UK Suddi
The news is by your side.

ಡಾ.ದೇವದಾಸ ಕಳಸದ.

ಉತ್ತರ ಕರ್ನಾಟಕದ ಕುಂದಾನಗರಿ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆ.ಜನಪದ ರಂಗಭೂಮಿ, ವೃತ್ತಿ ರಂಗಭೂಮಿ,ಹವ್ಯಾಸಿ ರಂಗಭೂಮಿ ಹಾಗು ವೃತ್ತಿ ರಂಗ ಮಾದರಿಯ ಹವ್ಯಾಸಿ ರಂಗಭೂಮಿಗಳ ಹರಹಂತೂ ವಿಸ್ತೃತವಾದದ್ದು.ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವೃತ್ತಿರಂಗಭೂಮಿಯ ನಾಟಕ ಕಂಪನಿಗಳು ಕನಿಷ್ಠ ಐದರಿಂದ ಗರಿಷ್ಠ ನಲವತ್ತು ವರ್ಷಗಳವರೆಗೆ ಬದುಕಿ ಬಾಳಿ ಹೋದದ್ದು ಕರ್ನಾಟಕ ರಾಜ್ಯ ಇತಿಹಾಸದಲ್ಲಿಯೇ ಅಚ್ಚಳಿಯದ ವಿಷಯವಾಗಿದೆ. ಅದರಲ್ಲೂ ಗಂಡು ಮೆಟ್ಟಿದ ನಾಡು ಬೈಲಹೊಂಗಲ ತಾಲೂಕಿನಲ್ಲಿಯೆ ಸರಿ ಸುಮಾರು ಮೂವತ್ತೆಂಟು ಕಂಪನಿ ನಾಟಕ ಸಂಸ್ಥೆಗಳು ಮೆರೆದು ಮಾಯವಾದದ್ದು ಸುವರ್ಣ ಅಕ್ಷರ ಸಹಿತ ದಾಖಲಾದ ಹೆಮ್ಮೆಯ ಸಂಗತಿ.

ಅಂತಹ ಬೈಲಹೊಂಗಲ ತಾಲೂಕಿನ ಸಾವಿರ ಮೇಟಿ ಒಕ್ಕಲು ನಾಡಾದ ದೊಡವಾಡ ಗ್ರಾಮದ ಶ್ರೀ ವೀರಭದ್ರೇಶ್ವರ ಗುರುಕುಲ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿರುವ ಡಾ.ದೇವದಾಸ ಕಳಸದ ಅವರು ಕೂಡಾ ಅಪ್ರತಿಮ ರಂಗಭೂಮಿ ಕಲಾವಿದರು, ನಾಟಕ ನಿರ್ದೇಶಕರು, ಸಂಗೀತ ಸರಸ್ವತಿಯ ಆರಾಧಕರು.

ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತರಾಗಿದ್ದ ಡಾ. ದೇವದಾಸ ಕಳಸದ ಅವರು ಸಾಹಿತ್ಯ ಕೃಷಿ, ಚಿತ್ರಕಲೆ, ನಾಟಕ ರಚನೆ, ಅಭಿನಯ, ನಿರ್ದೇಶನ ಹಾಗು ರಂಗಚಮತ್ಕಾರ ಸೃಷ್ಟಿಯನ್ನು ಮೈಗೂಡಿಸಿಕೊಂಡು ಬೆಳೆದವರು. ಶೈಕ್ಷಣಿಕ ಹಾಗು ಸಾಮಾಜಿಕ ಸೇವೆಯಲ್ಲೂ ಇವರ ಕೊಡುಗೆ ಅಪಾರವಾಗಿದೆ.

‘ವೃತ್ತಿ ರಂಗ ಸಂಸ್ಕ್ರತಿ’ ಸಂಶೋಧನಾ ಗ್ರಂಥ,’ಎಡಬಿಡಂಗಿ ಒಡಂಬಡಿಕೆ ವಿಡಂಬನೆಗಳು’ ಇವರ ಲಲಿತ ಬರಹಗಳ ಸಂಕಲನಗಳು, ‘ರಂಗ ನೇಪಥ್ಯದ ನಿಸ್ಸಿಮರು’ ಹಾಗು ‘ರಂಗ ಚಿತ್ರಕಲಾ ನಿಪುಣರು’,’ಸಂಘರ್ಷ’ ಸೇರಿದಂತೆ ಐದು ಕಿರು ನಾಟಕ ಸಂಗ್ರಹ ಗ್ರಂಥಗಳು ಅಚ್ಚುಕಂಡಿವೆ.’ಸತಿಪತಿಗಳೊಂದಾದ ಭಕ್ತಿ’ಎಂಬ ರಂಗ ನಾಟಕ,’ರಜತ ದುಂದುಭಿ’ ಸ್ಮರಣ ಸಂಚಿಕೆಯ ಸಂಪಾದನೆ ಹಾಗು ‘ಜನಪದ ರಂಗಾನ್ವೇಷಕ ಮುದೇನೂರು ಸಂಗಣ್ಣನವರು’,’ಬೆಳಗಾವಿ ಜಿಲ್ಲಾ ರಂಗಮಾಹಿತಿ’ ಮುಂತಾದ ಹಲವು ಸಂಪಾದನೆ ಮಾಡಿದ್ದಾರೆ.

ಇವರ ನಾಟಕಗಳು, ಭಾಷಣಗಳು ಈಗಾಗಲೇ ಸಾಕಷ್ಟು ಬಾರಿ ಆಕಾಶವಾಣಿಯಲ್ಲೂ ಸಹ ಬಿತ್ತರಗೋಂಡಿವೆ. ಇವರ ಹಲವಾರು ಸಂಶೋಧನಾ ಲೇಖನಗಳು,ವಿಮರ್ಶೆ,ಕಥೆ,ಕವನ, ಮುಂತಾದವುಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಸುಧಾ, ಮಯೂರ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇವರ ನಿರ್ದೇಶನದಲ್ಲಿ ‘ಎಸ್ ಎಸ್ ಎಲ್ ಸಿ ಪಾಸ್’,’ಕಾರ್ಗಿಲ್’ ಎಂಬ ನಾಟಕಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಾನು ಸಹ ಅಭಿನಯಿಸಿರುವದು ಹೆಮ್ಮೆಯ ವಿಷಯ.

ಪ್ರಸ್ತುತ ಇವರು ಕಲಾನಗರಿ ಧಾರವಾಡದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ.

-ಗುರು ಅರಳಿಮರದ.

Comments