UK Suddi
The news is by your side.

ಶ್ರೀ ಕಾಲಕಾಲೇಶ್ವರ ದೇವಸ್ಥಾನ.

ಗದಗ ಜಿಲ್ಲೆಯ ಗಜೇಂದದ್ರಗಡ ಪಟ್ಟಣದಿಂದ ಐದು ಕಿ. ಮೀ ದೂರದಲ್ಲಿ 300 ಅಡಿ ಎತ್ತರವಾದ ಗುಡ್ಡದಲ್ಲಿರುವ ಕಾಲಕಾಲೇಶ್ವರ (ಕಾಳಕಾಳೇಶ್ವರ) ಗವಿ ದೇವಾಲಯವಿದ್ದು ಅದು ಪುರಾತನ ಪುಣ್ಯ ಕ್ಷೇತ್ರವಾಗಿದೆ.

ಈ ಗುಡ್ಡಕ್ಕೆ ಜಾಲೇಂದ್ರ ಪರ್ವತವೆಂದೂ ಕರೆಯು ತ್ತಾರೆ.ಗಜಾಸುರನೆಂಬ ಅಸುರನನ್ನು ವಿಶ್ವೇಶ್ವರನು ಈ ಜಾಲೀಂದ್ರ ಗಿರಿಯಲ್ಲಿ ಕಾಲಭೈರವನ ರೂಪ ದಿಂದ ಸಂಹರಿಸಿ, ಶಿವನಾಗಿ ನೆಲೆ ನಿಂತ ಲೀಲೆಯ ಚರಿತ್ರೆಯಿದೆ ಎಂದು ಹೇಳಲಾಗುತ್ತದೆ. 

‘ದಕ್ಷಿಣ ಕಾಶಿ’ ಎಂದೇ ಕರೆಯಲಾಗುವ ಇಲ್ಲಿನ ಸ್ವಯಂಭೂ ಶ್ರೀ ಕಾಲಕಾಲೇಶ್ವರ ದೇವಾಲಯವು ಈ ಭಾಗದಲ್ಲಿ ಕಳಕಪ್ಪನ ಗುಡ್ಡವೆಂದೇ ಜನಜನಿತ ವಾಗಿದೆ. ಈ ಏಕ ಶಿಲಾ ಬಂಡೆಯ ತಾಣ ಮಕ್ಕಳಿಗೆ ಕೌತುಕದ ಅನುಭವ ನೀಡುತ್ತದೆ. ಮೆಟ್ಟಿಲು ಏರುತ್ತ ಸಾಗಿದಾಗ ಎರಡು ದೀಪ ಸ್ಥಂಭಗಳು ಎದುರಾಗಿ ಬೆಟ್ಟದ ಹೊಟ್ಟೆಗೆ ಹೊಕ್ಕಂತಾಗುತ್ತದೆ. 

ಮೇಲಿನ ಗವಿ ಪ್ರದೇಶ ಪ್ರವೇಶಿಸಿದಾಗ ವಿಶಾಲ ಗರ್ಭಗುಡಿಯಿದೆ. ಅದರ ಎದುರಿಗೆ ಎರಡು ಪುಷ್ಕರಣಿಗಳಿವೆ. ಧೀರ್ಘ ಬಿಸಿಲು ಕಾಲದಲ್ಲೂ ಬತ್ತದೇ ಇರುವುದು ಇವುಗಳ ವಿಶೇಷತೆ. 

ಇವುಗಳನ್ನು ಎಣ್ಣೆಗೊಂಡ ಮತ್ತು ಅರಸರಗೊಂಡ ಎಂದು ಕರೆಯಲಾಗುತ್ತದೆ. 


ಆಶ್ಚರ್ಯವೆಂದರೆ ಋತು ಬೇಧವಿಲ್ಲದೇ ನಿರಂತರವಾಗಿ ಆಲದ ಮರದ ಬೇರಿನಿಂದ ಈ ಹೊಂಡಕ್ಕೆ ಬೀಳುವ ನೀರು ಸದಾಕಾಲ ತಂಪಾ ಗಿದ್ದು, ಭಕ್ತರು ತೀರ್ಥ ಸಮಾನವೆಂದು ಪರಿಗಣಿಸಿ ಸೇವಿಸುತ್ತಾರೆ. ಬೆಟ್ಟ ಹತ್ತಿ ದಣಿದ ದೇಹಕ್ಕೆ ತಂಪು ವಾತಾನೂಕೂಲಿತ ಸ್ಪರ್ಶ ಕಲ್ಪಿಸುವ ಈ ಗುಡ್ಡವು ಚಾರಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.
ಶ್ರೀ ಕಾಲಕಾಲೇಶ್ವರನ ಈ ಐತಿಹಾಸಿಕ ದೇಗುಲ ಸನ್ನಿಧಿ ಭಕ್ತರಿಗೆ ದರ್ಶನ ಭಾಗ್ಯ ನೀಡುವುದರ ಜತೆಗೆ ಅನ್ನದಾತರಾದ ರೈತರಿಗೆ; ಮಳೆ, ಬೆಳೆಯ ಮುನ್ಸೂಚನೆ ಅಂದಾಜಿಸುವ ತಾಣವು ಆಗಿದೆ.

ಹೀಗಾಗಿ,ಯುಗಾದಿಯಂದು ಸುಣ್ಣ, ಸುರುಮಗಳ ಲೀಲೆ ಹಾಗೂ ಅದರ ಭವಿಷ್ಯದ ಮಳೆ ಪ್ರಮಾಣ ಮುನ್ಸೂಚನೆ ಕಾಣಲು ರೈತರು ಕಾತುರರಾಗಿರು ತ್ತಾರೆ. 
ಪ್ರತಿ ವರ್ಷ ದವನ ಹುಣ್ಣಿಮೆ ದಿನ ನಡೆಯುವ ಶ್ರೀ ಕಾಲಕಾಲೇಶ್ವರ ಜಾತ್ರೆಯ ಚಟುವಟಿಕೆಗಳು ಮಾತ್ರ ಆರಂಭ ಗೊಳ್ಳುವುದು ಯುಗಾದಿ ಹಬ್ಬದಂದೇ.ಪ್ರತಿ ವರ್ಷ ಚಂದ್ರಮಾನ ಯುಗಾದಿ ಯಂದು ಸೂರ್ಯೋದಯದ ನಂತರ ದೇವಸ್ಥಾನದ ಅಂತರಗಂಗೆ ಪಕ್ಕ ವರ್ತುಲಾಕಾರ ದಲ್ಲಿ ಗುಡ್ಡಕ್ಕಿರುವ ರಂಧ್ರದಿಂದ ತನ್ನಿಂತಾನೇ ನೀರು ಹರಿದು ಬರುತ್ತದೆ! ಎಂದು ಹೇಳುತ್ತಾರೆ. ಅದರ ಆಧಾರ ಮೇಲೆ ಆಯಾ ವರ್ಷ ಮಳೆಯ ಪ್ರಮಾಣವನ್ನು ರೈತರು ಅಂದಾಜಿಸಿ,ನೀರು ಹರಿದು ಬಂದರೇ ಉತ್ತಮ ಮಳೆಗಾಲ, ಇರದಿದ್ದರೆ ಬರಗಾಲ ಎಂಬ ನಂಬಿಕೆ ಇಲ್ಲಿನ ರೈತರ ಬಂಧುಗಳದ್ದಾಗಿದೆ. 
ಶ್ರೀ ಕಾಲಕಾಲೇಶ್ವರ ದೇಗುಲ ಸನ್ನಿಧಾನದಲ್ಲಿ ಸುಣ್ಣ-ಸುರುಮಗಳ ಲೀಲೆ ಮತ್ತೊಂದು ವಿಶೇಷ.
ಯುಗಾದಿಯ ದಿನ ದೇವಸ್ಥಾನದಲ್ಲಿ ಸುಣ್ಣ-ಸುರುಮ ಇಟ್ಟು ಬಂದರೆ; ರಾತ್ರಿಯಲ್ಲಿ ಸುಣ್ಣ-ಸುರುಮ ಗುಡ್ಡದ ಪಡಿಗೆ ತಂತಾನೆ ಹಚ್ಚಿಕೊಂಡಿ ರುತ್ತದೆಯಂತೆ! ನಿಜಕೂ ಈ ಬೆಟ್ಟದ ದೇಗುಲದ ಅಂತರಗಂಗೆ ಮೇಲ್ಭಾಗದಲ್ಲಿ ಯಾರೂ ಹತ್ತಲಾಗ ದ ಸ್ಥಳದಲ್ಲಿ ಈ ಸುಣ್ಣ-ಸುರುಮವು  ಆಶ್ವರ್ಯ ಕರ ರೀತಿಯಲ್ಲಿ ತಂತಾನೆ ಹಚ್ಚಿ ಕೊಂಡಿರುತ್ತದೆ ಎಂಬುದಂತೂ ಬೆರಗಿನ ಮಾತಾಗಿದೆ.ಜನ; ಅದು ಕಾಲಕಾಲೇಶ್ವರನ ಪವಾಡವೆಂದೇ ಭಾವಿಸುತ್ತಾರೆ!
ಕುತೂಹಲದಿಂದ ರಾತ್ರಿ ನಡೆಯುವ ಈ ಸುಣ್ಣ ಸುರುಮಗಳ ಲೀಲೆ ನೋಡಲು ಹೋದರೆ; ಕಣ್ಣುಗಳು ಹೋಗುತ್ತವೆ! ಎನ್ನುವ ದೃಢ ನಂಬಿಕೆ ಇಲ್ಲಿದೆ. ಹೀಗಾಗಿ ನೋಡುವ ಸಾಹಸಕ್ಕೆ ಯಾರೂ ಮುಂದಾಗುವದಿಲ್ಲ. 
ಇನ್ನೊಂದು, ಕುತೂಹಲ ಭರಿತ ಮಾತೆಂದರೆ; ಇಲ್ಲಿ ದೊಡ್ಡದಾದ ಒಂದು ಗಂಟೆಯಿತ್ತಂತೆ.ಅದು ಎಷ್ಟೋ ವರ್ಷಗಳ ಹಿಂದೆ ಅಲ್ಲಿಂದ ತಂತಾನೆ ಢಣ್ ಢಣ್ ಎಂದು ಬಾರಿಸುತ್ತ ಆಕಾಶ ಮಾರ್ಗ ದಲ್ಲಿ ಹೋಯಿತಂತೆ! ಅಂದಿನಿಂದ ಮಳೆ ಬೆಳೆಯ ಸುಖಕಾಲವೇ ಹೋಗಿದೆಯಂದು ಈಭಾಗದಲ್ಲಿನ ಹಿರಿಯ ತಲೆಮಾರಿನ ಜನ ಆಡಿಕೊಳ್ಳುತ್ತಾರೆ.
ಗುಡ್ಡದ ಕೆಳಗೆ ಬಂದರೆ,ದೊಡ್ಡದಾದ ನೀರಿನ ಹೊಂಡವಿದೆ.ಕಾಲಕಾಲೇಶ್ವರ (ಕಳಕಪ್ಪ) ಎಂದು ಕರೆಯಲ್ಪಡುವ ಜನವಸತಿಯ ಸಣ್ಣ ಊರಿದೆ. 
ಪ್ರಕೃತಿ ನಿರ್ಮಿತ ಸಹಜ ಸೌಂದರ್ಯದ ಮಡಿಲಲ್ಲಿ ಕಂಗೊಳಿಸುವ ರುದ್ರ ರಮಣೀಯ ಬೆಟ್ಟದ ತುತ್ತ ತುದಿಯಲ್ಲಿ; ಲಿಂಗಸ್ವರೂಪಿಯಾಗಿ ನೆಲೆಸಿರುವ ಶ್ರೀ ಕಾಲಕಾಲೇಶ್ವರನಿಗೆ ಮಾತ್ರ ಇಂದಿಗೂ ತ್ರಿಕಾಲ ಪೂಜೆ ನಡೆಯುತ್ತದೆ.
ಜೀವನದಲ್ಲಿ ಒಮ್ಮೆಯಾದರೂ ಈ ರಮಣೀಯ ತಾಣವನ್ನು ಕಾಣದೇ ಹೋದರೆ,ಖಂಡಿತವಾಗಿ ಒಂದು ಒಳ್ಳೆಯ ಅನುಭವದಿಂದ ವಂಚಿತರಾಗಿ ಹೋದಂತೆಯೇ ಸರಿ.

                        ‌‌‌‌  

(ಚಿತ್ರ ಬರಹ: ಅಂತರ್ಜಾಲದ ಕೃಪೆ)

                            

– ಅಳಗುಂಡಿ ಅಂದಾನಯ್ಯ.

Comments