UK Suddi
The news is by your side.

ಶೌರ್ಯ ಪ್ರಶಸ್ತಿ: ನೆರವಿನ ಮೊತ್ತ ಹೆಚ್ಚಳ

ಬೆಂಗಳೂರು: ಪರಮವೀರ ಚಕ್ರ, ಅಶೋಕ ಚಕ್ರ ಸೇರಿದಂತೆ ವಿವಿಧ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಒಂದು ಬಾರಿ ನೀಡುವ ನಗದು ನೆರವಿನ ಮೊತ್ತವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಪಡೆದವರಿಗೆ ಈವರೆಗೆ ₹ 10 ಲಕ್ಷ ನೀಡಲಾಗುತ್ತಿತ್ತು. ಅದನ್ನು ₹ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಾವೀರ ಚಕ್ರ ಮತ್ತು ಕೀರ್ತಿ ಚಕ್ರಕ್ಕೆ ನೀಡುತ್ತಿದ್ದ ₹ 4 ಲಕ್ಷ ಮೊತ್ತವನ್ನು ₹ 12 ಲಕ್ಷಕ್ಕೆ ಹಾಗೂ ವೀರ ಚಕ್ರ ಮತ್ತು ಶೌರ್ಯ ಚಕ್ರ ‍ಪಡೆದವರಿಗೆ ನೀಡುತ್ತಿದ್ದ ₹ 3 ಲಕ್ಷ ಮೊತ್ತವನ್ನು ₹ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮೃತಪಟ್ಟ ಯೋಧರ ಕುಟುಂಬದವರು ಮತ್ತು ಅಂಗವಿಕಲರಾದ ಯೋಧರಿಗೆ ನೀಡುತ್ತಿರುವ ನೆರವಿನ ಮೊತ್ತವನ್ನು ₹ 1 ಲಕ್ಷದಿಂದ ₹ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಕುಟುಂಬದವರಿಗೆ ಈ ಹಿಂದೆ ನಿವೇಶನ ನೀಡಲಾಗುತ್ತಿತ್ತು. ಅದರ ಬದಲು ನೀಡಲಾಗುತ್ತಿರುವ ನಗದು ಮೊತ್ತವನ್ನು ಏರಿಸಲಾಗಿದೆ.
ಅಧಿಕಾರಿ ಮತ್ತು ಕಮಿಷನ್ಡ್ ಅಧಿಕಾರಿಗಳ ಅವಲಂಬಿತರಿಗೆ ಬೆಂಗಳೂರಿನಲ್ಲಿ ₹ 25 ಲಕ್ಷ, ಇತರೆ ಪ್ರದೇಶಗಳಲ್ಲಿ ₹ 20 ಲಕ್ಷ ಹಾಗೂ ನಾನ್ ಕಮಿಷನ್ಡ್ ಮತ್ತು ಇತರರಿಗೆ ಬೆಂಗಳೂರಿನಲ್ಲಿ ₹ 20 ಲಕ್ಷ ಮತ್ತು ಇತರ ಪ್ರದೇಶದವರಿಗೆ ₹ 15 ಲಕ್ಷಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ.

Comments