UK Suddi
The news is by your side.

ಜನೇವರಿ 3ರಿಂದ ಯಾದಗಿರಿಯಲ್ಲಿ ಭೂ ಸೇನಾ ನೇಮಕಾತಿ..


ಯಾದಗಿರಿ: ಜನವರಿ 3 ರಿಂದ 10 ರವರೆಗೆ ನಗರದಲ್ಲಿ ಬೆಳಗಾವಿ ಭೂ ಸೇನಾ ನೇಮಕಾತಿ ಕಚೇರಿಯಿಂದ ಭೂ ಸೇನಾ ನೇಮಕಾತಿ ಏರ್ಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ಸಕಲ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, 

ಸೇನಾ ನೇಮಕಾತಿಗೆ ಸಂಬಂಧಪಟ್ಟಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸೇನಾ ನೇಮಕಾತಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಸೂಚಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿರುವ ಈ ರ‍್ಯಾಲಿಗೆ ಪ್ರತಿದಿನ ಅಂದಾಜು 5,000 ಅಭ್ಯರ್ಥಿಗಳು ಆಯ್ಕೆಗೆ ಆಗಮಿಸುವ ಸಾಧ್ಯತೆ ಇದೆ.

ಈ ಸಂದರ್ಭದಲ್ಲಿ ಸೂಕ್ತ ಬಸ್‍ಗಳ ವ್ಯವಸ್ಥೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಡಬೇಕು. ಅಂದು ಜಿಲ್ಲಾ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ, ವೇದಿಕೆ ಸಜ್ಜುಗೊಳಿಸಬೇಕು. ಸಿಬ್ಬಂದಿಗಳು ಮತ್ತು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ವ್ಯವಸ್ಥೆ ಮಾಡಬೇಕು. ಮೊಬೈಲ್ ಶೌಚಾಲಯ ವ್ಯವಸ್ಥೆ ಸಹ ಮಾಡುವಂತೆ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರಗಳ ಪರಿಶೀಲನೆಗೆ ನಿಯೋಜಿಸಬೇಕು. ತಹಸೀಲ್ದಾರ ಕಚೇರಿ ಅಧಿಕಾರಿ ಸಿಬ್ಬಂದಿಗಳು ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ, ಸ್ಥಾನಿಯ ಪ್ರಮಾಣ ಪತ್ರ ಮತ್ತು ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರಗಳ ಪರಿಶೀಲನೆಗೆ ನಿಯೋಜಿಸಬೇಕು. ನುರಿತ ವೈದ್ಯಕೀಯ ಅಧಿಕಾರಿ ಕ್ರೀಡಾಂಗಣದಲ್ಲಿ ಮತ್ತು ತುರ್ತು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರಬೇಕು. ನರ್ಸಿಂಗ್ ಸಹಾಯಕಿಯರು, ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಅದೇ ರೀತಿ ಆಗ್ನಿ ಶಾಮಕ ಸೇವೆ ತುರ್ತಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಸೂಕ್ತ ಪೊಲೀಸ್ ಬಂದೊಬಸ್ತ್ ಇರುವಂತೆ ನೋಡಿಕೊಳ್ಳಬೇಕು. ಎಂದು ತಿಳಿಸಿದರು. 

Comments