UK Suddi
The news is by your side.

ಮಹದಾಯಿ ಮಾತುಕತೆಗೆ ಗೋವಾ ಚುನಾವಣೆ ಅಡ್ಡಿ

 

ಬೆಂಗಳೂರು: ಇನ್ನೇನು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಿಕೊಳ್ಳುತ್ತಾರೆ ಎನ್ನುವಷ್ಟರಲ್ಲಿ ಮುಂದೂಡಲ್ಪಟ್ಟ ಮುಖ್ಯಮಂತ್ರಿಗಳ ಸಭೆಗೆ ಇದೀಗ ಚುನಾವಣೆಯ ಗ್ರಹಣ ಹಿಡಿದಿದೆ. ಸದ್ಯಕ್ಕಂತೂ ಗ್ರಹಣ ಬಿಡುವ ಲಕ್ಷಣವೂ ಕಾಣಿಸುತ್ತಿಲ್ಲ.

ಗೋವಾದಲ್ಲಿ ಮುಂದಿನ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಗೋವಾ ಸರ್ಕಾರ ಸಿದ್ಧವಿಲ್ಲ. ಹೀಗಾಗಿ ಮೂರು ರಾಜ್ಯಗಳ ಸಭೆ ಕರೆದು ಕೊನೇ ಕ್ಷಣದಲ್ಲಿ ಅದನ್ನು ಮುಂದೂಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮತ್ತೆ ಸಭೆ
ಕರೆಯಲು ಸಿದ್ಧರಾಗಿಲ್ಲ.

ಮೂಲಗಳ ಪ್ರಕಾರ, ಸದ್ಯಕ್ಕಂತೂ ಈ ಸಭೆ ನಡೆಯುವ ಲಕ್ಷಣಗಳಿಲ್ಲ. ಹೀಗಾಗಿ ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಯುವ ಲಕ್ಷಣವೂ ಇಲ್ಲ ಮತ್ತು ಕಳಸಾ- ಬಂಡೂರಿ ನಾಲೆಗೆ ಮಹದಾಯಿ ನೀರು ಬರುವ ಸಾಧ್ಯತೆಯೂ ಇಲ್ಲ ಎನ್ನುವಂತಾಗಿದೆ.

Comments