UK Suddi
The news is by your side.

ಉಪ್ಪಿನ ಬೆಟಗೇರಿ: ‘ಕಾಯಕ ಯೋಗಿ’ ಪ್ರಶಸ್ತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

h4-uppin betageri p1.jpg
ಉಪ್ಪಿನ ಬೆಟಗೇರಿ: ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿದ್ದ ಲಕ್ಷಾಂತರ ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ತಾವು ಸಂಪಾದಿಸಿದ ಸಂಗೀತದ ವಿದ್ಯೆಯನ್ನು ಧಾರೆಯೆರೆದು ಅವರ ಬಾಳನ್ನು ಬೆಳಗಿಸಿದ ಮಹಾನ್ ಚೇತನ ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು ಎಂದು ಗ್ರಾಮದ ಹಿರಿಯ ಮಲ್ಲೇಶಪ್ಪ ಸಂಕಣ್ಣವರ ಹೇಳಿದರು.
ಸ್ಥಳೀಯ ಶ್ರೀ ಗ್ರಾಮದೇವಿ ಗಜಾನನ ಯುವಕ ಮಂಡಳದ ವತಿಯಿಂದ 11 ನೇ ದಿನದ ಗಣೇಶ ವಿಸರ್ಜನೆ ಅಂಗವಾಗಿ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ಪಂಡಿತ ಪುಟ್ಟರಾಜ ಗವಾಯಿಗಳವರ 7 ನೇ ಪುಣ್ಯಾರಾಧನೆ ಹಾಗೂ ‘ಕಾಯಕ ಯೋಗಿ’ ಪ್ರಶಸ್ತಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ, ಸಾಹಿತ್ಯ ಹಾಗೂ ಆಧ್ಯಾತ್ಮದಲ್ಲಿ ಅವರು ತೋರಿದ ಶೃದ್ಧೆ ಅನನ್ಯವಾದುದು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸುತ್ತಿದ್ದ ಅವರು ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರಾಗಿದ್ದರು ಎಂದು ಅವರು ಬಣ್ಣಿಸಿದರು.
ನಿವೃತ್ತ ಉಪನ್ಯಾಸಕ ಆರ್.ಕೆ ಪದಕಿ ಮಾತನಾಡಿ, ಪಂಡಿತ ಪುಟ್ಟರಾಜ ಗವಾಯಿಗಳವರು ಹುಟ್ಟು ಕುರುಡರಾದರೂ ಸಂಗೀತ ಲೋಕದ ಧೃವತಾರೆಯಾಗಿ ರಾರಾಜಿಸಿ ಅಜರಾಮರರಾಗಿ ಹೋಗಿದ್ದಾರೆ. ಇಂತಹ ಮಹಾಮಹಿಮರ ಪುಣ್ಯಾರಾಧನೆಯನ್ನು ನಮ್ಮ ಗ್ರಾಮದ ಶ್ರೀ ಗ್ರಾಮದೇವಿ ಗಜಾನನ ಯುವಕ ಮಂಡಳದವರು ಆಚರಿಸುತ್ತಾ ಬರುತ್ತಿರುವದು ಪುಟ್ಟರಾಜರ ಸಂಗೀತದ ಬೇರು ಇಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತಿದೆ ಎಂದರಲ್ಲದೇ, ಪ್ರತಿ ವರ್ಷ ‘ಕಾಯಕ ಯೋಗಿ’ ಪ್ರಶಸ್ತಿ ನೀಡುವದು ಮತ್ತು ಸಾಧಕರನ್ನು ಸನ್ಮಾನಿಸುತ್ತಿರುವ ಈ ಯುವಕ ಮಂಡಳದವರ ಸಾಮಾಜಿಕ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಭಾವ ಚಿತ್ರಕ್ಕೆ ಹಾಗೂ ಇಲ್ಲಿ ಪ್ರತಿಷ್ಠಾಪಿಸಿರುವ ಗಣೇಶನಿಗೆ ತಾ.ಪಂ.ಸದಸ್ಯೆ ಶಾಂತವ್ವ ಸಂಕಣ್ಣವರ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜ ಸೇವಕ ವೇ.ಮೂ.ಶಂಕ್ರಯ್ಯ ಕರಬಸಯ್ಯ ಇಂಚಗೇರಿಮಠ ಇವರಿಗೆ 2017 ನೇ ಸಾಲಿನ ‘ಕಾಯಕ ಯೋಗಿ’ ಪ್ರಶಸ್ತಿಯನ್ನು ನೀಡಲಾಯಿತು. ಹಾಗೂ ಎಸ್.ಜಿ.ವಿ.ಪದವಿ ಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ರವೀಂದ್ರ ಕೃಷ್ಣರಾವ ಪದಕಿ. ಮತ್ತು ಗ್ರಾಮದ ಪ್ರತಿಭಾವಂತ ಕಲಾಕಾರ ಭೀಮಪ್ಪ ಬಸಪ್ಪ ಬಡಿಗೇರ ಇವರನ್ನು ಸಾಧಕರನ್ನಾಗಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಂಕ್ರಯ್ಯ ಇಂಚಗೇರಿಮಠ ಹಾಗೂ ಭೀಮಪ್ಪ ಬಡಿಗೇರ ಮಾತನಾಡಿದರು. ಗ್ರಾಮದ ಹಿರಿಯ ಶಿವನಪ್ಪ ಬೆಳ್ಳಿಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಮಲ್ಲಪ್ಪ ಯಲಿಗಾರ, ಕೃಷ್ಣಾ ಬುದ್ನಿ, ಶಿರಾಜಅಹ್ಮದ ಕಿತ್ತೂರ, ನಾಮದೇವ ಪೂಜಾರ, ಗಂಗಾಧರ ಅಮರಶೆಟ್ಟಿ, ಶಿವಪ್ಪ ಅರಳೀಕಟ್ಟಿ, ಮಹಾಂತೇಶ ಅಮರಶೆಟ್ಟಿ, ಬಸಪ್ಪ ವಿಜಾಪೂರ ಉಪಸ್ಥಿತರಿದ್ದರು. ಗ್ರಾಮದೇವಿ ಗಜಾನನ ಯುವಕ ಮಂಡಳದ ಶಂಕರ ಓರಣಕರ, ಮಡಿವಾಳಪ್ಪ ಹೊಸೂರ, ಶಿದ್ದಪ್ಪ ಬೆಳವಡಿ, ಮಹಾಂತೇಶ ಬೀಡಿ, ಬಸವರಾಜ ಬೆಳವಡಿ, ಅನಿಲ ಯಲಿಗಾರ, ರಾಘವೇಂದ್ರ ಓರಣಕರ, ಶಂಕರ ಸಂಕಣ್ಣವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಫಕ್ಕೀರಪ್ಪ ಬೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಸಿ.ವೈ.ಲಗಮಣ್ಣವರ ಕಾರ್ಯಕ್ರಮ ನಿರೂಪಿಸಿದರು ಹಾಗೂ ಉಮೇಶ ಬೀಡಿ ಸ್ವಾಗತಿಸಿ ವಂದಿಸಿದರು.

 

Comments