UK Suddi
The news is by your side.

ಮದರಾಸಿ ಪಟ್ಟಣ.


2008 ರ ಡಿಸೆಂಬರ್ ಚಳಿಗಾಲದ ಸಮಯ , ನಾನು , ನನ್ನ ಫ್ರೆಂಡ್ಸು ಗುಜರಾತಿನ ಗಾಂಧಿನಗರ ದಲ್ಲಿ ಕಂಪನಿಯ ಟ್ರೇನಿಂಗ ಮುಗಿಸಿಯಾಗಿತ್ತು , ಕೆಲಸದ ಪೋಸ್ಟಿಂಗ್ ಗೆ ಮುಂದಿರುವ ಆಯ್ಕೆ ಮತ್ತು ಆಸೆ ಹೊಂದಾಣಿಕೆಯಾಗದೆ ಗೊಂದಲದಲ್ಲಿ ನಿಂತಾಗ ಮುಂದೆ ಬಂದವಳೇ HR  ಡೆಪಾರ್ಟ್ಮೆಂಟಿನ ಮುಖ್ಯಸ್ಥೆ. ನಿಮ್ಮ ಆಸೆಯೇನೋ ಸರಿ ಆದ್ರೆ “ವೀ ಆರ್ extremely ಸಾರೀ ” ಇರೋದು ಬರಿ ಡೆಲ್ಲಿ ಮತ್ತೆ ಚೆನ್ನೈ ಅಂದ್ಬಿಟ್ಳು. ಇರೋವ್ರೆಲ್ಲ ಕನ್ನಡದ ಕುಲಪುತ್ರರು , ಬೇಕಾಗಿದ್ದು ಬೆಂಗಳೂರು. ಯಾರು ತುಟಿ ಬಿಚ್ಚೊಹಾಗಿಲ್ಲ. ಸೀ ಯು ಇನ್ ಚೆನ್ನೈ ಆಫ್ಟರ್ 2  ವೀಕ್ಸ್ ಅಂದು ಹೋದವ್ಳು ಮತ್ತೆ ಸಿಕ್ಕೇ ಇಲ್ಲ.ಆಗಿನ ಮಟ್ಟಿಗೆ , ತೆಲುಗು ಮತ್ತು ತಮಿಳು , ಎರಡು ಅರ್ಥವಾಗದ ಭಾಷೆ – ಅವೆರಡು ವಂದೇ ಎಂದು ನಂಬಿದ ಭೂಪರು ನಾವು. ಹೋಗೋ ವರೆಗೂ ಎಲ್ಲರದ್ದೂ ಒಂದೇ ಮಾತು – ಮದ್ರಾಸಿ ಗೆ ಹೋಗ್ತಾ ಇದ್ದೀಯ ಹುಷಾರು ! ಅಲ್ಲಿ ಅವರಿಗೆ ಬೇರೆ ಭಾಷೆ ಬರೋಲ್ಲ, ಬಂದ್ರೂ ಮಾತಾಡಲ್ಲ ! ಹುಷಾರು ..ಕಂದಾ ಹುಷಾರು ಅನ್ನೋವಷ್ಟರಲ್ಲೇ ನಾವೆಲ್ಲ ಚೆನ್ನೈ ಗೆ ಹೋಗಿ ಒಂದು ವಾರ ಆಗಿತ್ತು. ಹುಷಾರು ಎಂದ ಪ್ರತಿಯೊಬ್ಬರ ಮುಖ ಕಣ್ಮುಂದೆ ನೇ ಓಡಾಡ್ತಿತ್ತು. ಎಲ್ಲವು ಅಕ್ಷರಃ ಷಹ ನಿಜ.
ಕಾಲೇಜಿನಲ್ಲಿ ಆಡಿದ “ಡಂಬ್ ಶೆರಾಟ್ಜ್(ಮುಖಾಭಿನಯ)”  ಕೆಲಸಕ್ಕೆ ಬಂದಿದ್ದೆ ಅಲ್ಲಿ..ಎಲ್ಲೆಂದರಲ್ಲಿ ಕೈ ಸನ್ನೆ , ಬಾಯಿ ಸನ್ನೆ..ಕೆಲವೊಮ್ಮೆ social  interaction ಆಗದೆ ಇದ್ರೂ ಪರವಾಗಿಲ್ಲ , ಇವರಿಗೆ ಕನ್ವಿನ್ಸಲಸಾದ್ಯ (Convince ಲು + ಅಸಾಧ್ಯ ) ಎಂದಿದ್ದೂ ಉಂಟು . ಆಫೀಸ್, ಕ್ಯಾಂಟೀನ್ , ಬಸ್ಸು , ನೆರೆ ಹೊರೆ ಎಲ್ಲೆಲ್ಲೂ ಒಂದೇ ಭಾಷೆ – ನಮಗ್ ಅರ್ಥ ಆಗ್ದೇ ಇರೋದು !. ಕೆಲವರ ಕಟ್ಟೆ ಒಡೆದು ಬೆಂಗಳೂರಿಗೆ ವರ್ಗಾವಣೆ ಕೇಳಿದ್ದೂ ಆಯಿತು , “ನನ್ನ ಮದ್ವೆ ಸಾರ್ – ನನ್ನ ಗಂಡ ಬೆಂಗಳೂರಲ್ಲಿ ಕೆಲಸ ಮಾಡ್ತಾನೆ , ನಾನಿಲ್ಲಿದ್ರೆ ನನ್ನ ಮದ್ವೆ ಬೇಡ್ವಂತೆ “, “ನಮ್ಮ್ ಅಪ್ಪ ಅಮ್ಮಂಗೆ ನಾನೋಬ್ಬಳೇ ಮಗಳು , ನಾನು ಇಷ್ಟ್ ದೂರಾ ಇರೋದು ಅವರ ಆರೋಗ್ಯಕ್ಕೆ ಅಷ್ಟೊಂದ್ ಒಳ್ಳೇದಲ್ಲ ಸಾರ್ ” …. ಒಂದಾ… ಆ ಆ ಆ.. ಎರಡಾ .. ಆ ಆ ಆ….ಸುಳ್ಳು ಹೇಳಿದ್ದೇ  ಹೇಳಿದ್ದು – ಬಹುತೇಕ ಹುಡ್ಗಿರ್ಗೆನೋ ಟ್ರಾನ್ಸ್ಫರ್ ಸಿಕ್ತು.. ಎಸ್ಕೇಪ್ ಆದ್ರು… ಆದ್ರೆ ಗಂಡು ಜಾತಿಯ ಜೀವನ ಆ ಊರಿಗೆ ಅಂತ ನಿರ್ಧರಿಸಿಯಾಗಿತ್ತು.
ಒಂದೆರಡು ತಿಂಗಳಲ್ಲಿ, ಚೆನ್ನೈ ಗೆ ಬೇಕಾಗುವ ಪ್ರಾಥಮಿಕ ಜೀವನಾಂಶ – “ಭಾಷೆ” , ಕೊಂಚಂ ಕೊಂಚಂ ಅರ್ಥ ವಾಗತೊಡಗಿತ್ತು.ಬೇಸಿಗೆ ಇನ್ನು ಕಮಿಂಗ್ ಸೂನ್ ಅಂತ ಟ್ರೈಲರ್ ತೋರಸ್ತಿತ್ತು , ಅಷ್ಟರಲ್ಲಿ ಚಪಾತಿ , ಪಲ್ಯ ಬಿಟ್ಟು ಅನ್ನ,ರಸಂ ಗೆ ಪೂರ್ತಿ ಸಮರ್ಪಿಸಿ ಕೊಂಡಿದ್ದೆವು. ವೀಕ್ ಡೇ ಆಫೀಸ್ ಊಟ – ವೀಕೆಂಡ್ ತಟ್ಟೆ ತುಂಬೋವಷ್ಟು ಅನ್ನ , ಅನ್ನದ ಬಿಳಿ ಬಣ್ಣ ಕಾಣದಷ್ಟು ಸಾರು. ಕುಮಾರ್ ಅನ್ನ ಮಾಡಿದ್ರೆ , ಹರ್ಷ ಸಾರಿಗೆ ಸೀಮಿತ. ಒಬ್ರು ತಟ್ಟೆ ತೊಳೆಯೋದು , ಇನ್ನೊಬ್ಬ ತರಕಾರಿ ಹೆಚ್ಹೋದು …ಇವರ ಮಧ್ಯೆ ಯಾರಾದ್ರೂ ಕಾಲ್ ಮೇಲ ಕಾಲ್ ಹಾಕಿ ಟಿವಿ ನೋಡಿದ್ರೆ – ಆ ಮಗನ್ ಗೆ ಅವತ್ತು ಮಾರಿ ಹಬ್ಬಾನೇ.ನಂಬಿದ್ರೆ ನಂಬಿ ಬಿಟ್ರೆ ಬಿಡಿ – ಬೇಸಿಗೆ ಮಜಾ ಸಿಗೋದು ಮದ್ರಾಸ್ನಲ್ಲೇ…ಸೂರ್ಯಂಗೆ ಮದ್ರಾಸ್ ಅಂದ್ರೆ ಎದ್ವಾ-ತದ್ವಾ ಲವ್ವು… ಮಳೆ ಮರೆತ ಊರು , ಬಂದ್ರೆ ಪ್ರವಾಹ ಇಲ್ಲಾಂದ್ರೆ ಬರೀ ದಾಹ…! ಬೇಸಿಗೆಯ ಪ್ರತಿಯೊಂದು ಗಳಿಗೆಯೂ ಕೆಂಡಾಮಂಡಲ. 15 ನಿಮಿಷ ಸಾಕು ತಲೆಗೂದಲಿನ ಬೆವರು ಬೆನ್ನಿನ ಮುಲಕ ಸೊಂಟಕ್ಕೆ ಜಾರಲು…. ಬೆವರು ಎಷ್ಟೆಂದ್ರೆ – ತನಗೆ ಬೇಕಾದ ಉಪ್ಪು ತಾನೇ ತಯಾರಿಸುವಷ್ಟು..! ಮನೆಯಲ್ಲಿ ಚಡ್ಡಿ ಒಂದ್ಬಿಟ್ಟು ಬಟ್ಟೆ ಧರಿಸಿದ ನಿದರ್ಶನವಿಲ್ಲ ..ಫ್ಯಾನ್ ನಿಂತಿದ್ದಿಲ್ಲ…ಹಾಸಿಗೆ ಬೇಕಾಗಿಲ್ಲ, ನೆಲಕ್ಕೆ ಅಂಗಾತ ಮಲಗಿದರೆ ಸಾಕೆನಿಸ್ತಿತ್ತು. ಮನೇಲಿದ್ರೆ  ಸಂಕಟ ಹೊರಗೋದ್ರೆ  ನರಕ  … ಆಗ್ಲೇ ನಾವೆಲ್ಲ ಬೆಂಗಳೂರಿಗರಿಗೆ “ಸ್ವರ್ಗವಾಸಿಗಳು” ಅನ್ನೋಕ್ ಶುರು ಮಾಡಿದ್ದು.
            ಎರಡು ವರುಷ ನಾನು ಮದರಾಸಿನ ನಿವಾಸಿ

            ಒಳ್ಳೆದಿತ್ತು ಆಗಿದ್ದರೆ ಅಲ್ಪ ದಿನದ ಪ್ರವಾಸಿ

            ಬೇಸಿಗೆ ಬಂದ್ರೆ ನಮ್ಮೂರೇ ತುಂಬಾ ವಾಸಿ

            ಅದಕ್ಕೇ, ಬೆಂಗ್ಳುರಿನವ ನಿಜ್ವಾಗ್ಲೂ ಸ್ವರ್ಗವಾಸಿ
ಉಚ್ಛಾರ ದ ವಿಪರ್ಯಾಸ – ನಮಗೆ ಮನರಂಜನೆಯ ವಿಷಯ. ಆ ಊರಲ್ಲಿ , ನಮ್ಮ ಮಹೇಶ್ ಅಲ್ಲಿ ಮಗೇಶ್ , ಖುಷಬು ಆಗ್ತಾಳೆ ಗುಷ್ಬೂ , ಸ್ನೇಹಾ ಗೆ ಹೊಸಾ ಹೆಸರು ಸ್ನೇಗಾ …ಕೇಳೋಕೆ ಡಿಫರೆಂಟ್ ಆದ್ರು  ಆಮೇಲ್ ಹೊಂದ್ಕೊಂಡ್ ಬಿಡ್ತಿವಿ. “ಳ” ಶಬ್ದಕ್ಕೆ “Zh” ಪ್ರಯೋಗ ಮಾಡ್ತಾರೆ ಅಂತ ತಿಳಿಯೋವಷ್ಟರಲ್ಲಿ “ಥೇನಮೋಳಿ” ಎಂಬ ಮಹಿಳೆಗೆ “ಥೇನಮೋಜಿ ” ಎಂದು ಕರ್ದು ಉಗಸ್ಕೊಂಡಾಗಿತ್ತು.”ಸುಮ್ನೆ” ಅಂತ ಕರಿತೀವಲ್ಲಾ ಅದಕ್ಕವ್ರು “ಚುಮ್ಮಾ” ಅಂತಾರೆ ….ಆಫೀಸ್ನಲ್ಲಿ ಹುಡುಗಿ “ಚುಮ್ಮಾ ಕುಡ್” ಅಂದಾಗ … ಸೊ Desperately ರೋಮ್ಯಾಂಟಿಕ್ ಅಂದ್ಕೊಡವ್ನು …ನಿಜಾಂಶ  ಗೊತ್ತಾದ್ ಮೇಲೆ Shamelessly Misunderstood ಅಂತ ನಾನೆ ಬೈಯ್ಕೊಂಡಿದ್ದೆ.
ವಾಯುಗುಣ ಮತ್ತು ಜೀವನಶೈಲಿ ಎಷ್ಟೇ ವಿಚಿತ್ರ ಎನಿಸಿದರೂ, ಅಲ್ಲಿನ ಜನ ಹತ್ತಿರವಾಗೋಕೆ ಜಾಸ್ತಿ ಟೈಮ್ ಬೇಕಾಗಿಲ್ಲ..ಉದಾರಿಗಳು, ಭಾಷೆ ಬದಿಗೊತ್ತಿ ನೋಡಿದಾಗ ಪ್ರತಿಯೊಬ್ಬರೂ ಇಷ್ಟವಾಗ್ತಾರೆ… ಇವತ್ತಿಗೂ ಚೆನ್ನೈ ಫ್ರೆಂಡ್ಸ್ ಎಲ್ಲೇ ಇದ್ರೂ ಅವರ ಸ್ನೇಹ ಕಡಿಮೆ ಆಗಿಲ್ಲ. ಚಿತ್ರೋದ್ಯಮ ಅತ್ಯದ್ಭುತ – ಪ್ರೀತಿಯ ಅನಾವರಣ ಆಗೋದೇ ತಮಿಳು ಚಿತ್ರದಲ್ಲಿ, ರಾಜಕೀಯ,.. ವರ್ಣ ರಂಜಿತ – ಪ್ರಾದೇಶಿಕ ಪಕ್ಷಗಳೇ ಪ್ರಧಾನ…ಪ್ರತಿಭೆಗೆ ಕೊರತೆ ಇಲ್ಲಾ …ಮರೀನಾ ಬೀಚ್ ಪ್ರೀತಿಸದವರಿಲ್ಲ. ಕಾಫಿ ಕುಡದ್ರೆ   ಸರವಣ ಭವನ್ ದಲ್ಲೇ ಕುಡಿಬೇಕು ಅಂತ ಪ್ರೀತಿಗೆ ಹೇಳ್ದೆಇರೋ ರವಿವಾರ ನೇ ಇಲ್ಲಾ… ಇಂಥ ಚಿತ್ರ ವಿಚಿತ್ರ ಅನುಭವ ಬೆಂಗಳೂರಲ್ಲಿದ್ರೆ ಮಿಸ್ ಆಗತಿತ್ತೇನೋ, ಅಲ್ವಾ !  ಥಾಂಕ್ ಯು ಚೆನ್ನೈ.
ನೀವೂ ಹೋಗ್ಬನ್ನಿ ಚೆನ್ನೈಗೆ , ಪಕ್ಕಾ  ಇದನ್ನ ತಿರಗಾ ಓದ್ತಿರಾ… ಸಂಶಯಾನೆ ಬೇಡಾ.
(ಮೊನ್ನೆ “ಜಯಮ್ಮ” ನ ಅಂತಿಮ ದರ್ಶನ ನೋಡ್ತಾ ನೋಡ್ತಾ ಮನಸ್ಸು ಮದ್ರಾಸಿನೆಡೆಗೆ ಜಾರಿತ್ತು)
              ಮುಗಿದ ಪ್ರಯಾಣ , ಬಿಟ್ಟಾಯ್ತು ಇಹಲೋಕ

              ಸಂತಾಪ,ಕಣ್ಣೀರು,ಮಡುಗಟ್ಟಿದ ಶೋಕ

              ಫಲಿಸಲಿಲ್ಲ ಪ್ರಾರ್ಥನೆ -ಪೂಜೆ-ಮಂತ್ರಾದಿ ಶ್ಲೋಕ

          ಇನ್ನು ನೆನಪು ಮಾತ್ರ,ಆದರೆ ದುಃಖ ಅವಳಷ್ಟೇ ತೂಕ
-ರವಿ ರಾಚನ್ನವರ.

Comments