UK Suddi
The news is by your side.

ಜ.12ರಂದು ಮುಗಳಖೋಡ ಮಠದಲ್ಲಿ “ಸಹಸ್ರ ಸಹಸ್ರ ವಿವೇಕ ಆವಾಹನಾ” ಕಾರ್ಯಕ್ರಮ.

ಬೆಳಗಾವಿ: ಶ್ರೀ ಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳ 32ನೆ ಪುಣ್ಯಾರಾಧನೆಯ ಸುಸಂಧರ್ಭದಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯ ಸಂಭ್ರಮದಲ್ಲಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಕ್ತಿಮಂದಿರ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬ್ರಹನ್ಮಠದಲ್ಲಿ ಸ್ವಾಮಿ ವಿವೇಕಾನಂದರ156ನೇ ಜಯಂತಿ ಉತ್ಸವದ ಅಂಗವಾಗಿ ಇದೇ ತಿಂಗಳ 12ರಂದು ಆಯೋಜನೆ ಮಾಡಲಾಗಿರುವ “ಸಹಸ್ರ ಸಹಸ್ರ ವಿವೇಕ ಆವಾಹನಾ” ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ.

ಜನೇವರಿ 12ರಂದು ದೆಹಲಿಯ ತಮ್ಮ ಕಚೇರಿಯಿಂದ ವಿಡಿಯೋ ಕಾನ್ಪರೆನ್ಸ ಮೂಲಕ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.ಒಂದು ಘಂಟೆಗಳ ಕಾಲ ಈ ಕಾರ್ಯಕ್ರಮಕ್ಕೆ ಸಮಯ ಮೀಸಲಿಡುವದಾಗಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆರ್ಟ್ ಆಫ್ ಲಿವಿಂಗನ್ ಶ್ರೀ ರವಿಶಂಕರ ಗುರೂಜಿಯವರು ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಅತಿ ಎತ್ತರದ ಪರ್ವತಗಳನ್ನು ಏರಿದ ಖ್ಯಾತಿ ಪಡೆದಿರುವ ಪದ್ಮಶ್ರೀ ಪುರಸ್ಕರತೇ ಕು. ಅರುಣೀಮಾ ಸಿನ್ಹಾ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೋಲ್ಕತ್ತಾದ ರಾಮಕೃಷ್ಣ ಆಶ್ರಮದ ಶ್ರೀಗಳು,ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಮುರುಘರಾಜೇಂದ್ರ ಸ್ವಾಮೀಜಿಯವರು ಸೇರಿದಂತೆ ದೇಶದ ಅನೇಕ ಮಠದ ಶ್ರೀಗಳು,ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

“ವಿವೇಕ ಆವಾಹನಾ” ಕಾರ್ಯಕ್ರಮದಲ್ಲಿ 10 ಸಾವಿರ ಯುವಕರು ಸ್ವಾಮಿ ವಿವೇಕಾನಂದರ ವೇಷ ಧರಿಸಿ ವಿಶ್ವ ದಾಖಲೆ ಸೃಷ್ಟಿಸಲಿದ್ದಾರೆ. ಈ ಮದ್ಯ ವಿಡಿಯೋ ಕಾನ್ಪರೇನ್ಸ ಬದಲಿಗೆ ಪ್ರಧಾನಿ ಮೋದಿ ಅವರನ್ನೇ ಖುದ್ದಾಗಿ ಮುಗಳಖೋಡದ ಶ್ರೀ ಮಠಕ್ಕೆ ಕರಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವ ಸತತ ಪ್ರಯತ್ನವು ಶ್ರೀ ಮಠದ ವತಿಯಿಂದ ನಡೆದಿದೆ.

“ವಿವೇಕ ಆವಾಹನಾ” ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಯುವ ಬ್ರಿಗೇಡ್ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೇಲೆ ಅವರು ನಿಬಾಯಿಸುತ್ತಿದ್ದಾರೆ.

ಇನ್ನು “ವಿವೇಕ ಆವಾಹನಾ” ಕಾರ್ಯಕ್ರಮದ ತಯಾರಿಯು ಭರದಿಂದ ಸಾಗಿದೆ.

ಕೆಲವೊಂದು ಕಡೆ ಕೆಲವರು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದರೆ, ಮುಗಳಖೋಡದಲ್ಲಿ ಊಹೆಗೂ ನಿಲುಕದ ಏಕತೆಯನ್ನು ಕಾಣುತ್ತಿದ್ದೇವೆ. ನಿನ್ನೆ ದಲಿತರು ತಾವು ತಯಾರಿಸಿದ ರೊಟ್ಟಿಗಳನ್ನು ಮಠದ ದಾಸೋಹಕ್ಕೆ ನೀಡಿದರು! ಈ ಬಾರಿ ಜಾತ್ರೆಯಲ್ಲಿ ಆಹಾರವನ್ನು ತಯಾರಿಸಿ ಭಕ್ತರಿಗೆ ಬಡಿಸುವ ಜವಾಬ್ದಾರಿ ಅವರದ್ದೇ ಆಗಿದೆ.

ಒಟ್ಟಿನಲ್ಲಿ ಶ್ರೀ ಮಠದಲ್ಲಿ ನಡೆಯುವ ಕಾರ್ಯಕ್ರಮವು ವಿಶ್ವ ದಾಖಲೆಗೆ ಸಜ್ಜಾಗಿದೆ.

-ಗುರು ಎಸ್ ಎ.

Comments