UK Suddi
The news is by your side.

“ಧರ್ಮೋ ರಕ್ಷತಿ ರಕ್ಷಿತಃ”

“ಧರ್ಮೋ ರಕ್ಷತಿ ರಕ್ಷಿತಃ”
ಏನಿದರ ಅರ್ಥ?
ನಾನು ಹಿಂದೂ/ ಮುಸ್ಲಿಂ/ ಕ್ರೈಸ್ತ, ಇತ್ಯಾದಿ.  ನಾನು ನನ್ನ ಧರ್ಮವನ್ನು ರಕ್ಷಿಸಿದರೆ ನನ್ನ ಧರ್ಮ ನನ್ನನ್ನು ಕಾಯುತ್ತದೆ ಎಂದು ಬಹಳ ಜನ ತಿಳಿದಿದ್ದಾರೆ. ಹಾಗಾಗಿ ಎಲ್ಲರೂ ಅವರವರ ಧರ್ಮದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು  ಅನ್ಯಧರ್ಮೀಯರ ಹರಣ ಮಾಡುವುದೇ ತಮ್ಮ ಗುರಿ ಎಂದು ತಿಳಿದಿದ್ದಾರೆ.
ಆದರೆ ಧರ್ಮವೆಂದರೇನು? ಧರ್ಮ ಯಾತಕ್ಕಾಗಿ ಬೇಕು?

ಯಾವ ಆಚಾರ ವಿಚಾರಗಳು  ಮಾನವನನ್ನು ಔನ್ನತ್ಯಕ್ಕೇರಿಸಬಲ್ಲವೋ ಅಂಥಾ ಆಚಾರ ಮತ್ತು ವಿಚಾರಗಳ ಸಮನ್ವಯತೆಗಳ ಸಮುಚ್ಛಯವೇ ಧರ್ಮ. ಧರ್ಮವು ಮಾನವನ ಏಳ್ಗೆಗಾಗಿರಬೇಕೇ ಹೊರತು ಧರ್ಮಕ್ಕಾಗಿ ಮಾನವನ ಜೀವನವಲ್ಲ. ಯಾವ ಧರ್ಮದ ಉಳಿವಿಗಾಗಿ ಮಾನವನ ಬಲಿದಾನ ಬೇಕಾಗುವುದೋ ಅದು ಧರ್ಮವೇ ಅಲ್ಲ.
ಹಾಗಾದರೆ ಧರ್ಮೋ ರಕ್ಷತಿ ರಕ್ಷಿತಃ ಎಂದರೇನು?
ಸೃಷ್ಟಿಯಲ್ಲಿ ಸೂರ್ಯ ಚಂದ್ರ ನಕ್ಷತ್ರಾದಿಗಳು ನಿತ್ಯ ತಮ್ಮ ಕಾರ್ಯ ಮಾಡುತ್ತವೆ. ಭೂಮಿ ನಮ್ಮನ್ನು ಸಲಹುತ್ತದೆ, ತಂದೆ ತಾಯಿ ತಮ್ಮ ಮಕ್ಕಳನ್ನು ಸಲಹುತ್ತಾರೆ, ನದಿಹರಿಯುತ್ತದೆ, ಹೀಗೆ ಅನೇಕ ಪ್ರಕೃತಿ ದತ್ತ ಕ್ರಿಯೆಗಳು ಸಹಜವಾಗಿ ನಮಗರಿವಿಲ್ಲದಂತೆ ನಿತ್ಯ ನಡೆದೇ ಇರುತ್ತವೆ. ಇದು ಪ್ರಕೃತಿ ಸಹಜಧರ್ಮ.
ಹಾಗೆಯೇ ಮಾನವ ಸಹಜಧರ್ಮವೆಂದರೆ, ಪರೋಪಕಾರ, ಸುಳ್ಳನ್ನಾಡದಿರುವುದು, ದ್ರೋಹ ಬಗೆಯದಿರುವುದು,  ಕಳ್ಳತನ ಮಾಡದಿರುವುದು, ಕಪಟತನ ಇಲ್ಲ್ಇರುವುದು, ಅನ್ಯರ ಅಪಹಾಸ್ಯ ಹಿಂಸೆ ಮಾಡದಿರುವುದು, ಇತ್ಯಾದಿ ಸದ್ಗುಣಗಳೇ ಮಾನವ ಸಹಜ ಧರ್ಮ.
ಈ ಗುಣಗಳನ್ನು ಪಾಲಿಸುವಾತನಿಗೆ ಸಹಜವಾಗಿ ಪ್ರಕೃತಿಯ ರಕ್ಷಣೆ ಇರುವುದು. ಇದನ್ನೇ ಧರ್ಮೋ ರಕ್ಷತಿ ತಕ್ಷಿತಃ ಎಂದಿರುವರು ಹಿರಿಯರು.
ಆದರೆ ಇಂದಿನವರು ಅನೇಕರು ಇದನ್ನು ಪಾಲಿಸದೆ, ಅನ್ಯಧರ್ಮೀಯರನ್ನು ಕೊಂದು ದೇವರನ್ನು ಮೆಚ್ಚಿಸುತ್ತೇನೆಂಬ ಭ್ರಮೆಯಲ್ಲಿ ತಮ್ಮಷ್ಟಕ್ಕೆ ತಾವೇ ಕಷ್ಟಕ್ಕೆ ಸಿಲುಕುತ್ತಾರೆ. 
ಪ್ರತಿಯೊಬ್ಬ ಜೀವಿಯಲ್ಲಿಯೂ ದೇವನಿದ್ದಾನೆ, ಆ ಜೀವಿಯ ಹತ್ಯೆ ದೇವನಿಗೆ ಪ್ರಿಯವೇ? 
ಪ್ರಕೃತಿ ಸಹಜ ಧರ್ಮವೇ ಎಲ್ಲ ಮಾನವರ ಸಹಜ ಧರ್ಮವಾಗಲಿ.
ಇದನ್ನೇ ಕುವೆಂಪುರವರು ಎಲ್ಲ ಧರ್ಮದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರು ಓ ನನ್ನ ಚೇತನ ಎಂದಿರುವರು. ಅದನ್ನು ಪಾಲಿಸಿದರೆ ಭೂಮಿಯಿದು ಸ್ವರ್ಗವನ್ನು  ಮೀರಿಸೀತು ಅಲ್ಲವೇ?
-ಡಾ. ಪಂಚಾಕ್ಷರಿ ಹಳೇಬೀಡು.

Comments