UK Suddi
The news is by your side.

ಹಣ ಇಟ್ಟುಕೊಂಡರೆ ಸಂಚಕಾರ, ಕೊಡದಿದ್ದರೆ ಗ್ರಹಚಾರ, ಇದೇ ಮೋದಿಯ ಚಮತ್ಕಾರ!

wp-1478623896137.jpg

ಐನೂರು, ಸಾವಿರ ನೋಟನ್ನು ರದ್ದುಪಡಿಸಿರುವುದರಿಂದ ಬಹಳ ದೊಡ್ಡ ಪೆಟ್ಟು ಬಿದ್ದಿರುವುದು ಖೋಟಾ ನೋಟು ವ್ಯಾಪಾರಿಗಳಿಗೆ. ಇತ್ತೀಚಿನ ದಿನಗಳಲ್ಲಿ ಈ ದಂಧೆಯೂ ಒಂದು ಪ್ರತ್ಯೇಕ ಆರ್ಥಿಕತೆಯ ರೂಪದಲ್ಲಿ ಬೆಳೆದಿತ್ತು. ರಿಸರ್ವ್ ಬ್ಯಾಂಕ್‌ಗೆ ಇದೊಂದು ಕಗ್ಗಂಟಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ಹಾಕಿದ ಬಾಂಬ್‌ಗೆ ಇಡೀ ರಾಷ್ಟ್ರವೇ ಕಂಗಾಲಾಗಿ ಹೋಗಿದೆ. ಅದರಲ್ಲೂ ವಿಶೇಷವಾಗಿ ಕಾಳಸಂತೆಕೋರರ ಜಂಘಾಬಲವೇ ಉಡುಗಿ ಹೋಗಿದೆ. ಕಳೆದ ಎರಡು ರಾತ್ರಿಗಳಿಂದ ಅವರ್ಯಾಾರೂ ನಿದ್ರಿಸಿರಲಾರರು. ಮುಂಬರುವ ದಿನಗಳು ಸಹ ಅವರಿಗೆ ದುಃಸ್ವಪ್ನವಾಗಿಯೇ ಕಾಡಲಿವೆ. ಇಂಥದ್ದೊಂದು ‘ಹಣಬಾಂಬ್’ (ಅಣುಬಾಂಬ್‌ಗಿಂತ ಇದು ಭೀಕರ) ಬೀಳಬಹುದೆಂದು ಯಾರೂ ಊಹಿಸಿರಲಿಲ್ಲ. ಇದರಿಂದ ಚೇತರಿಸಿಕೊಳ್ಳಲು ಇಡೀ ದೇಶಕ್ಕೆ ಸ್ವಲ್ಪ ಕಾಲವೇ ಹಿಡಿಯಬಹುದು. ಕಾರಣ ಇದರ ತೀವ್ರತೆಯ ಪರಿಣಾಮ ವೇನೆಂಬುದು ಯಾರ ಊಹೆ, ಹಿಡಿತಕ್ಕೆ ಸಿಗುತ್ತಿಲ್ಲ.

ಹತ್ತಾರು, ನೂರಾರು ಕೋಟಿ ರುಪಾಯಿಗಳ ಕಂತೆಯನ್ನು ದಾಸ್ತಾನು ಮಾಡಿಟ್ಟುಕೊಂಡವರಿಗೆ ಎದೆ ಒಡೆದು ಹೋಗದಿದ್ದರೆ ಸಾಕು. ಹೃದಯಾಘಾತವಾಗಿ ಆಸ್ಪತ್ರೆ ಸೇರಿಕೊಂಡವರಿಗೆ ಕನಿಷ್ಠ ಉಪಯೋಗಕ್ಕೆ ಬರಲೆಂದು ಐನೂರು, ಸಾವಿರ ರುಪಾಯಿ ನೋಟು ಬಳಸಲು ಅಲ್ಲಿ ಅನುಮತಿ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ವಿಷ ಖರೀದಿಸ ಹೋದರೂ ಐನೂರು ರುಪಾಯಿ ನೋಟಿಗೆ ಕಿಮ್ಮತ್ತಿಲ್ಲ. ಕೂಡಿಟ್ಟ ಹಣ ರಾತ್ರಿ ಬೆಳಗಾಗುವುದರೊಳಗೆ ರದ್ದಿ ಕಾಗದಕ್ಕಿಂತ ನಿಷ್ಪ್ರಯೋಜಕವಾಗಿದೆ. ಕೋಟಿಗಟ್ಟಲೆ ಕೂಡಿಟ್ಟವರು ಹಣ ಚಲಾವಣೆ ಮಾಡುವಂತಿಲ್ಲ, ಬ್ಯಾಂಕಿಗೆ ಕಟ್ಟುವಂತಿಲ್ಲ. ತಮ್ಮಲ್ಲಿಯೇ ಇಟ್ಟುಕೊಂಡರೆ ಸಂಚಕಾರ. ಯಾರಿಗೂ ಹೇಳದೇ ಸುಮ್ಮನೆ ಬೆಂಕಿಯಿಟ್ಟು ಭಸ್ಮ ಮಾಡಿ ಎಲ್ಲ ಮರೆತು ಗುಂಡುಕಲ್ಲಿನಂತೆ ತಟಸ್ಥನಾಗಿ ಕುಳಿತುಕೊಳ್ಳುವುದೊಂದೇ ದಾರಿ.

ಮೋದಿಗೆ ‘ಭೇಷ್’ ಎನ್ನಲೇಬೇಕು. ರಜನಿ ಜೋಕುಗಳಲ್ಲಿ ಯಾರಿಗೂ Hats Off ಎನ್ನದ ರಜನಿ, ನಿಜ ಜೀವನದಲ್ಲಿ ಮೋದಿಗೆ ‘ಹ್ಯಾಟ್ಸಾಫ್’ ಎಂದ ಮೇಲೆ ಮುಗೀತು. ಭ್ರಷ್ಟಾಚಾರ ಬೇರು ಸಹಿತ ಕಿತ್ತೆಸೆಯುತ್ತೇವೆ, ಲಗಾಮು ಹಾಕುತ್ತೇವೆ ಎಂದು ಹೇಳಿದವರು ಒಬ್ಬರಾ, ಇಬ್ಬರಾ? ಎಲ್ಲರೂ ಹಾಗೆ ಹೇಳುತ್ತಲೇ ಭ್ರಷ್ಟಾಚಾರದ ಅಡಿಪಾಯವನ್ನು ಭದ್ರ ಪಡಿಸಲು ತಮ್ಮ ಕೊಡುಗೆಯನ್ನು ಕೊಟ್ಟರೇ ಹೊರತು, ಯಾರೂ ಸಹ ಆ ದಿಸೆಯಲ್ಲಿ ದಮಡಿ ಪ್ರಯೋಜನಕ್ಕೆ ಬರಲಿಲ್ಲ. ಎಲ್ಲ ಸರಕಾರಗಳೂ ಭ್ರಷ್ಟಾಚಾರ ಕೂಪದಲ್ಲಿ ಮಿಂದೆದ್ದು ಹೋದವು. ಭ್ರಷ್ಟಾಚಾರ ನಿರ್ಮೂಲನೆ ಎಂಬುದು ದೊಡ್ಡ ಜೋಕ್ ಆಗಿತ್ತು. ಚುನಾವಣಾ ಸಂದರ್ಭದಲ್ಲಿ ಮೋದಿಯವರು ಕೂಡ ಇದೇ ರಾಗ ಹಾಡಿದಾಗ, ದೇಶದ ಜನತೆ ಮತ್ತೆ ಕತ್ತೆತ್ತಿ ಕುತೂಹಲದಿಂದ ನೋಡಿದರು. ‘ನಾನೂ ತಿನ್ನುವುದಿಲ್ಲ. ಬೇರೆಯವರಿಗೆ ತಿನ್ನಲೂ ಬಿಡುವುದಿಲ್ಲ’ ಎಂದು ಹೇಳಿದ ಅವರು, ತಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ‘ಮೆಕ್ಕಾ’ ಎಂದು ಕರೆಯಿಸಿಕೊಳ್ಳುವ ಸ್ವಿಸ್ ಬ್ಯಾಂಕಿನಲ್ಲಿಟ್ಟ ಕಪ್ಪು ಹಣವನ್ನು ವಾಪಸ್ ತರುವುದಾಗಿ ಶಪಥಗೈದರು.

ಮೋದಿಯವರು ಅಧಿಕಾರಕ್ಕೆ ಬಂದು ಎರಡು ವರ್ಷಗಳು ಸಂದರೂ ಬೇರೆ ಬೇರೆ ಕಾರಣಗಳಿಂದ ಕಪ್ಪು ಹಣ ತರಲು ಸಾಧ್ಯವಾಗಲೇ ಇಲ್ಲ. ಆಗ ಎಲ್ಲರೂ ಮೋದಿಯವರ ಬಗ್ಗೆ ಲಘುವಾಗಿ ಮಾತಾಡಿದರು. ಅಲ್ಲಿಗೆ ಭ್ರಷ್ಟಾಚಾರ ನಿರ್ಮೂಲನೆಯ ಮತ್ತೊಂದು ಅಧ್ಯಾಯವೂ ಮಗ್ಗುಲು ಬದಲಾಯಿಸಿತು ಎಂದೇ ಅಂದುಕೊಂಡರು. ಆದರೆ ಮೋದಿಯವರ ಮೊನ್ನೆಯ ನಿರ್ಧಾರ ನೋಡಿದರೆ, ಅವರು ಅಧಿಕಾರಕ್ಕೆ ಬಂದಂದಿನಿಂದ ಬಹಳ ಚಾಣಾಕ್ಷತೆಯಿಂದ, ಯಾರಿಗೂ ಗೊತ್ತಾಗದಂತೆ, ಒಳಗಿಂದೊಳಗೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಮೊನ್ನೆ ಸ್ವಾಾತಂತ್ರ್ಯೋತ್ಸವದ ಭಾಷಣದಲ್ಲೂ ‘ಭ್ರಷ್ಟಾಚಾರವನ್ನು ನಾವು ಜೀವನದ ಅವಿಭಾಜ್ಯ ಅಂಗವೆಂದು ಭಾವಿಸಿದ್ದೇವೆ. ಈ ಭಾವನೆಯೇ ರೋಗಗ್ರಸ್ತವಾದುದು. ಇದು ಇಡೀ ರಾಷ್ಟ್ರಕ್ಕೆ ಅಂಟಿದ ಅರ್ಬುದ ರೋಗ. ಇಂದು ಭ್ರಷ್ಟಾಾಚಾರ ತಟ್ಟದ ಯಾವ ಸಂಸ್ಥೆಗಳಿಲ್ಲ. ಇದನ್ನು ನಿಗ್ರಹಿಸಲೇಬೇಕು. ನನ್ನ ಮೇಲೆ ಭರವಸೆಯಿಡಿ. ನಾನು ಇವೆಲ್ಲಕ್ಕೂ ಒಂದು ತಿಲಾಂಜಲಿ ಇಡುವೆ’ ಎಂದು ಹೇಳಿದಾಗ ಇದು ಮತ್ತೊಂದು ತುತ್ತೂರಿ ಎಂದುಕೊಂಡವರು ಕಡಿಮೆಯೇನಲ್ಲ. ಆದರೆ ಮೋದಿ ಕೆಲಸ ಮಾಡುತ್ತಲೇ ಇದ್ದರು. ಟೀಕಾಕಾರರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಒಳಗಿಂದೊಳಗೆ ಬಿಲ ಕೊರೆಯುತ್ತಿದ್ದರು. ಆದರೆ ಯಾರಿಗೂ ಅದರ ಕುಬಿ ಅರ್ಥವಾಗಲಿಲ್ಲ. ದೇಶದ ಪ್ರತಿಯೊಬ್ಬರೂ ಬ್ಯಾಂಕ್ ಅಕೌಂಟ್ ತೆರೆಯಲು ಅನುವಾಗಲೆಂದು ‘ಜನ್‌ಧನ್’ ಯೋಜನೆಯನ್ನು ಜಾರಿಗೆ ತಂದರು. ಆಗ ಎಲ್ಲರೂ ಇದ್ಯಾಕೆ ಎಂದು ಪ್ರಶ್ನಿಸಿದರು. ಹಣವೇ ಇಲ್ಲದವರಿಂದ ಬ್ಯಾಂಕ್ ಅಕೌಂಟ್ ತೆಗೆಯಿಸಿ ಅಂತಿದಾರೆ ಎಂದು ಲೇವಡಿ ಮಾಡಿದರು.

ಪ್ರತಿಯೊಬ್ಬರಿಗೂ ಜೀವವಿಮೆ ಲಾಗೂ ಆಗುವ ಯೋಜನೆ ತಂದರು. ಆಗಲೂ ಜನ ಆಡಿಕೊಂಡರು. ಏಕರೂಪ ತೆರಿಗೆ ರೂಪಿಸುವ ನಿಟ್ಟಿನಲ್ಲಿ ಜಿಎಸ್ ಟಿಯನ್ನು ಅನುಷ್ಠಾನಗೊಳಿಸಿದರು. ಸಂಸತ್ತಿನಲ್ಲಿ ಈ ಬಗ್ಗೆ ದೊಡ್ಡ ಕೋಲಾಹಲವೇ ಆಯಿತು. ನಿಮ್ಮಲ್ಲಿರುವ ಕಪ್ಪು ಹಣವನ್ನು ಘೋಷಿಸಿ ಎಂದರು. ಸ್ವಯಂ ಆದಾಯ ಘೋಷಣೆ ಯೋಜನೆಯನ್ನು ಜಾರಿಗೆ ತಂದರು. ಯಾರು ಬೇಕಾದರೂ ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿಯನ್ನಾಗಿ ಮಾಡಿಕೊಳ್ಳಬಹುದಿತ್ತು. ಆಗಲೂ ಜನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗ ಮೋದಿಯವರು ಒಂದೇ  ಹೊಡೆತಕ್ಕೆ ಸಾವಿರಾರು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಇಷ್ಟು ದಿನ ರಾಜಕಾರಣಿಗಳು ಬಡವರ ನಿದ್ದೆ ಕೆಡಿಸುತ್ತಿದ್ದರು. ಈಗ ದೇಶದಲ್ಲಿ ಮೊದಲ ಬಾರಿಗೆ ರಾಜಕಾರಣಿಯೊಬ್ಬ ಶ್ರೀಮಂತರಿಗೆ ದುಃಸ್ವಪ್ನರಾಗಿದ್ದಾರೆ. ಇದು ಕೇವಲ ಒಂದೆರಡು ದಿನ, ವಾರಗಳ ಕಾಲ ರೂಪಿಸಿದ ಯೋಜನೆಯಲ್ಲ. ಕನಿಷ್ಠ ಒಂದು, ಒಂದೂವರೆ ವರ್ಷದ ಸತತ ಪರಿಶ್ರಮದ ಫಲ. ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬ್ಯಾಂಕ್ ರಜೆ ಜತೆಗೆ Cash transaction ಇಲ್ಲದೇ ಕಳೆಯಬೇಕಾಗಿ ಬಂದಿದ್ದು ಅಭೂತಪೂರ್ವ.

ವ್ಯವಹರಿಸಲು ನೋಟುಗಳೇ ಇಲ್ಲ. ದುಡ್ಡಿದ್ದೂ ಏನೂ ಇಲ್ಲದವನ ಪಾಡು. ದೇಶಕ್ಕೆ ದೇಶವೇ ಒಂದು ಕ್ಷಣ ಕಂಗಾಲಾದ ಹಾಗೆ. ಕಳೆದ ನೂರು ವರ್ಷಗಳಲ್ಲಿ ಆರ್ಥಿಕತೆ ಆ ರೀತಿ ಬೆಳೆದಿರಲಿಲ್ಲ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಈ ದೇಶ ಭಾರಿ ಬದಲಾವಣೆಯನ್ನು ಕಂಡಿತು. ಈ ದೇಶದ ಹೇರಳ ಪ್ರಮಾಣದ ಕಪ್ಪು ಹಣ ವಿದೇಶಗಳಿಗೆ ಹೋಗಿ, ನಂತರ ಇಲ್ಲಿಗೆ ಬಂದು ಬಿಳಿಯಾಯಿತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇದರ ಪ್ರಮಾಣ ಅಂದಾಜಿಗೂ ನಿಲುಕುವಂಥದ್ದಲ್ಲ. ಆ ಪ್ರಮಾಣದ ಅಭಿವೃದ್ಧಿ, ಸ್ಥಿತ್ಯಂತರಗಳು ಅಷ್ಟು ಕಡಿಮೆ ಅವಧಿಯಲ್ಲಿ ಆಗಿದ್ದು ಒಂದು ಪವಾಡವೇ. ಆದರೆ ಅಸಲಿಗೆ ಇದು ಕಪ್ಪು ಹಣದ ಆರ್ಥಿಕತೆ. ಇದು ಎಷ್ಟು ಬಲಶಾಲಿಯಾಗಿತ್ತೆಂದರೆ, ನಿಜವಾದ ಆರ್ಥಿಕತೆ ಕುಸಿದರೂ ಇದಕ್ಕೆ ಏನೂ ಆಗುತ್ತಿರಲಿಲ್ಲ.

ಇದೊಂಥರ ಪರ್ಯಾಯ ಆರ್ಥಿಕತೆಯಾಗಿ ಬಲಾಢ್ಯವಾಗಿ ಬೆಳೆದಿತ್ತು. ಜಗತ್ತಿನ ಪ್ರಮುಖ ದೇಶದಲ್ಲಿ ಆರ್ಥಿಕ ಹಿನ್ನಡೆಯಾದಾಗ, ಸ್ವಾಭಾವಿಕವಾಗಿ ಅದರ ಪರಿಣಾಮ ಎಲ್ಲ ದೇಶಗಳ ಮೇಲಾದರೂ, ಭಾರತದ ಮೇಲೆ ಮಾತ್ರ ಏನೂ ಆಗದಿರುವುದಕ್ಕೆ ಇದೇ ಕಾರಣ. ಕಪ್ಪುಹಣದ ರುಬಾಬು ಸಮಾಜದ ನೈತಿಕತೆಯನ್ನು ಅಲುಗಾಡಿಸುವಷ್ಟು ಭೀಕರವಾಗಿ ಬೆಳೆದಿದ್ದು ಮಾತ್ರ ವಿಪರ್ಯಾಸ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ ಅವರು ಚಳವಳಿ ಆರಂಭಿಸಲು ಜನಲೋಕಪಾಲ ಮಸೂದೆಗೆ ಆಗ್ರಹ ಪಡಿಸಿದ್ದು ಕಪ್ಪು ಹಣದ ಉತ್ತುಂಗಕ್ಕೆ ಹಾಕಿದ ಮೊದಲ ಬ್ರೇಕ್. ಅಲ್ಲಿಯ ತನಕ ಹಾಗೂ ಅನಂತರ ಎಲ್ಲರೂ ಕಪ್ಪುಹಣದ ತಡೆಗೆ ಮಾತಾಡಿದವರೇ. ಆದರೆ ಯಾರೂ ಈ ನಿಟ್ಟಿನಲ್ಲಿ ಪರಿಣಾಮಕಾರಿ ಮತ್ತು ಯೋಜಿತ ಕ್ರಮ ಕೈಗೊಂಡಿದ್ದು ಇಲ್ಲವೇ ಇಲ್ಲ. ಕಾರಣ ಮಾತಾಡಿದಷ್ಟು, ನಡೆದುಕೊಳ್ಳುವುದು ಅಷ್ಟು ಸುಲಭ ಆಗಿರಲಿಲ್ಲ. ಯಾವುದೇ ನಾಯಕ ಬಯಸಿದರೂ, ಅವನು ಪ್ರತಿನಿಧಿ ಸುವ ಪಕ್ಷಗಳೇ ಇದಕ್ಕೆ ಅನುಮತಿ ಕೊಡುತ್ತಿರಲಿಲ್ಲ. ಯಾಕೆಂದರೆ ಎಲ್ಲರೂ ಕಪ್ಪುಹಣದ ಮೂಟೆ ಮೇಲೆ ಕುಳಿತಿರುವವರೇ. ಆದರೆ ಮೋದಿಯವರು ಯಾರಿಗೂ ಸುಳಿವು ಬಿಟ್ಟು ಕೊಡದೇ, ತಮ್ಮ ಸಂಪುಟದ ಸಹೋದ್ಯೋಗಿಗಳಿಗೂ ಸೂಚನೆ ಕೊಡದೇ ಈ ಕ್ರಮ ಕೈಗೊಂಡಿರುವುದು ಸಣ್ಣ ಮಾತಲ್ಲ. ಇದಕ್ಕೆ ಭಾರೀ ಛಾತಿ ಬೇಕು!

ಇಂದಿನ ಸ್ಥಿತಿಯಲ್ಲಿ ಇದನ್ನು ಮೋದಿಯವರಿಂದ ಮಾತ್ರ ನಿರೀಕ್ಷಿಸಬಹುದು. ಐನೂರು, ಸಾವಿರ ನೋಟನ್ನು ರದ್ದುಪಡಿಸಿರುವುದರಿಂದ ಬಹಳ ದೊಡ್ಡ ಪೆಟ್ಟು ಬಿದ್ದಿರುವುದು ಖೋಟಾ ನೋಟು ವ್ಯಾಪಾರಿಗಳಿಗೆ. ಇತ್ತೀಚಿನ ದಿನಗಳಲ್ಲಿ ಈ ದಂಧೆಯೂ ಒಂದು ಪ್ರತ್ಯೇಕ ಆರ್ಥಿಕತೆಯ ರೂಪದಲ್ಲಿ ಬೆಳೆದಿತ್ತು. ರಿಸರ್ವ್ ಬ್ಯಾಂಕ್‌ಗೆ ಇದೊಂದು ಕಗ್ಗಂಟಾಗಿತ್ತು. ಐನೂರು ಸಾವಿರ ರುಪಾಯಿಯ ಒಂದು ಕಟ್ಟಿನಲ್ಲಿ ಕನಿಷ್ಠ ಐದಾರು ಖೋಟಾ ನೋಟುಗಳು ನುಸುಳಿ ಬರುತ್ತಿದ್ದವು. ಪಾಕಿಸ್ತಾನದಿಂದ ಭಾರತಕ್ಕೆ ಭಾರೀ ಪ್ರಮಾಣದಲ್ಲಿ ಈ ನೋಟುಗಳು ಹರಿದು ಬರುತ್ತಿದ್ದವು. ಇದೂ ಭಯೋತ್ಪಾದಕ ಚಟುವಟಿಕೆ ಹಾಗೂ ಡ್ರಗ್ ಮಾಫಿಯಾದ ಒಂದು ಭಾಗವೇ ಆಗಿತ್ತು. ಅಲ್ಲದೇ, ದೇಶದ ಕಪ್ಪು ಹಣ ಹವಾಲಾ ಮಾರುಕಟ್ಟೆ ಮೂಲಕ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕರಿಗೆ ಸಂದಾಯವಾಗುತ್ತಿತ್ತು. ಈಗ ಆ ಎಲ್ಲ ನೋಟುಗಳನ್ನು ರದ್ದುಪಡಿಸಿರುವುದರಿಂದ ಉಗ್ರರ ಚಟುವಟಿಕೆಗಳಿಗೂ ಕಡಿವಾಣ ಹಾಕಿದಂತಾಗಿದೆ.

ಈ ವರ್ಷದ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ 17.77 ಲಕ್ಷ ಕೋಟಿ ಚಲಾವಣೆಯಲ್ಲಿದ್ದು ಆ ಪೈಕಿ ಶೇ. 86ರಷ್ಟು ಅಂದರೆ ಸುಮಾರು 15 ಲಕ್ಷ ಕೋಟಿ ಐನೂರು ಹಾಗೂ ಸಾವಿರ ರುಪಾಯಿ ಕರೆನ್ಸಿಗಳಾಗಿದ್ದವು. ಇವುಗಳಲ್ಲಿ ಶೇ.18ರಿಂದ 23ರಷ್ಟು ಖೋಟಾ ನೋಟುಗಳೇ ಆದರೆ, ಈ ‘ಖೊಟ್ಟಿ’ ಆರ್ಥಿಕತೆಯ ಪೆಡಂಭೂತದ ಅಗಾಧತೆಯನ್ನು ಅರಿಯಬಹದು. ದೇಶದ ಆರ್ಥಿಕತೆ ಬಯಸುವ ಶಿಸ್ತು ಇದರಿಂದಾಗಿ ಹೊರಟುಹೋಗಿತ್ತು. ಯಾವ ಆರ್ಥಿಕ ಸುಧಾರಣಾ ಕ್ರಮಗಳೂ ನಿರೀಕ್ಷಿತ ಫಲ ನೀಡುತ್ತಿರಲಿಲ್ಲ. ಕ್ಯಾನ್ಸರ್ ರೋಗಕ್ಕೆ ಬ್ಯಾಂಡೇಜ್ ಹಾಕಿಕೊಂಡಂತಾಗಿತ್ತು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರ 1.25ಲಕ್ಷ ಕೋಟಿ ರುಪಾಯಿ ಮೌಲ್ಯದ ಕಪ್ಪು ಹಣವನ್ನು ಪತ್ತೆ ಹಚ್ಚಿದೆ. ಆದರೆ ಇದು ಏನೇನೂ ಅಲ್ಲ. ಮೊನ್ನೆ ಮುಕ್ತಾಯಗೊಂಡ ಸ್ವಯಂ ಆಸ್ತಿ ಘೋಷಣಾ ಯೋಜನೆಯಲ್ಲಿ ಸಂಗ್ರಹವಾಗಿದ್ದು ಬರೀ 65 ಸಾವಿರ ಕೋಟಿ ರುಪಾಯಿ ಮಾತ್ರ. ಈ ಪೈಕಿ ಆಂಧ್ರ ಮೂಲದ ರಾಜಕಾರಣಿಯೊಬ್ಬರೇ ಹತ್ತು ಸಾವಿರ ಕೋಟಿ ರುಪಾಯಿ ಆಸ್ತಿ ಘೋಷಿಸಿಕೊಂಡರೆಂದರೆ, ಸ್ವಯಂ ಆಸ್ತಿ ಘೋಷಣೆ ಯೋಜನೆಯಲ್ಲಿ ಸಂಗ್ರಹವಾಗಿದ್ದು ಅತಿ ಕಡಿಮೆಯೇ. ಸರಕಾರ ಎಂಥ ಯೋಜನೆಯನ್ನೇ ಜಾರಿಗೆ ತರಲಿ ಅದರಿಂದ ಕಪ್ಪು ಹಣ ಹೊರ ತೆಗೆಯವುದು ಅಷ್ಟು ಸುಲಭವಲ್ಲ ಎಂದು ಸರಕಾರಕ್ಕೂ ಮನವರಿಕೆಯಾಗಿಯೇ ಇಂಥ ಕಠಿಣ ಕ್ರಮಕ್ಕೆ ಮುಂದಾಗಿರಲೂಬಹುದು. ಕಾರಣ, ರಿಸರ್ವ್ ಬ್ಯಾಾಂಕ್ ಅಂದಾಜಿನ ಪ್ರಕಾರ ಸ್ವಯಂ ಆಸ್ತಿ ಘೋಷಣೆಯಲ್ಲಿ ಹೊರ ಬಂದಿದ್ದಕ್ಕಿಂತ ಸಾವಿರ ಪಟ್ಟು ಕಪ್ಪುಹಣ ಇನ್ನೂ ಜನರ ಬಳಿಯೇ ಇದೆ.

ಸಾವಿರ ರುಪಾಯಿ ನೋಟನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿದ್ದು ಇದೇ ಮೊದಲೇನಲ್ಲ. ತುರ್ತು ಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರವು, 1978ರಲ್ಲಿ ಸಾವಿರ ರುಪಾಯಿ ನೋಟನ್ನು ಏಕಾಏಕಿ ರದ್ದು ಪಡಿಸಿತ್ತು. ಆಗ ಭಾರತ ಜಾಗತೀಕರಣಕ್ಕೆ ತೆರೆದುಕೊಂಡಿರಲಿಲ್ಲ. ದೇಶದ ಆರ್ಥಿಕತೆ ವಿಶ್ವ ಮಟ್ಟದಲ್ಲಿ ವ್ಯಾಪಿಸಿರಲಿಲ್ಲ.  ಬೆರಳೆಣಿಕೆಯಷ್ಟು ಬಹುರಾಷ್ಟ್ರೀಯ ಕಂಪನಿಗಳು ದೇಶದಲ್ಲಿದ್ದವು. ಆದರೂ ಮೊರಾರ್ಜಿ ದೇಸಾಯಿ ಅವರಿಗೆ ದೇಶದಲ್ಲಿ ಕಪ್ಪು ಹಣದ ಚಲಾವಣೆ ಮಿತಿ ಮೀರಿದೆಯೆಂದು ಅನಿಸಿತ್ತು. ಅದಕ್ಕೆ ಕಡಿವಾಣ ಹಾಕಲೇಬೇಕೆಂದು ಅವರು ತೀರ್ಮಾನಿಸಿ ಆ ಕ್ರಮಕ್ಕೆ ಮುಂದಾಗಿದ್ದರು. ಆಗ ಸಾವಿರ ರುಪಾಯಿ ನೋಟನ್ನು ರದ್ದು ಪಡಿಸಿದಾಗ, ಅದು ಜನಸಾಮಾನ್ಯನ ಮಟ್ಟದಲ್ಲಿ ಚಲಾವಣೆಯಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಸುಮಾರು ಅರವತ್ತು ಕೋಟಿಯಷ್ಟು ಮಾತ್ರ ಸಾವಿರ ರುಪಾಯಿ ನೋಟಿನ ಮೂಲಕ ಚಲಾವಣೆಯಲ್ಲಿತ್ತು.

ಇಂದು ಇದು ಹತ್ತು ಲಕ್ಷ ಕೋಟಿಯಷ್ಟಾಗಿದೆ! ಆಗ ಅಷ್ಟು ಕಡಿಮೆ ಪ್ರಮಾಣದಲ್ಲಿ ಚಲಾವಣೆಯಲ್ಲಿದ್ದಾಗಲೇ ಕಪ್ಪು ಹಣ ಮಿತಿ ಮೀರಿದೆ ಎಂದು ಅಲವತ್ತುಕೊಂಡಿರುವಾಗ, ಈಗಿನ ಸ್ಥಿತಿಗೆ ಹೋಲಿಸಿದರೆ ಏನಾಗಬೇಡ? ಬ್ಯಾಂಕಿಗೆ ಬರುವುದಕ್ಕಿಂತ, ಲೆಕ್ಕಕ್ಕೆ ಸಿಗುವುದಕ್ಕಿಂತ, ಹೊರಗೇ ಹೆಚ್ಚು ಚಲಾವಣೆಯಾದಾಗ ಆರ್ಥಿಕತೆ ನಿಯಂತ್ರಣ ತಪ್ಪುತ್ತದೆ. ಭಾರತದ ಮಟ್ಟಿಗೆ ಇದು ಅಕ್ಷರಶಃ ಸತ್ಯವಾಗಿತ್ತು. ಇದಕ್ಕೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕಿತ್ತು. ಇದರಿಂದ ಅಸಂಖ್ಯ ಜನರಿಗೆ ಅನಾನುಕೂಲವಾಗುವುದು ಸಹಜ. ಹೊಟ್ಟೆಗೆ, ಬಟ್ಟೆಗೆ ಕಟ್ಟಿಕೊಂಡು ಹಣವನ್ನು ಕೂಡಿಸಿಟ್ಟುಕೊಂಡವರಿಗೆ ಹಠಾತ್ತನೆ ಅದು ಬರೀ ಕಾಗದದ ಚೂರು ಅಂದರೆ ಹೇಗಾಗಬಹುದು? ನೀವು ನಿಮ್ಮ ಸ್ನೇಹಿತರಿಂದಲೋ, ಪರಿಚಯದವರಿದಲೋ ಎರಡು ಕೋಟಿ ರುಪಾಯಿ ಪಡೆದರೆನ್ನಿ.

ಸಾಯಂಕಾಲದ ಹೊತ್ತಿಗೆ ಅದಕ್ಕೆ ಕಿಮ್ಮತ್ತೇ ಇಲ್ಲ, ಅದು ರದ್ದಿ ಪೇಪರ್ ಗಿಂತ ಕಡೆ ಎಂದಾದರೆ ಏನು ಮಾಡುವುದು? ಕಾಗದದ ಚೂರಿಗಿಂತ ಕಡೆ ಎಂದು ನಿಮ್ಮ ಸ್ನೇಹಿತನಿಗೋ, ಪರಿಚಯದವನಿಗೋ ಮರಳಿ ಕೊಟ್ಟರೆ ಅವರೇನು ವಾಪಸ್ ಪಡೆಯುತ್ತಾರಾ? ಮರಳಿ ಪಡೆದವರಿಗೂ ಅದರ ಮೌಲ್ಯ ಕಾಗದದ ಚೂರೇ! ದೇಶಾದ್ಯಂತ ಇಂಥ ಲಕ್ಷಾಂತರ ವ್ಯವಹಾರ-ವಹಿವಾಟುಗಳು ಆಗಿರಲಿಕ್ಕೆ ಸಾಕು. ಅವರೆಲ್ಲ ಇನ್ನು ಆಘಾತದಿಂದ ಹೊರಬರಲು, ಬಹಳ ದಿನಗಳೇ ಬೇಕು. ಇದು ಲಕ್ಷಾಂತರ ಮನೆಗಳಲ್ಲಿ ಅಶಾಂತಿಗೂ ಕಾರಣವಾಗ ಬಹುದು. ಕೆಲವರ ಜೀವಕ್ಕೆ ಮುಳುವಾಗಬಹುದು. ಸಗಟು ವ್ಯಾಪಾರ, ಬಡ್ಡಿ ವ್ಯಾಪಾರದಲ್ಲಿ ನಿರತರಾಗಿರುವವರಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದು ತಿಳಿಯದೇ ಕಂಗಾಲಾಗಿ ಹೋಗಿದ್ದಾರೆ.

ಐನೂರು, ಸಾವಿರ ನೋಟೆಂದರೆ ಲಕ್ಷ್ಮೀ ದೇವಿಯೆಂದು ಹಣೆಗೊತ್ತಿ, ಎದೆಗವುಚಿಕೊಂಡು ಇಟ್ಟುಕೊಂಡವರಿಗೆ ಹಠಾತ್ತನೆ ಅದು ರದ್ದಿ ಕಾಗದವೆಂದರೆ ಎದೆಯೊಡೆಯದಿರುವುದಾ? ಇಂಥ ಅವೆಷ್ಟೋ ಹೃದಯವಿದ್ರಾವಕ ಕತೆಗಳು ದಿಗಿಲು ಹುಟ್ಟಿಸಬಹುದು. ಈ ಒಂದು ಹೊಡೆತ ಎಷ್ಟು ಜನರನ್ನು ಯಾವ ರೀತಿಯಲ್ಲಿ ಬಲಿ ಪಡೆಯವುದೋ ಗೊತ್ತಾಗುತ್ತಿಲ್ಲ. ಏಕಾಏಕಿ ಕೊಳ್ಳುಬಾಕ ಸಂಸ್ಕೃತಿಗೆ ಬ್ರೇಕ್ ಬೀಳಲಿದೆ. ರಿಯಲ್ ಎಸ್ಟೇಟ್ ದಂಧೆಯಲ್ಲಿದ್ದ ವಹಿವಾಟು ಕಡಿಮೆಯಾಗಲಿದೆ. ಐಷಾರಾಮಿ ಜೀವನ ನಡೆಸುವವರಿಗೆ ಒಮ್ಮಿಂದೊಮ್ಮೆಗೆ ಜೇಬು ಖಾಲಿಯಾದ ಅನುಭವ. ನೂರು ಕೋಟಿ ರುಪಾಯಿ ಧನಿಕನಾಗಿರಬಹುದು, ಆತನ ಬಳಿಯಿರುವ ಹಣ, ಹಣವೇ ಅಲ್ಲ ಅಂದರೆ ಅದನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ! ಈ ಕ್ಷಣದಲ್ಲಿ ಯಾರ ಹತ್ತಿರ ಕೇಳಿದರೂ ಹಣವೇ ಇಲ್ಲ. ಇಡೀ ದೇಶದೆಲ್ಲೆಡೆ ಇದೇ ಪರಿಸ್ಥಿತಿ. ಇದನ್ನು ಅನೇಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಇದು ತೀರಾ ಅನಿವಾರ್ಯವಾಗಿತ್ತು. ಜೀವವೇ ಹೋಗುತ್ತದೆ ಎಂದಾಗ ಒಂದು ಕಾಲನ್ನೋ, ಕೈಯನ್ನೋ ಕತ್ತರಿಸಿ ಎನ್ನದೇ ವಿಧಿಯಿಲ್ಲ. ಈಗ ಮೋದಿ ಅಂಥ ಸರ್ಜರಿ ಮಾಡಿದ್ದಾರೆ. ಇಡೀ ದೇಶವೇ ಕಪ್ಪು ಹಣದ ಗ್ಯಾಂಗ್ರೀನ್‌ಗೆ ಬಲಿಯಾಗುವುದನ್ನು ಕಂಡು ಒಂದು ಕಾಲನ್ನು ಕತ್ತರಿಸಿದ್ದಾರೆ.
ಜೀವ ಉಳಿಸಲು!

-ವಿಶ್ವೇಶ್ವರ ಭಟ್

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ.

Comments