UK Suddi
The news is by your side.

ಮಹಾಲಿಂಗಪುರ: ಐತಿಹಾಸಿಕ ಮಹಾಲಿಂಗೇಶ್ವರ ಜಾತ್ರೆ ಇಂದಿನಿಂದ

1460697905hgngj

ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಪಟ್ಟಣ ಪ್ರದೇಶ ಮಹಾಲಿಂಗಪುರ ಗ್ರಾಮ ಪುಣ್ಯ ಪುರುಷ ಶ್ರೀ ಮಹಾಲಿಂಗೇಶ್ವರರ ಜಾತ್ರಾ ಮಹೋತ್ಸವವು ಸತತ ಮೂರು ದಿನಗಳ ಕಾಲ ನಡೆಯಲಿದೆ. ವಿಜ್ರಂಭಣೆಯಿಂದ ನಡೆಯಲಿದೆ. ಉತ್ಸವದ ವೈಶಿಷ್ಟ್ಯದ ಕುರಿತು ವಿಶೇಷ ವರದಿ ಈ ಕೆಳಗಿನಂತಿದೆ.

ಮಹಾಲಿಂಗಪುರ ಈ ಕುಗ್ರಾಮದ ಜನ್ಮನಾಮ ನರಗಟ್ಟಿ ಎನ್ನುವ ಗ್ರಾಮವಾಗಿತ್ತು. ಈ ಗ್ರಾಮಕ್ಕೆ ಸುಮಾರು ಎಂಟನೂರು ವರ್ಷಗಳ ಹಿಂದೆ ಢಪಳಾಪುದಿಂದ ಬಂದ ಗುರು ಶ್ರೀ ಮಹಾಲಿಂಗೇಶ್ವರ ಸ್ವಾಮಿಗಳ ಆಗಮನ ತದನಂತರ ಮಹಾಲಿಂಗೇಶ್ವರ ಸ್ವಾಮಿಗಳು ಈ ಗ್ರಾಮಕ್ಕೆ ತಮ್ಮ ತಪಸ್ಸಿನ ಫಲದಾರೆ ಎರೆದು ತಾವು ಜೀವಂತ ಸಮಾದಿ ಹೊಂದುವ ಪೂರ್ವದಲ್ಲಿ ಅನೇಕ ವಿಸ್ಮಯಕಾರಕ ಪವಾಡಗಳನ್ನು ಮಾಡಿ ತಮ್ಮ ಇರುವಿಕೆಯ ಕುರುವಿಗಾಗಿ ತಮ್ಮ ತಲೆಯ ಎರಡೆಳೆ ಜಟವನ್ನು ಶಿವಭಕ್ತೆಯಾದ ಸಿದ್ದಾಯಿಗೆ ಪರವಾಗಿ ನೀಡಿ ಈ ಜಟ ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿರುತ್ತದೆ ಎಂದು ನುಡಿದು ಇಹಲೋಕ ತ್ಯಜಿಸಿದ್ದು, ಈಗಲೂ ವಿಜ್ಞಾನ ಅವಿಷ್ಕಾರಗೊಂಡ ನಂತರವೂ ವಿಸ್ಮಯಗೊಳ್ಳುವಂತೆ ಜಟವು ಬೆಳೆಯುತ್ತಾ ಸಾಗಿದೆ. ಈ ಗ್ರಾಮದ ವಿಶೇಷ ಹಾಗೂ ಈ ನಗರಕ್ಕೆ ಪುನರ್ ನಾಮಕರಣಗೊಂಡು ಮಹಾಲಿಂಗಪುರವೆಂಬ ನಗರವಾಗಿ ಮಾರ್ಪಟ್ಟಿದ್ದು, ಈ ಕಾರಣದಿಂದಲೇ ಬಸವಕವಿ ರಚಿಸಿದ ಮಹಾಲಿಂಗ ಲೀಲೆ ಗ್ರಂಥದಲ್ಲಿ ಅನೇಕ ಮಾಹಿತಿಯನ್ನು ಮಹಾಲಿಂಗೇಶ್ವರ ಸ್ವಾಮಿಗಳ ಕುರಿತು ಉಲ್ಲೆಕಗಳಿವೆ.

ಭಾವೈಕ್ಯತೆಯ ಬೀಡು : ಮಹಾಮಹಿಮರಾದ ಶ್ರೀ ಮಹಾಲಿಂಗೇಶ್ವರರು ಇಲ್ಲಿಯ ಜನರನ್ನು ಸೌಹಾರ್ಧತೆಯ ಮೂರ್ತಿಗಳನ್ನಾಗಿ ಪರಿವರ್ತಿಸಿದ್ದು, ಒಂದು ಸೋಜಿಗವೇ ಎನ್ನಬಹುದು. ಕಾರಣ ಮಹಾಲಿಂಗಪುರ ನಗರದಲ್ಲಿ ಇಂದು ಕೂಡ ನೀವು ಕಾಣಬಹುದಾದ ಒಂದು ವಿಶೇಷ ಪರಂಪರೆ ಎಂದರೆ ಸೋಮವಾರ ಬಂದಿತೆಂದರೆ ಮಹಾಲಿಂಗೇಶ್ವರ ದೇವಾಲಯದಲ್ಲಿ ಮುಸ್ಲಿಂ ಬಾಂಧವರು ತಪ್ಪದೇ ಭೇಟಿ ಕೊಡುವದು ಹಾಗೂ ಕಾಯಿ ಕರ್ಪೂರ ನೀಡುವದು ಮತ್ತು ಸೋಮವಾರ ದಿನ ತಮ್ಮ ಮನೆಗಳಲ್ಲಿ ಯಾವುದೇ ತರಹದ ಮಾಂಸಾಹಾರಿ ಪದಾರ್ಥಗಳನ್ನು ತಯಾರಿಸುವುದಿಲ್ಲ. ಇದು ಪ್ರಸ್ತುತ ಇಂದೂ ಕೂಡ ಮುಂದುವರೆಯುತ್ತಿರುವ ಮಹಾಲಿಂಗಪುರದ ಸೌಹಾರ್ಧತೆಯ ವೈಶಿಷ್ಟ್ಯ. ಇದಕ್ಕೆ ಕಾರಣ ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರರು ನೆಲೆಸುವಾಗ ಅನೇಕ ಮುಸ್ಲಿಂ ಬಾಂಧವರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಶ್ರೀಗಳಲ್ಲಿ ಅರಿಕೆ ಮಾಡಿಕೊಂಡಾಗ ಅವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಮುಸ್ಲಿಂ ಬಾಂಧವರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಬಗ್ಗೆ ಇಲ್ಲಿಯ ಹಿರಿಯ ಅನೇಕ ಮುಸ್ಲಿಂ ಬಾಂಧವರು ತಮ್ಮ ಹಿರಿಯರು ನುಡಿದ ಮಾತುಗಳನ್ನು ಮೆಲುಕು ಹಾಕುತ್ತಾರೆ ಹಾಗೂ ಅಲ್ಲಾನ ರೂಪವನ್ನೇ ಶ್ರೀ ಮಹಾಲಿಂಗೇಶ್ವರರಲ್ಲಿ ಕಾಣುತ್ತಾರೆ.

 

(ಹರಿಹರ) ಶೈವ ವೈಷ್ಣವರ ಸಮ್ಮೀಲನ: ಇನ್ನೂ ಹಿಂದೂ ಧರ್ಮಿಯರಲ್ಲಿ ನೆಲೆ ನಿಂತ ಹರಿಹರ ಭಕ್ತರೆಂಬ ಸೂಕ್ಷ್ಮಭೇದವನ್ನು ಕೊಣೆಗಾಣಿಸಲು ಮುಂದಾಗಿ ಇಡೀ ದೇವಸ್ಥಾನದಲ್ಲಿ ಹರಿಹರ ಭಕ್ತರೆಂಬ ಭೇದ ಅಳಿಸಿ ಹಾಕಿ ಹರಿವಾಣ ಕಟ್ಟೆ ಎಂಬ ಕಿರು ಗುಡಿಯನ್ನೇ ಸ್ಥಾಪಿಸಿದರೆಂಬ ಪ್ರತೀತಿ ಇದೆ. ಈ ಹರಿಹರ ಎಂಬ ಭೇದ ಹೊಂದಿದ ಮುಧೋಳದ ಸಂಸ್ಥಾನ ಮಠದ ಮಹಾರಾಜ ಹಲವಾರು ವರ್ಷಗಳ ಹಿಂದೆ ಈ ನರಗಟ್ಟಿ ಗ್ರಾಮಕ್ಕೆ ಬಂದಾಗ ನಾನು ಹರಿಭಕ್ತನಿರುವುದರಿಂದ ಮಹಾಲಿಂಗೇಶ್ವರರಲ್ಲಿ ಹರಿಯನ್ನು ಕಾಣಿಸಲು ಸಾಧ್ಯವೇ ಎಂದು ರಾಜ ಸಭೆಯಲ್ಲಿ ಚರ್ಚಿಸಿದನು. ತಕ್ಷಣವೇ ಸ್ವಾಮಿಜಿಯವರು ಈ ನಗರದಲ್ಲಿ ನಾನು ನೆಲೆಸಿದ್ದು, ಈ ಮನುಕುಲದ ಭೇದ ಭಾವ, ಜಾತಿ ವೈಷಮ್ಯ ದೂರಗಾಣಿಸಲು ಎಂದು ಆಗಿನ ಮಹಾರಾಜನಿಗೆ ತಿಳಿ ಹೇಳಿ ಶಂಕರನ ಗುಡಿಯಲ್ಲಿ ಶ್ರೀ ಹರಿಯನ್ನು ಧ್ಯಾನಿಸಲು ಮಹಾರಾಜನಿಗೆ ಹರಿಯ ದರ್ಶನ ಭಾಗ್ಯ ದೊರೆತ ಬಗ್ಗೆ ಇಂದಿಗೂ ಕುರುಹುವನ್ನು ಕಾಣಬಹುದು. ತಕ್ಷಣವೇ ಆ ಮಹಾರಾಜ ಮಹಾಮಹಿಮರೇ ತಾವು ನನಗೆ ಕಾಣದೇ ಇದ್ದ ಭೇದ ಭಾವದ ಭಕ್ತಿಯನ್ನು ದೂರ ಮಾಡಿದ್ದಿರಿ. ನಮ್ಮ ಸಂಸ್ಥಾನದಿಂದ ತಮಗೆ ಏನಾದರೂ ಸಹಾಯ ಸಹಕಾರ ಯಾಚಿಸಿರಿ ಎಂದು ಬೇಡಿಕೊಂಡನು. ಆಗ ಮಹಾಲಿಂಗೇಶ್ವರರು ಮಹಾರಾಜರೇ ತಮ್ಮ ರಾಜ ದರ್ಬಾರಿನಲ್ಲಿ ನನಗೆ ಸಹಾಯ ನೀಡುವುದಕ್ಕಿಂತಲೂ ತಮ್ಮ ಕಾಲಾವಧಿಯಲ್ಲಿ ಎಲ್ಲ ಧರ್ಮಿಯ ಜನರನ್ನು ಸೌಹಾರ್ದತೆಯಿಂದ ನಡೆಸಿಕೊಂಡು ಹೋದರೆ ಅದಕ್ಕಿಂತ ಹೆಚ್ಚಿನ ಸಹಾಯ ನನಗೆ ಬೇರೊಂದು ಬೇಕಾಗಿಲ್ಲ ಎಂದು ನುಡಿದರು. ಈ ಕಾರಣಕ್ಕಾಗಿಯೇ ಇಂದೂ ಕೂಡ ಮುಧೋಳದ ಸೈಯ್ಯದಸಾಬ ದರ್ಗಾದಲ್ಲಿ ಉರುಸು ಪ್ರಾರಂಭಿಸಬೇಕಾದರೆ ಊರಿನ ಹಿಂದೂ ಧರ್ಮದ ಹಿರಿಯರು ಆಗಮಿಸಿ ಸರ್ವಧರ್ಮಿಯರು ಕೂಡಿ ಉರುಸನ್ನು ಆಚರಿಸುತ್ತಾರೆ. ಇದು ಮುಧೋಳ ನಗರದ ವಾರ್ಷಿಕ ಉತ್ಸವವಾಗಿ ರಾಜ ದರ್ಬಾರಿನಲ್ಲಿ ಮಹಾರಾಜರು ನಡೆಸಿಕೊಂಡು ಬರುತ್ತಿದ್ದ ಪದ್ಧತಿ ಇಂದು ಕೂಡ ನಡೆಯುತ್ತಾ ಸಾಗಿದೆ.

ಮಹಾಲಿಂಗೇಶ್ವರರು ಹಾಗೂ ಅರಭಾಂವಿಯಲ್ಲಿ ನೆಲೆನಿಂತ ದುರುದುಂಡೇಶ್ವರ ಮಹಾಸ್ವಾಮಿಗಳಿಗೆ ತುಂಬಿದ ಕೃಷ್ಣಾ ನದಿಯು ಸಂಚಾರಕ್ಕೆ ಮಾರ್ಗವನ್ನು ಕಲ್ಪಿಸಿದ ಉದಾಹರಣೆ ಕೂಡ ಬಸವ ಕವಿ ರಚಿಸಿದ ಮಹಾಲಿಂಗ ಲೀಲೆ ಪುರಾಣದಿಂದ ತಿಳಿದು ಬರುತ್ತದೆ. ಮಹಾಲಿಂಗೇಶ್ವರರು ತಪಸ್ಸುಗೈದ ಅನೇಕ ಶಾಖಾ ಮಠಗಳು ಕೂಡಾ ಇತಿಹಾಸದಿಂದ ಕಾಣಬಹುದಾಗಿದೆ.

ತಪಸ್ಸಿನ ಚನ್ನಗಿರಿ ಬೆಟ್ಟ : ಇನ್ನೂ ನರಗಟ್ಟಿ ಗ್ರಾಮದಲ್ಲಿ ನೆಲೆಸುವಾಗ ಶ್ರೀ ಮಹಾಲಿಂಗೇಶ್ವರರು ತಪಸ್ಸು ಮಾಡುತ್ತಿದ್ದ ಸ್ಥಳ ದಟ್ಟಾರಣ್ಯದಿಂದ ಕೂಡಿದ್ದು ಇಲ್ಲಿ ಒಂದು ಪಿಶಾಚಿ ಗ್ರಾಮದ ನಿವಾಸಿಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದುದು ಕೇಳಬಹುದು. ಆಗ ಗುರುಗಳು ಪಿಶಾಚಿ ಜನರಿಗೆ ತೊಂದರೆ ಕೊಡುತ್ತಿದ್ದ ಸ್ಥಳವನ್ನೇ ತಮ್ಮ ತಪಸ್ಸಿಗೆ ಆಯ್ಕೆ ಮಾಡಿಕೊಂಡರು. ಅದು ಈಗಿನ ಚನ್ನಗಿರೇಶ್ವರ ಗುಡಿಯಾಗಿ ಮಾರ್ಪಟ್ಟಿದೆ. ಬೆಟ್ಟದ ಮೇಲೆ ತಮ್ಮ ಅಘೋರ ತಪಸ್ಸು ಕೈಗೊಂಡು ಈ ಪಿಶಾಚಿಯನ್ನು ಹೋಗಲಾಡಿಸಿ ಈ ಗ್ರಾಮಕ್ಕೆ ಯಾವುದೇ ಸಂದರ್ಭದಲ್ಲಿ ತೊಂದರೆ ನೀಡದಂತೆ ಆಜ್ಞಾಪಿಸಿದರಂತೆ. ಹಾಗೂ ಈ ಗ್ರಾಮದ ಹುಟ್ಟು ಕುರುಡರೊಬ್ಬರಿಗೆ ಎರಡೂ ನೇತ್ರಗಳನ್ನು ಸ್ಪಷ್ಟವಾಗಿ ಕಾಣುವಂತೆ ವರ ನೀಡಿದ್ದಲ್ಲದೆ ಇನ್ನೂ ಅನೇಕ ಜನರ ತೊಡಕು ತೊಂದರೆಗಳನ್ನು ದೃಷ್ಟಾಂತದಿಂದ ದೂರು ಮಾಡಿದ್ದನ್ನು ಇಂದೂ ಕೂಡ ಇಲ್ಲಿಯ ವಯೋ ವೃದ್ಧ ಹಿರಿಯರ ಅನುಭವದಿಂದ ಕೇಳುತ್ತಿದ್ದೇವೆ. ಇನ್ನು ದೃಷ್ಟಾಂತವನ್ನು ಉದಾಹರಿಸಲು ಹೊರಟರೆ ನಗರದಲ್ಲಿ ಕುಡಿಯಲು ನೀರಿನ ಬರ ಉದ್ಭವವಾದಾಗ ಒಂದು ಭಾಂವಿಯನ್ನು ನಿರ್ಮಿಸಲು ಭಕ್ತರಿಗೆ ಗುರುಗಳು ಆಜ್ಞಾಪಿಸಿದರಂತೆ.

ಬಸವ ಮಂತ್ರದ ಗಂಗಾಜಲ : ಶ್ರೀ ಮಹಾಲಿಂಗೇಶ್ವರರ ಆಜ್ಞೆಯ ಪ್ರಕಾರ ನಗರದಲ್ಲಿ ಭಾಂವಿಯ ನಿರ್ಮಾಣದ ಕಾರ್ಯ ಪ್ರಾರಂಭಿಸಲು ಊರಿನ ಜನರು ಬಹಳಷ್ಟು ಆಳಕ್ಕೆ ಹೋಗುವ ಭಾಂವಿಯ ಗಾತ್ರದ ಪೂರ್ವದಲ್ಲಿಯೇ ಬಹುದೊಡ್ಡ ಬಂಡೆಗಲ್ಲೊಂದು ಸಿಕ್ಕಿ ಭಾಂವಿಯ ನಿರ್ಮಾಣ ಕಾರ್ಯಕ್ಕೆ ತಡೆಯಾಯಿತಂತೆ. ಬಳಿಕ ಜನರು ಚಿಂತೆಗೀಡಾಗಿ ಮುಂದೇನು ಮಾಡಲು ತೋಚದೆ ಶ್ರೀಗಳಲ್ಲಿ ಮೊರೆ ಇಡಲು ಕೂಡಲೆ ಶ್ರೀಗಳು ಬಂಡೆಗಲ್ಲನ್ನು ಕರಗಿಸಲು ನಿಮ್ಮಲ್ಲಿರುವ ಶ್ರಮ ಇನ್ನೂ ಉಪಯೋಗವಾಗಿಲ್ಲ. ಶ್ರಮದ ಜೊತೆಗೆ ಭಕ್ತಿಯಿಂದ ಬಂಡೆಯನ್ನು ಒಡೆಯಲು ಪ್ರಾರಂಭಿಸಿ ಎಂದು ಆಜ್ಞೆ ಮಾಡಲು ನಾಗರೀಕರೆಲ್ಲರೂ ಬಹಳಷ್ಟು ಶ್ರಮಪಟ್ಟು ಕೊನೆಗೂ ಕಲ್ಲನ್ನು ಸೀಳಲು ವಿಫಲರಾದಾಗ ಶ್ರೀಗಳು ಸ್ವತಃ ಭಾಂವಿ ನಿರ್ಮಿಸುವಲ್ಲಿಗೆ ಬಂದು ಒಂದು ಯುಕ್ತಿಯನ್ನು ಹೇಳಿದರಂತೆ. ಭಕ್ತಗಳಿರಾ ಈ ಬಂಡೆ ನಿಮ್ಮ ಭಕ್ತಿಯನ್ನು ಪರೀಕ್ಷಿಸಲು ಎದುರಾಗಿದೆ. ಈ ಬಂಡೆಯನ್ನು ಒಡೆಯುವ ತನಕ ಬಸವಾ ಎಂದು ಬಸವ ನಾಮ ಜಪಿಸಿರಿ ಎಂದು ಆದೇಶಿಸಿದರಂತೆ. ತಡಮಾಡದೇ ನಾಗರಿಕರು ಬಸವನಾಮ ಜಪಿಸುತ್ತಾ ಕಾರ್ಯ ಪ್ರವೃತ್ತರಾಗಲು ಗಂಗೆಯು ಪ್ರಸನ್ನಳಾದಾಗ ಈ ಭಾಂವಿಗೆ ಸ್ವಾಮೀಜಿಯವರು “ಬಸವ ತೀರ್ಥ” ಎಂದು ನಾಮಕರಣ ಮಾಡಿದ ಬಗ್ಗೆ ಉಲ್ಲೇಖಗಳಿವೆ. ಇಂದಿಗೂ ಕೂಡ ಈ ಭಾಂವಿಯ ನೀರನ್ನು ಕೇವಲ ಪೂಜೆಗಾಗಿ ಉಪಯೋಗಿಸುತ್ತಾರೆ. ಉತ್ತಮ ರೀತಿಯ ಹಾಸು ಚಪ್ಪಡಿ ಕಲ್ಲುಗಳನ್ನು ಕಂಗೊಳಿಸುವಂತೆ ಈ ಭಾಂವಿಯ ಸುತ್ತಲೂ ಅಳವಡಿಸಲಾಗಿದೆ ಹಾಗೂ ಸುತ್ತು ಗೋಡೆಗಳನ್ನು ಕೂಡ ನಿರ್ಮಿಸಲಾಗಿದೆ. 

ಮಹಾರಾಜರ ದಾನದ: ಊರು ಇನ್ನು ಮಹಾಲಿಂಗೇಶ್ವರ ಸ್ವಾಮಿಗಳನ್ನು ಮುಧೋಳದ ಮಹಾರಾಜ ತಮ್ಮ ಗುರು ವರ್ಯದಲ್ಲಿ ಬಹುವಾಗಿ ನಂಬಿದ ಬಗ್ಗೆ ಇತಿಹಾಸದಿಂದ ಕಾಣಬಹುದು. ಹಲವಾರು ವರ್ಷಗಳ ಹಿಂದೆ ಮುಧೋಳ ಸಂಸ್ಥಾನದ ಅರಸರು ಘೋರ್ಪಡೆ ಮಹಾರಾಜರು ಯುದ್ಧ ಮಾಡುವ ಸಂದರ್ಭದಲ್ಲಿ ತನ್ನ ಕೈಯಲ್ಲಿದ್ದ ಖಡ್ಗವು ಜಾರಿ ನೆಲಕ್ಕುರುಳಲು ಅನ್ಯ ಮಾರ್ಗ ಕಾಣದೆ ಮಹಾರಾಜರು ಜೋರಾಗಿ “ಶ್ರೀ ಮಹಾಲಿಂಗೇಶ್ವರ ಕಾಪಾಡು” ಎಂದು ಕೂಗಿದರಂತೆ. ಆಗ ಮಹಾರಾಜನಿಗೆ ಆಶ್ಚರ್ಯಕರ ರೀತಿಯಲ್ಲಿ ಅರೆ ನಿಮಿಷದಲ್ಲಿ ಕೈಯಲ್ಲಿ ಖಡ್ಗ ಬಂದ ಬಗ್ಗೆ ರಾಜನೇ ತನ್ನ ಅರಮನೆಯಲ್ಲಿ ಈ ವಿಸ್ಮಯಕಾರಿ ದೃಷ್ಟಾಂತದ ಬಗ್ಗೆ ಶಾಸನದ ಕೆತ್ತನೆ ಮಾಡಿಸಿದ್ದಾನೆ ಹಾಗೂ ಮಹಾಲಿಂಗೇಶ್ವರ ಮುನಿಗಳನ್ನು ಕಾಣಲು ಮಹಾಲಿಂಗಪುರಕ್ಕೆ ಬರುತ್ತಿರಲು ತನ್ನ ರಾಜಪರಿವಾರದಲ್ಲಿದ್ದ ಆನೆಯೊಂದರ ಕಾಲಿಗೆ ಸಿಕ್ಕಿದ ಬಾಲಕಿಯು ಸಾವನ್ನಪ್ಪಿದಳು. ಮಹಾರಾಜನು ವಿಚಲಿತನಾಗಿ ಸ್ವಾಮಿಜಿಯವರಲ್ಲಿ ಬಂದು ಪರಿಪರಿಯಾಗಿ ಬೇಡಿಕೊಂಡನಂತೆ. ಏನಿದು ಮನೋವರ್ಯರೇ? ನಾನು ನಿಮ್ಮನ್ನು ಕಾಣಲು ಬರುವಾಗ ಈ ಬಾಲಕಿಯ ಹತ್ಯೆಯಾಯಿತಲ್ಲ ಎಂದು ಅತ್ಯಂತ ಖೇದದಿಂದ ದುಃಖಿಸಿದನಂತೆ. ಆಗ ಶ್ರೀಗಳು ಆ ಬಾಲಕಿಯ ಮೈಮೇಲೆ ಗಂಗಾಮೃತ ಚಿಮ್ಮಿಸಲು ಬಾಲಕಿಯು ತಕ್ಷಣವೇ ಮೈತೊಡವಿ ಮೊದಲಿನಂತೆ ಎದ್ದು ನಿಂತಾಗ ನೆರೆದ ರಾಜ ಪರಿವಾರ ವಿಸ್ಮಯಗೊಂಡರಲ್ಲದೇ ತಕ್ಷಣವೇ ಮಹಾರಾಜನು ಮಹಾಲಿಂಗೇಶ್ವರರ ಹೆಸರಿಗೆ ರಾಜದರ್ಬಾರಿಗೆ, ಇರಬೇಕಾದ ಇಡೀ ಮಹಾಲಿಂಗಪುರದ ರಾಜಾಶ್ರಯದ ಎಲ್ಲ ಭೂಮಿಗಳನ್ನು ಒಟ್ಟಾರೆ ಮಹಾಲಿಂಗಪುರ ನಗರವನ್ನು ಶ್ರೀಗಳಿಗೆ ಉಂಬಳಿಯಾಗಿ ನೀಡಿದನು. ಅಂದಿನಿಂದ ಮಹಾಲಿಂಗಪುರಕ್ಕೆ ಎಂಟೂ ದಿಕ್ಕಿನಲ್ಲಿ ಗಡಿ ರೇಖೆಯನ್ನು ಸ್ಥಾಪಿಸಲಾಯಿತು. ಇಂದೂ ಕೂಡ ಮಹಾಲಿಂಗಪುರದಲ್ಲಿ ಯಾವುದೇ ಸ್ಥಳ ಖರೀದಿಸಲು ಮಹಾಲಿಂಗಪುರದ ಜನರು ಯಾವುದೇ ಸ್ಥಳ ಹೊಸ ಖರೀದಿ ಮಾಡಲು ಮಹಾಲಿಂಗೇಶ್ವರರ ಕಾರ್ತಿಕೋತ್ಸವ ಹಾಗೂ ಐದೇಶಿ ದಿನಗಳಲ್ಲಿ ಕನಿಷ್ಟ 2-3 ತಿಂಗಳು ಯಾವುದೇ ಹೊಸ ವಸ್ತುವನ್ನು ಖರೀದಿಸುವುದಿಲ್ಲ. ಈ ವ್ರತವು ಇಂದೂ ಕೂಡ ಇಲ್ಲಿ ನೆಲೆಸುವ ಸಾರ್ವಜನಿಕರೂ ತಪ್ಪದೇ ಪಾಲಿಸುತ್ತಾರೆ. ಎಲ್ಲ ಧರ್ಮಿಯರಲ್ಲೂ ಈ ಎರಡೂ ಅವಧಿಯಲ್ಲಿ ಯಾವುದೇ ಹೊಸ ವಸ್ತು ತಮ್ಮ ಮನೆಗೆ ತರುವುದನ್ನು ನಿಷೇದಿಸುವದು ಇಲ್ಲಿಯ ವಾಡಿಕೆಯಾಗಿಬಿಟ್ಟಿದೆ. 

ವರುಣನ ಕೃಪೆ ನಿಂತಿಲ್ಲ :ಇನ್ನೂ ಮಹಾಲಿಂಗಪುರದ ಜಾತ್ರೆಯ ವೈಶಿಷ್ಟ್ಯ ಎಂದರೆ ಉತ್ಸವ ನಡೆಯುವ ದಿನದಂದು ಮಹಾಲಿಂಗಪುರದಲ್ಲಿ ತಪ್ಪದೇ ವರುಣ ದೇವನ ಕೃಪೆ ಆಗಲೇಬೇಕೆಂಬ ವಾಡಿಕೆಯಿದೆ. ತೇರಿನಲ್ಲಿ ಸಿಂಗರಿಸಿದ ಮೂರ್ತಿಯನ್ನ ಕುಳ್ಳಿರಿಸಿದ ತಕ್ಷಣವೇ ಪೂಜೆ ಪುನಸ್ಕಾರಗಳೊಂದಿಗೆ ತೇರು ಹೊರಡಲು ಸಿದ್ಧವಾಗುತ್ತಿದ್ದಂತೆ ಮಳೆರಾಯ ಆಗಮಿಸುತ್ತಾನೆ. ನಾಲ್ಕು ಹನಿಯಾದರೂ ಮಳೆ ಆಗಲೇಬೇಕು. ಉತ್ಸವದ ಮೊದಲಿನ ದಿನ ಗುರುವಾರ ಮಹಾಲಿಂಗೇಶ್ವರರ ಸಾರ್ವಜನಿಕ ಜಟೋತ್ಸವ ಹಾಗೂ ಅನ್ನ ಪ್ರಸಾದ ಶ್ರೀ ಚನ್ನಗಿರೇಶ್ವರ ದೇವಾಲಯದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಜಟವನ್ನು ತೊಳೆಯುತ್ತಾರೆ. ತದನಂತರ ಮರುದಿನ ತೇರಿನ ಉತ್ಸವ, ಮರುದಿನ ಮರು ತೇರು ಹೀಗೆ ಸತತ ಮೂರು ದಿನಗಳ ಕಾಲ ಸಾರ್ವಜನಿಕ ಕುಸ್ತಿಯೊಂದಿಗೆ ಜಾತ್ರೆಯು ಅಂತಿಮ ಹಂತಕ್ಕೆ ತಲುಪುತ್ತದೆ. ತೇರಿನಿಂದ ಬಾಲ ಹಸುಳೆಗಳನ್ನು ಎಸೆಯುವದು ನೋಡಲು ಮಜುಗರವನ್ನುಂಟು ಮಾಡುತ್ತದೆ. ಮಹಾಲಿಂಗಪುರವು ಮಹಾಲಿಂಗೇಶ್ವರರ ಕೃಪೆಯಿಂದ ಬಾಗಲಕೋಟ ಜಿಲ್ಲೆಯಲ್ಲಿ ಉತ್ತಮ ವಾಣಿಜ್ಯ ನಗರವೆಂಬ ಪ್ರಸಿದ್ಧಿ ಪಡೆದಿದೆ. ಹಾಗೂ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಬೆಲ್ಲವನ್ನು  ಮಾರಾಟ ಮಾಡುವ ಎರಡನೇ ಪಟ್ಟಣವಾಗಿ ಮಾರ್ಪಟ್ಟಿದೆ. 

ಬೆಳೆಯುತ್ತಿರುವ ಜಟಾ: ಹೀಗೆ ಅನೇಕ ವಿಸ್ಮಯಗಳನ್ನು ಒಳಗೊಂಡು ವೈಚಾರಿಕ ವಿಜ್ಞಾನಕ್ಕೆ ಸವಾಲಾಗಿ ಇಂದೂ ಕೂಡ ಬೃಹದಾಕಾರವಾಗಿ ಬೆಳೆಯುತ್ತಿರುವ ಮಹಾಲಿಂಗೇಶ್ವರ ಜಟವನ್ನು ಮತ್ತು ತೇರಿನ ಉತ್ಸವವನ್ನು ನೋಡಲು ದೂರದ ಮಹಾರಾಷ್ಟ್ರದಿಂದ ಕರ್ನಾಟಕದ ಇನ್ನೂಳಿದ ಕೆಲವು ಜಿಲ್ಲೆಗಳಿಂದ ಜನ ಸಮರೋಪಾದಿಯಲ್ಲಿ ಹರಿದು ಬರುತ್ತದೆ. ಸತತ ಒಂದು ತಿಂಗಳುಗಳ ಕಾಲ ಇಲ್ಲಿ ವಾಣಿಜ್ಯ ಮಳಿಗೆಗಳು ಭರದಿಂದ ತಮ್ಮ ವ್ಯಾಪಾರವನ್ನು  ನಡೆಸುತ್ತಾರೆ. ಭಾವೈಕ್ಯತೆಗೆ ಸಾಕ್ಷಿಯಾಗಿ ನಿಂತ ಮಹಾಲಿಂಗಪುರದ ಮಹಾಲಿಂಗೇಶ್ವರರ ಕೃಪೆಯು ಈ ಭಾಗಕ್ಕೆ ತಗಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. 

ನವೀಕರಣಗೊಂಡ ಮಠ: ಅದೇ ರೀತಿ ಮಹಾಲಿಂಗೇಶ್ವರ ಮಠ ಸುಮಾರು 400 ವರ್ಷಗಳ ಹಿಂದಿನ ಕೆತ್ತನೆ ಕಲಾಕೃತಿಯೊಂದಿಗೆ ಮೇಲ್ಛಾವಣೆ ಹೊದಿಕೆ ನವೀಕೃತಗೊಂಡು ನೂತನವಾಗಿ ನಿರ್ಮಾಣವನ್ನಾಗಿಸಿ ಸುಮಾರು 40 ಲಕ್ಷ ರೂಪಾಯಿ ವೆಚ್ಚವನ್ನು ಸ್ವಾಮಿಜಿಯವರು ದೇವಸ್ಥಾನದ ಭಂಡಾರದಿಂದ ವ್ಯಯಿಸಿರುತ್ತಾರೆ. ಮಹಾಲಿಂಗಪುರದ ಹಣುಮಂತ ಭಾಸ್ಕರ ಬಡಿಗೇರ ಅವರ ಕಲ್ಪನೆಯ ವಿನ್ಯಾಸ ನೇಪಾಳದ ಕಾಟ್ಮಂಡುವಿನ ಪಶುಪತಿ ದೇವಸ್ಥಾನದ ಆಕೃತಿಯನ್ನು ಹೊಂದಿರತಕ್ಕಂತ ಹಳೆಯ ಮಾದರಿಯ ಕಟ್ಟಿಗೆ ಕೆತ್ತನೆಯನ್ನು ಯಥಾ ಸ್ಥಿತಿಯನ್ನು ನವೀಕರಿಸಿದ ಶಿಲ್ಪಿ. ಜೊತೆಗೆ ಮಂದಿರದಲ್ಲಿ ಮೆಲ್ಚಾವಣೆ ಹಾಗೂ ಹಾಸುಗಲ್ಲು ಒಂದುಕೋಟಿ ರೂಪಾಯಿ ವೆಚ್ಚದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ನೇತ್ರತ್ವದಲ್ಲಿ ಕಾಮಗಾರಿ ಇಗಾಗಲೇ ಪೂರ್ಣಗೊಂಡಿದ್ದು, ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಶಿಖರ ನಿರ್ಮಾಣಕ್ಕೆ ಸಚಿವೆ ಶ್ರೀಮತಿ ಉಮಾಶ್ರೀ ಅವರು ನೀಡುತ್ತಿದ್ದು ಕಳಸ ಕಾಮಗಾರಿ ಸಂಪೂರ್ಣಗೊಳಿಸಲು ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ್ ಹಾಗೂ ಜಾವೇದ ಬಾಗವಾನ ಅವರು ಹೆಚ್ಚಿನ ಅನುದಾನಕ್ಕಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಪರಮ ಪೂಜ್ಯರ ಕೋರಿಕೆಯಂತೆ ನಗರದ ಭಕ್ತರೆಲ್ಲ ಸೇರಿ ಸೋಮವಾರದ ಸೇವೆಗಾಗಿ ಬೆಳ್ಳಿಯ ರಥವನ್ನು ಸಿದ್ದಗೊಳಿಸಿದ್ದಾರೆ.

ಮಹಾಸ್ವಾಮಿಗಳ ಕೈಂಕರ್ಯ: ಈಗಿನ ಮಹಾಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ಮಹಾಲಿಂಗೇಶ್ವರ ರಾಜೇಂದ್ರ ಸ್ವಾಮಿಗಳು ನುಡಿದರೆ ಅದು ಸತ್ಯ ಎನ್ನುವ ಹೆಗ್ಗಳಿಕೆ ಕೂಡ ಈ ಭಾಗದಲ್ಲಿ ಅಷ್ಟೇ ಪ್ರಸಿದ್ಧಿಯಾಗಿದೆ. ಇನ್ನೂ ಹಲವು ಶಿಕ್ಷಣ ಸಂಸ್ಥೆ, ಗೋಶಾಲೆ ಹಾಗೂ ಸಾರ್ವಜನಿಕರಿಗೆ ವಿಶಾಲವಾದ ಕಲ್ಯಾಣ ಮಂಟಪ ಕೂಡ ನಿರ್ಮಿಸಲು ಸಂಕಲ್ಪಿಸಿರುತ್ತಾರೆ. 84ರ ವಸಂತದಲ್ಲಿ ಕಾಲಿಡುತ್ತಿರುವ ಶ್ರೀ ಸ್ವಾಮಿಗಳ ಸಹಸ್ರ ಚಂದ್ರ ದರ್ಶನ ಸಮಾರಂಭವನ್ನು ಏರ್ಪಡಿಸಲು ಭಕ್ತ ವೃಂದ ನಿರ್ಧರಿಸಿದೆ. ನಗರದ ಸಾರ್ವಜನಿಕರು ಅತೀ ಉತ್ಸಾಹದಿಂದ ಈ ಜಾತ್ರೆಯನ್ನು ಜರುಗಿಸಲು ಹಾಗೂ ಆಗಮಿಸಿದ ಸಾರ್ವಜನಿಕರಿಗೆ ಅನ್ನ ಪ್ರಸಾದವನ್ನು ಸತತ 3 ದಿನಗಳ ಕಾಲ ಏರ್ಪಡಿಸಿರುತ್ತಾರೆ.

Comments