UK Suddi
The news is by your side.

ವಿಜೃಂಭಣೆಯ ವಿಜಯದಶಮಿ.

ನಾಡಹಬ್ಬ ದಸರಾ ಆಚರಣೆ ಎಲ್ಲೆಡೆ ರಂಗೇರಿದೆ… ಮಾರುಕಟ್ಟೆಗಳಲ್ಲಿ ಕಬ್ಬು-ಬಾಳೆ, ತಳಿರು-ತೋರಣ,ಹೂವು-ಹಣ್ಣುಗಳು ವ್ಯಾಪಾರ ಜೋರಾಗಿ ನಡೆದಿದೆ.ಇದರ ನಡುವೆಯೇ ಬಿಟ್ಟು ಬಿಡದೆ ಆಗಾಗ ಸುರಿಯುವ ತುಂತುರು ಮಳೆ. ಮಳೆಯು ಹಬ್ಬದ ಸಡಗರಕ್ಕೆ ಅಂದದ ಸಿಂಚನ ಮಾಡುತ್ತಿದೆಯೇನೋ ಎಂಬ ಭಾಸವು ಎಲ್ಲರ ಮನದಲ್ಲಿ ಮೂಡಿದೆ.
ಪ್ರಾಚೀನ ಕಾಲದಲ್ಲಿ ಹಿಂದೂ ಧಾರ್ಮಿಕ ಹಬ್ಬವಾಗಿ ಆರಂಭವಾದ ದಸರಾ, ಕಾಲಕ್ರಮೇಣ ನಾಡಹಬ್ಬವಾಗಿ-ಸರ್ವ ಜನಾಂಗದ ಉತ್ಸವವಾಗಿ ಮಾರ್ಪಟ್ಟಿದೆ.
ಭಾರತದಲ್ಲಿ ಈ ರೀತಿಯ ನವರಾತ್ರಿ ಉತ್ಸವಕ್ಕೆ ವಿಶೇಷ ಮಹತ್ವ ಪಡೆದಿದೆ.ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ.
ನಮ್ಮಕರ್ನಾಟಕದಲ್ಲಿ ಇದನ್ನ ದಸರಾ ಅಂತ, ಉತ್ತರ ಭಾರತದಲ್ಲಿ ದುರ್ಗಾಪೂಜಾ ಎಂದು ಆಚರಿಸುತ್ತಾ ಬರಲಾಗುತ್ತಿದೆ. ದಸರಾ ಹಬ್ಬದದಲ್ಲಿ ಒಂಬತ್ತು ದಿನಗಳ ಕಾಲ ಚಿದಾನಂದ ಅವಧೂತರು ರಚಿಸಿದ ಶ್ರೀ ದೇವಿ ಪುರಾಣ ನಮ್ಮ ಭಾಗದಲ್ಲಿ ಅಷ್ಟೇ ಅಲ್ಲ ಇಡೀ ದೇಶವ್ಯಾಪಿ ಪಾರಾಯಣವಾಗುತ್ತಿದೆ.
ದಸರಾ ಉತ್ಸವದಲ್ಲಿ ದಂಡಿಯಾ ಅಂತ ಪ್ರತಿ ಊರಲ್ಲಿ,ನಗರಗಳಲ್ಲಿ ಎಲ್ಲಾ ವಯಸ್ಸಿನ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ನವರಾತ್ರಿಯ ಸಮಯದಲ್ಲಿ ಸಂಜೆಯಲ್ಲಿ ಕೋಲಾಟ ಪ್ರಾರಂಭವಾದರೆ ಬೆಳಿಗ್ಗೆವರೆಗೆ ಭಕ್ತಿಯಿಂದ ದೇವರ ಪ್ರಾರ್ಥನೆ ಸಲ್ಲಿಸಲ್ಲಿಸುತ್ತಾರೆ.
ದಸರಾ ಮೂಲತಃ ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯು ವಿಜಯ ಸಾರುವ ಸಾಂಕೇತಿಕ ಆಚರಣೆ. ದುರ್ಗಾ ಮಾತೆ(ಬನ್ನಿ ಮಹಾಂಕಾಳಿ)ಯು ರಾಕ್ಷಸ ಮಹಿಷಾಸುರನನ್ನು ವಧಿಸಿದ ದಿನ ಎಂಬುದು ಪೌರಾಣಿಕ ವಿವರಣೆ. ರಾಮ ರಾವಣನನ್ನು ಸಂಹರಿಸಿದ ದಿನವೆಂದೂ ಈ ಹಬ್ಬ ರೂಢಿಯಲ್ಲಿದೆ.

ಮಹಾಲಯ ಅಮಾವಾಸ್ಯೆಯ ಮರುದಿನದಿಂದ ಘಟಸ್ಥಾಪನೆ ಆರಂಭವಾಗುತ್ತದೆ. ಅಂದು ರಾತ್ರಿಯಿಂದ ಹಚ್ಚವ ದೀಪ ಒಂಭತ್ತು ರಾತ್ರಿಗಳವರೆಗೆ ದೀಪ ಆರದಂತೆ ಕಾಯುವುದು ನಿಯಮ. ನವರಾತ್ರಿಯ ಕಡೆಯ ದಿನದಂದು ಆಯುಧ ಪೂಜೆ, ಆಯುಧ ಪೂಜೆಯ ದಿನದಂದು
ಎಲ್ಲ ಜನರೂ ಮನೆಯಲ್ಲಿರುವ ಆಯುಧಗಳನ್ನು ಪೂಜಿಸುವುದು ಒಂದು ವೈಶಿಷ್ಟ್ಯವಾದರೆ, ರೈತರು ಕೃಷಿ ಉಪಕರಣಗಳನ್ನು ಪೂಜಿಸಿ-ರಾಸುಗಳಿಗೂ ಸ್ನಾನಮಾಡಿಸಿ ನೈವೇದ್ಯಗೈಯುವುದು ಇನ್ನೂ ವಿಶೇಷವಾದುದು ಇದನ್ನು ಕಂಡೆ ಪೂಜೆ ಎಂದು ಕೆಲವು ಕಡೆ ಕರೆಯಲಾಗುತ್ತಿದೆ. ಮರುದಿನವೇ ಮಹಾನವಮಿ ಅಥವಾ ವಿಜಯ ದಶಮಿ.
ವಿಜಯದಶಮಿ ದಿನದಂದು  ಅದ್ಧೂರಿಯಾಗಿ ದುರ್ಗಾ ಪೂಜೆ ನೆರವೇರುತ್ತದೆ.. ವಾಡಿಕೆ ಅಂತೆ ದುರ್ಗಾದೇವಿಗೆ ಕುಂಬಳಕಾಯಿ ಒಡೆದು ಪೂಜಿಸುತ್ತಾರೆ.ನಂತರ ಬನ್ನಿ ಮುಡಿಯುವುದು ಅಪೂರ್ವ ಸಂಪ್ರದಾಯ. ಹಲವು ದಿನಗಳಿಂದ-ವರ್ಷಗಳಿಂದ, ಮನಸ್ತಾಪದಿಂದ-ವಿರಸದಿಂದ ಮಾತು ಬಿಟ್ಟು ದೂರವಾದವರು, ಆ ದಿನ ಎಲ್ಲ ಮರೆತು ಬನ್ನಿ (ಬನ್ನಿ ಬಂಗಾರ) ವಿನಿಮಯ ಮಾಡಿಕೊಳ್ಳುತ್ತಾರೆ. ಹೀಗೆ, ದಸರೆಯು ಜನರನ್ನು ಮತ್ತೆ ಸಮರಸದಿಂದ ಕೂಡಿ ಬಾಳಿಸುವ ಸೇತುವೆಯಾಗಿ ಕೆಲಸ ಮಾಡುತ್ತದೆ. ಬನ್ನಿ ಮುಡಿಯುವಲ್ಲಿ ಹಿರಿಯ-ಕಿರಿಯ ಎಂಬ ಭೇದವಿಲ್ಲ. ಅಂತೆಯೇ ಯಾವುದೇ ಜಾತಿ ಮತದ ಸೋಂಕೂ ಇಲ್ಲ.

ಒಂಭತ್ತು ದಿನಗಳ ವಿಶೆಷ:

ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಅರಂಭವಾಗುತ್ತದೆ. ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪವನ್ನು ಹಚ್ಚುತ್ತಾರೆ.. ನಂತರ ಗೊಂಬೆಗಳನ್ನು, ಸಕ್ತಿ ದೇವತೆಯರನ್ನು ಪ್ರತಿಷ್ಟಾಪಿಸುತ್ತಾರೆ.. ಒಂಭತ್ತು ದಿನಗಳ ಕಾಲ ಶಕ್ತಿ ದೇವತೆಯನ್ನು ನಿಯಮ ಬದ್ಧವಾಗಿ ಪೂಜಿಸಲಾಗುತ್ತದೆ.
ನವರಾತ್ರಿಯ ಎರಡನೆಯ ದಿನದಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.. ಲಕ್ಷ್ಮಿ ದೇವತೆಗೆ ಇಷ್ಟವಾದ ನೈವೇದ್ಯವನ್ನು ನೀಡಿ ಆಷ್ಟೋತ್ತರಗಳಿಂದ ಪೂಜೆ ಮಾಡಲಾಗುತ್ತದೆ..
ಮೂರನೆಯ ದಿನದಂದು ಮಹಿಶಾಸುರ ಮರ್ದಿನಿ ರೂಪವನ್ನು ಪೂಜಿಸಲಾಗುತ್ತದೆ.
ನಾಲ್ಕನೆಯ ದಿನದಂದು ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ..
ನವರಾತ್ರಿಯ ಐದನೇ ದಿನ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.
ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ.
ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ..
ಎಂಟನೆಯ ದಿನವನ್ನು ಅಷ್ಟಮಿ ಎಂದು ಕರೆಯುತ್ತಾರೆ,.. ಅಂದರೆ, ದುರ್ಗಾ ದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. 
ಈ ದಿನ ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ.
ನವರಾತ್ರಿ ಒಂಭತ್ತನೆಯ ದಿನ ಆಯುಧ ಪೂಜೆ ನಡೆಯುತ್ತೆ.. ಪಾಂಡವರು ವನವಾಸ ಮುಗಿಸುವ ಸಂದರ್ಭದಲ್ಲಿ ಊರ ಹೊರಗಿನ ಶಮೀವೃಕ್ಷದಲ್ಲಿ ಕಟ್ಟಿಹಾಕಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗೆ ಇಳಿಸಿಕೊಂಡು ತಮ್ಮತಮ್ಮ ಆಯುಧಗಳನ್ನು ಪೂಜಿಸಿ ತಮ್ಮ ಜಯಕ್ಕೋಸ್ಕರವಾಗಿ ಪ್ರಾರ್ಥಿಸಿದರು. ಮೈಸೂರಿನಲ್ಲಿನ ಚಿನ್ನದ ಅಂಬಾರಿಯನ್ನು ವಿಧಿವತ್ತಾಗಿ ರಾಜ ಮನೆತನದವರಿಂದ ಪೂಜಿಸಲಾಗುತ್ತದೆ..
ಹತ್ತನೆಯ ದಿನದಂದು ವಿಜಯದಶಮಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಶಮೀವೃಕ್ಷವನ್ನು ಪೂಜಿಸಿದರೆ ಶತ್ರುಜಯ ಪಾಪ-ಪರಿಹಾರ, ಮುಖ್ಯ ಕಾರ್ಯಗಳಲ್ಲಿ ವಿಜಯ ದೊರೆಯುತ್ತದೆ ಎಂಬ ನಂಬಿಕೆ ಇದೆ..
ಏನೇ ಇರಲಿ ನಮ್ಮ ಹಬ್ಬ ಹರಿದಿನಗಳೇ ನಮಗೆ ಹೆಮ್ಮೆ.ಚಾಚು ತಪ್ಪದೇ ಸನಾತನ ಹಿಂದೂ ಧರ್ಮದ ಹಬ್ಬಗಳನ್ನು ಎಲ್ಲರೂ ಒಂದಾಗಿ ಸೇರಿ ಆಚರಸಿ ಮುಕ್ತಿ ಪಡೆಯೋಣ ಎನ್ನುತ ತಾಯಿ ಜಗನ್ಮಾತೆ ತಮ್ಮ ಎಲ್ಲಾ ಇಷ್ಟಾರ್ಥ ಸಿದ್ದೀಗಳನ್ನು ಪೂರೈಸಿ ಕಾಪಾಡಲಿ ಎಂದು ಹಾರೈಸುವೆ..

-ಗುರು ಅರಳಿಮರದ..

Comments