UK Suddi
The news is by your side.

ದಿಲ್ಲಿಯಲ್ಲೂ ಮೊಳಗುತ್ತಿದೆ ‘ಕಳಸಾದ ಕಹಳೆ’ 


ಗದಗ : ಕಳಸಾ ಬಂಡೂರಿ ಹಾಗೂ ಮಲಪ್ರಭಾಗೆ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದ ಪಟ್ಟಣ, ಗದಗ ಜಿಲ್ಲೆ, ರಾಜ್ಯಕ್ಕೆ ಸ್ಥಿಮಿತಗೊಂಡಿದ್ದ ಹೋರಾಟ ಇದೀಗ ರಾಷ್ಟ್ರದ ರಾಜಧಾನಿ ದೆಹಲಿಯನ್ನು ತಲುಪಿ ಬಂಡಾಯದ ಕಹಳೆಯನ್ನು ಊದಿದೆ. ಪ್ರತಿಭಟನೆಯು 3ನೇ ದಿನಕ್ಕೆ ಮುಂದಡಿಯಿಟ್ಟಿದೆ ಗುರುವಾರವೂ ಸಹ ಕಳಸಾ ಬಂಡೂರಿ ಹೋರಾಟಗಾರರು ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ದೆಹಲಿಯ ಇಂಡಿಯಾ ಗೇಟ್ ಬಳಿ ಮೂರು ಗಂಟೆಗೂ ಹೆಚ್ಚು ಕಾಲ ಮೌನ ಪ್ರತಿಭಟಿಸುವ ಮೂಲಕ ವಿಶೇಷವಾಗಿ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸುವ ನಾಮಫಲಕಗಳೊಂದಿಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆಗೂ ಹೆಚ್ಚು ಕಾಲ ಮೌನವಹಿಸುವ ಮೂಲಕ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಕಳೆದ ಎರಡು ದಿನಗಳಿಂದ ದೇಶದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡಾ ಜನಪ್ರತಿನಿಧಿಗಳಾಗಲೀ ನೀರಾವರಿ ಸಚಿವರುಗಳಾಗಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಾಲಯದ ಅಧಿಕಾರಿಗಳು ಹೋರಾಟಗಾರರ ಬೇಡಿಕೆಯನ್ನು ಆಲಿಸದಿರುವದು ಹೋರಾಟಗಾರರಲ್ಲಿ ಹೋರಾಟದ ಕಿಚ್ಚನ್ನು ಹೆಚ್ಚಿಸುವಂತೆ ಮಾಡಿದೆ. ಜನ ಸಾಮಾನ್ಯರ ವೇದಿಕೆಯ ಅಧ್ಯಕ್ಷ ಡಾ ಅಯ್ಯಪ್ಪ ಮಾತನಾಡಿ, ಕೇಂದ್ರ ಸರಕಾರ ಮಹದಾಯಿ ವಿಷಯದಲ್ಲಿ ಗೋವಾ ಸರಕಾರದ ಪರ ತಮ್ಮ ಮೃದು ನೀತಿಯನ್ನು ತೋರಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಮಹದಾಯಿ ನ್ಯಾಯಾಧೀಕರಣದಲ್ಲಿ ಗೋವಾ ಪರವಾದ ಮಂಡಿಸುತ್ತಿರುವ ಆತ್ಮಾರಾಮ್ ಎನ್ ಎಸ್ನಾಡಕರ್ಣಿಯವರು, ದೇಶದ ಅಡಿಷನಲ್ ಸಾಲಿಸಿರ್ಟಜನರಲ್ ಆಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರಕಾರಕ್ಕೇ ಕಾನೂನು ಸಲಹೆ ನೀಡುವ ಇಂತಹ ವ್ಯಕ್ತಿಗಳಿಂದ ನಿಷ್ಪಕ್ಷಪಾತ ಸಲಹೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದರು. ಕಳಸಾ ಬಂಡೂರಿ ಮಲಪ್ರಭಾ ಹೋರಾಟ ಸಮಿತಿ ಗದಗ ಜಿಲ್ಲಾ ಸಂಚಾಲಕ ವಸಂತ ಪಡಗದ ಮಾತನಾಡಿ ಉತ್ತರ ಕರ್ನಾಟಕದ ಜನತೆಯ ತಾಳ್ಮೆ ಮೀರುವುದರೊಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ಜಾರಿಗೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದಿರುವ ಹೋರಾಟವು ಶಾಸಕರು, ಸಂಸದರಿಗೆ ಮುಳ್ಳಾಗಲಿದೆ ಎಂದರು. ಕಳಸಾ ಬಂಡೂರಿ ಮಹದಾಯಿ ಹೋರಾಟ ಜೋಡಣಾ ಕೇಂದ್ರ ಯುವ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಪರಿವರ್ತನಾ ಯಾತ್ರೆ ಹಾಗೂ ಇನ್ನಿತರೆ ಯಾತ್ರೆಗಳನ್ನು ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಚುನಾವಣೆಯ ಸಂದರ್ಭದಲ್ಲಿ ಸರಿಯಾದ ಪಾಠವನ್ನು ಉತ್ತರ ಕರ್ನಾಟಕದ ಜನರು ನೀಡಲಿದ್ದಾರೆ ಎಂದು ಎಚ್ಚರಿಸಿದರು. ಮೌನ ಪ್ರತಿಭಟನೆಯಲ್ಲಿ ವಿಕಾಸ್ ಸೊಪ್ಪಿನ್, ಅರುಣಕುಮಾರ ಹೊಂಬಳ, ಪ್ರವೀಣಕುಮಾರ ರುದ್ರಸ್ವಾಮಿಮಠ, ಸತೀಶ್, ಅಮೃತ್ ಹಜಾರೆ, ಇಮಾನ್ಸಾಬ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಕೃಪೆ:ಕನ್ನಡಮ್ಮ ನೆಟ್.

Comments