ಕಪ್ಪು ಹಣದ ವಿರುದ್ಧ ಹೋರಾಡಿದ್ದುಇದೇ ಕೇಜ್ರಿವಾಲಾ?
ಹಣ ಎಂದರೆ ಹೆಣವೂ ಬಾಯಿಬಿಡುತ್ತದೆ ಅಂತಾರೆ. ಆದರೆ ಹಣ ನಿಷೇಧಿಸಿದ್ದಕ್ಕೆ ಮೊದಲು ಬಾಯಿಬಿಟ್ಟವರು ಮಾತ್ರ ಕೇಜ್ರಿವಾಲ್! ಬಾಯಿ ಬಿಡೋದು ಮಾತ್ರವಲ್ಲ ಬಾಯಿಬಡಿದುಕೊಳ್ಳುವ ಹಂತವನ್ನೂ ತಲುಪಿದಂತಿದೆ.
1000 ಹಾಗೂ 500 ರು. ನೋಟುಗಳನ್ನು ರದ್ದುಪಡಿಸಿರುವ ಕುರಿತು ನ.8ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ಯಾರ್ಯಾರ ಸ್ಥಿತಿ ಹೇಗಿದೆಯೋ ಏನೊ. ಬಿಜೆಪಿಯವರೇ ಎಷ್ಟೋ ಜನ ಮೋದಿಯನ್ನು ಬೈದುಕೊಳ್ಳುತ್ತಿರಲೂ ಸಾಕು. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ಅತ್ಯಂತ ಹತಾಶರಾದಂತೆ ವರ್ತಿಸುತ್ತಿದ್ದಾರೆ. ಇಷ್ಟು ಹತಾಶರಾಗಲು ಮೂರು ಕಾರಣಗಳಿರಬಹುದು. ಮೊದಲನೆಯದು ಕೇಜ್ರಿವಾಲ್ ಬಳಿಯೇ ದೊಡ್ಡ ಮೊತ್ತದ ಕಪ್ಪು ಹಣ ಇರಬೇಕು. ಎರಡನೆಯದು ಕಪ್ಪು ಹಣ ಇರುವವರು ಕೇಜ್ರಿವಾಲ್ಗೆ ಬಹಳ ಬೆಂಬಲ ನೀಡುತ್ತಿದ್ದಿರಬೇಕು. ಮೂರನೆಯದು ನೋಟು ನಿಷೇಧದಿಂದ ಎಲ್ಲಿ ಪ್ರಧಾನಿ ಮೋದಿ ಹೀರೊ ಆಗಿಬಿಡುತ್ತಾರೋ ಎಂಬ ಆತಂಕ ಕೇಜ್ರಿವಾಲ್ ಅವರನ್ನು ಕಾಡುತ್ತಿರಬೇಕು. ಇದರ ಹೊರತಾಗಿ ಬೇರೆ ಕಾರಣಗಳು ಇರಲು ಸಾಧ್ಯವಿಲ್ಲ.
ದೇಶಾದ್ಯಂತ ಎಷ್ಟೋ ಜನರ ಬಳಿ ಕಪ್ಪು ಹಣ ಇರಬಹುದು. ಆದರೆ ಯಾರೂ ಕೇಜ್ರಿವಾಲ್ ಅವರಷ್ಟು ಹತಾಶರಾದಂತೆ ಕಂಡುಬಂದಿಲ್ಲ. ಕೊನೇಪಕ್ಷ ಅವರ್ಯರೂ ಹತಾಶೆಯನ್ನು ಬಹಿರಂಗಪಡಿಸಿಲ್ಲ. ಕೇಜ್ರಿವಾಲ್ ಅವರ ಹತಾಶೆ ಯಾವ ಮಟ್ಟಿಗಿದೆ ಎಂಬುದು ನಿಮಗೆ ಅರ್ಥವಾಗಬೇಕಾದರೆ ಅವರ ಟ್ವಿಟರ್ ಖಾತೆಯನ್ನೊಮ್ಮೆ ನೀವು ನೋಡಬೇಕು. ನ.8ರ ನಂತರ ಮಾಡಿದ ಅಷ್ಟೂ ಟ್ವೀಟ್ಗಳು ನೋಟು ರದ್ದಾದ ಕುರಿತೇ ಇವೆ. ಒಂದೇ ಒಂದು ಟ್ವೀಟ್ ಸಹ ದೆಹಲಿಯ ಅಭಿವೃದ್ಧಿಯ ಬಗ್ಗೆ ಇಲ್ಲ. ನೋಟು ರದ್ದುಪಡಿಸಿದ್ದರ ವಿರುದ್ಧ ಯಾರ್ಯಾರು ಟ್ವೀಟ್ ಮಾಡಿದ್ದಾರೋ ಅವನ್ನೆಲ್ಲ ಕೇಜ್ರಿವಾಲ್ ರಿಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಎಷ್ಟು ಋಣಾತ್ಮಕ ಅಂಶಗಳು ಇವೆಯೋ ಅವೆಲ್ಲವನ್ನೂ ಅವರ ಟ್ವಿಟರ್ ಖಾತೆಯಲ್ಲಿ ನೀವು ಕಾಣಬಹುದು. ನೋಟು ರದ್ದುಪಡಿಸಿದ ನಿರ್ಧಾರವನ್ನು ಶತಾಯಗತಾಯ ಹಿಂಪಡೆಯುವಂತೆ ಮಾಡಲೇಬೇಕು ಎಂಬಂತಿವೆ ಅವರ ಟ್ವೀಟ್ಗಳು.
ಮಂಗಳವಾರ ದೆಹಲಿ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ದೀರ್ಘ ಭಾಷಣ ಮಾಡಿದ ಅವರು, ಸಂಪೂರ್ಣ ಸಮಯವನ್ನು ನೋಟು ರದ್ದು ಹಾಗೂ ಮೋದಿ ವಿರುದ್ಧದ ಟೀಕೆಗೇ ಮೀಸಲಿಟ್ಟಿದ್ದರು. ವಿಚಿತ್ರವೆಂದರೆ ಯಾವುದೋ ಒಂದು ರದ್ದಿ ಕಾಗದದಲ್ಲಿ ‘ಗುಜರಾತ್ ಸಿಎಂ- 25 ಕೋಟಿ (12 Done & rest?) ಎಂದು ಬರೆದಿರುವುದನ್ನೇ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ 25 ಕೋಟಿ ರು. ಲಂಚ ಪಡೆದಿದ್ದರು ಎಂಬುದಕ್ಕೆ ದಾಖಲೆ ಎಂಬಂತೆ ಹಾಜರು ಪಡಿಸಿದ್ದಾರೆ. ಯಾರು, ಯಾವಾಗ, ಯಾರಿಗೆ ಕಳುಹಿಸಿದರು? ಯಾವ ಯೋಜನೆ ಅವರಿಗೆ ನೀಡಲಾಗಿತ್ತು? ಯಾಕೆ ಹಣ ಕೊಟ್ಟರು? ಸರಕಾರದಿಂದ ಯಾವ ಕೆಲಸ ಆಗಿದೆ? ಎಂಬ ಯಾವ ಮಾಹಿತಿಗಳೂ ಇಲ್ಲ.
ಮೊದಲು ಯು ಟರ್ನ್ಗೆ ಖ್ಯಾತಿ ಗಳಿಸಿದ್ದ ಕೇಜ್ರಿವಾಲ್ ಈಗ ಹಿಟ್ ಆ್ಯಂಡ್ ರನ್ನಿಂದ ಖ್ಯಾತಿ ಗಳಿಸಲು ಹವಣಿಸುತ್ತಿದ್ದಾರೆ.
ಕಪ್ಪು ಹಣ ಇರುವವರು ಹಾಗೂ ನೋಟು ರದ್ದು ವಿರೋಧಿಸುವ ಮೂಲಕ ಅವರನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಕೇಜ್ರಿವಾಲ್ ಎಷ್ಟು ಹತಾಶರಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರ ಮಾತುಗಳನ್ನು ಗಮನಿಸಿ.
ನೋಟು ರದ್ದುಗೊಳಿಸಿದ ನಂತರ ಅವರು ಹಲವು ಪತ್ರಿಕಾಗೋಷ್ಠಿಗಳನ್ನು ಮಾಡಿದ್ದಾರೆ. ಅವರೊಳಗಿದ್ದ ಹೋರಾಟಗಾರ ದಿಢೀರನೆ ಸಿಡಿದೆದ್ದಿದ್ದಾರೆ. ಸರಣಿ ಟ್ವೀಟ್ಗಳು, ಒಂದಾದಮೇಲೊಂದು ಸಂದರ್ಶನ, ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ.
‘ನೋಟು ನಿಷೇಧ ಒಂದು ದೊಡ್ಡ ಹಗರಣ. ಈ ನಿರ್ಧಾರದಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡರು. ಇನ್ನು ಕೆಲವರು ಹೃದಯಾಘಾತಕ್ಕೊಳಗಾದರು. ದೇಶದ ತುಂಬೆಲ್ಲ ಗೊಂದಲದ ವಾತಾವರಣವಿದೆ. ಮಾರುಕಟ್ಟೆ, ಅಂಗಡಿಗಳು ಬಂದ್ ಆಗಿವೆ. ಮೊದಲು ಎರಡು ದಿನ ಅಂದರು. ಆಮೇಲೆ 10 ದಿನದಲ್ಲಿ ಎಲ್ಲ ಸರಿಯಾಗುತ್ತದೆ ಎಂದರು. ಈಗ ನೋಡಿದರೆ ಗೋವಾದಲ್ಲಿ ಇನ್ನು 50 ದಿನ ಕೊಡಿ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಇನ್ನೂ 50 ದಿನ ಊಟ, ಹಾಲು, ದುಡ್ಡಿಲ್ಲದೆ ಇರಬೇಕೆ? ಡೀಸೆಲ್ ತುಂಬಲು ದುಡ್ಡಿಲ್ಲ, ಟೋಲ್ಗೆ ಕೊಡಲು ದುಡ್ಡಿಲ್ಲ. ಜನ ಹಸಿವಿನಿಂದ ಸಾಯುತ್ತಿದ್ದಾರೆ. ದುಡ್ಡು ಇರುವವರು ಕೂಡ ಸಾಯುತ್ತಿದ್ದಾರೆ. ಮದುವೆಗಳು ರದ್ದಾಗುತ್ತಿವೆ’ ಎಂದರು.
ವಿಚಿತ್ರವೆಂದರೆ ಇಂದಿಗೂ ಡೀಸೆಲ್, ಪೆಟ್ರೋಲ್ಗಾಗಿ ಹಳೆ ನೋಟುಗಳನ್ನು ಪಡೆಯಲಾಗುತ್ತಿದೆ. ಇದೂ ಗೊತ್ತಿಲ್ಲದಷ್ಟು ಅರವಿಂದ್ ಕೇಜ್ರಿವಾಲ್ ಮೂರ್ಖರೇ? 18ರ ತನಕ ಟೋಲ್ ಫೀ ರದ್ದುಪಡಿಸಿರುವುದು ಅವರ ಕಿವಿಗೆ ಬಿದ್ದಿಲ್ಲವೇ? ಅವರ ಗಂಟಲು ಮಾತ್ರ ಸರಿಯಿಲ್ಲ ಅಂದುಕೊಂಡಿದ್ದೆ. ಬೆಂಗಳೂರಿನ ವೈದ್ಯರು ಅವರ ನಾಲಗೆಯನ್ನು ಕೊಂಚ ಆಚೀಚೆ ಮಾಡಿದರು ಎಂಬ ಸುದ್ದಿಯೂ ಬಂತು. ಆದರೆ ಅವರಿಗೆ ಅದೊಂದೇ ಸಮಸ್ಯೆಯಲ್ಲ. ಸರಿಯಾಗಿ ಕೇಳುವುದೂ ಇಲ್ಲ ಅಥವಾ ಅವರಿಗೆ ಬೇಕಾದ ಹಾಗೆ ಕೇಳಿಸಿಕೊಳ್ಳುತ್ತಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ.
ಪ್ರಧಾನಿ ಮೋದಿ ಎಲ್ಲೂ ‘ಇನ್ನೂ 50 ದಿನ ಉಪವಾಸವಿರಿ, ಹಣವಿಲ್ಲದೇ ಇರಿ’ ಎಂದು ಹೇಳಿಲ್ಲ. ಅವರು ಹೇಳಿದ್ದೇನೆಂದರೆ ‘ಇನ್ನು 50 ದಿನ ಕೊಡಿ, ಎಲ್ಲವೂ ಸಾಮಾನ್ಯ ಸ್ಥಿತಿಗೆ ಬರುತ್ತದೆ’ ಎಂದಿದ್ದಾರೆ. ಇಷ್ಟು ದೊಡ್ಡ ದೇಶದಲ್ಲಿ ಎರಡು ಪ್ರಮುಖ ನೋಟುಗಳನ್ನು ದಿಢೀರನೆ ರದ್ದುಪಡಿಸುವುದು, ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜನರಿಗೆ ಕಷ್ಟವಾಗುತ್ತದೆ, ಜನರ ವಿರೋಧ ಎದುರಿಸುಬೇಕಾಗುತ್ತದೆ ಎಂಬುದು ಗೊತ್ತಿದ್ದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
‘ಜನ ಕಷ್ಟ ಪಡುತ್ತಿದ್ದರೆ ಪ್ರಧಾನಿ ಮೋದಿ ದೊಡ್ಡ ಹಗರಣ ಮಾಡಿ ಕಪ್ಪು ಹಣ ಸಂಗ್ರಹಿಸಿದವರೆಲ್ಲ ಈಗ ಕ್ಯೂನಲ್ಲಿ ನಿಂತಿದ್ದಾರೆ’ ಎಂದು ಹೇಳಿ ದೇಶದ ಜನರಿಗೆ ಅವಮಾನ ಮಾಡಿದ್ದಾರೆ. ಆದರೆ ಕಾಲಾ ದಂಧೆ ಮಾಡುವ ಒಬ್ಬ ವ್ಯಕ್ತಿಯೂ ಸಾಲಿನಲ್ಲಿ ನಿಂತಿಲ್ಲ. ನಿಂತಿರುವವರೆಲ್ಲ ಸಾಮಾನ್ಯ ಜನ. ಆದ್ದರಿಂದ ಮೋದಿ ಕ್ಷಮೆ ಯಾಚಿಸಬೇಕು ಎಂದೂ ಕೇಜ್ರಿವಾಲ್ ಆಗ್ರಹಿಸಿದ್ದರು. ಆದರೆ ಮೋದಿ ಹೇಳಿದ್ದು, ‘ದೊಡ್ಡ ದೊಡ್ಡ ಹಗರಣ ಮಾಡಿ ಕಪ್ಪು ಹಣ ಸಂಗ್ರಹಿಸಿದವರು ಈಗ 4000 ರು.ಗಾಗಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ’ ಎಂದೇ ಹೊರತು ಕಪ್ಪು ಹಣ ಸಂಗ್ರಹಿಸಿದವರೆಲ್ಲ ಕ್ಯೂ ನಿಂತಿದ್ದಾರೆ ಎಂದು ಹೇಳಿರಲಿಲ್ಲ. ಅವರೇ ಹೇಳಿರುವಂತೆ ಕಪ್ಪು ಹಣ ಇರುವವರ್ಯಾರೂ ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಂತಿಲ್ಲ. ನಿಲ್ಲುವುದು ಸಾಧ್ಯವೂ ಇಲ್ಲ. ಹಾಗೇನಾದೂ ಅವರು ಹಣ ಹಾಕಲು ಸಾಲಿನಲ್ಲಿ ನಿಂತರೆ ಟಿವಿ ಕ್ಯಾಮೆರಾಗಳು ಅದನ್ನು ಸೆರೆಹಿಡಿಯದೇ ಬಿಡುತ್ತವಾ?
ಕೇಜ್ರಿವಾಲ್ ಎಷ್ಟು ಖತರ್ನಾಕ್ ಚಿಂತಕ ಎಂಬುದು ಇದರಲ್ಲೇ ತಿಳಿಯಬಹುದು.
‘ಜನರಿಗೆ ಇಷ್ಟೆಲ್ಲ ತೊಂದರೆಯಾಗುತ್ತಿದ್ದರೂ ಕೇಂದ್ರ ಸರಕಾರ, ಪ್ರಧಾನಿ ಮಾತಿನಲ್ಲಿ ಗಾಂಭೀರ್ಯವಿಲ್ಲ. 24 ಗಂಟೆಯೊಳಗೆ ಅವರು ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನೋಟು ರದ್ದುಪಡಿಸಿದ ನಿರ್ಧಾರವನ್ನೇ ರದ್ದುಪಡಿಸಬೇಕು. ಅದೊಂದೇ ಮಾರ್ಗ ಇರುವುದು. ವಿಚಾರ ಮಾಡಿ, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನೋಟು ರದ್ದುಪಡಿಸಿ’ ಎಂದಿದ್ದಾರೆ. ಇಂತಹ ಮೂರ್ಖ ಒತ್ತಾಯವನ್ನು ಅರವಿಂದ್ ಕೇಜ್ರಿವಾಲ್ ಮಾತ್ರ ಮಾಡಲು ಸಾಧ್ಯ.
ಈಗ ನೋಟು ನಿಷೇಧ ವಾಪಸ್ ಪಡೆದು, ಇನ್ನೊಂದು ಸ್ವಲ್ಪ ದಿನ ಬಿಟ್ಟು ಜಾರಿ ಮಾಡಿದರೆ, ಕಪ್ಪು ಹಣ ಇರುವವರೆಲ್ಲ ನೋಟು ಬದಲಾಯಿಸಿಕೊಳ್ಳುವುದಿಲ್ಲವೇ? ಇಂತಹ ಸಾಮಾನ್ಯ ವಿಷಯ ಕೇಜ್ರಿವಾಲ್ರಂಥ ಅತಿಬುದ್ಧಿವಂತರಿಗೆ ಅರ್ಥವಾಗುವುದಿಲ್ಲ ಎಂದಲ್ಲ. ಒಟ್ಟಿನಲ್ಲಿ ಹೇಗಾದರೂ ಮಾಡಿ ನೋಟು ರದ್ದು ವಾಪಸ್ ಪಡೆಯುವಂತೆ ಮಾಡಬೇಕು ಎಂಬುದಷ್ಟೇ ಅವರ ಉದ್ದೇಶವಾದಂತಿದೆ. ನೋಟು ರದ್ದುಪಡಿಸಿದ ನಿರ್ಧಾರ ಹಿಂಪಡೆದರೆ ಅದರಿಂದ ಲಾಭವಾಗುವುದು ಕಪ್ಪು ಹಣ ಇರಿಸಿಕೊಂಡವರಿಗೆ ಹೊರತು ಸಾಮಾನ್ಯ ಜನರಿಗಲ್ಲ.
ತುಂಬ ಹಾಸ್ಯಾಸ್ಪದ ವಿಷಯವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ – ‘ಚುನಾವಣೆಗೆ ಮೊದಲೇ ಮೋದಿ ನೋಟು ರದ್ದು ಮಾಡುವ ವಿಷಯ ಗೊತ್ತಿದ್ದಿದ್ದರೆ ಯಾರೂ ಮತ ಹಾಕುತ್ತಿರಲಿಲ್ಲ’ ಎಂದಿದ್ದಾರೆ. ಇದಕ್ಕೆ 2016ರ ಅತ್ಯಂತ ಉತ್ತಮ ಜೋಕ್ ಎಂದು ಹೇಳಬಹುದು. ಮೊದಲೇ ಗೊತ್ತಿದ್ದರೆ ಓಟು ಹಾಕುವುದು ಹಾಗಿರಲಿ, ನೋಟುಗಳೆಲ್ಲ ಬದಲಾಗಿರುತ್ತಿದ್ದವು. ಇಂತಹ ಮೂರ್ಖ ಹೇಳಿಕೆಗಳನ್ನು ಒಬ್ಬ ಮುಖ್ಯಮಂತ್ರಿಯಿಂದ ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳನ್ನು ಅವರು ನೀಡುತ್ತಿದ್ದರು ಎಂಬುದು ದೆಹಲಿ ಜನರಿಗೆ ಗೊತ್ತಿದ್ದಿದ್ದರೆ ಬಹುಶಃ ಅವರೂ ಕೇಜ್ರಿವಾಲ್ಗೆ ಓಟು ಹಾಕುತ್ತಿರಲಿಲ್ಲವೇನೊ!
ಕೇಜ್ರಿವಾಲ್ ‘ಕೇಂದ್ರ ಸರಕಾರದ ಮಾತುಗಳಲ್ಲಿ ಗಾಂಭೀರ್ಯವಿಲ್ಲ’, ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟವರೊಂದಿಗೆ ದೋಸ್ತಿ ಮಾಡಿದ್ದಾರೆ, ಹಣ ಇರುವ ನಿಮ್ಮ ದೋಸ್ತರನ್ನು ಜೈಲಿಗೆ ಕಳುಹಿಸಿ, ನಕಲಿ ನೋಟು ತಯಾರಿಸುವವರ ಜತೆ ದೋಸ್ತಿ ಮಾಡುವ ಬದಲು ಅವರನ್ನು ಬಂಧಿಸಿ ಎಂದೆಲ್ಲ ಹೇಳಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಕ್ರಮದಿಂದ ಶೇ.50ರಷ್ಟು ಕಪ್ಪು ಹಣ ಬಿಜೆಪಿ ಪಾಲಾಗಲಿದೆ ಎಂದು ಆರೋಪಿಸಿದ್ದಾರೆ.
ಇದನ್ನೆಲ್ಲ ಕೇಳಿದರೆ ಗಾಂಭೀರ್ಯ ಇಲ್ಲದಿರುವುದು ಯಾರ ಮಾತಲ್ಲಿ? ಎಂಬುದನ್ನು ಬಿಡಿಸಿ ಹೇಳಬೇಕಾ? ಅದು ಹೇಗೆ ಬಿಜೆಪಿ ಪಾಲಾಗಲು ಸಾಧ್ಯ? ಬಿಜೆಪಿ ಪಾಲಾಗುತ್ತದೆ ಎಂಬ ಆತಂಕವೋ ತಮಗೇನು ಸಿಗುತ್ತಿಲ್ಲ ಎಂಬ ಹತಾಶೆಯಿಂದ ಹೀಗೆ ಹೇಳುತ್ತಿದ್ದಾರೋ ಎಂಬುದೂ ಅರ್ಥವಾಗುತ್ತಿಲ್ಲ.
ಕೇಜ್ರಿವಾಲ್ ಐಐಟಿಯಲ್ಲಿ ಕಲಿತವರು ಎನ್ನುತ್ತಾರೆ. ಆದರೆ ‘ಕಪ್ಪು ಹಣ ಇರುವವರು ಡಾಲರ್ ಖರೀದಿಸುತ್ತಿದ್ದಾರೆ. ಚಿನ್ನ ಖರೀದಿಸುತ್ತಿದ್ದಾರೆ’ ಎಂದು ಆರೋಪಿಸುತ್ತಾರೆ. ದೇಶದಲ್ಲಿರುವ ಜನರಿಗೆಲ್ಲ ಏನೂ ಗೊತ್ತಿಲ್ಲ ಎಂದು ಅವರು ಭಾವಿಸಿರುವಂತಿದೆ. ಭಾರತದಲ್ಲಿ ಒಬ್ಬ ವ್ಯಕ್ತಿ 5000 ಅಮೆರಿಕನ್ ಡಾಲರ್ ಮಾತ್ರ ಹೊಂದಿರಬಹುದು. ಅಷ್ಟು ಡಾಲರ್ ಖರೀದಿ ಮಾಡಬೇಕಾದರೆ ನಿಮಗೆ ಪಾನ್ ನಂಬರ್ ಸೇರಿದಂತೆ ವಿವಿಧ ದಾಖಲೆಗಳು ಬೇಕು. ಬೇಕಾಬಿಟ್ಟಿ ಯಾರು ಬೇಕಾದರೂ ಡಾಲರ್ ಖರೀದಿ ಮಾಡಲು ಸಾಧ್ಯವಿಲ್ಲ. 5000 ಅಮೆರಿಕನ್ ಡಾಲರ್ ಅಂದರೆ 3,38,575 ರು. ಮಾತ್ರ ಎಂಬುದನ್ನು ಐಐಟಿ ವಿದ್ವಾನ್ ಕೇಜ್ರಿವಾಲ್ಗೆ ಹೇಳಿಕೊಡಬೇಕೆ? ಚಿನ್ನ ಖರೀದಿಯೂ ಸುಲಭವಲ್ಲ. ಯಾಕೆಂದರೆ 500-1000 ರು. ನೋಟು ಸ್ವೀಕರಿಸುವ ಅವಕಾಶವನ್ನು ಚಿನ್ನದ ಅಂಗಡಿಗಳಿಗೆ ನೀಡಿಲ್ಲ. ಅವರು ಕೂಡ ಬೇಕಾಬಿಟ್ಟಿ ವ್ಯವಹಾರ ನಡೆಸಲು ಸಾಧ್ಯವಿಲ್ಲ.
ಇದೇ ಕೇಜ್ರಿವಾಲ್ ಇನ್ನೂ ಒಂದು ಆರೋಪ ಮಾಡುತ್ತಾರೆ. ‘ಈ ವರ್ಷ ಸೆಪ್ಟೆಂಬರ್ನಲ್ಲಿ 5.98ಲಕ್ಷ ಕೋಟಿ ರು. ಬ್ಯಾಂಕಿಗೆ ಜಮಾ ಆಗಿದೆ. ಇದು ಕಳೆದ 2 ವರ್ಷಗಳಲ್ಲಿ ಅತ್ಯಂತ ಹೆಚ್ಚು. ಇದರರ್ಥ ಮೋದಿ ಬಿಜೆಪಿಯ ಕೆಲವರಿಗೆ ಮೊದಲೇ ಹೇಳಿದ್ದಾರೆ ಎಂಬ ಅನುಮಾನ ಮೂಡುತ್ತದೆ’ ಎಂದು ಒಂದಷ್ಟು ಬ್ಯಾಂಕ್ ದಾಖಲೆಗಳನ್ನು ತೋರಿಸುತ್ತಾರೆ. ಕೇಂದ್ರ ಸರಕಾರ ಕಪ್ಪು ಹಣ ಇರುವವರಿಗೆ ಸ್ವಯಂ ಘೋಷಣೆಗೆ ಅವಕಾಶ ನೀಡಿತ್ತು. ಅದಕ್ಕೆ ಕೊನೆಯ ದಿನಾಂಕ ಸೆ.30 ಆಗಿತ್ತು. ಆ ಯೋಜನೆಯಲ್ಲಿ ಒಟ್ಟು 65,250 ಕೋಟಿ ರು. ಕಪ್ಪು ಹಣವನ್ನು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಈ ಹಣ ಬ್ಯಾಂಕಿಗೇ ಬರಬೇಕಲ್ಲವೇ? ಇಷ್ಟಕ್ಕೂ ಯಾರಾದರೂ ಹಾಗೆಯೇ ಬ್ಯಾಂಕ್ ಖಾತೆಗೆ ಹಣ ಹಾಕಿದ್ದರೆ ಅದು ಲೆಕ್ಕಕ್ಕೆ ಸಿಗಲೇಬೇಕಲ್ಲವೇ? ಆದಾಯ ತೆರಿಗೆ ಇಲಾಖೆ ಅದನ್ನು ಖಂಡಿತ ಗಮನಿಸಿರುತ್ತದೆ. ಬ್ಯಾಂಕ್ ಖಾತೆಗೆ ಹಾಕಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ಹಣ ಇರಿಸಿಕೊಂಡವರು, ಅದನ್ನು ಖಾತೆಗೆ ಜಮಾ ಮಾಡುತ್ತಾರಾ?
ಇಂಥ ಮೂರ್ಖ ಊಹೆಗಳನ್ನೂ ಮಾಡುವ ಜನರಿದ್ದಾರಾ?
ಮೋದಿ ನೋಟು ರದ್ದು ಮಾಡುವ ಕುರಿತು ಬಿಜೆಪಿಯ ಕೆಲವರಿಗೆ ಮೊದಲೇ ಹೇಳಿದ್ದಾರೆ ಎಂಬ ಕೇಜ್ರಿವಾಲ್ ಆರೋಪದ ನಡುವೆಯೇ ಮೋದಿ ಅವರ ತಾಯಿ ಬ್ಯಾಂಕಿಗೆ ಹೋಗಿ ಹಳೆ ನೋಟು ಬದಲಾಯಿಸಿಕೊಂಡಿದ್ದಾರೆ. ಪಾಪ ಬಿಜೆಪಿಯವರಿಗೆಲ್ಲ ಹೇಳಿದ ಮೋದಿ ಅಮ್ಮನಿಗೇ ಹೇಳಿಲ್ಲ ಎಂದೂ ಅರವಿಂದ ಕೇಜ್ರಿವಾಲ್ ಆರೋಪಿಸಿದರೂ ಆಶ್ಚರ್ಯವಿಲ್ಲ. 95 ವರ್ಷದ ಅಮ್ಮನನ್ನು ಬ್ಯಾಂಕಿಗೆ ಕಳುಹಿಸಿದ್ದೇ ದೊಡ್ಡ ನಾಟಕ ಎಂದು ಆರೋಪಿಸುವ ಕೇಜ್ರಿವಾಲರ ಭಟ್ಟಂಗಿಗಳಿಗೇನೂ ಕಡಿಮೆಯಿಲ್ಲ.
ಒಟ್ಟಾರೆ, ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಬಂದು ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರೆ, ಕೇಜ್ರಿವಾಲ್ ಸೇರಿದಂತೆ ಅವರ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳಬಹುದು, ದೇಶದಲ್ಲಿ ಯಾರೂ ಮೋದಿಯನ್ನು ವಿರೋಧ ಮಾಡಿರದಷ್ಟು ವಿರೋಧ, ಟೀಕೆ ಮಾಡಿದ್ದಾರೆ ಎಂದು. ದೆಹಲಿಗಾಗಿ ಏನು ಮಾಡಿದ್ದೀರಿ ಎಂದು ಕೇಳಿದರೆ, ಸಣ್ಣ ಮಕ್ಕಳು ದೂರುವಂತೆ ಅದಕ್ಕೂ ಮೋದಿಯನ್ನೇ ಬೊಟ್ಟು ಮಾಡಿ ತೀಡುವ ಕೇಜ್ರಿವಾಲರ ಮಾತಿಗೆ ಕಿಮ್ಮತ್ತಿಲ್ಲ.
ಇವರ ಗುರುಗಳಾದ ಅಣ್ಣಾ ಹಜಾರೆಯೇ ಮೋದಿಯ ಈ ನಡೆಯನ್ನು ಬೆಂಬಲಿಸುತ್ತಿರುವಾಗ, ಅದನ್ನು ವಿರೋಧಿಸುವ ಶಿಷ್ಯನನ್ನು ನೋಡಿದರೆ, ಈ ಆಸಾಮಿ ಅಂದು ಧರಣಿ ಕುಳಿತಿದ್ದು ಭ್ರಷ್ಟಾಚಾರಮುಕ್ತ ದೇಶಕ್ಕಾಗಿಯೋ ಅಥವಾ ಭ್ರಷ್ಟಾಚಾರಯುಕ್ತ ದೇಶಕ್ಕಾಗಿಯೋ ಎಂಬ ಅನುಮಾನ ಮೂಡುತ್ತದೆ.