UK Suddi
The news is by your side.

ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕ ಗೆದ್ದ ವಿಜಯಪುರದ ವಿಶ್ವನಾಥ ಹಾಗೂ ದಾನಮ್ಮ

ಬಾಗಲಕೋಟ: ಜಮಖಂಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್ ಮತ್ತು ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಆಶ್ರಯದಲ್ಲಿ ನಡೆದ 22ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‍ಷಿಪ್‍ನಲ್ಲಿ, 10 ಕಿ.ಮೀ. ವೈಯಕ್ತಿಕ ಸ್ಪರ್ಧೆಯ ಬಾಲಕರ ಹಾಗೂ ಬಾಲಕಿಯರ ಸಬ್‍ಜ್ಯೂನಿಯರ್ ವಿಭಾಗದಲ್ಲಿ ಕ್ರಮವಾಗಿ ವಿಜಯಪುರದ ವಿಶ್ವನಾಥ ಹಾಗೂ ದಾನಮ್ಮ ಅವರು ಮೊದಲ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಂತಹ ಸೈಕ್ಲಿಂಗ್ ಪಟು ವಿಶ್ವನಾಥ ಹಾಗೂ ಪುರುಷರ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ತಂಡದಲ್ಲಿದ್ದಂತಹ ವಿಜಯಪುರದವರೇ ಆದ ಮತ್ತೋರ್ವ ಸೈಕ್ಲಿಂಗ್ ಪಟು ಸಂಜೂ ನಾಯಕ್ ಇಬ್ಬರೂ ವಿಜಯಪುರದ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳು. 

ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕು ಗಣಿಹಾರ ಗ್ರಾಮದ ಕೃಷಿ ಕುಟುಂಬದ ವಿಶ್ವನಾಥ ಹಾಗೂ ಸಂಜೂ ನಾಯಕ್ ಅವರ ಪೋಷಕರಿಗೆ ರೇಸ್ ಸೈಕಲ್ ಕೊಡಿಸುವಷ್ಟು ಆರ್ಥಿಕ ಶಕ್ತಿಯಿರಲಿಲ್ಲ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಇವರಿಬ್ಬರಿಗೂ ತಮ್ಮ ಬಿಎಲ್‍ಡಿಇ ಸಂಸ್ಥೆಯ ಮೂಲಕ ತಲಾ ರೂ.3 ಲಕ್ಷ ಹಣಕಾಸು ನೆರವು ಒದಗಿಸಿದ್ದರು. ಇದರಿಂದ ಇಬ್ಬರೂ ಉತ್ತಮ ದರ್ಜೆಯ ಸೈಕಲ್‍ಗಳನ್ನು ಖರೀದಿಸಿ ಚಾಂಪಿಯನ್‍ಷಿಪ್‍ನಲ್ಲಿ ಪಾಲ್ಗೊಂಡಿದ್ದರು.

Comments