UK Suddi
The news is by your side.

ಪ್ರಧಾನಿಯ ಕನಸಿಗೆ ದೇಶವೂ ಜೊತೆಯಾಗಬೇಕು!

 ಈ ಮನುಷ್ಯ ಪ್ರಧಾನಿಯಾಗಿ ಸಂಸತ್ತನ್ನು ಪ್ರವೇಶಿಸುವ ಮುನ್ನ ಹೊಸ್ತಿಲಿಗೆ ನಮಸ್ಕಾರ ಮಾಡಿದಾಗಲೇ ದೇಶಕ್ಕೊಂದು ಸಣ್ಣ ಸೂಚನೆ ಸಿಕ್ಕಿ ಹೋಗಿತ್ತು. ಆದರೂ ಇಲ್ಲಸಲ್ಲದ ಕಳವಳಗಳನ್ನು ಹುಟ್ಟಿಸುವ ಮನಸ್ಸುಗಳು ಕೆಲಸ ಮಾಡುತ್ತಲೇ ಇದ್ದವು. ಇನ್ನೇನು ಈಗ ಭುಗಿಲೆದ್ದೀತು ದ್ವೇಷ, ಈಗ ಹೊತ್ತೀತು ದಳ್ಳುರಿ ಎಂದು ಕಾಯುತ್ತಲೇ ಅಸಹಿಷ್ಣುತೆಯ ವಿಷಬೀಜವನ್ನು ಬಿತ್ತಿದವು. ಮಾತುಗಾರ ಪ್ರಧಾನಿ ರೇಗಿ ಸಿಡುಕಿ ಪ್ರತಿಕ್ರಿಯಿಸಬಹುದು ಎಂದು ಭ್ರಮಿಸಿದವು. ಆದರೆ ಅವರು ತನ್ನ ಪಾಡಿಗೆ ನೆರೆ ದೇಶಗಳೊಡನೆ ಗೆಳೆತನ ಬೆಳೆಸಲು ಹೊರಟು ನಿಂತರು. ಒಂದಷ್ಟು ಸಂಬಂಧಗಳನ್ನು ಕುದುರಿಸಿಕೊಂಡೂ ಬಂದರು! ಹುಳ್ಳಗಿನ ಮನಸ್ಸಿನ ಕಳ್ಳರಿಗೆ ಅದು ಸಹ್ಯವಾಗಲಿಲ್ಲ. ದೇಶದಲ್ಲಿ ಏನೇ ನಡೆದರೂ, ಕೊನೆಗೆ ಟಾಯ್ಲೆಟ್ ನಲ್ಲಿಯಲ್ಲಿ ನೀರು ಬರದಿದ್ದರೆ ಅದಕ್ಕೂ ಪ್ರಧಾನಿಯೇ ಹೊಣೆ ಎನ್ನುವಷ್ಟರಮಟ್ಟಿಗೆ ಬೊಬ್ಬೆೆ, ದೂಷಣೆಗಳು ಶುರುವಾದವು. ಪ್ರಧಾನಿ ಈ ಯಾವುದಕ್ಕೂ ಸೊಪ್ಪುು ಹಾಕಲಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಗಾಣದೆತ್ತಿನ ಥರ ದುಡಿಯುತ್ತಲೇ ಸಾಗಿದರು. ‘ಮನ್ ಕಿ ಬಾತ್’ ಅವರು ತಮ್ಮ ಕನಸುಗಳನ್ನು ಹಂಚಿಕೊಳ್ಳುವ ವೇದಿಕೆಯಾಯಿತು. ಅಷ್ಟರಲ್ಲಿ ಅವರು ಅಧಿಕಾರಕ್ಕೆ ಬಂದು ಒಂದು-ಒಂದೂವರೆ ವರ್ಷವಾಗಿತ್ತಲ್ಲ, ಎಲ್ಲರೂ ಅವರ ಆಡಳಿತ ವೈಖರಿಯನ್ನು ಪರೀಕ್ಷಿಸಿ ಅಂಕಪಟ್ಟಿ ನೀಡುವವರೇ! ಹೆಜ್ಜೆ ಹೆಜ್ಜೆಗೂ, ಎಲ್ಲಿ ಅಚ್ಛೇ ದಿನ್? ಎಲ್ಲಿ ಅಚ್ಛೇ ದಿನ್? ಎಂದು ಕೇಳುವವರೇ!

ದಶಕಗಳಿಂದ ಕೆಲಸವನ್ನೇ ಮರೆತಂತಿದ್ದ ಪ್ರಧಾನಮಂತ್ರಿಗಳ ಕಾರ್ಯಾಲಯದ ಸಿಬ್ಬಂದಿ ಅಹರ್ನಿಶಿ ದುಡಿಯತೊಡಗಿದ್ದು ಅಚ್ಛೇ ದಿನದ ಪರಿಣಾಮವೇ ಎಂಬುದು ಎಲ್ಲರಿಗೂ ಹೇಗೆ ಗೊತ್ತಾಗಲು ಸಾಧ್ಯ? ದೆಹಲಿಯ ಲ್ಯೂಟೆನ್ಸಿನ ದೊಡ್ಡ ದೊಡ್ಡ ಬಂಗಲೆಗಳಲ್ಲಿ ಝಾಂಡಾ ಹೂಡಿದ್ದ ಹಳೆಯ ಹೆಗ್ಗಣಗಳನ್ನು ಹೊರದಬ್ಬಿದ್ದು, ಸಾವಿರಾರು ಎನ್‌ಜಿಓಗಳ ಗೇಟಿಗೆ ಬೀಗಹಾಕಿದ್ದು ಎಲ್ಲವೂ ತೆರೆಮರೆಯಲ್ಲಿ ನಡೆದ ಅಚ್ಛೇ ದಿನದ ಕಾರ್ಯಾಚರಣೆಗಳೇ. ಇನ್ನು ಜನರ ಕಣ್ಣೆದುರೇ ನಡೆದಿದ್ದು ಎಂದರೆ ಸ್ವಚ್ಛ ಭಾರತದ ಸಣ್ಣ-ದೊಡ್ಡ ಅಭಿಯಾನಗಳು. ಪ್ರಧಾನಿಯ ಆಶಯ ಪ್ರಾಮಾಣಿಕವಾಗಿದ್ದರೂ ಫೋಟೊಗಾಗಿ ಜತೆ ಬಂದು ನಿಂತ ಸ್ಟಾರ್‌ಗಳು ಆಮೇಲೆ ಕೈಯಲ್ಲಿ ಪೊರಕೆ ಹಿಡಿದರೋ ಇಲ್ಲವೋ ದೇವರೇ ಬಲ್ಲ! ಗಂಗೆಯ ತಟ ಮಾತ್ರ ಇಷ್ಟಿಷ್ಟೇ ಚೇತರಿಸಿಕೊಳ್ಳತೊಡಗಿತು. ಅಲ್ಲೊಂದು ಇಲ್ಲೊಂದು ಬಸ್ಸು, ರೈಲ್ವೆ ನಿಲ್ದಾಣಗಳು ಮೈತೊಳೆದುಕೊಂಡು ಶುಭ್ರವಾಗಿ ಕಂಗೊಳಿಸತೊಡಗಿದವು. ರೈತರಿಗೆ ಹೇರಳವಾಗಿ ಸಿಕ್ಕ ಯೂರಿಯಾ, ಮೊತ್ತಮೊದಲ ಬಾರಿ ಚಾಲ್ತಿಗೆ ಬಂದ ಜನಧನ ಯೋಜನೆ, ಜಿಎಸ್‌ಟಿ ಇತ್ಯಾದಿಗಳು ಪರಿಣಾಮಕಾರಿಯೇ ಆದರೂ ಇವುಗಳ ಪ್ರಯೋಜನ ಏಕಕಾಲದಲ್ಲಿ ಏಕರೂಪದಲ್ಲಿ ಸಮಾಜದ ಎಲ್ಲ ವರ್ಗಕ್ಕೂ ದೊರಕುವುದು ಸಾಧ್ಯವಿರಲಿಲ್ಲ. ಆದ್ದರಿಂದಲೇ ಎಲ್ಲರೂ ಒಪ್ಪುವಂಥ ಅಚ್ಛೇ ದಿನ್ ಮರೀಚಿಕೆಯಾಗಿಬಿಡುತ್ತದೆ ಎಂಬ ನಿರಾಶೆ ಬಹಳ ಜನರಿಗಿತ್ತು. ಈ ಪ್ರಧಾನಿಯದ್ದು ಬರೀ ಬಾಯಿ ಮಾತಿನ ಬಡಾಯಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದ ಹೊತ್ತಿನಲ್ಲೇ ನಡೆಯಿತು ನೋಡಿ ಸರ್ಜಿಕಲ್ ಸ್ಟ್ರೈಕ್!

ಅರೆ, ಇದೇನಾಗುತ್ತಿದೆ ಎಂದು ಇಡೀ ದೇಶವೇ ಒಮ್ಮೆ ಬೆಚ್ಚಿತು. ಇಸ್ರೇಲ್‌ನಂಥ ದೇಶ ದಿನ ಬೆಳಗಾದರೆ ನಡೆಸುವ ಇಂಥ ನೂರಾರು ಕಾರ್ಯಾಚರಣೆಗಳ ಬಗ್ಗೆ ನಾವು ಕೇಳಿದ್ದೆವೇ ಹೊರತು ನಮ್ಮಲ್ಲೂ ಇದು ಸಾಧ್ಯವಾಗಬಹುದೆಂಬ ಕಲ್ಪನೆಯೂ ನಮಗೆ ಇರಲಿಲ್ಲ. ಅಚ್ಛೇ ದಿನದ ರುಚಿಯನ್ನು ಮೊತ್ತಮೊದಲ ಬಾರಿ ಕಂಡ ಜನಸಾಮಾನ್ಯರೆಲ್ಲ ಹರ್ಷಿಸಿದರು. ಅಂತೂ ನಾವೂ ಸಡ್ಡು ಹೊಡೆಯಬಲ್ಲೆವು ಎಂಬ ನೆಮ್ಮದಿಯ ನಿಟ್ಟುಸಿರಿಟ್ಟು ಪ್ರಧಾನಿಯನ್ನು ಶ್ಲಾಸಿದರು. ಅಷ್ಟರಲ್ಲೇ, ಈ ಕಾರ್ಯಾಚರಣೆಯ ಅಷ್ಟೂ ಶ್ರೇಯ ಸೈನ್ಯಕ್ಕೆ ಸೇರಿದ್ದು, ಪ್ರಧಾನಿಗಲ್ಲ ಎಂದು ವಿರೋಧ ಪಕ್ಷಗಳು ಮಾತಿನ ಸಮರ ಸಾರಿದವು. ನೆನಪಿಡಿ, ನುಗ್ಗಿ ಹೊಡೆದದ್ದು ಸೈನ್ಯವೇ ಆದರೂ ನಿರ್ಧಾರ ಪ್ರಧಾನಿಯದ್ದು. ಈ ದೇಶದಲ್ಲಿರುವುದು ಪ್ರಜಾಪ್ರಭುತ್ವವೇ ಹೊರತು ಸೇನಾಡಳಿತವಲ್ಲ. ಅಂತೂ ಜನತೆ ಆ ಹರ್ಷಾಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಬ್ರಹ್ಮಾಸ್ತ್ರವನ್ನು ಹೂಡಿದ್ದಾರೆ ಪ್ರಧಾನಿ. 500, 1000ದ ನೋಟುಗಳ ಚಲಾವಣೆಯನ್ನು ರಾತ್ರೋರಾತ್ರಿ ನಿಲ್ಲಿಸಿದ್ದಾರೆ. ಈ ನಿರ್ಧಾರ, ಇದನ್ನು ತೆಗೆದುಕೊಂಡ ಸಮಯ ಎರಡೂ ಎಷ್ಟು ಬುದ್ಧಿವಂತಿಕೆಯಿಂದ ಕೂಡಿತ್ತು ಎಂಬುದು ಜನಸಾಮಾನ್ಯರಿಗೆ ಅರ್ಥವಾಗಲು ಇನ್ನಷ್ಟು ತಿಂಗಳುಗಳು ಕಳೆಯಬೇಕು.

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರ ಚುನಾವಣೆಯ ಫಲಿತಾಂಶದ ದಿನ ವಿಶ್ವದ ಉಳಿದ ದೇಶಗಳೂ ತಮ್ಮ ಚಟುವಟಿಕೆಯನ್ನು ನಿಲ್ಲಿಸಿಬಿಡುತ್ತವೆ. ಎಲ್ಲ ನ್ಯೂಸ್ ಚಾನೆಲ್ಲು, ಪತ್ರಿಕೆಗಳಿಗೆ ಆವತ್ತು ಅದೊಂದೇ ಸುದ್ದಿ! ಅದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ. ಈ ಸಲವೂ ಅಷ್ಟೇ. ಎನ್‌ಡಿ ಟಿವಿಯ ಪತ್ರಕರ್ತರ ದಂಡು ಇಲ್ಲಿಂದ ಗಂಟುಮೂಟೆ ಕಟ್ಟಿಕೊಂಡು ಹೊರಟು ಮೂರು ದಿನಗಳ ಹಿಂದೆಯೇ ನ್ಯೂಯಾರ್ಕಿನಲ್ಲಿ ಬೀಡು ಬಿಟ್ಟಿತ್ತು. ಇನ್ನೇನು ನಾಳೆ ಬೆಳಗಿನ ಜಾವ ಫಲಿತಾಂಶ ಹೊರಬೀಳಬೇಕು, ಇವತ್ತು ರಾತ್ರಿ ಎಂಟರ ಸುಮಾರಿಗೆ ಪ್ರಧಾನಿ ಕಪ್ಪು ಹಣದ ವಿರುದ್ಧದ ತಮ್ಮ ಸಮರವನ್ನು ಸಾರಿಬಿಟ್ಟರು! ಈ ಹಠಾತ್ ನಿರ್ಧಾರದ ಮುಂದೆ ಅಮೆರಿಕದ ಫಲಿತಾಂಶದ ಸುದ್ದಿ ಕಾವು ಕಳೆದುಕೊಂಡಿದ್ದು ಸಹಜವೇ! ಈ ನಿರ್ಧಾರದಿಂದ ಭಾರತದ ಎಷ್ಟೋ ಕೋಟಿ ಕಪ್ಪು ಹಣ ಬಿಳಿಯಾಗಿ ಪರಿವರ್ತಿತವಾಗುವುದು ನಿಂತಿತು. ಹೇಗೆ ಎನ್ನುತ್ತೀರಾ? ಅಮೆರಿಕದ ಸಂಭವನೀಯ ಅಧ್ಯಕ್ಷೆ ಎಂದು ಬಿಂಬಿತವಾಗಿದ್ದಿದ್ದು ಹಿಲರಿ ಕ್ಲಿಂಟನ್. ಮಾಧ್ಯಮಗಳ ಮೇಲೆ ದೊಡ್ಡ ಪ್ರಮಾಣದ ಹಿಡಿತ ಹೊಂದಿದ್ದ ಆಕೆ ಟ್ರಂಪ್‌ರನ್ನು ಪಕ್ಕಾ ಖಳನಾಯಕ ಎಂದು ಸಾಬೀತು ಪಡಿಸುವಲ್ಲಿ ಬಹುಪಾಲು ಯಶಸ್ವಿಯಾಗಿದ್ದರು. ಹಿಲರಿಯೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಎಷ್ಟಿತ್ತೆಂದರೆ ಅಪ್ಪಿತಪ್ಪಿ ಟ್ರಂಪ್ ಗೆದ್ದರೆ ಡಾಲರ್‌ನ ಮೌಲ್ಯ ಇನ್ನಿಲ್ಲದ ಕುಸಿತ ಕಾಣುವುದು ವಿಧಿತವಾಗಿತ್ತು. ಹಾಗೆ ಅಮೆರಿಕದ ಡಾಲರ್ ಬಿದ್ದಾಗ, ಭಾರತೀಯ ರುಪಾಯಿಗಳಲ್ಲಿ ಅದನ್ನು ಕೊಳ್ಳುವುದು ಸುಲಭ. ಭಾರತೀಯರು ತಮ್ಮ ಕಪ್ಪು ಹಣವನ್ನು ಹೂಡುವ ವಿವಿಧ ಬಗೆಗಳಲ್ಲಿ ಇದೂ ಒಂದು. ಆವತ್ತು ಅನಿರೀಕ್ಷಿತವಾಗಿ ಟ್ರಂಪ್ ಗೆದ್ದರು. ಡಾಲರ್ ಕುಸಿಯಿತು. ಆದರೆ ಅಷ್ಟು ಹೊತ್ತಿಗೆ, ಹಲವರ ಮನೆಯ ಪೆಟ್ಟಿಗೆಗಳಲ್ಲಿ ಅವಿತು ಕೂತ ನಮ್ಮ 500, 1000ದ ನೋಟುಗಳೂ ಬೆಲೆ ಕಳೆದುಕೊಂಡಿದ್ದವು!

ನಮ್ಮ ಮಕ್ಕಳು ಮರಿಮಕ್ಕಳಿಗೂ ಸಾಕಾಗಿ ಮಿಗಲಿ ಎಂದು ಅವರಿವರ ತಲೆ ಒಡೆದು ಮನೆಯ ಬೀರು, ಮಂಚದಡಿ ತುರುಕಿ ಪೇರಿಸಿಟ್ಟ ರಾಶಿ ರಾಶಿ ಹಣ ಕ್ಷಣದಲ್ಲೇ ಬೆಲೆ ಕಳೆದುಕೊಂಡರೆ ಕೂಡಿಟ್ಟವರ ಕಥೆ ಏನಾಗಬೇಡ? ಇತ್ತೀಚೆಗಷ್ಟೇ ಒಂದಿಡೀ ರೂಮಿನ ಭರ್ತಿ ನೋಟಿನ ಕಂತೆಗಳನ್ನು ತುಂಬಿಟ್ಟಿದ್ದ ರಾಜಕಾರಣಿಯೊಬ್ಬರ ಚಿತ್ರ ವಾಟ್ಸ್ಯಾಪಿನಲ್ಲಿ ಹರಿದಾಡಿತ್ತು. ಅಂಥ ಅಸಂಖ್ಯ ಮಂದಿ ದೇಶದೊಳಗಿದ್ದಾರೆ. ಆವತ್ತು ರಾತ್ರಿ ಅವರೆಲ್ಲ ಅದೆಷ್ಟು ಕೈಕೈಹಿಸುಕಿಕೊಂಡರೋ? ರಾತ್ರಿಯಿಡೀ ತಮ್ಮ ದುರದೃಷ್ಟವನ್ನು ಹಳಿಯುತ್ತಾ ನಿದ್ದೆಗೆಟ್ಟು ಎಷ್ಟು ನರಳಾಡಿದರೋ? ಪಾಪಿ ಪ್ರಧಾನಿಗೆ ಶಾಪ ಹಾಕಿ ನೋಟುಗಳನ್ನು ತಬ್ಬಿ ಅದೆಷ್ಟು ಕಣ್ಣೀರಿಟ್ಟರೋ? ತಮ್ಮ ಪರಿಚಯದ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಮೇಲಿಂದ ಮೇಲೆ ಫೋನ್ ಮಾಡಿ ಅದೆಷ್ಟು ಐಡಿಯಾಗಳನ್ನು ಕೇಳಿದರೋ? ಒಂದಷ್ಟು ಜನ ಚಿನ್ನದಂಗಡಿಗಳಿಗೆ ನುಗ್ಗಿ ಮನಸ್ಸಿಗೆ ಬಂದಷ್ಟು ಚಿನ್ನ ಖರೀದಿಸಿದ್ದಾರೆ. ಆದರೆ ಸರಕಾರ ಈ ಎಲ್ಲದಕ್ಕೂ ಲೆಕ್ಕ ಕೇಳಲಿದೆ. ಸರಕಾರಿ ಅಧಿಕಾರಿಗಳು ಈಗಾಗಲೇ ಆಭರಣದ ಮಳಿಗೆಗಳಿಗೆ ನುಗ್ಗುತ್ತಿದ್ದಾರೆ. ಅದೊಂದೇ ರಾತ್ರಿ ಎಷ್ಟು ಕೇಜಿ ಚಿನ್ನ ಮಾರಿದಿರಿ, ಯಾವ ಗ್ರಾಹಕರು ಎಷ್ಟು ಕೊಂಡರು ಎಂದು ಅವರು ಕೇಳಿದಾಗ ಅಂಗಡಿಯವರು ಎಲ್ಲ ವಿವರಗಳನ್ನೂ ಕೊಡಲೇಬೇಕು. ನಿಜವಾಗಿಯೂ ಆವತ್ತು ರಾತ್ರಿ ನೆಮ್ಮದಿಯಾಗಿ ಮಲಗಿದವರೆಂದರೆ ಬೆವರು ಸುರಿಸಿ ಗಳಿಸುವ ಮಧ್ಯಮ ವರ್ಗದ ಮಂದಿ ಮಾತ್ರ! ಮುಂದಿನ ಕೆಲ ದಿನಗಳೂ ಅಷ್ಟೇ. ಪರ್ಸಿನಲ್ಲಿರುವ ಕೆಲವೇ ಕೆಲವು ನೂರು ರುಪಾಯಿಯ ನೋಟುಗಳೊಡನೆ ನೆಂಟಸ್ತನ! ಅವನ್ನೇ ಪ್ರೀತಿಯಿಂದ ಸವರುವುದರಲ್ಲಿ, ಜೋಪಾನವಾಗಿ ಕಾಪಿಟ್ಟುಕೊಳ್ಳುವುದರಲ್ಲಿ ಎಲ್ಲರಿಗೂ ಖುಷಿ! ನೂರರ ನೋಟುಗಳಿಗೆ ಮಾತು ಬಂದಿದ್ದರೆ ಪ್ರಧಾನಿಗೆ ಒಂದು ದೊಡ್ಡ ಥ್ಯಾಂಸೃ ಹೇಳುತ್ತಿದ್ದವು ಎಂಬುದರಲ್ಲಿ ಅನುಮಾನವಿಲ್ಲ! ದೇಶವಾಸಿಗಳೆಲ್ಲ ಕಡಿಮೆ ದುಡ್ಡಿನಲ್ಲಿ ಕೆಲ ದಿನಗಳನ್ನು ಕಳೆದಿದ್ದು ಇತ್ತೀಚಿನ ವರ್ಷಗಳಲ್ಲೇ ನೂತನ ಅನುಭವ! ಇದೆಲ್ಲ ಸರಿಹೋಗುವವರೆಗೆ ಸಣ್ಣಪುಟ್ಟ ತೊಂದರೆಗಳಾದರೂ ಉದ್ದೇಶ ಒಳ್ಳೆಯದಿರುವುದರಿಂದ ಜನಸಾಮಾನ್ಯರೂ ಚಕಾರವೆತ್ತುತ್ತಿಲ್ಲ.

ಈ ನಿರ್ಧಾರ ಕಪ್ಪು ಹಣವಿದ್ದವರ ಪಾಲಿಗೆ ಬಿಸಿತುಪ್ಪ. ಖಂಡಿಸಿದರೆ ನೀವು ಕಪ್ಪು ಹಣದ ಒಡೆಯರು ಎಂಬುದನ್ನು ನೀವೇ ಸಾಬೀತುಪಡಿಸಿದ ಹಾಗಾಗುತ್ತದೆ. ಸುಮ್ಮನಿರೋಣವೆಂದರೆ ತಡೆಯಲಾಗದ ಸಂಕಟ! ಅಂಥ ಮಂದಿ, ಪ್ರಧಾನಿ ಇನ್ನಷ್ಟು ಕಾಲಾವಕಾಶ ಕೊಡಬೇಕಿತ್ತು ಎಂದು ಕಪ್ಪೆಗಳ ಹಾಗೆ ವಟಗುಟ್ಟುತ್ತಲೇ ಇದ್ದಾರೆ! ನೋಟುಗಳನ್ನಿಟ್ಟುಕೊಂಡು ಪ್ರಯೋಜನವಿಲ್ಲ, ಸುಡುವುದೇ ಮೇಲೆಂದುಕೊಂಡ ಭಾರೀ ಕುಳಗಳೇನಕರು ನೋಟುಗಳನ್ನು ರಸ್ತೆಬದಿ ಸುರಿದು ಬೆಂಕಿ ಹಚ್ಚುತ್ತಿದ್ದಾರೆ! ಇಲ್ಲಿ ನಾವು ಒಂದು ವಿಷಯವನ್ನು ಗಮನಿಸಬೇಕು. ಅಮೆರಿಕದಲ್ಲಿ ಹಿಲರಿ ಹಾಗೂ ಟ್ರಂಪ್ ಚುನಾವಣೆ ಮುಗಿಯುವವರೆಗೂ ಹಾವು ಮುಂಗುಸಿಗಳ ಹಾಗೆ ಕಾದಾಡುತ್ತಿದ್ದರು. ಟ್ರಂಪ್ ಗೆದ್ದ ಮೇಲೆ ಭಾಷಣ ಮಾಡಿದ ಹಿಲರಿ, ನನಗೆ ತೀವ್ರ ನಿರಾಸೆಯಾಗಿದೆ ನಿಜ, ಹಾಗಂತ ಟ್ರಂಪ್ ಅವರ ಆಡಳಿತ ಸಕಾರಾತ್ಮಕವಾಗಿರುತ್ತದೆ ಎಂದು ನಂಬದಿರುವುದು ಸರಿಯಲ್ಲ. ನಮ್ಮ ಅಭಿಪ್ರಾಯ ಭೇದಕ್ಕಿಂದ ದೇಶದ ಮೌಲ್ಯಗಳು ಮುಖ್ಯ ಎಂದುಬಿಟ್ಟರು. ಅಲ್ಲಿಗೆ ಅವರ ಜಗಳ ಮುಗಿಯಿತು. ಇನ್ನವರು ಅಮೆರಿಕ ವಿಶ್ವದ ದೊಡ್ಡಣ್ಣನಾಗೇ ಉಳಿಯಬೇಕು ಎಂಬ ಗುರಿಯನ್ನು ಮುಖ್ಯವಾಗಿಸಿಕೊಳ್ಳುತ್ತಾರೆಯೇ ಹೊರತು, ಟ್ರಂಪ್ ಮಾಡಿದ್ದಕ್ಕೆಲ್ಲ ರಸ್ತೆ ಬದಿ ಧರಣಿ ಕೂರುವುದಿಲ್ಲ!

ನಮ್ಮ ದೇಶದಲ್ಲಿ ಹಾಗಲ್ಲ. ರಾಜಕಾರಣದ ತುಂಬೆಲ್ಲ ಎಳಸು ಪಪ್ಪು, ವಿಚಿತ್ರ ಬೇನೆಯ ಕೇಜ್ರಿವಾಲರೇ ತುಂಬಿದ್ದಾರೆ. ಇವರಿಗೆ ದೇಶದ ಅಭಿವೃದ್ಧಿಯ ಕುರಿತು ಕನಸು ಕಾಣುವ ಸಂಸ್ಕಾರವಂತೂ ಇಲ್ಲವೇ ಇಲ್ಲ, ಪ್ರಧಾನಿಯ ಕನಸುಗಳು ನನಸಾಗಲೂ ಹೆಜ್ಜೆಹೆಜ್ಜೆಗೂ ಅಡ್ಡಿಪಡಿಸುತ್ತಾರೆ! ಹೋಗಲಿ ಪ್ರಧಾನಿಯ ಕನಸುಗಳಾದರೂ ಎಂಥವು? ಮೊಮ್ಮಕ್ಕಳಿಗೆ ಸಾಮ್ರಾಜ್ಯವನ್ನು ಕಟ್ಟಿಹೋಗಬೇಕೆಂಬುದೇ ಅಥವಾ ತಲೆಮಾರುಗಳು ಉಂಡುಟ್ಟರೂ ಕರಗದಷ್ಟು ಆಸ್ತಿ ಮಾಡಿಡಬೇಕೆಂಬುದೇ? ಅವರಿಗೆ ಪದೇ ಪದೆ ಬೀಳುವುದು ಭಾರತವನ್ನು ವಿಶ್ವಗುರು ಮಾಡಬೇಕೆಂಬ ಏಕೈಕ ನಿಸ್ವಾರ್ಥ ಕನಸು! ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನ ಭಾಷಣಗಳನ್ನು ಕೇಳಿರುವವರಿಗೆ ಈ ಕನಸು ಎಷ್ಟು ಹಳೆಯದು ಎಂಬುದು ಗೊತ್ತಿರುತ್ತದೆ. ಯುಪಿಎ ಸರಕಾರ ನಾಲ್ಕಾಣೆಯ ನಾಣ್ಯಗಳನ್ನು ಟಂಕಿಸುವುದನ್ನು ನಿಲ್ಲಿಸಿದಾಗ, ‘ಸಾವಿರ ರುಪಾಯಿಯ ನೋಟಿನ ಚಲಾವಣೆ ನಿಲ್ಲಿಸುವ ಬದಲು ಇವರು ಇಪ್ಪತ್ತೈದು ಪೈಸೆಯನ್ನು ನಿಷೇಧಿಸಿದರಲ್ಲ’ ಎಂದು ಗುಡುಗಿದ್ದರು. ಇಂಥ ಮನುಷ್ಯನಿಗೆ ನ್ಯಾಯವಾಗಿ ಅದೆಷ್ಟು ಬೆಂಬಲ ಹರಿದು ಬರಬೇಕು! ರಾಜಕಾರಣಿಗಳನ್ನು ಒತ್ತಟ್ಟಿಗಿಟ್ಟು, ನಾವು ಪ್ರಧಾನಿಯ ಬೆನ್ನಿಗಿರೋಣ. ಅವರ ಕನಸುಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ನಾವು ರೂಢಿಸಿಕೊಂಡರೆ ಇನ್ನಷ್ಟು ಹೊಸ ನಿರ್ಧಾರಗಳನ್ನು ಕೈಗೊಳ್ಳುವುದು ಅವರಿಗೆ ಸುಲಭವಾಗಲಿದೆ.

ಮೂರನೆ ದರ್ಜೆಯ ಕೊಳೆಗೇರಿಯಿಂದ ಉತ್ಕೃಷ್ಠ ದರ್ಜೆಯ ದೇಶವಾಗಿ ಮಾರ್ಪಟ್ಟ ಸಿಂಗಪುರ್‌ನ ಕಥೆ ಗೊತ್ತಲ್ಲ? ಅಲ್ಲಿಯ ಪ್ರಧಾನಿ ಲೀ ಕ್ವಾನ್ ಯೂ ಕಂಡ ಕನಸುಗಳನ್ನೆಲ್ಲ ಮೊದಮೊದಲು ಆ ಜನರೂ ಬೆಂಬಲಿಸಿರಲಿಲ್ಲ. ಆದರೆ ನಂಬಿಕೆ ಹುಟ್ಟಿದ ಮೇಲೆ ನಡೆದ ಪವಾಡ ನಮ್ಮ ಕಣ್ಣ ಮುಂದಿದೆ. ಕನಸು ಕಾಣುವ, ಅದನ್ನು ನನಸು ಮಾಡುವ ಪ್ರತೀತಿಯನ್ನು ತಮ್ಮ ದೇಶದಲ್ಲಿ ಹುಟ್ಟುಹಾಕಿ ಹೋಗಿದ್ದಾರೆ ಲೀ ಕ್ವಾನ್ ಯೂ. ಅವರಿಗಿಂತ ಹಲವು ಪಟ್ಟು ಬಲಾಢ್ಯರು ನಮ್ಮ ಪ್ರಧಾನಿ. ಅಂಗೈಯಗಲ ಇರುವ ಸಿಂಗಪುರದ ಜನರಿಗೆ ಸಾಧ್ಯವಾಗಿದ್ದು ನಮಗೆ ಸಾಧ್ಯವಾಗುವುದಿಲ್ಲವೇ?

-ಸಹನಾ ವಿಜಯ್‌ಕುಮಾರ್

Comments