UK Suddi
The news is by your side.

ಧೀಮಂತ ರಾಜಕಾರಣಿ ರಾಮಕೃಷ್ಣ ಹೆಗಡೆ.

ಕರ್ನಾಟಕದ ರಾಜಕಾರಣದಲ್ಲಿ ಹಲವು ದೆಸೆಗಳಲ್ಲಿ ನಮ್ಮ ಕಾಲದ ಯುವಜನತೆಗೆ ಪ್ರಿಯರಾಗಿದ್ದವರಲ್ಲಿ ರಾಮಕೃಷ್ಣ ಹೆಗಡೆ ಪ್ರಮುಖರು. ರಾಮಕೃಷ್ಣ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ‘ಸಿದ್ದಾಪುರ’ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ 1926, ಅಗಸ್ಟ್ 29ರಂದು ಮಹಾಬಲೇಶ್ವರ ಹೆಗ್ಡೆ ಹಾಗು ಸರಸ್ವತಿ ಹೆಗ್ಡೆ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರದ್ದು ಕೃಷಿಕ ಕುಟುಂಬ. 
ಬಾಲ್ಯದಿಂದಲೂ ರಾಮಕೃಷ್ಣ ಹೆಗಡೆ ಅವರಿಗೆ ಸಮಾಜದ ಎಲ್ಲ ವರ್ಗೀಯ ಜನರ ಬಗೆಗೂ ಸಮಾನ ಗೌರವ. ಈ ಕುರಿತಾಗಿ ಅವರು ಒಮ್ಮೆ ಹೇಳಿದ್ದು ಹೀಗೆ: “ನನಗಾಗ ಕೇವಲ ಆರು ಅಥವಾ ಏಳು ವರ್ಷವಿರಬಹುದು. ಸಿದ್ದಾಪುರದ ಗದ್ದೆಯ ನಡುವೆ ಇದ್ದ ನಮ್ಮ ಮನೆ ಆ ಕಾಲಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದು ರೀತಿಯಲ್ಲಿ ತಂಗುದಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಗಡಿಭಾಗದಲ್ಲಿದ್ದ ನಮ್ಮ ಮನೆ ಸ್ವಾತಂತ್ರ್ಯ ಹೋರಾಟಗಾರರು ಪೋಲಿಸರಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು. ಶಿವಮೊಗ್ಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಬೇಲಿ ನೆಗೆದು ನಮ್ಮ ಮನೆಗೆ ಬಂದರೆ ಹಿಡಿಯುವಂತಿರಲಿಲ್ಲ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆ ಪೋಲಿಸರು ಬಂದರೆ ಸಲೀಸಾಗಿ ಬೇಲಿ ನೆಗೆದು ಶಿವಮೊಗ್ಗ ಗಡಿಪ್ರದೇಶಕ್ಕೆ ತೆರಳಬಹುದಾಗಿತ್ತು. ಮೂಲತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಮಹಾಬಲೇಶ್ವರ ಹೆಗಡೆ ಯಾರೇ ನಮ್ಮ ಮನೆಗೆ ಬಂದರೂ ಜಾತಿ ಧರ್ಮ ಬೇಧವಿಲ್ಲದೆ ಆತಿಥ್ಯ ನೀಡುತಿದ್ದರು. ನನ್ನ ತಾಯಿ ಸರಸ್ವತಿ ಹೆಗಡೆ ಕೂಡ ಅಕ್ಷರಶಃ ಅನ್ನಪೂರ್ಣೆಯಂತೆ ನಡೆದುಕೊಳ್ಳುತಿದ್ದರು. ನಮ್ಮ ಮನೆ ಬ್ರಿಟೀಷರಿಗೆ ತಲೆನೋವಾದ ಕಾರಣ ಸರ್ಕಾರ ಗದ್ದೆಯ ಬಯಲಿನಲ್ಲಿದ್ದ ನಮ್ಮ ಮನೆಯನ್ನು ಧ್ವಂಸ ಮಾಡುವಂತೆ ಪೋಲಿಸರಿಗೆ ಆದೇಶ ಜಾರಿ ಮಾಡಿತು. ಒಂದು ಬೆಳಗಿನ ಜಾವ ಮನೆಗೆ ಬಂದ ಪೋಲಿಸರು ನಮ್ಮ ಹೆಂಚಿನ ಮನೆ, ಅದರೊಳಗೆ ಅತಿಥಿಗಳಿಗಾಗಿ ನಿರ್ಮಿಸಿದ್ದ ಅಟ್ಟ, ಪಾತ್ರೆ, ದಿನಸಿ ಸಾಮಾನುಗಳನ್ನು ನಾಶ ಮಾಡಿ ಹೊರಟು ಹೋದರು. ನನ್ನ ಅಪ್ಪ, ಅಮ್ಮ, ನಾನು, ನನ್ನ ಸಹೋದರ ಎಲ್ಲರೂ ಬಯಲಿಗೆ ಬಿದ್ದೆವು. ದೃತಿಗೆಡೆದ ನನ್ನಪ್ಪ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ನಾವು ಸಂತೆಯಿಂದ ಬರುವ ವೇಳೆಗೆ ನಮ್ಮೂರಿನ ಸುತ್ತ ಮುತ್ತಲಿನ ಜನ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ಸಾಂಬಾರ್ ಪುಡಿ ಹೀಗೆ ಹಲವು ವಸ್ತುಗಳನ್ನು ಅಮ್ಮನ ಬಳಿ ಕೊಟ್ಟು ಹೋಗಿದ್ದರು. ಆ ದಿನ ನನ್ನಮ್ಮ ಬಯಲಿನಲ್ಲಿ ಕಲ್ಲುಗಳನ್ನು ಇಟ್ಟು ಅಡುಗೆ ಮಾಡಿ ನಮಗೆ ಬಡಿಸಿದಳು. ಆ ದಿನ ನಾನು, ನನ್ನ ಕುಟುಂಬ ತಿಂದ ಅನ್ನ, ಬೇಳೆ ಅಥವಾ ಉಪ್ಪು ಯಾರ ಮನೆಯದು, ಯಾರ ಜಾತಿಯದು, ಯಾವ ಧರ್ಮದ್ದೆಂದು ನಾವ್ಯಾರೂ ಕೇಳಲಿಲ್ಲ. ಎಲ್ಲಾ ಧರ್ಮದ, ಎಲ್ಲ ಜಾತಿಯ ಋಣ ನನ್ನ ರಕ್ತದಲ್ಲಿ ಹರಿಯುತ್ತಿದೆ.”
ಹೆಗಡೆ ಅವರು ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ವಿಶ್ವವಿದ್ಯಾಲಯಗಳಲ್ಲಿ ಓದಿ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ ಹೆಗಡೆಯವರು ತಮ್ಮ 20ನೇ ವಯಸಲ್ಲೇ ಕರ್ನಾಟಕದಲ್ಲಿ ರೈತ ಚಳುವಳಿಯ ರೂವಾರಿಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಹೆಗಡೆಯವರು 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಮಂತ್ರಿಮಂಡಲಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ ಜನಪ್ರಿಯರಾಗಿದ್ದ ಹೆಗಡೆ ಮುಂದೆ ಇಂದಿರಾಗಾಂಧಿಯವರು 1975ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಜೈಲುವಾಸಕ್ಕೆ ತಳ್ಳಲ್ಪಟ್ಟರು. ಜೈಲಿನಿಂದ ಹೊರಬಂದು ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ನಿರ್ಮಾಣಗೊಂಡ ಜನತಾ ಪಕ್ಷವನ್ನು ಸೇರಿದರು. 1983ರಲ್ಲಿ ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾದ ಹೆಗಡೆಯವರು ದೇಶದ ಮೊದಲ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1985ರಲ್ಲಿ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ತಮ್ಮ ಪಕ್ಷದ ಸಾಧಾರಣ ಸಾಧನೆಯನ್ನು ಕಂಡ ರಾಮಕೃಷ್ಣ ಹೆಗಡೆಯವರು ಪಕ್ಷದ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮರು ವರ್ಷ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು, ಕುರ್ಚಿಗಾಗಿ ಬಡಿದಾಡುವ ರಾಜಕಾರಣದಲ್ಲಿ ರಾಮಕೃಷ್ಣ ಹೆಗ್ಡೆ ಅವರ ಈ ನಡೆ ಸಾರ್ವಕಾಲಿಕವಾಗಿ ಅಚ್ಚರಿ ಹುಟ್ಟಿಸುವಂತದ್ದಾಗಿತ್ತು. ಪಂಚಾಯತ್ ರಾಜ್ ಕಾನೂನು ವ್ಯವಸ್ಥೆ, ಲೋಕಾಯುಕ್ತ ವ್ಯವಸ್ಥೆ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಮುಂತಾದವು ರಾಮಕೃಷ್ಣ ಹೆಗಡೆಯವರ ಸರ್ಕಾರದ ಅಪೂರ್ವ ಕೊಡುಗೆಗಳು. 
ಹೆಗಡೆಯವರಿಗೆ ಚಿಕ್ಕಂದಿನಿಂದಲೂ ಪತ್ರಕರ್ತರಾಗಬೇಕೆಂಬ ಮಹದಾಸೆಯಿತ್ತು. ಅವರು ಶಿರಸಿ ಮಾರಿಕಾಂಬ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ ಕೈಬರಹದ ಪತ್ರಿಕೆ ‘ಹೂವಿನ ಸರ’ಕ್ಕೆ ಲೇಖನ ಬರೆಯುತ್ತಿದ್ದರು. ಬನಾರಸ್‌ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದವು. ಕರ್ನಾಟಕಕ್ಕೆ ಮರಳಿದ ಹೆಗಡೆ ನಂತರ ಕಾಲದ ಹೊರಳಿಗೆ ಸಿಕ್ಕು, ರಾಜಕೀಯದತ್ತ ಮುಖ ಮಾಡಿದರು. ಉತ್ತಮ ಬರಹಗಾರರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸಂಬಂಡಿಸಿದಂತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. ‘ಎ ಕ್ಲೀನ್ ಗವರ್ನಮೆಂಟ್’, ‘ಪಾರ್ಲಿಮೆಂಟ್ ಅ೦ಡ್ ಪೊಲಿಟಿಕಲ್ ಕಲ್ಚರ್’ , ‘ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಚೇಂಜಸ್ ಇನ್ ಇಂಡಿಯಾ’, ‘ಜುಡಿಶಿಯಲ್ ಥಿಯರಿ’, ‘ಎಲೆಕ್ಟೋರಲ್ ರಿಫಾರ್ಮ್ಸ್’ ಇನ್ನೂ ಮುಂತಾದ ಹೊತ್ತಗೆಗಳ ಲೇಖಕರು ಹೆಗಡೆ.

ತಮ್ಮ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13 ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ ರಾಮಕೃಷ್ಣ ಹೆಗಡೆಯವರು. 1983ರಲ್ಲಿ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಹೆಗಡೆಯವರು ಅಧಿಕಾರ ವಿಕೇಂದ್ರೀಕರಣದ ಪ್ರಬಲ ಪ್ರತಿಪಾದಕರಾಗಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಂಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅಂತರದಿಂದ ಬಿದ್ದು ಹೋದಾಗ, ಮಂತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎಂಬುದನ್ನು ನಿರೂಪಿಸಿದರು. ಸಾಹಿತ್ಯ ಸಂಸ್ಕ್ರತಿ ಕಲೆಗಳಲ್ಲಿ ಅವರು ಅಪಾರ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದವರಾಗಿದ್ದರು.
ದೇವೇಗೌಡರು ಮುಖ್ಯಮಂತ್ರಿಗಳಾದ ನಂತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ. ಕೇಂದ್ರದತ್ತ ತಮ್ಮ ಗಮನ ಕೇಂದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು. 
ರಾಮಕೃಷ್ಣ ಹೆಗಡೆಯವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿದ್ದಾಗ ಅವರು ಮತ್ತು ಅವರ ಸಂಪುಟದ ಕೆಲವೊಂದು ಮಂತ್ರಿಗಳಾದ ನಜೀರ್ ಸಾಬ್ ಅಂತಹ ಮಹನೀಯರು ಮಾಡಿದ ಕೆಲಸ ನೋಡಿ ಅವರ ಆಡಳಿತದ ಬಗ್ಗೆ ನಾವು ಅಭಿಮಾನ ಬೆಳೆಸಿಕೊಂಡಿದ್ದೆವು. ಅವರು ವಿದಾನಸಭಾ ಸ್ಥಾನಕ್ಕೆ ಕನಕಪುರದಲ್ಲಿ ಸ್ಪರ್ಧಿಸಿದಾಗ ಗೆಳೆಯರೆಲ್ಲಾ ದಂಡುದಂಡಾಗಿ ಕನಕಪುರದ ಎಲ್ಲ ಕ್ಷೇತ್ರಗಳಲ್ಲಿ ತಿರುಗಿ ಪ್ರಚಾರ ನಡೆಸಿದ್ದು ನೆನಪಿನಲ್ಲಿ ಇನ್ನೂ ಹಸುರಾಗಿದೆ. ಮುಂದೆ ಅವರ ಆಡಳಿತ ಕಾಲದಲ್ಲಿ ಸಹಾ ಅವರ ಕೆಲವೊಂದು ಸಹೋದ್ಯೋಗಿಗಳ ಅಧಿಕಾರ ಲಾಲಸೆ, ಅದನ್ನು ಬಗ್ಗು ಬಡಿಯಲು ಹೆಗಡೆಯವರು ರೂಪಿಸಿದ ಕೆಲವೊಂದು ತಂತ್ರಗಳು, ಹೆಗಡೆಯಂತಹವರೂ ಕೂಡಾ ಹೆಂಡದ ದೊರೆಗಳಿಗೆ ಹತ್ತಿರವಾಗಿದ್ದು ಇವೆಲ್ಲಾ ಅಷ್ಟೊಂದು ನಮಗೆ ಹಿತ ನೀಡುವ ವಿಷಯವಾಗಿರಲಿಲ್ಲ. ಹೆಗಡೆಯವರು ರಸಿಕತೆಯ ಸುದ್ಧಿಗಳಿಗೆ ಸಹಾ ಹೆಸರಾಗಿದ್ದವರು. ಈ ಎಲ್ಲವುಗಳ ನಡುವೆ ಕೂಡಾ ಕರ್ನಾಟಕದ ವಿವಿಧ ಕಾಲಮಾನಗಳಲ್ಲಿ ಆಗಿಹೋದ ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗಡೆ ನಮ್ಮಲ್ಲಿ ನೆನಪಾಗಿ ಉಳಿದಿರುವ ಅಪರೂಪದ ವ್ಯಕ್ತಿ ಎಂಬುದು ಮಾತ್ರ ಸುಳ್ಳಲ್ಲ. 
ಜನಪ್ರಿಯತೆಯೇ ಬೇರೆ ಓಟಿನ ರಾಜಕೀಯವೇ ಬೇರೆ ಎಂಬುದು ಹೆಗಡೆ ಅವರ ಕುರಿತು ಯೋಚಿಸುವಾಗ ಮತ್ತಷ್ಟು ನಮ್ಮ ಮನಸ್ಸಿಗೆ ರಾಚುತ್ತದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಗೆದ್ದ ಒಂದೆರಡು ವಿದಾನಸಭಾ ಚುನಾವಣೆಗಳನ್ನು ಬಿಟ್ಟರೆ, ಲೋಕಸಭೆಗೆ ಸ್ಪರ್ಧಿಸಿದಾಗ ಜನ ಅವರನ್ನೆಂದೂ ಗೆಲ್ಲಿಸಲಿಲ್ಲ. ಅವರನ್ನು ಅವರ ಪಕ್ಷದವರೇ ತುಳಿದು ಮೇಲೇರಿದಾಗಲೂ ಜನ ಅವರನ್ನು ಬೆಂಬಲಿಸಲಿಲ್ಲ. ಅವರ ಬೆಂಬಲಿಗರೇ ಅವರನ್ನು ಬಿಟ್ಟು ಕುರ್ಚಿ ಆವರಿಸಲು ಓಡಿದರು. ಉತ್ತಮ ರಾಜಕಾರಣಿ ಬೇಕು ಎಂದು ಪ್ರತೀದಿನ ಬಡಬಡಿಸುವ ಈ ದೇಶದಲ್ಲಿ ಉತ್ತಮವಾಗಿ ಕೆಲಸ ಮಾಡುವ ರಾಜಕಾರಣಿಗೆ ದಕ್ಕುವ ಬೆಲೆ ಇದು.
ರಾಮಕೃಷ್ಣ ಹೆಗಡೆಯವರು 2004ರ ವರ್ಷದ ಜನವರಿ 12ರಂದು ನಿಧನರಾದರು. ರಾಜಕಾರಣದಲ್ಲಿದ್ದು ಜನಾನುರಾಗಿಯಾಗಿ, ಜನತೆಯ ಕೈಗೆ ಆಡಳಿತ ನೀಡಿ, ಸದುದ್ದೇಶಗಳಿಂದ ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದಕ್ಕೆ ರಾಮಕೃಷ್ಣ ಹೆಗಡೆ ಅವರು ಸಾಕಷ್ಟು ನೆನಪಾಗುತ್ತಾರೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಕೃಪೆ:ಫೇಸ್ಬುಕ್

Comments