UK Suddi
The news is by your side.

ಧಾರವಾಡ ಜಿಲ್ಲೆಯ ಅಲೆಮಾರಿ, ಅರೆಅಲೆಮಾರಿಗಳ ಮುಖಂಡರೊಂದಿಗೆ ಸಿಎಂ ಭೇಟಿ:ಶಾಸಕ ಸಿ.ಎಸ್.ಶಿವಳ್ಳಿ

ಧಾರವಾಡ :  ಕರ್ನಾಟಕ ಸರಕಾರವು ಅಲೆಮಾರಿ ಹಾಗೂ ಅರೆಅಲೆಮಾರಿಗಳ ಹಿತರಕ್ಷಣೆಗಾಗಿ ಶ್ರಮಿಸುತ್ತಿದೆ. ಮುಂಬರುವ ಬಜೆಟ್ ಮಂಡನೆ ಪೂರ್ವದಲ್ಲಿ ಜಿಲ್ಲೆಯ ಈ ಸಮುದಾಯಗಳ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು  ಭೇಟಿ ಮಾಡಿ ಅವರ ಅಹವಾಲುಗಳ ಈಡೇರಿಕೆಗೆ ಮನವಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ.ಎಸ್.ಶಿವಳ್ಳಿ ಹೇಳಿದರು.
  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ 2017-18 ನೇ ಸಾಲಿನಲ್ಲಿ ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ವಿವಿಧ ಕಾರ್ಯಕ್ರಮಗಳಡಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಲೆಮಾರಿ, ಅರೆಅಲೆಮಾರಿ ಜನಾಂಗಗಳ ಪಟ್ಟಿಯಲ್ಲಿರುವ ಎಲ್ಲ  ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರೆ ಅವುಗಳಿಗೆ ಪರಿಹಾರ ಸಿಗಲಿದೆ. ಮುಖಂಡರು ತಮ್ಮ ನ್ಯಾಯಯುತ ಮನವಿಗಳನ್ನು ಸಿದ್ಧಪಡಿಸಿಕೊಂಡು ಬನ್ನಿ ಮುಖ್ಯಮಂತ್ರಿಗಳ ಭೇಟಿಗೆ ದಿನ ನಿಗದಿಪಡಿಸಲು ಕೋರೋಣ ಎಂದರು.

ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಆರ್.ಮಾತನಾಡಿ, ಅಲೆಮಾರಿ ,ಅರೆಅಲೆಮಾರಿ ಸಮುದಾಯಗಳ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಸ್ಥಳೀಯ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು. ನಗರ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಆಯ್ಕೆ ಮಾಡುವಾಗ ಅಲ್ಲಿನ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತಿಗಳನ್ನು ಸಂಪರ್ಕಿಸಬೇಕು ಎಂದರು.

ಈ ಸಂದರ್ಭದಲ್ಲಿ ಗೋಂಧಳಿ, ಗೊಲ್ಲ, ಶಿಕ್ಕಲಗಾರ್, ಜೋಗಿ, ದರ್ವೆಶ್ ಸೇರಿದಂತೆ ವಿವಿಧ ಅಲೆಮಾರಿ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

Comments