UK Suddi
The news is by your side.

ಮೋದಿ ಮತ್ತೊಂದು ಬಾಂಬ್; ಸ್ವಾತಂತ್ರ್ಯನಂತರದ ಎಲ್ಲ ದಾಖಲೆ ಪರಿಶೀಲನೆ ಮಾಡಿಸ್ತಾರಂತೆ!

ಪ್ರಧಾನಿ ನರೇಂದ್ರ ಮೋದಿ ಅವರ ಕಾಳಧನಿಕರ ಬೇಟೆ ಇಲ್ಲಿಗೇ ನಿಲ್ಲುವಂತೆ ಕಾಣುತ್ತಿಲ್ಲ. ಅವರ ಬುಡ ಮುರಿದು ಎಡೆಮುರಿಗೆ ಕಟ್ಟಲು ನಿರ್ಣಯಿಸಿರುವ ಅವರು ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗಿನ ಎಲ್ಲ ದಾಖಲೆಗಳನ್ನು ಕೇಂದ್ರ ಸರಕಾರ ಪರಿಶೀಲಿಸುತ್ತದೆ ಎಂದು ಬಾಂಬ್ ಹಾಕಿದ್ದಾರೆ. ಡಿಸೆಂಬರ್ 30 ರ ನಂತರ ಮತ್ತಷ್ಟು ಕಠಿಣ ಕ್ರಮಗಳು ಜಾರಿಗೆ ತಂದರೆ ಅಚ್ಚರಿ ಬೇಡ ಎಂದೂ ಹೇಳಿದ್ದಾರೆ.

ಸದ್ಯ ಜಪಾನ್ ಪ್ರವಾಸದಲ್ಲಿರುವ ಮೋದಿ ಅವರ ಈ ಹೇಳಿಕೆ ಸೂಕ್ಷ್ಮಾರ್ಥಗಳನ್ನು ಒಳಗೊಂಡಿದೆ. 500 ಮತ್ತು 1000 ರುಪಾಯಿ ನೋಟು ರದ್ದು ಬಗ್ಗೆ ಚಕಾರ ಎತ್ತಿರುವವರಲ್ಲಿ ಕಾಂಗ್ರೆಸ್ಸಿಗರು ಪ್ರಮುಖರು. ಕೇಂದ್ರದ ನಿರ್ಧಾರದಿಂದ ಬಡವರಿಗೆ ಮಾತ್ರ ತೊಂದರೆ ಆಗಿದೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಂಡಿದೆ ಎಂದೆಲ್ಲ ಆಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಮೋದಿ ಅವರು ನೇರವಾಗಿ ಯಾರನ್ನೂ ಉಲ್ಲೇಖಿಸದಿದ್ದರೂ ‘ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ’ ಎಂಬ ಅವರ ಮಾತು ಕಾಂಗ್ರೆಸ್ಸಿಗರ ಬುಡಕ್ಕೆ ಬಂದು ನಿಲ್ಲುತ್ತದೆ. ಏಕೆಂದರೆ ಈ ದೇಶವನ್ನು ಸ್ವಾತಂತ್ರ್ಯ ನಂತರ ಅತಿಹೆಚ್ಚು ಕಾಲ ಆಳಿದ್ದು ಕಾಂಗ್ರೆಸ್. ಅದೇ ರೀತಿ ದೇಶ ಕೊಳ್ಳೆ ಹೊಡೆದ, ಕಳ್ಳಗಂಟು ಮಾಡಿಟ್ಟುಕೊಂಡ ಆಪಾದನೆ ಕೂಡ ಕಾಂಗ್ರೆಸ್ಸಿಗರ ಮೇಲೆ ಹೆಚ್ಚಿದೆ. ಹೀಗಾಗಿ ಮೋದಿ ಅವರ ಹೇಳಿಕೆ ಬೇಡ ಎಂದರೂ ಪ್ರಮುಖವಾಗಿ ಕಾಂಗ್ರೆಸ್ಸಿಗರಿಗೇ ಕನೆಕ್ಟ್ ಆಗುತ್ತಿದೆ.

ಅದೇನೇ ಇರಲಿ, ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಮೋದಿ ಕೊಬೆಯಲ್ಲಿ ಶನಿವಾರ ಭಾರತೀಯ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ₹ 500 ಮತ್ತು 1000 ಹಳೇ ನೋಟು ರದ್ದು ತೀರ್ಮಾನವನ್ನು ಅವರು ಸಮರ್ಥಿಸಿಕೊಂಡಿದ್ದು ಹೀಗೆ:

‘ದೇಶ ಶುದ್ಧಿ ಕಾರ್ಯಾಚರಣೆಯಲ್ಲಿ ಇದು ಮಹತ್ವದ ನಿರ್ಧಾರ. ದೇಶದ ಆರ್ಥಿಕ ಸುಧಾರಣೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಹೊರತು ಜನಸಾಮಾನ್ಯರಿಗೆ ತೊಂದರೆ ಕೊಡಲು ಅಲ್ಲ. ಈ ನಿರ್ಧಾರದಿಂದ ಕೆಲವು ದಿನಗಳ ಕಾಲ ಅನಾನುಕೂಲ ಎದುರಾಗುವುದು ಸಹಜ. ಆದರೂ ದೇಶದ ಜನ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಬಡವರು ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಹೀಗಾಗಿ ಈ ನಿರ್ಧಾರ ನಮಗೆ ಹೆಮ್ಮೆ ತಂದಿದೆ.’

‘ಡಿಸೆಂಬರ್ 30ರ ಒಳಗೆ ಹಳೇ ನೋಟುಗಳನ್ನು ಬದಲಿಸಿಕೊಂಡು, ಕಾನೂನು ಬದ್ಧವಾಗಿ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಡಿ.30 ರ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಪ್ರಾಮಾಣಿಕರಾಗಿರುವವರಿಗೆ ಯಾವುದೇ ಭೀತಿ ಬೇಡ ಎಂದು ಭರವಸೆ ನೀಡುತ್ತೇನೆ. ಸರ್ಕಾರವು ಪ್ರತಿಯೊಬ್ಬರ ಆದಾಯ ಕುರಿತು ಸ್ವಾತಂತ್ರ ಬಂದಾಗಿನಿಂದ ಇಲ್ಲಿಯವರೆಗೂ ಕೂಲಂಕಷ ಪರಿಶೀಲನೆ ನಡೆಸಲಿದೆ. ದೇಶಶುದ್ಧಿ ಅಭಿಯಾನದಲ್ಲಿ ಇದೊಂದು ಮಹತ್ವದ ನಿರ್ಧಾರ. ಜನರಿಂದ ಕೊಳ್ಳೆ ಹೊಡೆದ ಹಣವನ್ನು ವಸೂಲಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇಂಥ ಸ್ಥಿತಿಯಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು.’

‘ನಮ್ಮ ನಿರ್ಧಾರದಿಂದ ಜನರಿಗೆ ಕೆಲಕಾಲ ಸಮಸ್ಯೆಯಾಗಲಿದೆ ಎಂಬ ಸ್ಪಷ್ಟ ಅರಿವು ನಮಗಿತ್ತು. ಈ ಸಮಸ್ಯೆ ತಗ್ಗಿಸಲು ಗಂಟೆಗಟ್ಟಲೇ ಕೂತು ಚರ್ಚಿಸಿದ್ದೇವೆ. ₹ 2.5 ಲಕ್ಷದವರೆಗಿನ ಠೇವಣಿಗೆ ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ನಾವು ಘೋಷಿಸಿದ್ದೇವೆ. ಹೀಗಾಗಿ ವಯಸ್ಸಾದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ ಮಕ್ಕಳು ಇಂದು ಅವರ ಹೆಸರಿನಲ್ಲಿ ₹2.5 ಲಕ್ಷ ಠೇವಣಿ ಇಡಲು ಮುಂದಾಗಿದ್ದಾರೆ.’

‘ದೇಶದ ಜನರ ಹಿತಾಸಕ್ತಿ ರಕ್ಷಣೆಗೆ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡಲು ಬದ್ಧನಾಗಿದ್ದೇನೆ. ಈ ನಿರ್ಧಾರದಿಂದ ಸಮಸ್ಯೆ ಎದುರಾಗಿರುವುದು ನಿಜವೇ. ಆದರೂ ಈ ಸಮಸ್ಯೆಗಳ ನಡುವೆಯೇ ಹಲವರು ಮದುವೆಯಾಗಿದ್ದಾರೆ, ಮತ್ತೆ ಕೆಲವರು ಆಸ್ಪತ್ರೆಗಳಲ್ಲಿ ಪರದಾಡಿದ್ದಾರೆ. ಇಂಥ ಸಂಕಷ್ಟಗಳ ನಡುವೆಯೂ ಜನರು ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಗೂ ಧನ್ಯವಾದ ಅರ್ಪಿಸುತ್ತೇನೆ.’

‘ರಾಷ್ಟ್ರದ ಹಿತಾಸಕ್ತಿ ಕಾಪಾಡಲು ನಮಗಾಗುವ ತೊಂದರೆಗಳನ್ನು ಎದುರಿಸಲು ಸಿದ್ಧವಾಗಬೇಕು. ಇಂಥ ಧೋರಣೆ ಅಳವಡಿಸಿಕೊಳ್ಳಲು ನಾವು ಜಪಾನ್ ಪ್ರಜೆಗಳನ್ನು ಸ್ಫೂರ್ತಿಯಾಗಿಸಿಕೊಳ್ಳಬೇಕು. 2011 ರ ಭೂಕಂಪವಾಗಿರಬಹುದು ಅಥವಾ ಸುನಾಮಿ ವಿಕೋಪವಾಗಿರಬಹುದು. ದೇಶ ಸಂಕಷ್ಟಕ್ಕೆ ಸಿಲುಕಿದಾಗ ಜಪಾನ್ ಪ್ರಜೆಗಳು ಹೇಗೆ ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಒಂದಾಗುತ್ತಾರೆ ಎಂಬುದು ನಮಗೆ ಮಾದರಿ ಆಗಬೇಕು.’

ಕೃಪೆ : ಡಿಜಿಟಲ್ ಕನ್ನಡ

Comments