UK Suddi
The news is by your side.

ಗೊತ್ತಾ ಗೊಥ್ವಾರ್ಡ್? ವಿಶ್ವದ ಅತಿ ದೊಡ್ಡ ರೈಲು ಸುರಂಗ

ಜಗತ್ತಿನ ಅತಿ ದೊಡ್ಡ ರೈಲು ಸುರಂಗ ಯಾವುದು ಎಂದು ಕೇಳಿದರೆ ಇತ್ತೀಚಿನವರೆಗೂ ಜಪಾನಿನ ಹದಿನೈದು ಮೈಲುದ್ದದ ಸುರಂಗದತ್ತ ಬೆಟ್ಟು ಮಾಡಿ ತೋರಿಸುತ್ತಿದ್ದೆವು. ಆದರೆ ಇನ್ನು ಹಾಗಿಲ್ಲ. ಇದಕ್ಕಿಂತ ಎರಡು ಪಾಲು ದೊಡ್ಡದಿರುವ “ಗೊಥಾರ್ಡ್ ಸುರಂಗ ಹಾದಿ’ ಸ್ವಿಜರ್‌ಲೆಂಡ್‌ನ‌ಲ್ಲಿ ನಿರ್ಮಾಣವಾಗಿದೆ. ಕೆಲ ತಿಂಗಳ ಹಿಂದೆ ಈ ಹಾದಿಯಲ್ಲಿ ಪರೀಕ್ಷಾರ್ಥ ರೈಲು ಓಡಾಟವೂ ನಡೆದಿದೆ. ಡಿಸೆಂಬರ್‌ ತಿಂಗಳಿನಿಂದ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳು ಓಡಾಡಲಿವೆ. ಈ ಅದ್ಭುತ ಸುರಂಗ 35. 5 ಮೈಲುಗಳಷ್ಟು ದೀರ್ಘ‌ವಾಗಿದೆ.

ಸ್ವಿಜರ್‌ಲೆಂಡಿನ ಆಲ್ಫ್ ಪರ್ವತ ಸಮುದ್ರಮಟ್ಟದಿಂದ 1801 ಅಡಿ ಎತ್ತರವಿದೆ. ಈ ಪರ್ವತದ ಅಡಿಯಲ್ಲೇ ಸುರಂಗ ಕೊರೆದಿರುವುದು. ಜ್ಯೂರಿಚ್‌ನಿಂದ ಮಿಲಾನ್‌ಗೆ ಹೋಗಲು ಮೊದಲು 4 ತಾಸು ಬೇಕಾಗಿದ್ದರೆ ಈ ನೂತನ ದಾರಿಯ ನಿರ್ಮಾಣದಿಂದ ಪ್ರಯಾಣದ ಅವಧಿಯಲ್ಲಿ ಒಂದು ತಾಸಿನ ಉಳಿತಾಯವಾಗಲಿದೆ. ಆಲ್ಪ್ ಪರ್ವತದ 8 ಸಾವಿರ ಅಡಿ ಕೆಳಗೆ ಈ ವಿಶಿಷ್ಟ ಸುರಂಗವನ್ನು ಕೊರೆಯಲಾಗಿದೆ. 70 ವರ್ಷಗಳ ಹಿಂದೆಯೇ ಸ್ವಿಸ್‌ ತಜ್ಞರು ಈ ಹಾದಿಯ ಬಗೆಗೆ ನೀಲಿನಕ್ಷೆ ತಯಾರಿಸಿದ್ದರು. ಅದರ ವಿವಿಧ ಹಂತದ ಪರಿಶೀಲನೆಗಳು ನಡೆದು 1996ರಲ್ಲಿ ಕೆಲಸ ಉದ್ಘಾಟನೆಗೊಂಡಿತು. ಆದರೆ ಇದಕ್ಕೆ ಪೂರ್ಣವಾಗಿ ಕೆಲಸ ನಡೆದಿರುವುದು ಸತತ ಹದಿನೇಳು ವರ್ಷಗಳ ಕಾಲ. ಸರಾಸರಿ ದಿನಕ್ಕೆ ಎರಡು ಸಾವಿರ ಕಾರ್ಮಿಕರ ದುಡಿಮೆ ಇದಕ್ಕಾಗಿ ವ್ಯಯವಾಗಿದೆ. ಹೀಗಿದ್ದೂ ದಿನಕ್ಕೆ ಕೊರೆದ ಸುರಂಗ ಕೇವಲ ನೂರು ಅಡಿಗಳಷ್ಟು ಮಾತ್ರ.

ಸುರಂಗವನ್ನು ಶೇ. 80ರಷ್ಟು ಭಾಗ ಸಾಂಪ್ರದಾಯಿಕ ವಿಧಾನದಿಂದಲೇ ಕೊರೆಯಲಾಗಿದೆ. ಪೂರ್ವ ಮತ್ತು ಪಶ್ಚಿಮಕ್ಕೆ ಎರಡು ರೈಲು ದಾರಿಗಳು ಇದರಲ್ಲಿವೆ. ಒಂದು ರೈಲು ಹೋಗುವಾಗ ಇನ್ನೊಂದು ಹಾದಿಯಲ್ಲಿ ರೈಲು ಬರಬಹುದು. ಇದರೊಳಗಿನ ಸಂಚಾರದ ವೇಗ ತಾಸಿಗೆ 250 ಮೈಲುಗಳಷ್ಟಿದೆಯಂತೆ. ಇದಕ್ಕೆ ಆಗಿರುವ ವೆಚ್ಚ 12 ಶತಕೋಟಿ ಅಮೆರಿಕನ್‌ ಡಾಲರುಗಳು. 73 ಬಗೆಯ ಮೃದು ಮತ್ತು ಗಟ್ಟಿ ಕಲ್ಲುಗಳನ್ನು ಕೊರೆಯುವ ಹಂತದಲ್ಲಿ ಎರಡು ಮಿಲಿಯನ್‌ ಟ್ರಕ್‌ ಲೋಡುಗಳಷ್ಟು ಅದರ ಧೂಳನ್ನು ಹೊರಗೆ ಸಾಗಿಸಲಾಗಿದೆ.

ಸುರಂಗದೊಳಗೆ ಹಾಕಿರುವ ತಾಮ್ರದ ತಂತಿಗಳ ಉದ್ದ ಎರಡು ಸಾವಿರ ಮೈಲುಗಳು. ಇದು ಮ್ಯಾಡ್ರಿಡ್‌ನಿಂದ ಮಾಸ್ಕೋ ತನಕ ಎಳೆಯಬಹುದಾದಷ್ಟು ಉದ್ದವೂ ಹೌದು. ಒಳಗೆ ನಿರಂತರ ವಿದ್ಯುತ್‌ ಇರುತ್ತದೆ. ದೂರ ಸಂಪರ್ಕ ವ್ಯವಸ್ಥೆಯಿದೆ. ರೇಡಿಯೋ, ರಕ್ಷಣಾ ಸೌಲಭ್ಯಗಳೂ ಇವೆ. ಮೂಲ ಸೌಕರ್ಯಗಳಾದ ಗಾಳಿ, ನೀರು, ಅಗ್ನಿಶಾಮಕ ದಳಗಳು, ಹವಾ ನಿಯಂತ್ರಿತ ಕೊಠಡಿಗಳು ಏರ್ಪಾಟಾಗಿವೆ. ತುರ್ತು ರಕ್ಷಣೆಯ ಎಚ್ಚರವಿದೆ. ಪರ್ವತದೊಳಗಿನ ವಿಹಂಗಮ ಯಾತ್ರೆಗೆ ಕಾತರರಾಗಿ ಕಾಯುತ್ತಿದ್ದಾರೆ ಆ ದೇಶದ ಜನತೆ.
20 ದಶಲಕ್ಷ ಟನ್ನುಗಳಿಗೆ ಮೀಸಲಾಗಿದ್ದ ಸರಕು ಸಾಗಣೆ 50 ದಶಲಕ್ಷ ಟನ್ನುಗಳಿಗೇರಲಿದೆ. 20 ಮಿಲಿಯನ್‌ ಜನರಿಗೆ ಇದು ಲಾಭ ತರಲಿದೆ. ಈಗಾಗಲೇ 160 ಮಂದಿ ಚಾಲಕರು 5 ಸಾವಿರ ಸುರಕ್ಷಾ ಸಂಚಾರದ ಯಶಸ್ವೀ ಪ್ರಯೋಗಗಳನ್ನು ನಡೆಸಿದ ಮೇಲೆಯೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಈ ಸುರಂಗದ ಹಾದಿ.
ಸದ್ಯ! ಉಳಿಯಿತು ಪ್ರಕೃತಿ
ಸುರಂಗ ಮಾರ್ಗವಿಲ್ಲದೆ ಹೋಗಿದ್ದರೆ ಬೇರೆ ಹಾದಿಯಲ್ಲಿ ಮಾರ್ಗವನ್ನು ನಿರ್ಮಿಸಬೇಕಿತ್ತು. ಆಗ ಅದರಿಂದಾಗಿ ಪ್ರಕತಿ ಹಾನಿ ಸಂಭವಿಸುತ್ತಿತ್ತು. ಈಗ ಈ ಸುರಂಗ ನಿರ್ಮಾಣದಿಂದಾಗಿ ಸಹಸ್ರಾರು ಎಕರೆಗಳಷ್ಟು ಕಾಡು, ನದಿ ಮತ್ತು ಕೃಷಿಭೂಮಿ, ವಾಸದ ಮನೆಗಳನ್ನು ಉಳಿಸಲಾಗಿದೆ.

Comments