UK Suddi
The news is by your side.

ಆತ್ಮೀಯ ಕಬ್ಬು ಬೆಳೆವ ರೈತರಿಗೊಂದು ಪತ್ರ

 ಆತ್ಮೀಯ ರೈತ ಬಾಂಧವರೇ, ಮುಂಗಾರು ಮಳೆ ಸರಿಯಾಗಿ ಆಗದೇ ಕಬ್ಬಿನ ಬೆಳೆ ಭಾಗಶ: ಒಣಗಿ ಹೋಗಿ ನಾವು ನೀವೆಲ್ಲ ಸಂಕಷ್ಟದಲ್ಲಿದ್ದೆವು. ಅಷ್ಟುಇಷ್ಟು ನೀರಿದ್ದವರು ಕಬ್ಬು ಬೆಳೆಯನ್ನು ಕಾಪಾಡಿಕೊಂಡಿದ್ದರು. ಅಲ್ಲದೆ ಹಿಡಕಲ್ ಜಲಾಶಯದಿಂದ ಎರಡು ಸಲ ಬಿಡಲ್ಪಟ್ಟ ನೀರು ಕೂಡ ಕೈ ಹಿಡಿದು ಕಬ್ಬು ಬೆಳೆ ಉಳಿಯಿತು. ಅಷ್ಟರಲ್ಲಿ ಮಳೆ ಕೂಡ ಆರಂಭವಾಗಿ ರೈತರಿಗೆ ಸಂತಸ ನೀಡಿದೆ. ಸಕ್ಕರೆ ಕಾರಖಾನೆಗಳು ಆರಂಭವಾಗುತ್ತಲೇ ಕಬ್ಬಿನ ಬೆಲೆಯನ್ನು ಟನ್ನಿಗೆ.3050/- ಕೊಡುವುದಾಗಿ ಹೇಳಿಕೆ ನೀಡಿದ್ದರಿಂದ ಸಹಜವಾಗಿಯೇ ಎಲ್ಲ ರೈತರಿಗೆ ಸಂತೋಷವುಂಟಾಗಿತ್ತು. ಆದರೆ ದಿ.28 ರಂದು ನೀಡಲಾದ ಒಂದು ಪ್ರಕಟಣೆಯಲ್ಲಿ ಸಹಕಾರಿ ಸಕ್ಕರೆ   ಕಾರ್ಖಾನೆಯವರು ಮೊದಲ ಬಿಲ್ ಎಂದು ಟನ್ನಿಗೆ 2500/- ಅನಂತರ ರೂ. 200/- ಕೊಡುವುದಾಗಿ ಹೇಳಿಕೊಂಡಿದ್ದರು. ಮತ್ತೆ ದಿ.29 ರಂದು ನೀಡಿದ ಪ್ರಕಟಣೆಯಲ್ಲಿ ಕಬ್ಬಿನ ದರವನ್ನು ರೂ.2500/- ಗೆ ನಿಗದಿ ಮಾಡಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದ್ದು ರೈತರ ಕಷ್ಟ ಕೋಟಲೆಗಳು ಬಂಡವಾಳಶಾಹಿಗಳಿಗೆ ಅರ್ಥವಾಗಲಾರದು. 

    ಸಕ್ಕರೆ  ಕಾರ್ಖಾನೆಗಳ ಈ ಧೋರಣೆಯ ವಿರುದ್ಧ ರೈತರು ಈಗ ಹೋರಾಟ ಹರತಾಳಕ್ಕೆ ಸಿದ್ಧರಾಗಬೇಕಾಗಿದೆ. ಆದರೆ ಅದಕ್ಕಿಂತ ಮುಂಚೆ ಸ್ವಲ್ಪ ಯೋಚಿಸಬೇಕು. ಈ ಮೊದಲು ರೈತರು ಕಬ್ಬಿನ ಬಿಲ್ ಗಾಗಿ ಪ್ರತಿಭಟನೆ ಮಾಡಿದಾಗಲೆಲ್ಲ ಹಾನಿಯಾಗಿದ್ದು ರೈತರಿಗೇ ಹೊರತು ಕಾರ್ಖಾನೆಗಳ ಮಾಲೀಕರಿಗಲ್ಲ.  ನಾವು ಹರತಾಳ ಮಾಡಿ ಕಾರ್ಖಾನೆಯನ್ನು ಬಂದ್ ಮಾಡಿದರೆ ಅದರಿಂದ ರೈತರಿಗೇ  ತೊಂದರೆ. ಯಾಕೆಂದರೆ ಕಬ್ಬು ಬೆಳೆಯನ್ನು ಇಟ್ಟುಕೊಳ್ಳಲಾಗುವುದಿಲ್ಲ. ಹೇಗಾದರೂ ಮಾಡಿ ನುರಿಸಬೇಕು ಇಲ್ಲವಾದರೆ ಬೆಂಕಿ ಹಚ್ಚಬೇಕು. ರೈತರ ಈ ಅನಿವಾರ್ಯತೆ ಗೊತ್ತಿರುವ ಮಾಲೀಕರು ರೈತರ ಬೇಡಿಕೆಗಳಿಗೆ ಕಿವಿಗೆ ಹತ್ತಿ ಹಾಕಿಕೊಳ್ಳುತ್ತಾರೆ. ಆದ್ದರಿಂದ ನನ್ನ ಸಲಹೆ ಏನೆಂದರೆ, ನಾವು ರೈತರು ಹರತಾಳ ಮಾಡುವುದಾದರೆ ಕಬ್ಬು  ಹಂಗಾಮು ಮುಗಿದ ಮೇಲೆ ಮಾಡಬೇಕು. ಈ ಸಂದರ್ಭದಲ್ಲಿ ಕಾರ್ಖಾನೆ ಬಂದ್ ಮಾಡಿದರೆ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತಾಗುತ್ತದೆ. ಅದಕ್ಕಾಗಿ ಈ ಕಾರ್ಖಾನೆಯವರಿಂದ ನಾವು ನಮ್ಮ ಕಬ್ಬಿಗೆ ಯೋಗ್ಯ ದರ ಕೇಳಬೇಕಾದರೆ ಕಬ್ಬಿನ ಹಂಗಾಮು ಮುಗಿದಾದ ಮೇಲೆ ಅವರ ಕಚೇರಿಗಳ ಮೇಲೆ ದಾಳಿ ಮಾಡಿ ಬಂದ್ ಮಾಡಬೇಕು. ಅಲ್ಲಿನ ಕಂಪ್ಯೂಟರ್ ಗಳನ್ನು ಬಂದ್ ಮಾಡಿದರೆ ಈ ಮಾಲೀಕರು ತಮ್ಮ ನೌಕರರಿಗೆ ಕೆಲಸವಿಲ್ಲದೆ ಪಗಾರ ಕೊಡಬೇಕಾಗುತ್ತದೆ. ಕೆಲಸವಿಲ್ಲದೆ ನೌಕರರಿಗೆ ಸಂಬಳ ಕೊಡಬೇಕಾದ ಅನಿವಾರ್ಯತೆ ಬಂದಾಗ ಕಾರ್ಖಾನೆಯವರಿಗೆ ರೈತರ ಕಷ್ಟಕೋಟಲೆಗಳು ಅರ್ಥವಾಗಬಹುದು. 
    ಆದ್ದರಿಂದ ಆತ್ಮೀಯ ರೈತರೆ, ಈ ಸಂದರ್ಭದಲ್ಲಿ ಕಾರ್ಖಾನೆಗಳನ್ನು ಬಂದ್ ಮಾಡುವುದು ಮೂರ್ಖತನದ ನಿರ್ಧಾರವಾಗಬಹುದು. ಈಗ ಟನ್ನಿಗೆ ರೂ.2500/- ಸಿಗುವುದು ಹೋಗಿ ರೂ.1500/- ಆದ್ರೂ ಕೊಟ್ಟು ಕಬ್ಬು ಒಯ್ಯಿರಿ ಎಂದು ಅವರಿಗೆ ದುಂಬಾಲು ಬೀಳುವ ಪರಿಸ್ಥಿತಿ ಬರಬಾರದು. ಯೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕಾಗಿ ವಿನಂತಿ.
ಉಮೇಶ ಬೆಳಕೂಡ, ಮೂಡಲಗಿ

Comments