UK Suddi
The news is by your side.

ಮೋದಿ ಬ್ಲ್ಯಾಕ್‌ಮನಿ ಸರ್ಜಿಕಲ್‌ ಸ್ಟ್ರೆಕ್‌ ಹೇಗೆ ನಡೆಯಿತು ಗೊತ್ತಾ ?

modi-jaitley-700

ಹೊಸದಿಲ್ಲಿ : ದೇಶದಲ್ಲಿ  ಹಿಮಾಲಯದ ಪ್ರಮಾಣದಲ್ಲಿ  ಬೆಳೆದಿರುವ ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ಮಟ್ಟಹಾಕದೆ ಬಡತನ ನಿರ್ಮೂಲನೆ ಅಸಾಧ್ಯ ಎಂಬ ಖಚಿತ ಅರಿವಿನೊಂದಿಗೆ ನಿನ್ನೆ ಮಂಗಳವಾರ ಮಧ್ಯ ರಾತ್ರಿಯಿಂದಲೇ 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ಚಲಾವಣೆಯಿಂದ ರದ್ದು ಪಡಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದೊಳಗೆ ಕೈಗೊಂಡ “ಆರ್ಥಿಕ ಸರ್ಜಿಕಲ್‌ ಸ್ಟ್ರೈಕ್‌’ ಕಾರ್ಯಾಚರಣೆ ಯಶಸ್ವಿಯಾಗಿ ನಡೆದದ್ದು ಹೇಗೆ ಎಂಬ ಕುತೂಹಲ ದೇಶಾದ್ಯಂತದ ಜನಸಾಮಾನ್ಯರಲ್ಲಿ ಇರುವುದು ಸಹಜವೇ ಆಗಿದೆ.

ದೇಶದ ಹಣಕಾಸು ರಂಗದಲ್ಲಿ ನಡೆದಿರುವ ಈ ಅಭೂತಪೂರ್ವ ಕ್ರಾಂತಿಕಾರಕ ಕಾರ್ಯಾಚರಣೆ ಸದ್ದು-ಸುದ್ದಿ ಇಲ್ಲದೆ ದಿಢೀರನೆ ನಡೆದಿರುವುದು ನಿಜವೇ ಆದರೂ ಈ ಕಾರ್ಯಾಚರಣೆ ಹಂತ ಹಂತವಾಗಿ ತೆರೆದುಕೊಂಡ ರೀತಿಯನ್ನು ಈ ಕೆಳಗಿನಂತೆ ಗುರುತಿಸಬಹುದಾಗಿದೆ:

1. ಕಳೆದ ಗುರುವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು ಎಲ್ಲ ರಾಜ್ಯಗಳ ಆರ್‌ ಬಿ ಐ ನಿರ್ದೇಶಕರ ರಹಸ್ಯ ಸಭೆಯನ್ನು ನಡೆಸುತ್ತಾರೆ. ಈ ಸಭೆಯಲ್ಲಿ ಜೇತ್ಲಿ ಅವರು ಆರ್‌ ಬಿ ಐ ನಿರ್ದೇಶಕರ ಮುಂದೆ ಒಂದು ಪ್ರಸ್ತುತಿಯನ್ನು ಮಂಡಿಸುತ್ತಾರೆ. 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ಚಲಾವಣೆಯಿಂದ ರದ್ದು ಪಡಿಸುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಜೇತ್ಲಿ ಕೇಳುತ್ತಾರೆ.

2. ಆರ್‌ ಬಿ ಐ ಪ್ರತಿನಿಧಿಗಳು ಜೇತ್ಲಿ ಪ್ರಸ್ತಾವವನ್ನು  ಸಾರಾಸಗಟು ವಿರೋಧಿಸುತ್ತಾರೆ. ಜನಸಾಮಾನ್ಯರಿಗೆ ಇದರಿಂದ ತುಂಬಾ ತೊಂದರೆ, ಕಷ್ಟ-ನಷ್ಟ ಉಂಟಾಗುವುದೆಂಬ ಭೀತಿಯನ್ನು ವ್ಯಕ್ತಪಡಿಸುತ್ತಾರೆ. ಜೇತ್ಲಿ ಅವರು ಈ ರಹಸ್ಯ ಸಭೆಯಲ್ಲಿ ಮಂಡಿಸಿ ಚರ್ಚಿಸಲಾಗಿರುವ ನೋಟು ರದ್ದತಿಯ ವಿಷಯವನ್ನು ಕಟ್ಟುನಿಟ್ಟಿನಿಂದ ಗೌಪ್ಯವಾಗಿ ಇರಿಸುವಂತೆ ಸೂಚಿಸುತ್ತಾರೆ.

3. ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಅರುಣ್‌ ಜೇತ್ಲಿಯನ್ನು ಕಾಣುತ್ತಾರೆ. ಗುರವಾರದ ರಹಸ್ಯ ಸಭೆಯಲ್ಲಿ ಚರ್ಚಿಸಲಾದ ವಿಷಯದ ಬೆನ್ನು ಹತ್ತುವಂತೆ ಕೇಳಿಕೊಳ್ಳುತ್ತಾರೆ. 500 ರೂ. ಮತ್ತು 1,000 ರೂ. ನೋಟುಗಳನ್ನು ರದ್ದು ಮಾಡುವುದರಿಂದ ಉಂಟಾಗುವ ಸಾಧಕ – ಬಾಧಕಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅಂದೇ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾರೆ.

4. ಅದಾಗಿ ಆರ್‌ ಬಿ ಐ ಅಧಿಕಾರಿಗಳಿಗೆ ಹಣಕಾಸು ಸಚಿವಾಲಯದಿಂದ ಈ ದಿಟ್ಟ ಕ್ರಾಂತಿಕಾರಕ ಪ್ರಸ್ತಾವಿತ ನಿರ್ಧಾರದ ಬಗ್ಗೆ ಒಂದು ಇ-ಮೇಲ್‌ ಬರುತ್ತದೆ. ನಾಳೆಯ ದಿನ ಎಟಿಎಂ ಮೆಷೀನ್‌ಗಳಿಗೆ 100 ರೂ.ಗಳ ನೋಟುಗಳನ್ನು ತುಂಬಬೇಡಿ; ಕೇವಲ 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ಮಾತ್ರವೇ ತುಂಬಿ ಎಂಬ ಸೂಚನೆಯನ್ನು ಆ ಇ-ಮೇಲ್‌ ನೀಡುತ್ತದೆ.

5. ಮಂಗಳವಾರ ಬೆಳಗ್ಗೆ ಆರ್‌ ಬಿ ಐ ಪ್ರಾದೇಶಿಕ ಕಚೇರಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಒಂದು ಫ್ಯಾಕ್ಸ್‌ ಸಂದೇಶ ಬರುತ್ತದೆ : ಮರುದಿನದಿಂದ (ಬುಧವಾರದಿಂದ) ಬ್ಯಾಂಕುಗಳು 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ಸ್ವೀಕರಿಸಬಾರದು ಎಂದು ಆ ಫ್ಯಾಕ್ಸ್‌ ಸಂದೇಶ ಕಟ್ಟಪ್ಪಣೆ ಮಾಡುತ್ತದೆ.

6. ಮಂಗಳವಾರ ಸಂಜೆ ಆರ್‌ ಬಿ ಐ ಕಚೇರಿಗಳಿಗೆ ಒಂದು ಫ್ಯಾಕ್ಸ್‌ ಬರುತ್ತದೆ. ಮಂಗಳವಾರ ಮಧ್ಯರಾತ್ರಿಯಿಂದಲೇ 500 ರೂ. ಮತ್ತು 1,000 ರೂ. ನೋಟುಗಳನ್ನು ಲೀಗಲ್‌ ಟೆಂಡರ್‌ ಆಗಿ (ಕಾನೂನು ಬದ್ಧ ಹಣವಾಗಿ) ಸ್ವೀಕರಿಸಲಾಗದು ಎಂಬ ಸಂದೇಶ ಆ ಫ್ಯಾಕ್ಸ್‌ನಲ್ಲಿರುತ್ತದೆ.

7. ಆರ್‌ ಬಿ ಐ ಗವರ್ನರ್‌ ಅವರು ಒಡನೆಯೇ ಈ ಇ-ಮೇಲನ್ನು ಎಲ್ಲ ಸಂಬಂಧಿತ ಬ್ಯಾಂಕುಗಳಿಗೆ ಮತ್ತು ಇಲಾಖೆಗಳಿಗೆ ಕಳುಹಿಸುತ್ತಾರೆ.

8. ಬುಧವಾರ ಸಂಜೆಯೇ ಸರಕಾರದಿಂದ ಆರ್‌ ಬಿ ಐ ಕಾರ್ಯಾಲಯಕ್ಕೆ ಒಂದು ಎಚ್ಚರಿಕೆಯ ರೂಪದ ಸಂದೇಶ ಬರುತ್ತದೆ. ದೇಶಾದ್ಯಂತದ ಬ್ಯಾಂಕ್‌ ಶಾಖೆಗಳಲ್ಲಿ 500 ರೂ. ಮತ್ತು 1,000 ರೂ.ಗಳ ನೋಟುಗಳು 10 ಪಟ್ಟು ಹೆಚ್ಚು ಪ್ರಮಾಣದಲ್ಲಿ ಜಮೆಯಾಗುವ ಸಂಭವವಿದೆ. ಆದುದರಿಂದ ಎಲ್ಲ ಬ್ಯಾಂಕ್‌ ಶಾಖೆಗಳಲ್ಲಿ ಭದ್ರತೆಯನ್ನು ಹೆಚ್ಚಿಸತಕ್ಕದ್ದು ಎಂದು ಆ ಸಂದೇಶ ಸ್ಪಷ್ಟಪಡಿಸುತ್ತದೆ.

Read more at http://www.udayavani.com/kannada/news/business-news/177882/modi-black-money-surgical-strike#l41YdrXZI8dzc3Aa.99

Comments