UK Suddi
The news is by your side.

ಆಳ್ವಾಸ್ ನುಡಿಸಿರಿ 2017 ಅಧ್ಯಕ್ಷರಾಗಿ ನಾಗತಿಹಳ್ಳಿ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಿ.1ರಿಂದ 3ರ ವರೆಗೆ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2017 ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಿನಿಮಾ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರ ಶೇಖರ್ ಆಯ್ಕೆಯಾಗಿದ್ದಾರೆ.

ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ತಿಳಿಸಿದ್ದಾರೆ. ಕರ್ನಾಟಕ ಬಹುತ್ವದ ನೆರೆಗಳು ಎನ್ನುವ ಪ್ರಧಾನ ಪರಿಕಲ್ಪನೆಯಡಿಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.

ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರು ಕಥನಕಾರ, ಸಿನಿಮಾ ನಿರ್ದೇಶಕರಾಗಿ ಜನಪ್ರಿಯ ರಾಗಿದ್ದಾರೆ. ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನೊಳಗೊಂಡ ಕೃತಿಗಳನ್ನು ಹೊರ ತಂದಿದ್ದಾರೆ. ಉಂಡು ಹೋದ ಕೊಂಡು ಹೋದ ಸಿನಿಮಾ ನಿರ್ದೇಶಿಸಿದ್ದು, ನಂತರ 15ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥಾಲೇಖನ, ಅತ್ಯುತ್ತಮ ಗೀತರಚನಾಕಾರ, ಅತ್ಯುತ್ತಮ ನಿರ್ದೇಶಕ ಸಹಿತ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಡಾ.ಸಿ.ಎನ್.ರಾಮಚಂದ್ರನ್ ಅವರು ಮಂಗಳೂರು ವಿವಿಯಲ್ಲಿ 16 ವರ್ಷ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

Comments