UK Suddi
The news is by your side.

ಮುಗ್ಧ ಚೇತನ

470071912

ಶುಕ್ರವಾರ ಸಂಜೆ, ಆಗ ತಾನೆ ಆಫೀಸಿನಿಂದ ಮನೆಗೆ   ಬಂದು, “ಅಬ್ಬಾ ನಾಳೆ,ನಾಡಿದ್ದು ರಜೆಎಂದು ಮನಸ್ಸಿನಲ್ಲಿಯೇ ಖುಷಿ ಪಡುತ್ತಿದ್ದಂತೆಯೇ ನನ್ನ ಫೋನು ರಿಂಗಣಿಸಿತು, ಯಾವುದೋ ಹೊಸ ನಂಬರ್,ಯಾರಿರಬಹುದು ಎಂದು ಫೋನ್ ರಿಸೀವ್ ಮಾಡಿಹಲೋ…. ಯಾರು ಮಾತಾಡ್ತಾ ಇರೋದು ಎಂದು ಕೇಳಿದಾಕ್ಷಣ,”ಹಲೋ…. ಅಭಿ ಅಣ್ಣನಾ ಮಾತಾಡ್ತಿರದು??”ಎಂದು ಎಲ್ಲೂ ಕೇಳಿದ ಧ್ವನಿ ಉತ್ತರಿಸಿತು.

ಹೌದು ನಾನೇ ಮಾತಾಡ್ತಾ ಇರೋದು. ನೀವು ಯಾರು?” ಎಂದೆ.

ಅಣ್ಣಾ ನಾನು ಚೇತನ್ ..ಗೊತ್ತಾಗ್ಲಿಲ್ವ?? “ಎಂದು ಆ ಪುಟ್ಟ ಧ್ವನಿ ಕೇಳಿತು.

ನಾನು ಯಾರಿದು .. ಚೇತನ್?” ಎಂದು ಯೋಚಿಸುತ್ತಿರುವಾಗ ಥಟ್ಟನೆ ಓಹೋನಾನು ಬಾಡಿಗೆಗಿದ್ದ ಹಳೆಯ ಮನೆಯ ಬಿಲ್ಡಿಂಗ್ ನಲ್ಲಿದ್ದ ಎರಡನೇ ಕ್ಲಾಸ್ ಹುಡುಗ ಎಂದು ನೆನಪಾದೊಡನೆ,
ಹಾಯ್ ಚೇತನ್ ಹೇಗಿದ್ದೀಯಾ? ಹರ್ಷಿತ,ಶರಣ್ಯ,ಶ್ವೇತ,ದರ್ಶನ್ ಎಲ್ಲರೂ ಹೇಗಿದ್ದಾರೆ ಎಂದೆ.

ಚೇತನ್“, ನಾನು ವಾಸವಿದ್ದ ಹಳೆಯ ಮನೆಯ ಬಿಲ್ಡಿಂಗ್ ನಲ್ಲಿದ್ದ ಮಕ್ಕಳ ಗ್ಯಾಂಗ್ ನ ಲೀಡರ್ ತುಂಟ ಮತ್ತು ಮುಗ್ಧ ಹುಡುಗ.

ಹೀಗೆ ಒಂದು ಶನಿವಾರ ಸಂಜೆ ,ಎಂಟು ಗಂಟೆಗೇ ಊಟ ಮುಗಿಸಿ ಮನೆಗೆ ಬಂದು ಫ್ರೆಶ್ ಆಗಿ,ಕಿವಿಗಳಿಗೆ ಇಯರ್ ಫೋನ್ ಸಿಕ್ಕಿಸಿ,ಹೊರಗಡೆ ಓಡಾಡೋಣವೆಂದು ಹಾಗೆ ಮನೆಯ ಮುಂದೆ ಬಂದು,ಆ ಕಡೆ ,ಈ ಕಡೆ ಓಡಾಡುತ್ತಿರುವಾಗ, ರಸ್ತೆಯ ಆ ಬದಿಯಿಂದ ಒಬ್ಬ ಹುಡುಗ ಜೋರಾಗಿ ಸೈಕಲ್ ಓಡಿಸುತ್ತಾ ಬಂದು ಧಡ್ ಎಂದು ನಮ್ಮ ಮನೆಯ ಬಳಿ ಬಂದು ಬಿದ್ದ.
ತಕ್ಷಣ ಓಡಿ ಹೋಗಿ ಅವನನ್ನು ಹಾಗೂ ಅವನ ಮೇಲೆ ಬಿದ್ದಿದ್ದ ಸೈಕಲ್ಲನ್ನು ಮೇಲಕ್ಕೆತ್ತಿ, ” ಏನಾದರೂ ಪೆಟ್ಟಾಯಿತೇಎಂದು ಕೇಳಿದರೆ, “ಏನೂ ಆಗಿಲ್ಲ ಅಣ್ಣಾ ಈ ಥರ ಬೇಕಾದಷ್ಟು ಸಲ ಬಿದ್ದಿದ್ದೇನೆ ಎಂದು ಮುಗ್ಧತೆಯಿಂದ ನಗುತ್ತಾ ಹೇಳಿದ.

ಹಾಗೇ ಮಾತನಾಡುತ್ತಾ ಅವನ ಹೆಸರು, ಸ್ಕೂಲು ಎಲ್ಲಾ ಕೇಳಿದ ಮೇಲೆ ನಿಮ್ಮ ಮನೆ ಎಲ್ಲಿ? “ಎಂದೆ.

ಅಯ್ಯೋ ಅಣ್ಣಾ .. ನಾವು ಈ ಬಿಲ್ಡಿಂಗ್ ನಲ್ಲೇ ಇರೋದು, ನೀವು ಯಾವತ್ತೂ ನನ್ನನ್ನು ನೋಡೇ ಇಲ್ವಾ?? ” ಎಂದು ಕೇಳಿದ.

ಇಲ್ಲಪ್ಪ, ನಾನು ಆಫೀಸಿನಿಂದ ಬರುವುದು ರಾತ್ರಿ ತುಂಬ ಹೊತ್ತಾಗುತ್ತೆ, ಹಾಗಾಗಿ ಯಾರನ್ನು ನೋಡಿಲ್ಲ ಎಂದೆ.

ನೀವು ಆಫೀಸ್ಗೆ ಹೋಗ್ತೀರಾ?? ಏನು ಕೆಲಸ ಮಾಡ್ತೀರಾ?” ಎಂದು ಮತ್ತೊಮ್ಮೆ ಪ್ರಶ್ನೆ ಕೇಳಿದ.

ನಾನು ಸಾಫ್ಟ್ವೇರ್ ಇಂಜಿನಿಯರ್ ಎಂದೆ.

ಹಾಗಂದ್ರೆ..? ಅದೇ ಮನೆ ಕಟ್ಟುಸ್ತಾರಲ್ಲ? ಅವರಾ?? “ಎಂದ ಕೇಳಿದ.

ನಾನು ಮುಗುಳ್ನಕ್ಕು ಅಲ್ಲಪ್ಪ, ನಿನಗೆ ಈಗ ಅದೆಲ್ಲ ಗೊತ್ತಾಗಲ್ಲ, ನೀನು ದೊಡ್ಡೋನಾದ ಮೇಲೆ ಗೊತ್ತಾಗುತ್ತೆ” , ಎಂದೆ.
ಹಾಗಾದ್ರೆ ನಾನೂ ದೊಡ್ಡೋನಾದ್ಮೇಲೆ ಅದೇ ಆಗ್ತಿನಿ ಎಂದ.

ನಾನು ಮತ್ತೊಮ್ಮೆ ಮುಗುಳ್ನಕ್ಕು ಸರಿ ಈಗ ತುಂಬ ಹೊತ್ತಾಗಿದೆ,ಮನೆಗೆ ಹೋಗಿ ಊಟ ಮಾಡಿ ಮಲಗು ಎಂದೆ.
ತಕ್ಷಣ ಅಣ್ಣ ನೀವು ನಿಮ್ಮ ಹೆಸರೇ ಹೇಳಲೇ ಇಲ್ವಲ್ಲಾ ಎಂದ. ನಾನು ಅಭಿಲಾಷ್ಎಂದೆ.

ಅದಕ್ಕೆ ಅವನು ನಾನು ನಿಮ್ಮನ್ನು ಅಭಿ ಅಣ್ಣ ಅಂತ ಕರಿತೀನಿ.. ಓಕೇ ನಾ? ” ಎಂದ. ನಾನು ಸರಿ ಎಂದೆ.
ಸೈಕಲ್ ನ್ನು ಕಾಂಪೌಂಡ್ ಒಳಗೆ ನಿಲ್ಲಿಸಿ ಮನೆಗೆ ಹೋದ.

ಹೀಗೆ ಪರಿಚಯವಾದ ಹುಡುಗ ಚೇತನ್ .

ಶನಿವಾರ, ಭಾನುವಾರ,ಅಥವಾ ನಾನೇನಾದರೂ ಆಫೀಸಿನಿಂದ ಬೇಗ ಮನೆಗೆ ಬಂದಿದ್ದರೆ ಮಾತನಾಡಲು ಸಿಗುತ್ತಿದ್ದ. ಆ ಮುಗ್ಧ ಮಾತಿಗೆ, ಅವನು ಕೇಳುತ್ತಿದ್ದ ತುಂಟ ಪ್ರಶ್ನೆಗಳಿಗೆ,ನನ್ನಲ್ಲಿ ಉತ್ತರವಿಲ್ಲದೇ ಹೋದರೂ,ಅವನ ಸಮಾಧಾನಕ್ಕೆ ಏನಾದರೊಂದನ್ನು ಹೇಳಿ ಸುಮ್ಮನಾಗುತ್ತಿದ್ದೆ.ಅವನು, ಅವನಷ್ಟೇ ಅಲ್ಲದೆ ನಮ್ಮ ಬಿಲ್ಡಿಂಗ್ ನ ಬೇರೆ ಬೇರೆ ಮಕ್ಕಳನ್ನು ಪರಿಚಯ ಮಾಡಿಸಿ ಇವರು ಅಭಿ ಅಣ್ಣ ಅಂತ .. ನಮ್ಮ ಫ್ರೆಂಡ್ಎಂದು ಎಲ್ಲರೂ ಹಾಗೆಯೇ ಕರೆಯಬೇಕು ಎಂದು ಹೇಳುತ್ತಿದ್ದ.ಹೀಗಾಗಿಯೇ ನನಗೆ ಹರ್ಷಿತಾ,ಶರಣ್ಯ ,ಶ್ವೇತ,ದರ್ಶನ್ ಎಲ್ಲರೂ ಪರಿಚಯ ಆಗಿಬಿಟ್ಟಿದ್ದರು. ಎಲ್ಲರೂ ಹೆಚ್ಚು ಕಡಿಮೆ ಅವನ ವಯಸ್ಸಿನವರೇ,ಆ ಬಿಲ್ಡಿಂಗ್ ನಲ್ಲಿ ಅಷ್ಟೊಂದು ಮಕ್ಕಳಿದ್ದಾರೆ ಎಂದು ಅಲ್ಲಿಯವರೆಗೆ ನನಗೆ ಗೊತ್ತೇ ಇರಲಿಲ್ಲ .

ಹೀಗೆ ಅವರೆಲ್ಲ ಪರಿಚಯವಾದ ಕೆಲವೇ ದಿನಗಳೊಳಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಹದಿನೈದು ದಿನ ಆಫೀಸಿಗೆ ರಜೆ ಹಾಕಿ ಊರಿಗೆ ಬಂದೆ,ನಂತರ ಡಾಕ್ಟರ್ ಒಂದು ತಿಂಗಳು ಹೊರಗಡೆ ಊಟ ಮಾಡಬೇಡಿ ಎಂದಿದ್ದರಿಂದ ನನ್ನ ಸಂಬಂಧಿಕರ ಮನೆಯಿಂದ ಆಫೀಸಿಗೆ ಹೋಗಿ ಬರುತ್ತಿದ್ದೆ.

ಶುಕ್ರವಾರ ಸಂಜೆ, … ಫೋನು ರಿಂಗಣಿಸಿತು….

ನೀವು ಮನೆಗೆ ಬಂದೇ ಇಲ್ವಲ್ಲಾ, ಓನರ್ ಹತ್ತಿರ ನಿಮ್ಮ ಫೋನ್ ನಂಬರ್ ತಗೊಂಡು, ಹೇಗಿದ್ದೀರಾ?ಅಂತ ಕೇಳಣಾ ಅಂತ ಫೋನ್ ಮಾಡಿದೆನೀವು ಮನೆಗೆ ಬರಲ್ವಾ ಅಣ್ಣ?? ”
ಎಂದಾಗ ನನಗೆ ಮಾತೇ ಹೊರಡದಂತಾಯಿತು…….

ಸಂಬಂಧಗಳಿಗೆ ಬೆಲೆಯೇ ಇಲ್ಲದ ಬಾಳ ಪಯಣದಲ್ಲಿ ಎಲ್ಲೆಲ್ಲಿಯ ಮೈತ್ರಿಯ ನಂಟೋ ?ಯಾರ್ಯಾರಲ್ಲಿ ಪ್ರೀತಿಯ ಋಣದ ಗಂಟೋ …?

  –ಫಣೀಶ್ ದುದ್ದ

Comments