UK Suddi
The news is by your side.

ವಿದ್ಯಾರ್ಥಿಗಳೊಡನೆ ಒಡನಾಟ ವಯಸ್ಸನ್ನು ಮರೆಸುತ್ತದೆ – ಡಾ.ಸಬಿಹಾ ಭೂಮಿಗೌಡ

ಬೆಳಗಾವಿ:ಇಂದಿನ ಯುಗದಲ್ಲಿ ಎಲ್ಲದರಲ್ಲೂ ಏಕರೂಪತೆ ಬಂದು ಸೃಜನಶೀಲತೆಯ ಕಗ್ಗೊಲೆಯಾಗುತ್ತಿದೆ.ಹಿಂದಿನ ಯುವಪೀಳಿಗೆಗೆ ಇದ್ದ ವಿಶಾಲ ಚೌಕಟ್ಟು ಇಂದು ಇಲ್ಲ.ಎಲ್ ಕೆ ಜಿಯಿಂದಲೇ ಅಂಕಗಳ ಬೇಟೆ ಶುರುವಾಗಿ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕತೆಯೇ ಇಲ್ಲವಾಗಿದೆ ಇದು ವಿಷಾದನೀಯ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ.ಸಬಿಹಾ ಭೂಮಿಗೌಡ ಹೇಳಿದರು. 

ಅವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಹಾಗೂ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ ಇವುಗಳ ಆಶ್ರಯದಲ್ಲಿ ನಡೆದ ” 9 ನೇ ಅಂತರ ಕಾಲೇಜು ಯುವಜನೋತ್ಸವ” ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದಿನ ಮಕ್ಕಳಿಗೆ ಚಂದ್ರನೆಂದರೆ ಒಂದು ಉಪಗ್ರಹವಷ್ಟೇ,ಆಗಿನವರಂತೆ ಚಂದಮಾಮ ಎನ್ನುವ ಭಾವನಾತ್ಮಕತೆ ಇಲ್ಲ. ಹೆಜ್ಜೆ ಹೆಜ್ಜೆಗೂ ಒತ್ತಡದ ಹಾಗೂ ಯಾಂತ್ರೀಕೃತ ಜೀವನ ಸಾಗಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ರಾಮನಗರ ಜಿಲ್ಲೆಯ ರೈತ ಆರ್.ಎಮ್. ನಾಗೇಶ ಮಾತನಾಡಿ, ಯುವಕರು ಸರಕಾರಿ ನೌಕರಿಗಾಗಿ ಆಸೆಪಡದೆ ಕೃಷಿಯಲ್ಲಿ ಖುಷಿ ಪಡಬೇಕು ಎಂದರಲ್ಲದೆ, ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಚರ್ಮವಾದ್ಯ, ಎಣ್ಣೆ ದೀಪಗಳು ಅಪರೂಪವಾಗಿ ಮುಂದೆ ಕೃತಕ ನಗಾರಿ, ವಿದ್ಯುತ್ ಚಾಲಿತ ದೀಪಗಳು ಬರಲಿವೆ. ಇಂದು ಮೊಬೈಲ್,ಟೀವಿಗಳೂ ಯುವಕರ ದಾರಿ ತಪ್ಪಿಸಿವೆ ಎಂದರಲ್ಲದೆ, ಕೆಲವು ಹಾಡುಗಳು ಅರ್ಥವೇ ಇಲ್ಲದೆ ಆಭಾಸಗಳಾಗಿವೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಹಾಗೂ ಸ್ಮಾರ್ಟ್ ಸಿಟಿ ನಿರ್ದೇಶಕ ಶಶಿಧರ ಕುರೇರ ಮಾತನಾಡಿ, ಯುವಕರು ಪ್ರಯತ್ನಪೂರ್ವಕ ಶಿಕ್ಷಣ ಪಡೆಯಬೇಕು. ರಾತೋರಾತ್ರಿ ಸಂಪಾದನೆಯ ಕನಸು ಕಾಣಬೇಡಿ ಅಂಥವರು ಜೈಲುಸೇರಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಎಲ್.ಮಹೇಶ್ವರ್ ಮಾತನಾಡಿ, ಯಾವುದೇ ದೇಶದಲ್ಲಿ ಕೃಷಿಯಲ್ಲಿ ಬದಲಾವಣೆ ಆಗದಿದ್ದಲ್ಲಿ ಆ ದೇಶ ಮುಂದುವರೆಯಲಾರದು. ನಮ್ಮ ವಿಶ್ವವಿದ್ಯಾಲಯಗಳು ಆಸಕ್ತ ಯುವರನ್ನು ತೋಟಗಾರಿಕೆ ಕೃಷಿಯತ್ತ ಕರೆದು ಉತ್ತೇಜನ ನೀಡುತ್ತವೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಇಂಥ ಯುವಜನೋತ್ಸವಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕೆಲಸವಾಗಬೇಕು ಎಂದರು.

ಗೋಕಾಕದ ಹೊರವಲಯದ ಗೋಕಾಕ ಸಪ್ಲೈಯರ್ಸ್ ಕಲ್ತಾಣ ಮಂಟಪದಲ್ಲಿ ನಡೆದ ಈ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಬಾಗಲಕೋಟ ತೋ.ವಿ.ವಿ ನಿಕಟಪೂರ್ವ ಕುಲಪತಿ ಡಾ.ಎಸ್.ಬಿ.ದಂಡಿನ,ರವಿ ಬಾಬು ಚಂಡುಗೋಳ,ಡಾ.ಬಿ.ಜಿ.ಪ್ರಕಾಶ,ಡಾ.ಕೆ.ಉಮೇಶ,ಡಾ.ಎಸ್.ಐ.ಅಥಣಿ,ಡಾ.ಎಚ್.ಬಿ.ಪಾಟೀಲ್,ಡಾ.ಪಿ.ಗಂಗಾಧರಪ್ಪ,ಡಾ.ರವೀಂದ್ರ ಮುಳಗೆ,ಡಾ.ಜನಾರ್ಧನ ಜಿ.,ಡಾ.ಟಿ.ಬಿ.ಅಲ್ಲೊಳ್ಳಿ ಆಗಮಿಸಿದ್ದರು.

ಅತಿಥಿಗಳಾಗಿ ಬ್ಯಾಡಗಿ ಶಾಸಕರು ಬಸವರಾಜ ಶಿವಣ್ಣವರ, ರೋಣ ಶಾಸಕರು ಗುರುಪಾದಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ, ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ,ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್, ತೋಟಗಾರಿಕೆ ಆಯುಕ್ತ ಪಿ.ಸಿ.ರೇ, ಭಾರತೀಯ ಅನುಸಂಧಾನ ಪರಿಷತ್ ನವದೆಹಲಿಯ ಡಾ.ಟಿ.ಜಾನಕಿರಾಮ್, ಶಿವಮೊಗ್ಗದ ಡಾ.ಕೆ.ಜಿ.ಪರಮೇಶ್ವರಪ್ಪ, ಉತ್ತೂರಿನ ಶಂಕರಪ್ಪ ಮಲಾಲಿ, ಶೆಟ್ಟಿಮದಹಳ್ಳಿಯ ಎಸ್. ಮಂಜುನಾಥ ಗೌಡ, ಕೃ.ವಿ.ವಿ ಧಾರವಾಡದ ಡಾ.ಯೋಗಿರಾಜ ಪಾಟೀಲ, ಉಪ್ಪಿನ ಬೆಟಗೇರಿಯ ಶ್ರೀಮತಿ ಕಸ್ತೂರಿ ಅಷ್ಟಗಿ, ತೋ.ವಿ.ವಿ ಯ ಡಾ.ಎಚ್.ಬಿ.ಲಿಂಗಯ್ಯ ಹಾಗೂ ಕುಲಸಚಿವ ಡಾ.ಕೆ.ಎಂ.ಇಂದಿರೇಶ್ ಆಗಮಿಸಿದ್ದರು.

ಡಾ.ವಂದನಾ.ವಿ. ಮತ್ತು ಡಾ.ಮಹಾಂತೇಶ ಬಿ.ಎನ್.ನಾಯ್ಕ ನಿರೂಪಿಸಿದ ಈ ಸುಂದರ ಕಾರ್ಯಕ್ರಮದಲ್ಲಿ ಡಾ.ಛಾಯಾ ಪಿ. ಪಾಟೀಲ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಅರಭಾವಿ ತೋ.ವಿ.ವಿ ಹಣ್ಣು ವಿಭಾಗದ ಡಾ.ನಾಗೇಶ್ ನಾಯ್ಕ ಮಾತನಾಡಿದರು. ಡಾ.ಸಿ.ಎನ್.ಹಂಚಿನಮನಿ ಪರಿಚಯ ಮಾಡಿಕೊಟ್ಟರು. ಕೊನೆಗೆ ಡಾ.ಕಾಂತರಾಜು ವಿ. ವಂದಿಸಿದರು

 ಈ ಯುವಜನೋತ್ಸವದಲ್ಲಿ ದಿ.28,29,ಹಾಗೂ 30 ರಂದು ಏಕಪಾತ್ರಾಭಿನಯ,ಮೂಕಾಭಿನಯ,ವ್ಯಂಗ್ಯ ಚಿತ್ರ,ರಸ ಪ್ರಶ್ನೆ,ಭಾಷಣ ಸ್ಪರ್ಧೆ,ಏಕಾಂಕ ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲಿದ್ದು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಲಿದ್ದಾರೆ. ದಿ. 30 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ

Comments