UK Suddi
The news is by your side.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ.

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ, ಸಂಘಟನಕಾರರಾದ ಪಂಡಿತ ದೀನದಯಾಳ ಉಪಾಧ್ಯಾಯರು ಸೆಪ್ಟೆಂಬರ್ 25, 1916ರಂದು ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಬಾನ್ ಎಂಬ ಹಳ್ಳಿಯಲ್ಲಿ ಜನಿಸಿದರು.  ಮೂರು ವರ್ಷದವರಾಗಿದ್ದಾಗ ತಮ್ಮ ತಂದೆಯನ್ನೂ ಎಂಟನೆಯ ವಯಸ್ಸಿನಲ್ಲಿ ತಾಯಿಯನ್ನೂ, ಹತ್ತನೆಯ ವಯಸ್ಸಿನಲ್ಲಿ ತಾತನನ್ನೂ  ಕಳೆದುಕೊಂಡ ದೀನ ದಯಾಳರು ತಮ್ಮ ಸೋದರ ಮಾವನ ಮನೆಯಲ್ಲಿ ಬದುಕು ಸಾಗಿಸಿದರು.  ಸೋದರ ಮಾವನ ಪತ್ನಿ ಬಾಲಕ ದೀನ ದಯಾಳರಿಗೂ ಮತ್ತು ಅವರ ಕಿರು ಸಹೋದರನಿಗೂ  ತನ್ನ ಮಕ್ಕಳಂತೆಯೇ ಮಾತೃ ವಾತ್ಸಲ್ಯ ನೀಡಿದರು.  ಮುಂದಿನ ಕೆಲವು ವರ್ಷಗಳಲ್ಲೇ ಅವರ ತಮ್ಮನೂ ಈ ಲೋಕವನ್ನಗಲಿದ.

ದೀನ ದಯಾಳರು ಸಿಕಾರ್ ಎಂಬಲ್ಲಿ ಶಾಲೆಗೆ ಹೋಗಲು ತೊಡಗಿದರು.  ಅಲ್ಲಿನ ಮಹಾರಾಜರು ದೀನದಯಾಳರಿಗೆ ಚಿನ್ನದ ಪದಕ, 250ರೂಪಾಯಿಗಳ ಪುಸ್ತಕ ಮತ್ತು ಹತ್ತು ರೂಪಾಯಿಗಳ ವಿದಾರ್ಥಿ ವೇತನವನ್ನು ನೀಡಿದರು.  ಮುಂದೆ   ಅವರು ಪಿಲಾನಿಯಲ್ಲಿ ಇಂಟರ್ ಮೀಡಿಯೆಟ್ ಪರೀಕ್ಷೆಯನ್ನು ಉತ್ಕೃಷ್ಟ ದರ್ಜೆಯಲ್ಲಿ ಮುಗಿಸಿ, ಸನಾತನ ಧರ್ಮ ಕಾಲೇಜಿನಲ್ಲಿ ಬಿ.ಎ ಪದವಿಗಾಗಿ ಸೇರಿದರು.  ಓದಿನ ದಿನಗಳಲ್ಲೇ ತಮ್ಮ ಸ್ನೇಹಿತ  ಬಲವಂತ ಮಹಾಶಬ್ಧೆ ಅವರಿಂದ ಪ್ರೇರಿತರಾಗಿ 1937ರ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿದರು.  1937ರಲ್ಲಿ ಉನ್ನತ ದರ್ಜೆಯಲ್ಲಿ ಬಿ.ಎ ಪದವಿ ಪಡೆದು ಆಗ್ರಾದಲ್ಲಿ ಎಂ.ಎ ಪದವಿಗೆ ಸೇರಿದರು.  ಈ ದಿನಗಳಲ್ಲಿ ಅವರು ನಾನಾಜಿ ದೇಶ್ ಮುಖ್  ಮತ್ತು ಭಾವ್ ಜುಗಾದೆ ಅವರೊಂದಿಗೆ ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯರಾದರು.  ಈ ಮಧ್ಯೆ ಅವರ ಸಂಬಂಧಿ ಸೋದರಿ ರಮಾ ದೇವಿ ಅವರು ನಿಧನರಾದಾಗ ಅದರಿಂದ ದುಃಖಿತರಾದ ದೀನ ದಯಾಳರು ಎಂ. ಎ ಪದವಿ ಪರೀಕ್ಷೆಗೆ ಕುಳಿತುಕೊಳ್ಳಲಾಗಲಿಲ್ಲ.  ಈ ಸಂದರ್ಭದಲ್ಲಿ ಅವರಿಗೆ ಸಿಕಾರ್ ಮಹಾರಾಜರಿಂದ ದೊರಕುತ್ತಿದ್ದ ವಿದ್ಯಾರ್ಥಿ ವೇತನ ಸೌಲಭ್ಯಗಳು ನಿಂತು ಹೋದವು.
ಚಿಕ್ಕಮ್ಮನ ಒತ್ತಾಸೆಯ ಮೇರೆಗೆ ಅವರು ಸರ್ಕಾರವು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡರು.  ಪಂಚೆ, ಜುಬ್ಬಾ, ತಲೆಗೊಂದು ಟೋಪಿ ಹಾಕಿಕೊಂಡು ಪರೀಕ್ಷೆಗೆ ಇವರು ಹೋದಾಗ ಪಾಶ್ಚಿಮಾತ್ಯ ಉಡುಪು ಧರಿಸಿದ್ದ ಅಲ್ಲಿದ್ದವರೆಲ್ಲಾ ಇವರನ್ನು ಅಪಹಾಸ್ಯ ಗೈದು ಇಲ್ಲಿ ನೋಡಿ ಒಬ್ಬ  ಪಂಡಿತ್ ಜಿ ಬಂದ ಎಂದರು.  ಆ ಅಪಹಾಸ್ಯಗೈದವರಿಗೆ ಈತನೇ ಈ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಾನೆಂದು ಗೊತ್ತಿರಲಿಲ್ಲ.  ಅವರಿಗೆ ತಿಳಿಯದ ಮತ್ತೊಂದು ಮಹತ್ವದ ವಿಷಯವೂ ಇತ್ತು.  ಯಾವ ವ್ಯಕ್ತಿಯನ್ನು ಅವರು ಅಪಹಾಸ್ಯಕ್ಕೆಂದು ಪಂಡಿತ್ ಜೀ ಎಂದು ಸಂಬೋಧಿಸಿದ್ದರೋ,  ಆ ವ್ಯಕ್ತಿ ಮುಂದೆ ಇಡೀ ಜನಸ್ತೋಮದ ಹೃನ್ಮನಗಳಲ್ಲಿ ಗೌರವಾನ್ವಿತವಾಗಿ ‘ಪಂಡಿತ್ ಜೀ’ ಎಂದೇ ಸಂಸ್ಥಾಪಿತರಾದರು.
ತಮ್ಮ ಚಿಕ್ಕಪ್ಪನವರ ಅನುಮತಿ ಪಡೆದು ಬಿ.ಟಿ ಓದಲು ಪ್ರಯಾಗಕ್ಕೆ ತೆರಳಿದ ದೀನ ದಯಾಳರು ಅಲ್ಲಿ ತಮ್ಮ ಆರ್ ಎಸ್ ಎಸ್ ಚಟುವಟಿಕೆಗಳನ್ನು ಮುಂದುವರೆಸಿದರು.  ಬಿ. ಟಿ. ಪದವಿ ಪಡೆದ ನಂತರದಲ್ಲಿ ಆರ್ ಎಸ್ ಎಸ್ ನ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯಲಾರಂಭಿಸಿದ ದೀನ ದಯಾಳರು ಉತ್ತರ ಪ್ರದೇಶದ ಲಕಿಂಪುರ ಜಿಲ್ಲೆಯಲ್ಲಿ ವ್ಯವಸ್ಥಾಪಕರಾಗಿಯೂ, ಮತ್ತು 1955ರ ವರ್ಷದಿಂದ ಉತ್ತರ ಪ್ರದೇಶದ ಆರ್ ಎಸ್ ಎಸ್ ನ ವ್ಯವಸ್ಥಾಪಕರಾಗಿಯೂ ತಮ್ಮ ಕಾರ್ಯ ಚಟುವಟಿಕೆಗಳಿಗೆ ವಿಸ್ತಾರವನ್ನು ಕಂಡುಕೊಂಡರು.
ಲಕ್ನೋದಲ್ಲಿ ‘ರಾಷ್ಟ್ರಧರ್ಮ ಪ್ರಕಾಶನ’ ಎಂಬ ಪ್ರಕಟಣಾ ಸಂಸ್ಥೆಯನ್ನು ಪ್ರಾರಂಭಿಸಿದ ಪಂಡಿತ ದೀನ ದಯಾಳ ಉಪಾಧ್ಯಾಯರು ‘ರಾಷ್ಟ್ರ ಧರ್ಮ’ ಎಂಬ ಮಾಸಿಕವನ್ನು ಹುಟ್ಟು ಹಾಕಿದರು.  ಮುಂದೆ ‘ಪಾಂಚಜನ್ಯ’ ಎಂಬ ಸಾಪ್ತಾಹಿಕವನ್ನೂ, ‘ಸ್ವದೇಶ್’ ಎಂಬ ದಿನಪತ್ರಿಕೆಯನ್ನೂ ಪ್ರಾರಂಭಿಸಿದರು.  1950ರ ವರ್ಷದಲ್ಲಿ ನೆಹರೂ ಅವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಡಾ. ಶಾಮ ಪ್ರಸಾದ ಮುಖರ್ಜಿ ಅವರು ನೆಹರೂ-ಲಿಯಾಕತ್ ಪ್ರಸ್ತಾಪವನ್ನು ವಿರೋಧಿಸಿ ಮಂತ್ರಿ ಪದವಿಯನ್ನು ತ್ಯಜಿಸಿ ಪ್ರಜಾಪ್ರಭುತ್ವವಾದಿ  ವಿರೋಧ ಪಕ್ಷಗಳ ಒಕ್ಕೂಟ ನಿರ್ಮಿಸಲು ಪ್ರಯತ್ನ ಪ್ರಾರಂಭಿಸಿದರು.  ತಮ್ಮ ಈ ಮಹತ್ವ ಉದ್ದೇಶ ಸಾಧನೆಗಾಗಿ ಅವರು ಪಂಡಿತ್ ದೀನ ದಯಾಳ ಉಪಾಧ್ಯಾಯರನ್ನು ಭೇಟಿಮಾಡಿ ಯುವ ಪ್ರತಿಭೆಗಳನ್ನು ಪ್ರೇರೇಪಿಸಲು ಕೋರಿಕೊಂಡರು.
ಸೆಪ್ಟೆಂಬರ್ 21, 1951ರಲ್ಲಿ ಪಂಡಿತ ದೀನದಯಾಳರು ಉತ್ತರ ಪ್ರದೇಶದಲ್ಲಿ ರಾಜಕೀಯ ಸಮಾವೇಶವೊಂದನ್ನು ವ್ಯವಸ್ಥಾಪಿಸಿ, ರಾಜ್ಯಮಟ್ಟದಲ್ಲಿ ಭಾರತೀಯ ಜನ ಸಂಘದ ಸ್ಥಾಪನೆ ಮಾಡಿದರು.  ಮುಂದೆ  ಪಂಡಿತ ದೀನದಯಾಳರ ಶಕ್ತಿ ಉತ್ಸಾಹಗಳಿಂದ ಅಕ್ಟೋಬರ್ 21, 1951ರಂದು ನಡೆದ ರಾಷ್ಟ್ರಮಟ್ಟದ ಅಧಿವೇಶನದ ಅಧ್ಯಕ್ಷತೆಯನ್ನು ಡಾ. ಶ್ಯಾಮ ಪ್ರಸಾದ ಮುಖರ್ಜಿಯವರು ವಹಿಸಿದ್ದರು.
ಪಂಡಿತ ದೀನದಯಾಳರ ಸಂಘಟನಾ ಶಕ್ತಿ ಅನನ್ಯವಾದುದಾಗಿತ್ತು.  ಶ್ಯಾಮ ಪ್ರಸಾದ ಮುಖರ್ಜಿಯವರಂತೂ “ನನಗೆ ಮತ್ತೊಬ್ಬ ದೀನದಯಾಳ ಜೊತೆಗಿದ್ದಿದ್ದರೆ ಭಾರತದ ರಾಜಕೀಯ ಭವಿಷ್ಯವನ್ನೇ ಬದಲಿಸಿಬಿಡುತ್ತಿದ್ದೆ”  ಎನ್ನುತ್ತಿದ್ದರು.   1968ರ ವರ್ಷದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರು ಜನಸಂಘದ ಅಧ್ಯಕ್ಷ ಪದವಿಗೆ ಏರಿದರು.  ದಕ್ಷಿಣ ಭಾರತಕ್ಕೂ ಜನ ಸಂಘದ ಕಹಳೆಯನ್ನು ಹೊತ್ತು ತಂದ ದೀನ ದಯಾಳರು ಕ್ಯಾಲಿಕಟ್ ಅಧಿವೇಶನದಲ್ಲಿ ನುಡಿದ ಮಾತುಗಳು ಇಂದಿಗೂ ಪ್ರಖ್ಯಾತವಾಗಿವೆ:
 “ನಾವು ಯಾವುದೇ ಪಂಗಡಕ್ಕೆ ಇಲ್ಲವೇ ಜನಾಂಗಕ್ಕೆ ಮೀಸಲಾಗದೆ ಇಡೀ ದೇಶದ ಸೇವೆಗೆ ಕಂಕಣಬದ್ಧರಾಗಿದ್ದೇವೆ.  ಈ ದೇಶದ ಪ್ರತಿಯೋರ್ವನೂ ನಮ್ಮ ರಕ್ತ ಕಣಗಳಲ್ಲಿ, ಮಾಂಸ ಖಂಡಗಳಲ್ಲಿ ಸಮ್ಮಿಳಿತಗೊಂಡಿದ್ದಾನೆ.  ಇಲ್ಲಿನ ಪ್ರತಿಯೋರ್ವನಿಗೂ ನಾನು ಭಾರತ ಮಾತೆಯ ಪುತ್ರನೆಂಬ ಹೆಮ್ಮೆ ಉದಯಿಸುವವರೆಗೂ ನಮಗೆ ವಿಶ್ರಾಂತಿ ಎಂಬುದೇ ಇಲ್ಲ.  ‘ಸುಜಲಾಂ ಸುಫಲಾಂ’ ಎಂದು ನಮ್ಮ ತಾಯಿ ಭಾರತಿಗೆ ಹೇಳುವ ‘ನಿರಂತರ ಹರಿಯುವ ನದಿ ಮತ್ತು ನಿತ್ಯ ಫಲಾವೃತೆ’ ಎಂಬ ಬಿರುದುಗಳು  ಕೇವಲ ಬಾಯಿ  ಮಾತುಗಳಲ್ಲ, ಅದನ್ನು ನಾವು ಸತ್ಯವಾಗಿಸುವವರಿದ್ದೇವೆ.  ದಶ ಪ್ರಹರಣಾಯುಧಗಳನ್ನು ಉಳ್ಳ  ದುರ್ಗಾ ಮಾತೆ ಎಲ್ಲಾ ದುಷ್ಟ ಶಕ್ತಿಗಳನ್ನೂ ಕೊಚ್ಚಿ ಹಾಕುವಂತೆ, ಮಾತೆ ಲಕ್ಷ್ಮಿಯು ಎಲ್ಲ ಸಂಪತ್ತನ್ನೂ ಸಮರ್ಥ ರೀತಿಯಲ್ಲಿ ವಿತರಿಸುವಂತೆ ಮತ್ತು ದೇವಿ ಸರಸ್ವತಿ ಮಾತೆಯು ಅಜ್ಞಾನವೆಂಬ ಕತ್ತಲನ್ನು ಕೊಚ್ಚಿಹಾಕಿ ಜ್ಞಾನವೆಂಬ ಬೆಳಕನ್ನು ಎಲ್ಲೆಡೆ ಪಸರಿಸುವಂತೆ, ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ದೃಢ ನಂಬಿಕೆಯೊಂದಿಗೆ ನಾವು ಕಾರ್ಯಪ್ರವೃತ್ತರಾಗೋಣ”
ದುರದೃಷ್ಟವಶಾತ್ ದೇಶಕ್ಕೆ ಇಂಥಹ ಶ್ರೇಷ್ಠ ಮಾರ್ಗದರ್ಶನ ದೊರಕುವ ಸೌಭಾಗ್ಯ ಹೆಚ್ಚು ದಿನ ಉಳಿಯಲಿಲ್ಲ.  ಫೆಬ್ರವರಿ 11, 1968ರಂದು ಈ ಮಹಾನ್ ಪಂಡಿತ ದೀನದಯಾಳ ಉಪಾಧ್ಯಾಯರೆಂಬ ಭರವಸೆಯು ಈ ಭಾರತೀಯತೆಯ ಬದುಕಿನಲ್ಲಿ ನಂದಿ ಹೋಯಿತು.  ಅವರು ಬೆಳಗಿದ ಕೆಲವೊಂದು ದೀಪಗಳು ಅಲ್ಲಲ್ಲಿ ಪ್ರಜ್ವಲಿಸಿವೆ ನಿಜ.  ಆದರೆ ಅವರ ಕನಸನ್ನು ನನಸು ಮಾಡುವಂತಹ ಭವ್ಯತೆಯ ಶ್ರದ್ಧೆ ಭಾರತೀಯ ನೆಲದಲ್ಲಿ ಇನ್ನೂ ಹೆಚ್ಚು ಹೆಚ್ಚು ಅರಳಬೇಕಿವೆ.  ಅಂಥಹ ಅರಳುವಿಕೆ ಈ ದೇಶದಲ್ಲಿ ಸಾಧ್ಯವಾಗಲಿ ಎಂಬ ಆಶಯದೊಂದಿಗೆ ಈ ಮಹಾತ್ಮನನ್ನು ನಮಿಸೋಣ.

Comments