UK Suddi
The news is by your side.

ಧಾರವಾಡದಲ್ಲಿ ರಾಜ್ಯಮಟ್ಟದ 40ನೇ ಕಬ್ಸ್ ಮತ್ತು ಬುಲ್‍ಬುಲ್ ಮಕ್ಕಳ ಉತ್ಸವ.

ಧಾರವಾಡ: ಪ್ರತಿವರ್ಷದಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕರ್ನಾಟಕ ಘಟಕವು ಬೇರೆ ಬೇರೆ ಜಿಲ್ಲೆಗಳಲ್ಲಿ ಆಯೋಜಿಸಿದಂತೆ ಈ ವರ್ಷದ ರಾಜ್ಯಮಟ್ಟದ 40 ನೇ ಕಬ್ಸ್ ಮತ್ತು ಬುಲ್‍ಬುಲ್ ಮಕ್ಕಳ ಉತ್ಸವವನ್ನು ಜನೇವರಿ 19 ರಿಂದ 23ರ ವರೆಗೆ ಧಾರವಾಡದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಉತ್ಸವವನ್ನು ಯಶಸ್ವಿಯಾಗಿ ನಡೇಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದರು. 
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಬ್ಸ ಮತ್ತು ಬುಲಬುಲ್ ಮಕ್ಕಳ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಉತ್ಸವದಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸುಮಾರು ಎಂಟುನೂರು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಐದು ನೂರು ಶಿಕ್ಷಕರು ನಿರ್ಣಾಯಕರಾಗಿ ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೇರೆ ಜಿಲ್ಲೆಯಿಂದ ಬರುವ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಉತ್ತಮ ಊಟ, ವಸತಿ ಹಾಗೂ ಮುಂಜಾಗೃತೆಯಾಗಿ ಆರೋಗ್ಯ ಸೇವೆಗಳನ್ನು ಸಿದ್ಧಗೊಳಿಗೊಳಿಸಬೇಕು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಜಲಮಂಡಳಿ, ಯುವಜನ ಸೇವಾ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳು ಮತ್ತು ಸರಕಾರೇತರ ಸಂಸ್ಥೆಗಳು ಸಹಕಾರ, ನೆರವು ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಎಂ.ಎಂ.ಲೊಂಡೆ ಅವರು ಮಾತನಾಡಿ, ಉತ್ಸವದ ಯಶಸ್ವಿಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ಕರ್ನಾಟಕ ಕಾಲೇಜು ಮೈದಾನ, ಅಕ್ಕನ ಬಳಗ ಮತ್ತು ಸಂಸ್ಥೆಯ ಆವರಣದಲ್ಲಿ ಸಂಘಟಿಸಲಾಗುತ್ತದೆ. ಜಿಲ್ಲಾ ಘಟಕದ ಪದಾಧಿಕಾರಿಗಳು ಉತ್ಸವದ ಕಾರ್ಯಗಳನ್ನು ಹಂಚಿಕೆ ಮಾಡಿಕೊಂಡು ಉತ್ಸವದ ಸಂಪೂರ್ಣ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಪ್ರಭು ಬಿರಾದಾರ, ಜಲಮಂಡಳಿಯ ಅಭಿಯಂತರ ಚಂದ್ರಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪದಾಧಿಕಾರಿಗಳಾದ ವಿ.ವಿ.ಕಟ್ಟಿ,  ಶ್ರೀಮತಿ ವಿದ್ಯಾ ನಾಡಿಗೇರ, ಶ್ರೀಮತಿ ಪ್ರಭಾ ಲೊಂಡೆ, ಎಸ್.ವಿ.ಮೊರಬ, ಎಸ್.ಆಯ್.ನೇಕಾರ ಮತ್ತು ರಜನಿ ದಾಸ ಸೆರಿದಂತೆ ವಿವಿಧ ಶಾಲೆಗಳ ಸ್ಕೌಟ್ಸ್‍ನ ಸಂಯೋಜಕರು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Comments