UK Suddi
The news is by your side.

ಡಿ ಎಸ್ ಚೌಗುಲೆ..

ಉತ್ತರ ಕರ್ನಾಟಕದ ಕುಂದಾನಗರಿ ಎಂದೇ ಕರೆಯಲ್ಪಡುವ ಬೆಳಗಾವಿ ಜಿಲ್ಲೆಯು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ,ಸಹಕಾರ, ಜವಳಿ ಕ್ಷೇತ್ರದಲ್ಲಿ ತನ್ನದೇ ಆದ ಅಪಾರ ಕೊಡುಗೆಗಳನ್ನು ನಾಡಿಗೆ ನೀಡುತ್ತಾ ಬಂದಿದೆ.

ಅಂತಹ ಬೆಳಗಾವಿ ಜಿಲ್ಲೆಯ ಬೆಡ್ಕಿಹಾಳ ಗ್ರಾಮದಲ್ಲಿ ಡಿ ಎಸ್ ಚೌಗುಲೆ ಅವರು 1961ರಲ್ಲಿ ಜನಿಸಿದರು.ಎಳೆ ವಯಸ್ಸಿನಿಂದಲೇ ನಾಟಕ, ಸಾಹಿತ್ಯ, ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಮೂಡಿಸಿಕೊಂಡವರಾಗಿದ್ದಾರೆ.ಕನ್ನಡ ಭಾಷೆಯಲ್ಲಿ ಎಂ ಎ ಪದವೀಧರರಾದ ಚೌಗುಲೆಯವರು ಬೆಳಗಾವಿಯ ಭಾಹುರಾವ್ ಕಾಕತ್ಕರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಬಹುಮುಖ ಪ್ರತಿಭೆಯನ್ನು ಹೊಂದಿದ ಇವರು ನಾಟಕ ರಚನೆ ಹಾಗು ಚಿತ್ರಕಲೆಯಲ್ಲಿ ವಿಶೇಷ ಪರಿಣಿತಿಯನ್ನು ಪಡೆದವರಾಗಿದ್ದಾರೆ, ಅದರಲ್ಲೂ ಮುಖ್ಯವಾಗಿ ಮರಾಠಿ ಕನ್ನಡ ಭಾಷಾಂತರ ಕೆಲಸವನ್ನು ಸಹ ಬಹುವಿಧವಾಗಿ ಮಾಡಿದ್ದಾರೆ. ರಂಗ ಚಟುವಟಿಕೆಗಳಿಗೆ ಸಂಬಂಧಿಸಿ ಇವರು ‘ಗಾಂಧಿ ವಿರುದ್ದ ಗಾಂಧಿ’ ಮೂಲ ಮರಾಠಿ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿ ಈ ನಾಟಕವನ್ನು 1998ರಲ್ಲಿ ರಂಗಾಯಣದವರು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಇವರ ಮತ್ತೊಂದು ಅನುವಾದಿತ ನಾಟಕ ‘ಪೇಯಿಂಗ ಗೆಸ್ಟ್’ ರಂಗ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ. ಇವರ ‘ದಿಶಾಂತರ’ ಎಂಬ ನಾಟಕವನ್ನು ಧಾರವಾಡ ಸಮುದಾಯ ತಂಡದವರು ಪ್ರಯೋಗಿಸಿದ್ದರಿಂದ ಚೌಗುಲೆ ಅವರಿಗೆ ಹೆಸರು ಬಂದಿತು. ‘ತೆರೆ ಸರಿದಮೇಲೆ’ ಗ್ರಂಥವು ರಂಗಭೂಮಿಗೆ ಸಂಬಂದಿಸಿದ ಹಲವಾರು ಲೇಖನಗಳನ್ನು ಒಳಗೊಂಡಿದೆ. ‘ಗಾಂಧಿ ಅಂಬೇಡ್ಕರ್’ ಹಾಗು ‘ಕಿರವಂತ’ ಈ ಎರಡೂ ಅನುವಾದಿತ ನಾಟಕಗಳನ್ನು ಮೈಸೂರಿನ ನಟನ ತಂಡದವರು ಬಹಳ ಸಮರ್ಥವಾಗಿ ರಂಗಕ್ಕೆ ತಂದಿದ್ದಾರೆ.

ಶ್ರೀ ಡಿ ಎಸ್ ಚೌಗುಲೆಯವರ ರಂಗೇತರ ಸಾಹಿತ್ಯವು ಗಮನಾರ್ಹವಾದುದು.ಬಿ ಕೆ ಹುಬ್ಬಳ್ಳಿಯವರ ಜೀವನ ಚರಿತ್ರೆ,’ವಾರಸಾ’ ಕಥೆ ಸಂಪಾದನೆ.’ನಿನ್ನ ಮೇಲೆ ಸಿಟ್ಟೀಲ್ಲ ಮಾಯಿ’ ಮೂಲ ಮರಾಠಿ ಸಂಪಾದನಾ ಗ್ರಂಥದ ಕನ್ನಡ ಅನುವಾದ ಮಾಡಿದ್ದಾರೆ.’ಬಣ್ಣ ಬಯಲು’ ಚಿತ್ರಕಲೆಯ ವಿಮರ್ಶಾ ಗ್ರಂಥ, ಮರಾಠಿಯಿಂದ ಕನ್ನಡಿಸಿದ ‘ನೆರಳುಗಳು’ ಕಾದಂಬರಿ, ‘ಒಡಲ ಉರಿಯ ಹೊಟ್ಟು’ ,ಕಥಾ ಸಂಕಲನ, ‘ಚೌಗುಲೆ ಕಥೆಗಳು’ ಕಥಾ ಸಂಕಲನ, ‘ಚೌರಂಗ’  ವಿಚಾರ ಸಂಕಿರಣ ಲೇಖನಗಳ ಸಂಕಲನ ಮುಂತಾದವುಗಳು ಚೌಗುಲೆಯವರ ಸಾಹಿತ್ಯಕ್ಕೆ ಸಾಕ್ಷಿಯಾಗಿವೆ.

ಚೌಗುಲೆ ಅವರ ಸಾಧನೆ ಇಷ್ಟಕ್ಕೆ ನಿಲ್ಲದೆ ಚಿತ್ರಕಲೆಯಲ್ಲೂ ಗರಿ ಏರಿಸಿಕೊಂಡಿದೆ.ಇವರ ಏಕ್ ವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು 1993,1999,2000ರಲ್ಲಿ ಬೆಳಗಾವಿ,1994ರಲ್ಲಿ ಬೆಂಗಳೂರು,2002ರಲ್ಲಿ ಮುಂಬಯಿ,2008ರಲ್ಲಿ ಪುಣೆ ಮತ್ತು 1995-96ರಲ್ಲಿ ಸಮೂಹ ಪ್ರದರ್ಶನ ಏರ್ಪಟ್ಟದ್ದಕ್ಕೆ ಸಾಕಷ್ಟು ನಿದರ್ಶನಗಳು ಇವೆ.

ಇವರಿಗೆ ಆನಂದಕಂದ, ವರದರಾಜ್ ಆದ್ಯ ಪ್ರಶಸ್ತಿಗಳು, ಗೊರೂರು ಸಾಹಿತ್ಯ ಪುರಸ್ಕಾರ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಪುರಸ್ಕಾರ, ರನ್ನ ಸಾಹಿತ್ಯ ಪ್ರಶಸ್ತಿ,ಆಜುರ ಸಾಹಿತ್ಯ ಪುರಸ್ಕಾರ, ತುಷಾರ ಎಚ್ ಎಂ ಟಿ ಪ್ರಶಸ್ತಿ, ಚದುರಂಗ ಅವಾರ್ಡ್, ಕರ್ನಾಟಕ ಅನುವಾದ ಅಕಾಡೆಮಿಯಿಂದ ಪುರಸ್ಕಾರ ಲಭಿಸಿವೆ.

-ಗುರು ಎಸ್ ಎ…

Comments