5 ವರ್ಷಗಳ ಬಳಿಕ ಬಳ್ಳಾರಿಗೆ ಬಂದ ಗಣಿಧಣಿ
ಬಳ್ಳಾರಿ: 5 ವರ್ಷಗಳ ನಂತರ ಬಳ್ಳಾರಿಗೆ ಬಂದಿದ್ದೇನೆ, ನನಗೆ ತುಂಬಾ ಖುಷಿಯಾಗಿದೆ. ನನ್ನನ್ನು ಅದ್ದೂರಿಯಿಂದ ಬರಮಾಡಿಕೊಂಡ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದ ಬಳಿಕ ಬಳ್ಳಾರಿಗೆ ಆಗಮಿಸಿದ ಬಳಿಕ ಮಾತನಾಡಿದ ರೆಡ್ಡಿ, ಸುಪ್ರೀಂಕೋರ್ಟ್ ನನಗೆ ಮಗಳ ಮದುವೆಯ ಸಲುವಾಗಿ ಮೂರು ವಾರಗಳವರೆಗೆ ಬಳ್ಳಾರಿಯಲ್ಲಿ ಇರಲು ಅನುಮತಿ ನೀಡಿದೆ. ಹೆಚ್ಚಿನ ಸಮಯವನ್ನು ಬಳ್ಳಾರಿಯಲ್ಲಿ ಕಳೆಯುತ್ತೇನೆ. ನವೆಂಬರ್ 1, ಕನ್ನಡ ರಾಜ್ಯೋತ್ಸವದಂದು ನನಗೆ ಕೋರ್ಟ್ ನನ್ನ ತವರೂರಿಗೆ ಬರಲು ಅನುಮತಿ ನೀಡಿದ್ದು, ನನಗೆ ಖುಷಿಯನ್ನು ತಂದಿದೆ. ನವೆಂಬರ್ 12 ರವರೆಗೂ ನಾನು ಬಳ್ಳಾರಿಯಲ್ಲಿಯೇ ಇರುತ್ತೇನೆ ಎಂದರು.
ಬಳ್ಳಾರಿಗೆ ಬಂದು ನನ್ನ ತಂದೆ-ತಾಯಿಯ ಸಮಾಧಿಗೆ ಹೋಗಿ ನಮಸ್ಕರಿಸಿ ಬಂದಿದ್ದೇನೆ. ಕನ್ನಡದ ಭುವನೇಶ್ವರಿ ತಾಯಿ ನನ್ನನ್ನು ರಾಜ್ಯೋತ್ಸವದಂದು ಕರೆಸಿಕೊಂಡಿದ್ದಾಳೆ. ನನಗೆ ಬಳ್ಳಾರಿ ಬಿಟ್ಟು ಇರಲು ಆಗುವುದಿಲ್ಲ. ನನ್ನನ್ನು ಜೈಲಿಗೆ ಹಾಕುವುದಾದರೆ ಬಳ್ಳಾರಿ ಜೈಲಿಗೆ ಕಳಿಸಿ ನಾನು ಸಂತೋಷದಿಂದ ಅಲ್ಲಿ ಇರುತ್ತೇನೆ ಎಂದು ನಾನು ಸುಪ್ರೀಂ ಕೋರ್ಟ್ನಲ್ಲಿ ಹೇಳಿದ್ದೆ ಎಂದು ತಿಳಿಸಿದರು.
-ಪ್ರಸನ್ನ ಮ ಔರಸಂಗ