UK Suddi
The news is by your side.

ವಿಶ್ವ ಧರ್ಮವಾಗಬೇಕಿದ್ದ ಲಿಂಗಾಯತ ಧರ್ಮ ಕೆಲ ಪ್ರಾಂತಕ್ಕೇಕೆ ಸೀಮಿತವೇಕಾಯಿತು?


 
ಬಸವಣ್ಣನವರು ಸಾರ್ವಕಾಲಿಕ ಸಮತೆ ಶಾಂತಿ ಪ್ರೀತಿಯ ಆಧಾರದ ಮೇಲೆ ಸಾಂಸ್ಥಿಕರಣವಿಲ್ಲದ ಬಹು ವೈಚಾರಿಕ ವೈಜ್ಞಾನಿಕ ಲಿಂಗಾಯತ ಧರ್ಮವನ್ನು  ಸ್ಥಾಪಿಸಿದರು. ಕಾಯಕ ಕಡ್ಡಾಯ ಮಾಡಿ ಕಾಗೆ ಕೋಳಿ ಪಶು ಪಕ್ಷಿ ಪ್ರೀತಿಸಲು ಜನರಿಗೆ ಕರೆನೀಡಿ ಅನ್ನದೊಳಗೊಂದಗುಳ   ವಸ್ತ್ರದೊಳಗೆ ಒಂದು ಎಳೆಯ ಬೇಡವೆಂದು ಹೇಳುತ್ತಾ ಸಮಸ್ತ ಜಂಗಮ ಸಮಾಜಕ್ಕೆ ಹೆಚ್ಚಿನ ಆಸ್ತಿಯನ್ನುವಿನಿಯೋಗ ಮಾಡಬೇಕೆನ್ನುವ ದಾಸೋಹ ಪದ್ದತಿಯನ್ನು ಹುಟ್ಟು ಹಾಕಿದರು.
ಜಗತ್ತಿನ ಎಲ್ಲ ಧರ್ಮಗಳು ತಾತ್ವಿಕವಾಗಿ ತಮ್ಮ ತಮ್ಮ ಧರ್ಮ ಗುರುಗಳನ್ನು ಹೊಂದಿ ಪಾದ್ರಿ ಫಾದರ್ ಮುಲ್ಲಾ ಬೌದ್ಧ ಭಿಕ್ಷು ಜೈನ ಮುನಿ ಶಿರೋಮಣಿ 
ಮುಂತಾದ ಮತ್ತೆ ಶ್ರೇಣೀಕೃತ ವ್ಯವಸ್ಥೆಯನ್ನು ಪೋಷಿಸುವ ಪದ್ಧತಿಯನ್ನು ಹೊಂದಿದವು . ಅಲ್ಲಿ ಜಾತಿ ಶ್ರೇಷ್ಠತೆ ಸ್ಥಾನ ಅಧಿಕಾರ ಶ್ರೇಷ್ಠತೆ ಕಾಣುತ್ತೇವೆ.
ಆದರೆ ಬಸವ ಧರ್ಮದಲ್ಲಿ ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ಎಂಬ ಗುರು ಲಿಂಗ ಜಂನ್ಗ್ಮ ಅಷ್ಟಾವರಣ ತತ್ವಗಳನ್ನು ಕಾಯಗುಣದಲ್ಲಿ 
ಹಸನುಗೊಳಿಸಿ ಸ್ಥಾಪಿಸಿ ಕಂಡುಕೊಂಡ ಜಗತ್ತಿನ ಶ್ರೇಷ್ಠ ಅನುಭಾವ ಧರ್ಮವಾಗಿದೆ.
ಮಠಗಳು ಲಿಂಗಾಯತ ಧರ್ಮದ ಕೊಡುಗೆಗಳಲ್ಲ ಕಾಳಾಮುಖಿ ಪಾಶುಪತ ಲಕುಲೀಶ ಮುಂತಾದ ಸಪ್ತ ಶೈವಗಳು  ಬಸವಣ್ಣನವರು    ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಹೈಜಾಕ್ ಮಾಡಿ ಅಪ್ಪಟ ವೈಜ್ಞಾನಿಕ ಧರ್ಮದಲ್ಲಿ ಮೌಢ್ಯ ತುಂಬಿ ಯಜ್ಞ ಯಾಗಾದಿಗಳನ್ನು ಆರಂಭಿಸಿದರು.
ಹದಿನೇಳನೆಯ ಶತಮಾನದಲ್ಲಿ ಕಟ್ಟಿಗೆಹಳ್ಳಿ ಚೆನ್ನವೀರ ಸ್ವಾಮಿಗಳು ಮಠಗಳ ವ್ಯವಸ್ಥೆಯನ್ನು ಹುಟ್ಟು ಹಾಕಿದರು.
ಶರಣರು   ಮಠೀಯ ಪರಂಪರೆಯನ್ನು ವಿರೋಧಿಸಿ ಆಶ್ರಮ ಭೇದ ತೊರೆದು ಗ್ರಹಸ್ಥ ಮನೆಗೆ ಬೇಕಾದ ಅನುಭವ ಧರ್ಮವನ್ನು ಆರಂಭಿಸಿದರು.
ಅದು ಹೇಗೋ ಕಾವಿಗಳು ಲಿಂಗಾಯತ ಧರ್ಮದಲ್ಲಿ ಸೇರಿಕೊಂಡವು ಯಕ್ಷ ಪ್ರಶ್ನೆ .  ಅಷ್ಟೇ ಅಲ್ಲ ಬಸವಣ್ಣನವರಿಗೂ ಕಾವಿ ತೊಡಿಸಿಬಿಟ್ಟರು  .
ಬಸವಣ್ಣನವರ ಹೆಸರು  ಹೇಳಿ ಬದುಕುವ ಬಸವೋದ್ಯಮಿಗಳು ಮಠಗಳಲ್ಲಿ  ಮೆಡಿಕಲ್ ಇಂಜಿನೀರಿಂಗ್ ಕಾಲೇಜು ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಸಿಕ್ಕಾಪಟ್ಟೆ ಹಣವನ್ನು ಗಳಿಸಲು ಆರಂಭಿಸಿದರು.
ಇಂತಹ ಮಠಗಳ ವ್ಯವಸ್ಥೆಯಲ್ಲಿ ಸತ್ಯವಂತರಾಗಿ ಬದುಕಿದ ಬಸವ ಭಕ್ತ ನಿತ್ಯ ನಿರಂಜನ ಜಂಗಮರು ಬಾಳಿ ಹೋದರು ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು 
ಬಿಳ್ಳೂರು ಗುರುಬಸವ ಸ್ವಾಮಿಗಳು ಬಂಥನಾಳ ಸ್ವಾಮಿಗಳು ,ಮುರುಗೋಡ ಮಹಾಂತ ಅಪ್ಪನವರು ಧಾರವಾಡ ಮೃತ್ಯುಂಜಯ ಸ್ವಾಮಿಗಳು  ಭಾಲ್ಕಿ ಚೆನ್ನಬಸವ ಪಟ್ಟಾಧ್ಯಕ್ಷರು ಹೀಗೆ ಕಾಲಕಾಲಕ್ಕೆ ಕೆಲವು ಮಠಾಧೀಶರು ಲಿಂಗಾಯತ ಧರ್ಮಕ್ಕೆ ಅಪಾರವಾದ ಕೊಡುಗೆ ನೀಡಿ ಧರ್ಮವನ್ನು ತನ್ನ ನೆಲೆಸೆಲೆ ರೂಪದಲ್ಲಿ ಉಳಿಸಿಕೊಂಡು ಹೋಗಲು ಪ್ರಯತ್ನಿಸಿದರು.
ಇಂತಹ ಸ್ವಾಮಿಗಳು ಈಗ ಸಿಗುವುದು ಅತ್ಯಂತ ಕಠಿಣ ದುರ್ಲಭವಾಗಿದೆ.ಸಧ್ಯದ ಸ್ವಾಮಿಗಳು ಈಗ ಸೆಲೆಬೇರಿಟಿ ಆಗಿದ್ದಾರೆ.
ಮಠಗಳು ವ್ಯಾಪಾರ ಕೇಂದ್ರಗಳಾಗಿವೆ ವೋಟ್ ಬ್ಯಾಂಕಗಳಾಗಿವೆ  ರಾಜಕೀಯ ಆಫೀಸ್ ಗಳಾಗಿವೆ. ಬಡವರ ಕಣ್ಣೀರು ಒರೆಸಬೇಕಾದ ಸ್ವಾಮಿಗಳು ಶ್ರೀಮಂತರ ಓಲೈಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಳೆದ ಶತಮಾನದಲ್ಲಿ ಡಾ ಫ ಗು ಹಳಕಟ್ಟಿ ಪ್ರೊ ಶಿಶಿ ಬಸವನಾಳರು ಹುಟ್ಟು ಹಾಕಿದ ವಚನ ಚಳುವಳಿ ಡಾ ಎಂ ಎಂ ಕಲಬುರ್ಗಿ ಅವರ ವರೆಗೆ ಹಲವು ಜನ ಮುಂದುವರೆಸಿಕೊಂಡು ಬಂದರು. ವಚನಗಳ ಅಧ್ಯಯನಕ್ಕೆ ಸಾಕಾರವಾಗಲು ಕರ್ನಾಟಕ ಸರಕಾರದಿಂದ ಕಳೆದ ಎರಡು ದಶಕದಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ನಿರಂತರ ಪ್ರಯತ್ನದಿಂದಾಗಿ ಸಮಗ್ರ ವಚನಗಳ ಸಂಪುಟ ಅತ್ಯಂತ ಅಗ್ಗದ ಸುಲಭ ಬೆಲೆಯಲ್ಲಿ ವಚನಗಳು ಸಿಗ ಹತ್ತಿದವು.ಅಲ್ಲದೆ ವಚನ ಸಂಚಯ ವಚನ ಜಾಲ ತಾಣಗಳು ಓದುಗರನ್ನು ಆಕರ್ಷಿಸ ಹತ್ತಿದವು.
ಒಳಗೊಳಗೇ ಗುರು ವಿರಕ್ತರ ನಿದ್ದೆ ಕೆಡಿಸಿದ ಬಸವ ಭಕ್ತರ ಅಧ್ಯಯನವು ಇವರನ್ನು ಪ್ರಶ್ನೆ ಮಾಡುವ ಹಂತಕ್ಕೂ ಹೋದರು.
ಒಂದೇ ವರ್ಗದ ವೀರ ಮಹೇಶ್ವರ ಸ್ವಾಮಿಗಳನ್ನು ಮಠಾಧೀಶರಾಗುವ   ಸಂಪ್ರದಾಯವನ್ನು  ಶಿವ ಯೋಗ ಮಂದಿರ ಹಾಕಿಕೊಟ್ಟಿತು.
ಇವರನ್ನು ವಿರೋಧಿಸುತ್ತ ಇನ್ನೊಂದು ಬಸವ ಧರ್ಮ ಪ್ರಚಾರಕರು ಅಕ್ಕ ಅಣ್ಣ ಅಮ್ಮ ಮಾತೆಯರೆಂದು ತಮ್ಮ ಮಂಟಪ ಪ್ರತಿಷ್ಠಾನ ಗುರುಕುಲ ಆಶ್ರಮ ಮಠ ಕಟ್ಟಿಕೊಂಡರು.
ಒಟ್ಟಾರೆ ಬಸವಣ್ಣನವರ ಹೆಸರು ಹೇಳಿ ಬಹು ಎತ್ತರಕ್ಕೆ ಬೆಳೆದ ಈ ಸ್ವಾಮಿಗಳು ಅಕ್ಕನವರು ಇದನ್ನು ಒಂದು ದಂಧೆ   ಉದ್ಯಮವನ್ನಾಗಿ ಮಾಡಿಕೊಂಡರು. ಮೂಢ ಮುಗ್ಧ ಭಕ್ತರು ಕಾವಿ ಕಂಡ ಕೂಡಲೇ ಕಾಲಿಗೆ ಎರಗುವ ಹುಚ್ಚು ಪದ್ದತಿಯನ್ನು ಪಾಲಿಸುತ್ತಾ ಬಂದಿತು. ಅಷ್ಟಾವರಣ ಪಂಚಾಚಾರ ಷಟಸ್ಥಲಗಳನ್ನು ವೈದಿಕ ಪರಂಪರೆಯಲ್ಲಿ ಬೋಧಿಸಿದರು.
ಇಂಗ್ಲಿಷ್ ಹಿಂದಿ ಬಾರದ ಸ್ವಾಮಿಗಳು ಕನ್ನಡದಲ್ಲಿ ಪ್ರವಚನ ಪುರಾಣ ಹೇಳಿ ಬದುಕ ನೂಕಿದರು.ಇಂದು ಸಾವಿರಾರು ಮಠಗಳು ಸಾವಿರಾರು ಕೋಟಿ ಆಸ್ತಿಯ ಒಡೆತನಕ್ಕೆ ಹಕ್ಕುದಾರರು ವಾರಸುದಾರರಾಗಿದ್ದಾರೆ. ದೊಡ್ಡ ದೊಡ್ಡ ಮಠಗಳಿಗೆ ನೂರಾರು ಶಕ ಮಠ ಬೇರೆ.ಮಠಗಳಲ್ಲಿ ಹಣ ಬಿಚ್ಚಲು ಉತ್ಸವ ಮೇಳ ವಚನ ವಿಜಯೋತ್ಸವಗಳನ್ನು ಹಮ್ಮಿಕೊಂಡು ಬಡವರನ್ನು ಸುಲಿಗೆ ಮಾಡುತ್ತಾ ಆಯುಷಾರಾಮ ಭೋಗ ಜೀವನ ನಡೆಸುತ್ತಿದ್ದಾರೆ.
ಬೆರಳೆಣಿಕೆಯಷ್ಟರ ಮಠಗಳ ಹೊರೆತು ಪಡಿಸಿದರೆ ಬಹುತೇಕ ಮಠಗಳು ವಾಣಿಜ್ಯ ಮಳಿಗೆಗಳಾಗಿವೆ.
ಕ್ರೋಢೀಕರಣ ಹಣವು ಮಠಗಳಲ್ಲಿನ ಹಿರಿಯ ಸ್ವಾಮಿಗಳ ವರ್ಧಂತಿ ಪಟ್ಟಾಭಿಷೇಕ ಜಾತ್ರೆ ಮಹೋತ್ಸವದಲ್ಲಿ ಬಳಸುತ್ತಾರೆ.
ಇನ್ನು ಕೆಲವರು  ನೂರಾರು ಕೋಟಿ ಹಣ ವೆಚ್ಚ ಮಾಡಿ ತಮ್ಮ ತಮ್ಮ ಪ್ರತಿಷ್ಠೆಗೆ     ಬಸವಣ್ಣನವರ ಮೂರ್ತಿ ಸ್ಥಾಪಿಸುತ್ತಿದ್ದಾರೆ.
ಸ್ಥಾವರ ವಿರೋಧಿಸಿದ ಬಸವಣ್ಣನವರೇ ಸ್ಥಾವರವಾದರಾ? ಅವರ ತತ್ವಗಳಿಗೆ ತಿಲಾಂಜಲಿ   ನೀಡಿ ಮಠಾಧೀಶರು ಅಕ್ಕ ಮಾತೆಯರು ತಮಗೆ ತೋಚಿದ ರೀತಿಯಲ್ಲಿ 
ಜನರಿಗೆ ಬಸವಣ್ಣನವರ ಜೀವನ ಬಿಂಬಿಸಿ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ.. ಅಷ್ಟೇ ಅಲ್ಲ ಕೆಲ ಪ್ರತಿಷ್ಟಾನಗಳು ಸರಕಾರಿ ಯೋಜನೆಗಳನ್ನೂ  ಕೂಡ ತಮ್ಮ ಪ್ರತಿಷ್ಟಾನ ಮಠಕ್ಕೆ ದುರ್ಬಳಕೆ ಮಾಡಿಕೊಂಡಿವೆ.ಕೋಟಿ ಕೋಟಿ ರೂಪಾಯಿಯ ಕಾರು ಬಂಗಲೆ ಇವರಿಗೇಕೆ ಬೇಕು.?
ಈ ಮಧ್ಯೆ ಕೆಲ ಶೈವ ವೃತ ಆಚರಣೆಯುಳ್ಳವರು ತಮ್ಮ ವೀರಶೈವ ಧರ್ಮವು ಬಸವಣ್ಣನವರಿಗಿಂತಲೂ ಪೂರ್ವದಲ್ಲಿತ್ತು ಬಸವಣ್ಣನವರು ಮತಾಂತರಗೊಂಡು ಧರ್ಮ ಪುನುರುಜ್ಜೀವನ ಮಾಡಿದ ಭಕ್ತನು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು  ಲಿಂಗಾಯತ   ಧರ್ಮ ಹಾಳು ಮಾಡಲು ಪ್ರಯತ್ನಿಸಿದ್ದಾರೆ.
ಇಂದು ಇಂಗ್ಲೆಂಡ್ ಫ್ರಾನ್ಸ್ ಅಮೇರಿಕ ಮುಂತಾದ ರಾಷ್ಟ್ರಗಳಲ್ಲಿ ಬಸವಣ್ಣನವರ ಅಧ್ಯಯನ ವಿಪುಲವಾಗಿ ನಡೆದರೆ . ನಮ್ಮ ನೆಲದಲ್ಲಿ ಬಸವಣ್ಣನವರ ಪೂರ್ವ ಬಸವೋತ್ತರಕ್ಕೆ ಕಾದಾಡುತ್ತಿದ್ದೇವೆ.
ಧರ್ಮ ರಾಜಕಾರಣ ಮಠಗಳ ಆಶೆ ಪ್ರತಿಷ್ಠೆ ಮಧ್ಯೆ ಮಾಧ್ಯಮಗಳು ಈ ವಿವಾದವನ್ನು ವಿಭಿನ್ನವಾಗಿ ತೋರಿಸಿ ಜನರನ್ನು ದ್ವಂದ್ವಕ್ಕೆ ತಳ್ಳಿದ್ದಾರೆ.
ಇಂದು ಬಸವಣ್ಣನವರು ಇದ್ದಿದ್ದರೆ ಯಾಕಾದರೂ ತಾವು ಈ ಧರ್ಮವನ್ನು ಹುಟ್ಟು ಹಾಕಿದೆನೆಂದು ಪಶ್ಚಾತಾಪ ಪಡುತ್ತಿದ್ದರೋ ಏನೋ ? 
ಸಿಖ್  ಧರ್ಮ ಬೌಧ ಧರ್ಮಗಳು ಇಂದು ವಿಶ್ವಾಧ್ಯಂತ  ಪಸರಿಸಿವೆ ಅಲ್ಲಿ ನಿಷ್ಠ ಪ್ರಾಮಾಣಿಕ ಧಾರ್ಮಿಕ ಮುಖಂಡರಿದ್ದಾರೆ.
ಹೆಳವನ ಹೆಗಲ ಮೇಲೆ ಕುರುಡನೊಬ್ಬ ಕುಳಿತಿಹನು ದಾರಿ ಸಾಗುವದೆಂತು ನೋಡಬೇಕೀಗ ಎಂಬ ಸಾಹಿತಿ ಅಡಿಗರ ಮಾತಿನಂತೆ.
ಕುಂಟು ಭಕ್ತನು  ಕುರುಡು ಧರ್ಮಾಧಿಕಾರಿಯನ್ನು  ಹೊತ್ತು ನಡೆದಿದ್ದಾನೆ. ನಮಗೆ ಒಂಬತ್ತು  ನೂರು ವರ್ಷಗಳ ಮೇಲೂ ಲಿಂಗಾಯತ ಸ್ವತಂತ್ರ ಧರ್ಮವಾಗುವುದೇ ಎಂಬ ಶೇಷ ಪ್ರಶ್ನೆ ಕಾಡುತ್ತಿದೆ. ಪ್ರಜ್ಞಾವಂತ ಲಿಂಗಾಯತ ಬಸವ ಭಕ್ತರು ಇಂತಹ ವ್ಯವಸ್ಥೆಯನ್ನು ಪ್ರಶ್ನಿಸಬೇಕು. ಮಠಗಳು ವಾರ್ಷಿಕವಾಗಿ ಕ್ರೋಢೀಕರಿಸುವ ಆದಾಯದಲ್ಲಿ ಕಾಲು ಭಾಗ ಲಿಂಗಾಯತ ಧರ್ಮಕ್ಕೆ ಖರ್ಚು ಮಾಡಿದರೆ ಇಂದು ಜಗತ್ತಿನಲ್ಲಿ  ಲಿಂಗಾಯತ ಧರ್ಮವು ತನ್ನ ಪ್ರಸಿದ್ಧಿಯನ್ನು ಪಡೆಯುತ್ತಿತು.
ಕೆಲ  ಮಠ ಉಪಜೀವಿ    ಸಾಹಿತಿಗಳು ಪತ್ರಕರ್ತರು ಇರುವ ಸ್ವಾಮಿಗಳನ್ನು ಮಾತೆಯರನ್ನು ಹೊಗಳಿ ಕಾರ್ಯಸಾಧಕರಾಗುತ್ತಾರೆ.
ಬಸವ ಭಕ್ತರು ಇನ್ನೂ ಎಚ್ಚರಗೊಳ್ಳದಿದ್ದರೆ ಮುಂದೆಯೂ ಲಿಂಗಾಯತ ಧರ್ಮವು ದಾಸ್ಯತ್ವದಲ್ಲಿ ನೆರಳುತ್ತದೆ.
ಸಧ್ಯದ ಲಿಂಗಾಯತ ಧರ್ಮವು  ಕೆಲವರ  ವೈಭವೀ ಜೀವನಕ್ಕೆ ಅವಕಾಶ ಮಾಡಿಕೊಟ್ಟಿದೆ.
ಇಚ್ಛಾ ಶಕ್ತಿ ಇರುವ ರಾಜಕಾರಣಿಗಳು ಪ್ರಾಮಾಣಿಕ ಮಠಾಧೀಶರು ಬದ್ಧತೆ ಇರುವ ಪ್ರಜ್ಞಾವಂತ ಕಾರ್ಯಕರ್ತರು ಸುಂದರ ಕಲ್ಯಾಣದ ಪರಿಕಲ್ಪನೆಯಲ್ಲಿ ಮತ್ತೆ ಲಿಂಗಾಯತ ಧರ್ಮಕ್ಕೆ ಮರು ಜೀವನ ನೀಡಬೇಕು.
ಪ್ರಶ್ನೆ ತರ್ಕಗಳು ಬಸವ ಭಕ್ತರಿಗೆ ಅಸ್ತ್ರಗಳಾಗಬೇಕು . ಸೋಗಲಾಡಿತನ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಜಾತ್ರೆ ಮೇಳ ಮಾಡಿ ಜನರನ್ನು ಮೂಢ ಮಾಡುವ ಹುನ್ನಾರವಿನ್ನಾದರೂ ನಿಲ್ಲಲಿ. ಸತ್ತ ಬಸವ ಭಕ್ತರು ಇನ್ನಾದರೂ ಧ್ವನಿಯನ್ನು ಗಟ್ಟಿಗೊಳಿಸಿ ವ್ಯವಸ್ಥೆಯನ್ನು ಪ್ರಶ್ನಿಸಲಿ.
ಬಸವಣ್ಣನವರು ವಿರೋಧಿಸಿದ  ಆಚರಣೆಗಳನ್ನು ತಂದು ಹಬ್ಬ ಮಾಡುತ್ತಿದ್ದಾರೆ. ಯಾರಿಗಾಗಿ ಬಸವಣ್ಣ ಹೋರಾಡಿದರೋ ಇಂದು ಅವರನ್ನು ಲಿಂಗಾಯತರು ಮತ್ತೆ ಅಸ್ಪ್ರಶ್ಯರನ್ನಾಗಿ ಕಾಣುತ್ತಿದೆ.ಯಾವ ಪೌರೋಹಿತ್ಯ ವ್ಯವಸ್ಥೆಯ ವಿರುದ್ಧ ಬಸವಣ್ಣನವರು ಗುಡುಗಿದರೋ ಇಂದು ಅವರೇ ಲಿಂಗಾಯತ ಧರ್ಮದ ಸಂಚಾಲಕರು ಮುಖಂಡರಾಗಿದ್ದಾರೆ.
ಬಸವ ಪ್ರಜ್ಞೆ ಮತ್ತೆ ಸಿಡಿದೇಳಲಿದೆ. ಲಾಂಛನಗಳು ಸೋಗು ಕಳಚಿ ಬೀಳುತ್ತವೆ. ಇಂತಹ ಪ್ರಸಂಗ ಬರುವ ಮುನ್ನ ಗುರುಭಕ್ತರು ಬಸವಣ್ಣನವರ ಶರಣರ ಆಶಯಗಳನ್ನು ಪ್ರಸಿದ್ಧಗೊಳಿಸಿ ಉಳಿಸಿ ಬೆಳಸಲೆಂದು ಆಶಿಸುತ್ತೇನೆ. ಬನ್ನಿ ಪ್ರಶ್ನಿಸೋಣ ಲೆಕ್ಕ  ಕೇಳೋಣ ಅರಿವರ್ತನೆಗೆ ಕೈ ಜೋಡಿಸೋಣ.
————————————————
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ Comments