಶಪಡಿಸಿಕೊಂಡಿದ್ದು ಶ್ರಾವಣ ಸೋಮವಾರದಂದು. ಅಂದಿನಿಂದಲೂ ಈ ಆಚರಣೆ ನಡೆಯುತ್ತಾ ಬಂದಿದೆ. ಈಗ ಪೂನಾದಲ್ಲಿ ವಾಸ್ತವ್ಯ ಹೂಡಿರುವ ಪಟವರ್ಧನ ಮನೆತನದವರು ಈ ರಥೋತ್ಸವಕ್ಕೆ ತಪ್ಪದೇ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವುದು ಒಂದು ವಿಶೇಷವಾಗಿದೆ.

ಆಧಾರಸೂಚಿ
1. ಪ್ರೊ. ಎಸ್.ಬಿ. ಮಟೋಳಿ , ಜಮಖಂಡಿ ಇತಿಹಾಸ ದರ್ಪಣ, ಪುಟ 5.
2. ಬಜಂತ್ರಿ ದೊಡ್ಡಣ್ಣ (ಸಂ) ತ್ರಿದಳ ಸೌರಭ ಸ್ಮರಣ ಸಂಚಿಕೆ, ಲೇಖನ ಪುಟ 3.
3. ಮಲ್ಲಿಕಾರ್ಜುನ ಎಂ. (ಸಂ),  ಜೈ ಜಮಖಂಡಿ ಪಾಕ್ಷಿಕ ಸಂಚಿಕೆ 7, ಪುಟ 3.
4. ಡಾ|| ಕೆ.ಪಿ. ಈರಣ್ಣ, ತೇರದಾಳ ಗೊಂಕ ಜಿನಾಲಯ ಲೇಖನ, ಪುಟ 152.
5. ಕೆ. ಚನ್ನಬಸಪ್ಪ,  ಜಮಖಂಡಿ ತಾಲ್ಲೂಕಿನ ಶಾಸನಗಳು ಒಂದು ಸಾಂಸ್ಕøತಿಕ ಅಧ್ಯಯನ.


ಪ್ರಸನ್ನ ಮ ಔರಸಂಗ

Comments