UK Suddi
The news is by your side.

ಪೌರಾಣಿಕ ಮಹತ್ವದ ಊರು ಗೋಕರ್ಣ..

ಕನ್ನಡ ವಿಶ್ವಕೋಶದಲ್ಲಿ ಕೂಡ ಗೋಕರ್ಣ ಶಬ್ದದ ವಿವರಣೆ ನೀಡಲಾಗಿದೆ.ಗೋಕರ್ಣ ಎಂಬ ಹೆಸರು ಈ ಕ್ಷೇತ್ರಕ್ಕೆ ಹೇಗೆ ಬಂದಿತು ಎನ್ನುವುದಕ್ಕೆ ಹಾಗೂ ಸ್ಕಂದ ಪುರಾಣದ ಗೋಕರ್ಣ ಖಂಡದಲ್ಲಿ ೮ ನೇ ಅಧ್ಯಾಯದಲ್ಲಿ ಹಾಗೂ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹೀಗೆ ಹೇಳಲಾಗಿದೆ – ಧರಣೀಮಾಹ ಶಂಕರ ಮತ್ಸಂಯೋಗಾದಿಹ ಶುಭೇ ಭವಿಷ್ಯತಿ ಸುತಸ್ತವ | ಗ್ರಹಾಣಾಮಧಿಪಶ್ಚಂಡಃ $ಸೋಂಗಾರಕ ಇತಿ ಶ್ರುತಃ || ಭವಿಷ್ಯತೀದಂ ಭದ್ರಂ ತೇ ಕ್ಷೇತ್ರಂ ತ್ರೈಲೋಕ್ಯ ವಿಶ್ರುತಂ | ಗೋಶಬ್ದಃ ಪ್ರಠಮಂ ದೇವಿ ತ್ವಯಿ ಸಂಪರಿವರ್ತತೇ || ಕರ್ಣಶ್ಚಾಯಂ ತವ ಶುಭೇ ದೇವ್ಯಂಬುಗ್ರಹ ಯೋಗತಃ | ತಸ್ಮಾದ್ಗೋಕರ್ಣಮಿತಿ ಚ ಖ್ಯಾತಿಂ ಲೋಕೇ ಗಮಿಷ್ಯತಿ ||
ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು(ಆತನಿಗೆ ಕರ್ಣಸಂಜ್ಞೆ) ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ(ಅಂಗಾರಕ) ಕೂಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಲ ಇವುಗಳ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗುತ್ತದೆ.
ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ. ಅನೇಕ ಧಾರ್ಮಿಕ ಕ್ಷೇತ್ರಗಳು ಇದ್ದರೂ ಇದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ. ಪ್ರಾಚೀನವಾದ ವಾಯುಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿರುವುಧು ಪ್ರಧಾನವಾದ ಅಂಶವಾಗಿದೆ.
ಈ ಕ್ಷೇತ್ರವು ತ್ರಿಸ್ಥಲವೆಂದು ಖ್ಯಾತವಾದ ಗೋಕರ್ಣ, ರಾಮಸೇತು, ಕಾಶಿ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿರುವುದರಿಂದ ಹಿಂದೂ ಜನರ ಪವಿತ್ರ ಕ್ಷೇತ್ರ ಇದಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತ್ತು. ಪರಶುರಾಮನು ಇದನ್ನು ಉದ್ಧರಿಸಿದನೆಂದು ಪುರಾಣ ಹೇಳುತ್ತದೆ. ವಾಯುಪುರಾಣದಲ್ಲಿ ೪೮ ನೇ ಅಧ್ಯಾಯದಲ್ಲಿ
ತಸ್ಯ ದ್ವೀಪಸ್ಯ ವೈ ಪೂರ್ವೇ ತೀರೇ ನದನದೀಪತೇಃ | ಗೋಕರ್ಣ ನಾಮಧೇಯಸ್ಯ ಶಂಕರಸ್ಯಾಲಯಂ ಮಹತ್ || ಎನ್ನಲಾಗಿದೆ.

ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಕಡೆ ಗೋಕರ್ಣದ ಬಗೆಗಿನ ವಿಷಯಗಳು ಕಂಡು ಬರುತ್ತವೆ. ೫೭ ನೇ ಅಧ್ಯಾಯದಲ್ಲಿ ಗೋಕರ್ಣ ಕ್ಷೇತ್ರ ಹೇಗೆ ಪರಶುರಾಮ ಸೃಷ್ಟಿ ಎಂಬುಧನ್ನು ವಿವರಿಸಲಾಗಿದೆ.

ಗೋಕರ್ಣ ನಾಮ ವಿಖ್ಯಾತಂ ಕ್ಷೇತ್ರಂ ಸರ್ವ ಸುರಾರ್ಚಿತಮ್ | ಸಾರ್ಧಯೋಜನ ವಿಸ್ತಾರಮ್ ತೀರೇ ಪಶ್ಚಿಮ ವಾರಿಧೇಃ ||
ಇತ್ಯಾದಿಯಾಗಿ ಗೋಕರ್ಣದ ವಿಖ್ಯಾತಿಯನ್ನು ಅನೇಕ ಪುರಾಣಗಳಲ್ಲಿ ವಿವರಿಸಲಾಗಿದೆ. ಗೋಕರ್ಣ ಕ್ಷೇತ್ರ ಮಂಡಲದ ಕುರಿತಾಗಿ ವಿವರಣೆ=
ಪಂಚಕ್ರೋಶ ಪರೀಣಾಹಂ ಗೋಕರ್ಣ ಕ್ಷೇತ್ರ ಮಂದಲಮ್ || ಎಂಬುದಾಗಿ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹದಿನೈದು ಮೈಲಿಯ ಸುತ್ತಳತೆಯ ಕ್ಷೇತ್ರ ಗೋಕರ್ಣ ಮಂಡಲ ಎನ್ನಲಾಗಿದೆ.
ಜೊತೆಗೆ ಸಾರ್ಧ ಯೋಜನ ವಿಸ್ತೀರ್ಣಂ ಅರ್ಧ ಯೋಜನಮಾಯತಮ್ | ಕ್ಷೇತ್ರ ರೂಪೇಣ ತಿಷ್ಠಂತಂ ಶಿವಮ್ ಪಶ್ಯಂತಿ ಸೂರಯಃ || ಎನ್ನಲಾಗಿದೆ.
ಗೋಕರ್ಣ ಕುರಿತು ಸ್ಕಂಧ ಪುರಾಣದ ಕಾಶೀ ಖಂಡದಂತೆ ಗೋಕರ್ಣ ಖಂಡವೂ ಇದೆ.
ಪೌರಾಣಿಕವಾಗಿ ಗೋಕರ್ಣ
ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬುವಳು. ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚೈಸಿ ಸಮುದ್ರದಲ್ಲಿ ಸ್ನಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗ ವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ನೆನೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯೆ, ದುಃಖಿಸಬೇಡ. ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಪ್ರಾಣ ಲಿಂಗವನ್ನೇ ತಂದುಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು.ಅಲ್ಲಿ ಆತನಿಗೆ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ಬುಧ್ಧಿ ಹುಟ್ಟಿತು. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನ ಅಂಗುಷ್ಠದಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ಬಲಾತ್ಕಾರದಿಂದ ತನ್ನ ಕೆಲಸವಾಗುವುದೆಂದು ತಿಳಿದು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಮೈದಡವಿ ಬೇಕಾದ ವರವನ್ನು ಬೇಡೆಂದನು.
ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಪೂಜಿಸುವವರ ಸಕಲ ಇಷ್ಟಾರ್ಥಗಳೂ ಕೈಗೂಡುವವು. ಅವರು ಈಶ್ವರನನ್ನೇ ಪಡೆಯುವರು. ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಘಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು.
ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಂಡು “ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪಸ್ಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ಷ, ಕಿನ್ನರ ಮನುಷ್ಯರಿಂದ ಜಯಿಸಲು ಸಾಧ್ಯವಿಲ್ಲ. ನೀವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಪ್ರಾಣ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯ ತತ್ಪರರಾಗಿ ಎಂದು ಹೇಳಿ ನಾರದನು ಹೊರಟು ಹೋದನು.
ದೇವತೆಗಳು ಗಾಬರಿಯಿಂದ ಏನೊಂದೂ ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿ ಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನಿನಗೆ ಮೋದಕ ಕಡಬು ಕರ್ಜೀಕಾಯಿ ಪಂಚಖಾದ್ಯ ಕಬ್ಬು ಮೊದಲಾದವುಗಳನ್ನು ಕೊಡುತ್ತೇನೆ. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು.
ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡು ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬುಗಳನ್ನು ತಿನ್ನುತ್ತಿದ್ದನು. ಆ ಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಡಿ ಸಂಧ್ಯಾಕಾಲವೆಂಬ ಭ್ರ ಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ನಾನಿಯೂ ಕರ್ಮನಿಷ್ಠನೂ ಆದ್ದರಿಂದ, ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿ ರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು.
ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು. ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು; ಜೋಕೆ ಎಂದನು. ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ; ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಮೂರು ಬಾರಿ ನಿನ್ನನ್ನು ಕರೆಯುತ್ತೇನೆ ನೀನು ಬರಬೇಕು. ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು. ರಾವಣನು ಶೌಚವನ್ನು ಪೂರೈಸಿ ಕಾಲು ತೊಳೆ ಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು. ಅರ್ಘ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು. ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದರೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನು.
ರಾವಣನು ಸಿಟ್ಟಿನಿಂದ ಗಣಪತಿಯ ನೆತ್ತಿಯ ಮೇಲೆ ಮುಷ್ಟಿಯಿಂದ ಗುದ್ದಿದನು. ಬಲಿಷ್ಟನಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಫಲವಾದ ಸಿಟ್ಟಿನಿಂದ ಅಲ್ಲಿಯೇ ಬಿದ್ದ ಲಿಂಗದ ಸಂಪುಟವನ್ನು ದಾರವನ್ನೂ ಲಾಲ್ಕು ದಿಕ್ಕಿಗೆ ಬೀಸಿದನು. ಅದು ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ. ಮೃಡೇಶ್ವರ ಎಂಬ ಹೆಸರಿನಿಂದ ಪ್ರಖ್ಯಾಥವಾಯಿತು.
ತನ್ನ ರಾಕ್ಷಸ ಶಕ್ತಿಯು ಸೋತು ಹೋಗಲು ನೀನೇ ಮಹಾಬಲನೆಂದು ಕೂಗಿದನು. ಆ ಕಾಲಕ್ಕೆ ದೇವತೆಗೆಳು ಮಂದಾರದ ಮಳೆಗಳನ್ನು(ಪುಷ್ಪವೃಷ್ಟಿ) ಸುರಿಸಿದರು. ವಿಷ್ಣುವು ಚಕ್ರವನ್ನು ತೆಗೆಯಲು ಸೂರ್ಯನು ಕಾಣಿಸಿಕೊಂಡನು. ಸುರರು ರಾವಣನನ್ನು ನೋಡಿ ಕಿಲಕಿಲನೆ ನಕ್ಕರು. ರಾವಣನು ನಾಚಿಕೆಯಿಂದ ಓಡಿ ಹೋದನು. ಇದನ್ನೆಲ್ಲವನ್ನೂ ಪರಮೇಶ್ವರನು ವಾಯುವಿನಿಂದ ತಿಳಿದು ಗೋಕರ್ಣಕ್ಕೆ ಬಂದನು. ಲಿಂಗವು ರಾವಣನಿಂದ ಬಹಳ ಘಾಸಿಯಾಗಿದ್ದನ್ನು ನೋಡಿ ಪಶ್ಚಾತ್ತಾಪ ಪಟ್ಟನು. ತಾನು ಲಿಂಗವನ್ನು ಪೂಜಿಸಿದನು.
ಆಗ ಅಲ್ಲಿಗೆ ಬಂದ ದೇವತೆಗಳನ್ನು ಕುರಿತು ತನ್ನ ಜನ್ಮಸ್ಥಲವಾದ ಗೋಕರ್ಣದಲ್ಲಿಯೇ ಗಣಪತಿಯು ಲಿಂಗವನ್ನು ಸ್ಥಾಪಿಸಿದ್ದರಿಂದ ಮೊದಲು ಗಣಪತಿಯನ್ನು ಪೂಜಿಸಿ ನಂತರ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು. ತಾನು ಇಲ್ಲಿಯೇ ವಾಸವಾಗುತ್ತೇನೆಂದು ಹೇಳಿ ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸವೆಂಬ ಹೆಸರಾಗಲಿ ಎಂದು ದೇವತೆಗಳು ಹೇಳಿ ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು.

ನಂತರ ರಾವಣನು ಪುನಃ ತಾಯಿಯೊಡನೆ ಗೋಕರ್ಣಕ್ಕೆ ಬಂದು ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣವಿಲ್ಲ. ನಿನ್ನಿಂದಲೇ ಲೋಕಕ್ಕೆ ಉಪಕಾರವಾಗಬೇಕಿತ್ತು. ನೀನು ನೆಪ ಮಾತ್ರ. ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಾಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟದ್ದರಿಂದ ನನಗೆ ಆನಂದವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು. ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟ ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿಕ್ಷೇತ್ರವೆಂದು ಪ್ರಸಿದ್ಧವಾಗಿದೆ.

Comments